ವಿಧಾನಸಭೆ ವಿಸರ್ಜಿಸಿ ಬನ್ನಿ: ಸಿದ್ದು ಸವಾಲು

ಬುಧವಾರ, ಜೂಲೈ 17, 2019
27 °C

ವಿಧಾನಸಭೆ ವಿಸರ್ಜಿಸಿ ಬನ್ನಿ: ಸಿದ್ದು ಸವಾಲು

Published:
Updated:

ದಾವಣಗೆರೆ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಧಾನಸಭೆ ವಿಸರ್ಜಿಸಿ ಸಾರ್ವತ್ರಿಕ ಚುನಾವಣೆಯನ್ನು ಎದುರಿಸಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದರು.

ಅಧಿಕಾರದಲ್ಲಿದ್ದಾಗ ಉಪ ಚುನಾವಣೆಯಲ್ಲಿ ಗೆಲ್ಲುವುದು ದೊಡ್ಡ ವಿಷಯವಲ್ಲ. ಸಾರ್ವತ್ರಿಕ ಚುನಾವಣೆಯಲ್ಲಿ ಬಂಡವಾಳ ಬಯಲಾಗುತ್ತದೆ ಎಂದು ಅವರು ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಎಐಎಡಿಎಂಕೆ ಅಧಿಕಾರಕ್ಕೆ ಬಂದಿದ್ದನ್ನು ಉದಾಹರಿಸಿದ ಅವರು, ಉಪ ಚುನಾವಣೆಯಲ್ಲಿ ಯಾವುದೇ ಸಾಧನೆ ಮಾಡದಿದ್ದರೂ ಜಯಲಲಿತಾ ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತಮ ಬಹುಮತ ಗಳಿಸಿದರು. ರಾಜ್ಯದ ಕಾಂಗ್ರೆಸ್ ವಿಚಾರದಲ್ಲೂ ಅದೇ ನಡೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಯಡಿಯೂರಪ್ಪ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸರ್ಕಾರದಲ್ಲಿ ಮುಖ್ಯಮಂತ್ರಿ ಸೇರಿದಂತೆ ಕಳಂಕಿತ ಸಚಿವರಿದ್ದಾರೆ. ರಾಜ್ಯದ ಸಂಪತ್ತಿನ ಲೂಟಿ ನಡೆಯುತ್ತಿದೆ. ಇದೊಂದು ಕೋಮು ಭಾವನೆಯ ಸರ್ಕಾರ ಎಂದು ಜರಿದರು.`ಮೂರೂ ಬಿಟ್ಟವರು ಊರಿಗೇ ದೊಡ್ಡವರು~ ಎನ್ನುವಂತೆ ಈ ಸರ್ಕಾರದಲ್ಲಿರುವವರು ವರ್ತಿಸುತ್ತಿದ್ದಾರೆ. ಸಚಿವ ಸಂಪುಟದಲ್ಲಿ ಯಾವುದೇ ಸಚಿವರ ವಿರುದ್ಧ ಆರೋಪ ಕೇಳಿಬಂದರೂ ಸಚಿವ ಸಂಪುಟದ ಸಾರಥಿಯಾದ ಮುಖ್ಯಮಂತ್ರಿಗಳೂ ಹೊಣೆಗಾರರಾಗುತ್ತಾರೆ ಎಂದು ದೂರಿದರು.ಅಧಿಕಾರದಲ್ಲಿ ಇರುವವರು ಭಂಡರಾದಾಗ ಜನರೇ ಪಾಠ ಕಲಿಸಬೇಕಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಜನರ ತೀರ್ಪೇ ಅಂತಿಮ. ಈ ನಿಟ್ಟಿನಲ್ಲಿ `ಕಾಂಗ್ರೆಸ್ ನಡಿಗೆ ಜನರ ಬಳಿಗೆ~ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಮಾತನಾಡಿ, ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೇಂದ್ರ ಸರ್ಕಾರ ಸುಮಾರು  5 ಸಾವಿರ ಕೋಟಿ ಬಿಡುಗಡೆ ಮಾಡಿದ್ದರೂ, ಇದುವರೆಗೆ 1,900 ಕೋಟಿ  ಕೂಡ ರಾಜ್ಯ ಸರ್ಕಾರ ಸರಿಯಾಗಿ ಬಳಸಿಲ್ಲ. ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಲ್ಲಿ ಹಿಂದುಳಿದಿವೆ. ಮೂಲಸೌಲಭ್ಯಗಳ ಅಭಿವೃದ್ಧಿಯಾಗಿಲ್ಲ ಎಂದು ಆರೋಪಿಸಿದರು.ಜನರಿಗೆ ಜಾಗೃತಿ ಅಗತ್ಯ

ಕಾಂಗ್ರೆಸ್ ಮುಖಂಡ ಅಂಬರೀಷ್ ಮಾತನಾಡಿ, ಪ್ರಸ್ತುತ ರಾಜಕೀಯ ಸನ್ನಿವೇಶವನ್ನು ಗಮನಿಸುತ್ತಿರುವ ರಾಜ್ಯದ ಜನತೆಯಲ್ಲಿ ರಾಜಕೀಯ ಅರಿವು ಮೂಡಬೇಕು. ಯಾರು ಎಷ್ಟು ಸಾಚಾ ಇದ್ದಾರೆ, ಬಯಲಾಗುತ್ತಿರುವ ಹಗರಣಗಳು ಎಲ್ಲವನ್ನೂ ನೋಡುತ್ತಿರುವ ಜನತೆ ಸೂಕ್ತ ನಿರ್ಧಾರಕ್ಕೆ ಬರಬೇಕು ಎಂದು ಹೇಳಿದರು.ಮಾಜಿ ಸಚಿವ ಶಿವಮೂರ್ತಿ ನಾಯ್ಕ, ಮಾಜಿ ಶಾಸಕ ಎಚ್. ಆಂಜನೇಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಜಬ್ಬಾರ್, ಕೆಪಿಸಿಸಿ ಸದಸ್ಯ ಡಿ. ಬಸವರಾಜ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry