ಬುಧವಾರ, ಏಪ್ರಿಲ್ 21, 2021
30 °C

ವಿಧಾನ ಪರಿಷತ್ತಿನಲ್ಲಿ ಮಹಿಳೆಯರ ಮಾನ- ಪ್ರಾಣ ರಕ್ಷಣೆಯ ಧ್ವನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಶ್ವ ಮಹಿಳಾ ದಿನದ (ಮಾರ್ಚ್ 8) ಮುನ್ನಾದಿನವಾದ ಸೋಮವಾರ ವಿಧಾನ ಪರಿಷತ್ತಿನಲ್ಲಿ ಮಹಿಳೆಯರ ಮಾನ-ಪ್ರಾಣ ರಕ್ಷಿಸುವ ಬಗ್ಗೆ ಧ್ವನಿ ಮೊಳಗಿತು.ರಾಜ್ಯದ ಹಲವೆಡೆ ಮಹಿಳೆಯರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿವೆ. ಇವುಗಳನ್ನು ತಡೆಯಲು ಸಾಧ್ಯ ಇಲ್ಲವೇ? ಉನ್ನತ ಶಿಕ್ಷಣ ಕೇಂದ್ರವಾದ ವಿಶ್ವವಿದ್ಯಾಲಯ ಮಟ್ಟದಿಂದ ಹಿಡಿದು ಚಿಂದಿ ಆಯುವ ಹಂತದಲ್ಲಿಯೂ ಹೆಣ್ಣು ಮಕ್ಕಳು ಕಾಮುಕರಿಗೆ ಬಲಿಯಾಗುತ್ತಿದ್ದಾರೆ. ಇಂತಹ ಅಪರಾಧಿಗಳಿಗೆ ಕೇವಲ ಜೈಲು ಶಿಕ್ಷೆ ನೀಡಿದರೆ ಸಾಲದು, ಅವರ ನಾಲಿಗೆ, ಕೈ, ಕಾಲುಗಳನ್ನು ಕತ್ತರಿಸಬೇಕು ಎನ್ನುವಷ್ಟರ ಮಟ್ಟಿಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.ಮೈಸೂರು ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಶಿವಬಸವಯ್ಯ ಅವರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಸಂಶೋಧನಾ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣವನ್ನು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ಜೆಡಿಎಸ್‌ನ ಎಂ.ಸಿ. ನಾಣಯ್ಯ, ‘ಇಂತಹ ಘಟನೆಗಳನ್ನು ತಡೆಯಲು ಸರ್ಕಾರಕ್ಕೆ ಸಾಧ್ಯವೇ ಇಲ್ಲವೇ?’ ಎಂದು ಪ್ರಶ್ನಿಸಿದರು.

‘ವಿಶ್ವವಿದ್ಯಾಲಯಗಳು ಇಂದು ಕಾಮುಕರ ತಾಣಗಳಾಗಿವೆ. ಅಲ್ಲದೇ, ಜಾತಿ ರಾಜಕಾರಣವೂ ನಡೆಯುತ್ತಿದೆ. ಇಂತಹ ನೀಚಕೆಲಸಗಳಲ್ಲಿ ತೊಡಗಿಕೊಂಡವರನ್ನು ಒದ್ದು ಹೊರಗೆ ಹಾಕಬೇಕು’ ಎಂದು ಕಿಡಿಕಾರಿದರು.‘ಕಿರುಕುಳಕ್ಕೆ ಒಳಗಾದ ವಿದ್ಯಾರ್ಥಿನಿ ಮೂರು ತಿಂಗಳ ಹಿಂದೆಯೇ ವಿಶ್ವವಿದ್ಯಾಲಯದ ಕುಲಪತಿಗಳ ಗಮನಕ್ಕೆ ತಂದಿದ್ದರಂತೆ. ಆದರೆ ಇವರು ಕಾನೂನು ಕ್ರಮಗಳನ್ನು ಜರುಗಿಸದೇ, ಮಾರ್ಗದರ್ಶಕರನ್ನು ಬದಲಾಯಿಸಿಕೊಳ್ಳುವಂತೆ ಸಲಹೆ ನೀಡಿದರಂತೆ! ಇದೆಂತಹ ನ್ಯಾಯ? ಅವತ್ತೇ ಅವರು ಪ್ರೊಫೆಸರ್ ವಿರುದ್ಧ ಕ್ರಮಕೈಗೊಂಡಿದ್ದರೆ ಇವತ್ತು ಈ ಸ್ಥಿತಿ ಬರುತ್ತಿರಲಿಲ್ಲ. ಕಿರುಕುಳ ನೀಡಿದ ಪ್ರೊಫೆಸರ್ ಜೊತೆ ಕುಲಪತಿ ಅವರ ವಿರುದ್ಧವೂ ಕಠಿಣ ಕ್ರಮಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.ಬಿಜೆಪಿಯ ಭಾರತಿ ಶೆಟ್ಟಿ ಅವರು ‘ಕಾನೂನಿಗೆ ತಿದ್ದುಪಡಿ ತರಬೇಕು. ಇಂತಹ ಅಪರಾಧಿಗಳಿಗೆ ಕೇವಲ ಜೈಲು ಶಿಕ್ಷೆ ನೀಡಿದರೆ ಸಾಲದು ಅವರ ನಾಲಿಗೆ, ಕೈ, ಕಾಲುಗಳನ್ನು ಕತ್ತರಿಸಿ ಬಿಡಬೇಕು. ಸಮಾಜದಲ್ಲಿ ನರಳಿ, ನರಳಿ ಬದುಕುವಂತಾಗಬೇಕು. ಪ್ರತಿ ಕ್ಷಣ ಅವರಿಗೆ ತಮ್ಮ ತಪ್ಪಿನ ಅರಿವಾಗಬೇಕು’ ಎಂದು ಕಿಡಿಕಾರಿದರು.ಕಾಂಗ್ರೆಸ್ಸಿನ ಎಸ್.ಆರ್. ಪಾಟೀಲ ಮಾತನಾಡಿ, ‘ಇಂತಹ ಘಟನೆಗಳು ಕೇವಲ ವಿಶ್ವವಿದ್ಯಾಲಯಗಳಿಗೆ ಸೀಮಿತವಾಗಿಲ್ಲ. ಪ್ರಾಥಮಿಕ ಶಾಲೆಗಳಲ್ಲೂ ನಡೆಯುತ್ತಿವೆ. ಕಾಮುಕ ಶಿಕ್ಷಕರಿಂದ ಉತ್ತಮ ಸಮಾಜದ ನಿರ್ಮಾಣ ಸಾಧ್ಯವಿಲ್ಲ. ಇಂತಹವರ ವಿರುದ್ಧ ಅತ್ಯಂತ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಬೇಕು. ಜಾತಿ ಬಲ, ಹಣ ಬಲ ಯಾವ ಪ್ರಭಾವಕ್ಕೂ ಮಣಿಯದೇ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. ಬಿಜೆಪಿಯ ವಿಮಲಾಗೌಡ ಮಾತನಾಡಿ, ‘ವಿಶ್ವವಿದ್ಯಾಲಯದಿಂದ ಹಿಡಿದು ಚಿಂದಿ ಆಯುವ ಮಟ್ಟದಲ್ಲಿಯೂ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ. ಹೆಣ್ಣು ಅಂದರೆ ಭೋಗದ ವಸ್ತುವೇ? ಹಲವು ವರ್ಷಗಳಿಂದ ಹೀಗೆ ನಡೆದುಕೊಂಡು ಬರುತ್ತಿದೆ. ಈ ಸ್ಥಿತಿಯನ್ನು ನೋಡಿದರೆ ರಕ್ತ ಕುದಿಯುತ್ತದೆ’ ಎಂದು ಗದ್ಗದಿತರಾದರು.‘ಬೆಂಗಳೂರಿನಲ್ಲೂ ಒಬ್ಬ ಪ್ರೊಫೆಸರ್ ತನ್ನ ಮೊದಲ ಪತ್ನಿಯನ್ನು ಬಿಟ್ಟು, ವಿದ್ಯಾರ್ಥಿನಿಯ ಜೊತೆ ಸಂಸಾರ ಹೂಡಿದ್ದಾನೆ. ಅವನಿಗೆ ಪತ್ನಿಯಾದವಳು ಸರಿಯಾಗಿ ಪಾಠ ಕಲಿಸಿದ್ದಾಳೆ’ ಎಂದರು.ಸಭಾಧ್ಯಕ್ಷ ಡಿ.ಎಚ್. ಶಂಕರಮೂರ್ತಿ ಸಹ ಮಾತನಾಡಿ, ತಾವು ಉನ್ನತ ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದ ಇಂತಹದ್ದೇ ಘಟನೆಯನ್ನು ಸ್ಮರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.