ವಿಧಾನ ಪರಿಷತ್ ಚುನಾವಣೆ: ಮೇಲ್ಮನೆಯ ಹೊಸ ಮುಖಗಳು

7

ವಿಧಾನ ಪರಿಷತ್ ಚುನಾವಣೆ: ಮೇಲ್ಮನೆಯ ಹೊಸ ಮುಖಗಳು

Published:
Updated:
ವಿಧಾನ ಪರಿಷತ್ ಚುನಾವಣೆ: ಮೇಲ್ಮನೆಯ ಹೊಸ ಮುಖಗಳು

ಬೆಂಗಳೂರು: ಶಾಸಕ ಸ್ಥಾನ ರದ್ದುಗೊಳಿಸಿ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್‌ನಿಂದ ತಡೆಯಾಜ್ಞೆ ಪಡೆದುಕೊಂಡ ಎನ್.ಎಸ್.ನಂದೀಶ್ ರೆಡ್ಡಿ ಸೋಮವಾರ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕೊನೆಯ ಎರಡು ನಿಮಿಷಗಳ ಮುನ್ನ ಮತ ಚಲಾಯಿಸಿದರು. ಇದರಿಂದಾಗಿ ಬಿಜೆಪಿಯ ವಿಮಲಾ ಗೌಡರ ಗೆಲುವಿನ ಪಯಣ ತುಸು ಸುಲಭವಾಯಿತು.ಕವಿತಾ ಎಂಬುವರು ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ನಂದೀಶ್ ರೆಡ್ಡಿ ಅವರ ಆಯ್ಕೆಯನ್ನು ಅನೂರ್ಜಿತಗೊಳಿಸಿ ಜೂನ್ 1ರಂದು ಆದೇಶ ಹೊರಡಿಸಿತ್ತು. ಇದರಿಂದಾಗಿ ಪರಿಷತ್ ಚುನಾವಣೆಯಲ್ಲಿ ಅವರಿಗೆ ಮತದಾನದ ಅವಕಾಶ ಕೈತಪ್ಪುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ನಂದೀಶ್ ರೆಡ್ಡಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ಆರಂಭಿಸಿದ ಸುಪ್ರೀಂಕೋರ್ಟ್ ಸೋಮವಾರ ಮಧ್ಯಾಹ್ನ 12.45ರ ಸುಮಾರಿಗೆ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿತು.ತರಾತುರಿಯಲ್ಲಿ ಸುಪ್ರೀಂಕೋರ್ಟ್ ಆದೇಶದ ಪ್ರತಿಯನ್ನು ಪಡೆದುಕೊಂಡ ರೆಡ್ಡಿ, ವಿಶೇಷ ವಿಮಾನದ ಮೂಲಕ ಮಧ್ಯಾಹ್ನ 3 ಗಂಟೆಗೆ ದೇವನಹಳ್ಳಿಯ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಅವರನ್ನು ಜಕ್ಕೂರಿಗೆ ಕರೆತರಲಾಯಿತು. ಅಲ್ಲಿಗೆ ತಮ್ಮ ಬೆಂಗಾವಲು ಪಡೆಯೊಂದಿಗೆ ತೆರಳಿದ್ದ ಗೃಹ ಸಚಿವ ಆರ್.ಅಶೋಕ, ಶಾಸಕರಿಗಾಗಿ ಕಾದಿದ್ದರು.ಹೆಲಿಕಾಪ್ಟರ್‌ನಿಂದ ಇಳಿಯುತ್ತಿದ್ದಂತೆ ರೆಡ್ಡಿ ಅವರನ್ನು ತಮ್ಮ ಕಾರಿಗೆ ಹತ್ತಿಸಿಕೊಂಡ ಗೃಹ ಸಚಿವರು ತಡೆರಹಿತ ಸಂಚಾರ ವ್ಯವಸ್ಥೆಯಲ್ಲಿ ವಿಧಾನಸೌಧಕ್ಕೆ ದೌಡಾಯಿಸಿದರು. ವಿಧಾನಸೌಧದ ಮೊದಲನೇ ಮಹಡಿಯ ಕೊಠಡಿ ಸಂಖ್ಯೆ 106ರಲ್ಲಿ ಮತದಾನ ಕೇಂದ್ರ ಸ್ಥಾಪಿಸಲಾಗಿತ್ತು. ಅಲ್ಲಿಗೆ ನಂದೀಶ್ ರೆಡ್ಡಿ ಪ್ರವೇಶಿಸಿದಾಗ ಸಮಯ ಮಧ್ಯಾಹ್ನ 3.45 ಆಗಿತ್ತು.ಒಳ ಬಂದ ಶಾಸಕರು ಸುಪ್ರೀಂಕೋರ್ಟ್‌ನ ಆದೇಶದ ಪ್ರತಿಯನ್ನು ಮತಗಟ್ಟೆ ಅಧಿಕಾರಿಗಳಿಗೆ ನೀಡಿದರು. ಅದನ್ನು ಫ್ಯಾಕ್ಸ್ ಮೂಲಕ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಿ.ಎಸ್.ಸುರಂಜನ ಅವರಿಗೆ ತಲುಪಿಸಿದ ಮತಗಟ್ಟೆ ಅಧಿಕಾರಿಗಳು, ರೆಡ್ಡಿ ಅವರಿಗೆ ಮತ ಚಲಾಯಿಸಲು ಅವಕಾಶ ನೀಡಲು ಅನುಮತಿ ಪಡೆದರು. ಸಂಜೆ 4 ಗಂಟೆಗೆ ಮತದಾನ ಅಂತ್ಯವಾಗುತ್ತಿತ್ತು. 3.58ಕ್ಕೆ ನಂದೀಶ್ ರೆಡ್ಡಿ ಮತ ಚಲಾಯಿಸಿ ನಿಟ್ಟುಸಿರು ಬಿಟ್ಟರು.ಅಲ್ಲಿಯವರೆಗೂ ಅಶೋಕ ಮತಗಟ್ಟೆ ಹೊರಗೆ ಇದ್ದರು. ರೆಡ್ಡಿ ಅವರಿಗೆ ಮತ ಚಲಾವಣೆಗೆ ಅವಕಾಶ ದೊರೆಯುತ್ತದೋ, ಇಲ್ಲವೋ ಎಂದು ಬಿಜೆಪಿ ಸಚಿವರು, ಶಾಸಕರು ಚಡಪಡಿಸುತ್ತಿದ್ದ ದೃಶ್ಯ ಕಂಡುಬಂತು.ಬಿಜೆಪಿ ಮೂಲಗಳ ಪ್ರಕಾರ, ರೆಡ್ಡಿ ಅವರ ಮತವನ್ನು ವಿಮಲಾ ಗೌಡ ಅವರಿಗೆ ಹಂಚಿಕೆ ಮಾಡಲಾಗಿತ್ತು. ನಿಗದಿಯಾಗಿದ್ದ 21 ಮೊದಲ ಪ್ರಾಶಸ್ತ್ಯದ ಮತಗಳ ಪೈಕಿ ಅವರಿಗೆ 17 ಮಾತ್ರ ದೊರೆತಿವೆ. ರೆಡ್ಡಿ ಮತ ಚಲಾಯಿಸದೇ ಹೋಗಿದ್ದರೆ ಈ ಸಂಖ್ಯೆ 16ಕ್ಕೆ ಕುಸಿಯುತ್ತಿತ್ತು. ರಘುನಾಥ ರಾವ್ ಮಲ್ಕಾಪುರೆ ಅವರಿಗೂ 21 ಮತ ನಿಗದಿ ಮಾಡಲಾಗಿತ್ತು. ಆದರೆ, ದೊರಕಿದ್ದು 18 ಮಾತ್ರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry