ವಿಧ್ಯುಕ್ತ ಕ್ರಿಯೆ ಅನಿಸಬಾರದು

7

ವಿಧ್ಯುಕ್ತ ಕ್ರಿಯೆ ಅನಿಸಬಾರದು

Published:
Updated:

ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು ಪ್ರದಕ್ಷಿಣೆ ಹಾಕಿದ್ದಾರೆ. ಕಾಮಗಾರಿಗಳು ದೇಕುತ್ತಿರುವುದನ್ನು ಕಂಡು ರೇಗಿದ್ದಾರೆ.  ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಮುಖ್ಯಮಂತ್ರಿ ರಾಜಧಾನಿಯ ಹಾದಿಬೀದಿಗಳಲ್ಲಿ  ಸುತ್ತಾಡಿ, ಎಚ್ಚರಿಕೆ ನೀಡಿದ್ದರಲ್ಲಿ ನಗರದ ನಿವಾಸಿಗಳಿಗೆ ಯಾವ ವಿಶೇಷವೂ ಕಂಡಿರಲಾರದು.

ಮುಖ್ಯಮಂತ್ರಿ ಕುರ್ಚಿ ಏರಿದವರು ನಗರ ಪ್ರದಕ್ಷಿಣೆ ಮಾಡುವುದು ಒಂದು ರೀತಿ ಕ್ರಿಯಾವಿಧಿ ಆಗಿದೆ. ಅದರಿಂದ ಬೆಂಗಳೂರಿನ  ‘ಭಾಗ್ಯರೇಖೆ’ ಬದಲಾಗಿಲ್ಲ ಎಂಬುದೇ ದುರದೃಷ್ಟದ ಸಂಗತಿ. ಹಿತಕರ ಹವೆಗೆ ಹೆಸರಾದ, ಎಲ್ಲ ವರ್ಗದ, ಎಲ್ಲ ಭಾಷಿಕ ಜನರೂ ಇಷ್ಟಪಡುತ್ತಿದ್ದ ಬೆಂಗಳೂರು ಮಹಾ ‘ಕಿರಿಕಿರಿ’ಯ ನಗರವಾಗಿ ಪರಿವರ್ತನೆ ಹೊಂದುತ್ತಿದೆ.

ರಸ್ತೆ, ಚರಂಡಿಗಳು ಕೆಟ್ಟಿವೆ. ಸಂಚಾರ ದಟ್ಟಣೆ ನಿಭಾಯಿಸಲಾಗದ ಸ್ಥಿತಿ ಮುಟ್ಟಿದೆ. ಎತ್ತ ನೋಡಿದರೂ  ವಾಹನಗಳು. ನಿಲುಗಡೆಗೆ ಜಾಗವೇ ಇಲ್ಲ. ಫುಟ್‌ಪಾತ್‌ಗಳು ಕಾಣೆ­ಯಾಗಿವೆ. ಪಾದಚಾರಿಗಳು ಅಂಗೈಯಲ್ಲಿ ಜೀವ ಹಿಡಿದು ಓಡಾಡಬೇಕಾಗಿದೆ. ಸಹನೀಯ ಜೀವನಕ್ಕೆ ಬೇಕಾದ ಕನಿಷ್ಠ ಸೌಕರ್ಯಗಳೂ ಇಲ್ಲವಾಗಿವೆ.

ಜನಪ್ರತಿನಿಧಿಗಳ ದೂರದೃಷ್ಟಿಯ ಕೊರತೆ, ಸುಂದರ ನಗರವನ್ನು ಕುರೂಪ­ಗೊಳಿಸಿದೆ. ನಗರವಾಸಿಗಳ ಪಕ್ಷ ಎಂದು ಬಿಂಬಿತವಾದ ಬಿಜೆಪಿ ಆಡಳಿತ ಅವಧಿಯಲ್ಲಿ ನಗರದ ಮೂಲ ಸೌಕರ್ಯಗಳ ಸ್ಥಿತಿ ಎಷ್ಟರಮಟ್ಟಿಗೆ  ಕೆಟ್ಟಿತೆಂದರೆ, ಕಸ ವಿಲೇವಾರಿ ಕೂಡ ಕಗ್ಗಂಟಾಗಿ ಪರಿಣಮಿಸಿ, ನಗರ ಅಂತರರಾಷ್ಟ್ರೀಯ ಮಟ್ಟದಲ್ಲಿ ನಗೆಪಾಟಲಿಗೆ ಈಡಾಯಿತು.ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಈಚೆಗಷ್ಟೇ 100 ದಿನಗಳ ಸಂಭ್ರಮ ಆಚರಿಸಿದೆ. ಆದರೆ, ಈ ಅವಧಿಯಲ್ಲಿ ನಗರದ ಮೂಲ ಸೌಕರ್ಯ ವೃದ್ಧಿಗೆ ಯಾವ ಕೆಲಸವೂ  ಪರಿಣಾಮಕಾರಿಯಾಗಿ ಆಗಿಲ್ಲ. ಮೂಲ ಸೌಕಯಕ್ಕೆ ಸಂಬಂಧಿಸಿದಂತೆ ಒಂದು ನಿರ್ದಿಷ್ಟ ನೀತಿಯೇ ಇಲ್ಲ.  ಮಳೆ ಕಾರಣ ಗುಂಡಿಗಳೇ ರಸ್ತೆಗಳನ್ನು ನುಂಗಿವೆ. ನಾಲ್ಕು ಹನಿ ಮಳೆ ಸುರಿದರೆ ಸಾಕು, ನಗರದ ರಸ್ತೆಗಳು ಕೆಸರುಗದ್ದೆಗಳಾಗುತ್ತವೆ. ದ್ವಿಚಕ್ರ ವಾಹನ ಸವಾರರು ಅರೆಕ್ಷಣ ಮೈಮರೆತರೂ ಮೂಳೆಮುರಿತ ಕಟ್ಟಿಟ್ಟಬುತ್ತಿ.

ಬೆಂಗಳೂರಿಗರನ್ನು ಈ ಪರಿ ಕಡೆಗಣಿಸಬಾರದಿತ್ತು.  ಕೋಟಿ ಜನಸಂಖ್ಯೆ ಉಳ್ಳ ನಗರದ ಪಾಡೇ ಹೀಗಿರಬೇಕಾದರೆ ದೂರದ ಗ್ರಾಮಗಳ ಸ್ಥಿತಿ ಹೇಗಿರಬೇಡ!?  ಸುಧಾರಣೆ ಆಗಬೇಕಾದುದು ಬಹಳಷ್ಟಿದೆ. ತುರ್ತಾಗಿ ಆಗಬೇಕಾಗಿರುವ ಕೆಲಸಗಳ ಕಡೆ ಕೂಡಲೇ ಗಮನಹರಿಸಬೇಕು. ಜತೆಗೆ ಎರಡು ದಶಕಗಳ ಆಚೆಗೆ ದೃಷ್ಟಿನೆಟ್ಟು ಯೋಜನೆಗಳನ್ನು  ರೂಪಿಸುವ ಕೆಲಸವೂ ಆಗಬೇಕಿದೆ. ಬೆಂಗಳೂರನ್ನು ಸಿಂಗಪುರ ಮಾಡುತ್ತೇವೆ ಎಂದು ನಮ್ಮನ್ನು ಆಳಿದ ನಾಯಕರು ಭರವಸೆ ನೀಡಿದರು.

ಆದರೆ ಆಗಿದ್ದೇ ಬೇರೆ! ಬಿ.ಬಿ.ಎಂ.ಪಿ. ಆಡಳಿತ ಹಳಿ ತಪ್ಪಿದೆ. ದುಷ್ಟಕೂಟದ ಕಪಿಮುಷ್ಟಿಯಿಂದ ಅದನು್ನ ಬಿಡಿಸಬೇಕಿದೆ.  ನಗರದ ಮೂಲ ಸೌಕರ್ಯ ಅಭಿವೃದ್ಧಿ ಹೊಣೆಯನ್ನು ದೂರದೃಷ್ಟಿಯುಳ್ಳ ಒಬ್ಬ ಉತ್ಸಾಹಿ ಸಚಿವರಿಗೆ ವಹಿಸಬೇಕು. ಕಾಮಗಾರಿಗಳಿಗೆ ವೇಗ ತುಂಬಬೇಕು. ಅವುಗಳ ಪ್ರಗತಿ ಪರಿಶೀಲನೆಯನ್ನು ನಿರಂತರವಾಗಿ ನಡೆಸುವ ವ್ಯವಸ್ಥೆ ಆಗಬೇಕು. ಯೋಜನಾಬದ್ಧವಾದ ಇಂತಹ ಉಪಕ್ರಮಗಳ ಮೂಲಕ ನಗರ ಬದುಕನ್ನು ಸಹನೀಯಗೊಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರ ದೃಢ ಹೆಜ್ಜೆ ಇಡಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry