ವಿನಯ-ವಿರಾಟ್ ಅಬ್ಬರ; ಇಂಗ್ಲೆಂಡ್ ಶರಣು

7

ವಿನಯ-ವಿರಾಟ್ ಅಬ್ಬರ; ಇಂಗ್ಲೆಂಡ್ ಶರಣು

Published:
Updated:

ನವದೆಹಲಿ: `ದಾವಣಗೆರೆ ಎಕ್ಸ್‌ಪ್ರೆಸ್~ ವಿನಯಕುಮಾರ್ ಬಿರುಗಾಳಿಯಂತಹ ಬೌಲಿಂಗ್, `ದೆಹಲಿ ಹುಡುಗ~ ವಿರಾಟ್ ಕೊಹ್ಲಿ ಶತಕದ ಅಬ್ಬರ, ಗೌತಮ್ ಗಂಭೀರ್ ಸುಂದರ ಬ್ಯಾಟಿಂಗ್..ನವದೆಹಲಿಯ ಐತಿಹಾಸಿಕ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಸೋಮವಾರ ಸಂಜೆ ಭಾರತ ತಂಡಕ್ಕೆ ಇಂಗ್ಲೆಂಡ್ ವಿರುದ್ಧ ಎಂಟು ವಿಕೆಟ್‌ಗಳ ಜಯ ದಾಖಲಿಸಲು ಕಾರಣವಾಗಿದ್ದೇ ಈ ಮೂರು ಆಂಶಗಳು. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆಗೆ ರಾಜಧಾನಿಯ ಅಂಗಳ ವೇದಿಕೆಯಾಯಿತು.ಮಧ್ಯಾಹ್ನ ಟಾಸ್ ಗೆದ್ದು ಬೃಹತ್ ಮೊತ್ತದ ಗುರಿ ನೀಡುವ ಇಂಗ್ಲೆಂಡ್ ತಂಡದ ಕನಸನ್ನು ಭಗ್ನಗೊಳಿಸಿದ ವಿನಯಕುಮಾರ್ (9-1-30-4),  ಬೌಲಿಂಗ್ ಶಿಸ್ತಿಗೆ ಇಂಗ್ಲೆಂಡ್ ಶರಣಾಯಿತು. ಇದರಿಂದಾಗಿ ಪ್ರವಾಸಿ ತಂಡವು  48.2 ಓವರುಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 237 ರನ್ನುಗನ್ನು ಗಳಿಸಲು ಸಾಧ್ಯವಾಯಿತು.ನಂತರ ಇರುವ ಮೊತ್ತದ ಬೆಂಬಲದಿಂದಲೇ ಹೋರಾಡಿ ಗೆಲ್ಲುವ ಬೌಲರ್‌ಗಳ ಕಾರ್ಯಯೋಜನೆಯನ್ನು ದೆಹಲಿ ಜೋಡಿ ಗೌತಮ್ ಗಂಭೀರ್ (ಅಜೇಯ 84; 90ಎಸೆತ, 10ಬೌಂಡರಿ, 150ನಿಮಿಷ) ಮತ್ತು ವಿರಾಟ್ ಕೊಹ್ಲಿ ಅಜೇಯ (112; 98ಎಸೆತ, 16ಬೌಂಡರಿ, 134ನಿಮಿಷ) ವಿಫಲಗೊಳಿಸಿದರು. ಅಲ್ಲದೇ ತವರಿನ ಅಂಗಳದಲ್ಲಿ ಮೊದಲ ಶತಕ ಗಳಿಸಿದ ವಿರಾಟ್ ಕೊಹ್ಲಿ ಮತ್ತು ಗಂಭೀರ್ ಮೂರನೇ ವಿಕೆಟ್ ಪಾಲುದಾರಿಕೆಯಲ್ಲಿ 209 ರನ್ನುಗಳನ್ನು ಪೇರಿಸಿ, 1996ರಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಮೊಹಮ್ಮದ್ ಅಜರುದ್ದೀನ್ ನಿರ್ಮಿಸಿದ್ದ 175 ರನ್ನುಗಳ ದಾಖಲೆಯನ್ನು ಅಳಿಸಿಹಾಕಿದರು.  ಇದರ ಫಲವಾಗಿ ಭಾರತ ತಂಡವು 36.4 ಓವರುಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 238 ರನ್ ಗಳಿಸಿತು.ವಿನಯಕುಮಾರ್ ಸಾಧನೆ:    ಬ್ಯಾಟ್ಸ್‌ಮನ್‌ಗಳಿಗೆ ಸಹಕಾರಿಯಾಗುವ ಪಿಚ್ ಮೇಲೆ ಬ್ಯಾಟಿಂಗ್ ಆರಂಭಿಸಿದ ಪ್ರವಾಸಿ ಬಳಗ ಆರಂಭದಲ್ಲಿಯೇ ಕುಸಿಯಿತು. ತಂಡದ ಮೊತ್ತದ ಖಾತೆ ತೆರೆಯುವ ಮುನ್ನವೇ ಎರಡು ವಿಕೆಟ್ ಕಳೆದುಕೊಂಡಿತು. ಪಂದ್ಯದ ಮೊದಲ ಓವರಿನಲ್ಲಿಯೇ ಪ್ರವೀಣಕುಮಾರ್ ಆಫ್‌ಸ್ಟಂಪ್ ಹೊರಗೆ ಹಾಕಿದ್ದ ಎಸೆತವನ್ನು ಕಟ್ ಮಾಡಿದ ಅಲಿಸ್ಟರ್ ಕುಕ್ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿದ್ದ ರವೀಂದ್ರ ಜಡೇಜಾ ಕೈಸೇರಿದರು.  ನಂತರದ ಓವರಿನಿಂದ ವಿನಯಕುಮಾರ್ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳ ಪಾಲಿಗೆ ದುಃಸ್ವಪ್ನವಾಗಿಬಿಟ್ಟರು.ವಿನಯಕುಮಾರ್ ಎಸೆತವನ್ನು ತಡವಿದ ಕ್ರೇಗ್ ಕೀಸ್‌ವೆಟ್ಟರ್ ಸ್ಲಿಪ್‌ನಲ್ಲಿದ್ದ ಕೊಹ್ಲಿಗೆ ಕ್ಯಾಚ್ ಕೊಟ್ಟಾಗ ತಂಡದ ಮೊತ್ತ ಇನ್ನೂ ಸೊನ್ನೆಯಿಂದ ಮುಂದೆ ಉರುಳಿರಲಿಲ್ಲ. ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬಂದಿದ್ದ ಜೋನಾಥನ್ ಟ್ರಾಟ್ (34; 37ಎಸೆತ, 7ಬೌಂಡರಿ), ಜೊತೆ ಸೇರಿದ ಕೆವಿನ್ ಪೀಟರ್ಸನ್ ತಂಡವನ್ನು ಆತಂಕದ ಮಡುವಿನಿಂದ ಮೇಲೆತ್ತಲು ಆರಂಭಿಸಿದರು.ಮೂರನೇ ವಿಕೆಟ್‌ಗೆ 48 ರನ್ ಸೇರಿಸಿದ್ದ ಇವರ ಜೊತೆಯಾಟವನ್ನು ಮುರಿದವರು ವಿನಯಕುಮಾರ್. ಹತ್ತನೇ ಓವರಿನಲ್ಲಿ ವಿನಯ್ ಎಸೆತವನ್ನು ಆಡುವ ಯತ್ನದಲ್ಲಿ ಟ್ರಾಟ್ ಬ್ಯಾಟಿನ ಅಂಚು ಸವರಿದ ಚೆಂಡು ದೋನಿ ಕೈಗವಸುಗಳಲ್ಲಿ ಸೇರಿತು.ವಿನಯಕುಮಾರ್ ಮೊದಲ ಸ್ಪೆಲ್‌ನಲ್ಲಿ (7-1-25-3) ಮೂರು ವಿಕೆಟ್ ಕಬಳಿಸಿದ ವಿನಯ್ 46ನೇ ಓವರ್‌ನಲ್ಲಿ ಎರಡನೇ ಸ್ಪೆಲ್ ಆರಂಭಿಸಿದ ಮೊದಲ ಎಸೆತದಲ್ಲಿಯೇ ಗ್ರೆಮ್ ಸ್ವಾನ್ ಅವರನ್ನು ಕ್ಲಿನ್ ಬೌಲ್ಡ್ ಮಾಡಿದರು. ಇದುವರೆಗೆ ಅವರು ತಮ್ಮ ಪದಾರ್ಪಣೆ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಪಡೆದಿದ್ದ (51ಕ್ಕೆ2) ಸಾಧನೆಯೇ ಉತ್ತಮ ಬೌಲಿಂಗ್ ಸಾಧನೆಯಾಗಿತ್ತು.ಕೊಹ್ಲಿ ಶತಕದ ಅಬ್ಬರ: ಸುಲಭ ಗುರಿಯ ಬೆನ್ನು ಹತ್ತಿದ ಭಾರತಕ್ಕೆ ಪಾರ್ಥಿವ ಪಟೇಲ್ ಮತ್ತು ಅಜಿಂಕ್ಯ ರಹಾನೆ ಬಿರುಸಿನ ಆರಂಭ ನೀಡಲು ಯತ್ನಿಸಿದರು. ಪಾರ್ಥಿವ್ ಪಟೇಲ್ ಸ್ಲಿಪ್‌ನಲ್ಲಿದ್ದ ಗ್ರೆಮ್ ಸ್ವಾನ್‌ರಿಂ ಒಂದು ಬಾರಿ ಜೀವದಾನ ಪಡೆದರೂ, ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗಲಿಲ್ಲ.ನಂತರ ರಹಾನೆ ಬಿರುಸಿನ ಆಟಕ್ಕೆ ನಿಂತರು. ಬ್ರೆಸ್ನನ್ ಹಾಕಿದ ಇನ್ನೊಂದು ಓವರಿನಲ್ಲಿ ಲಾಂಗ್ ಲೆಗ್‌ಗೆ ಭರ್ಜರಿ ಸಿಕ್ಸರ್ ಎತ್ತಿದರು. ನಂತರದ ಎಸೆತವನ್ನೂ ಅದೇ ರೀತಿ ಹುಕ್ ಮಾಡಿದರು. ಆದರೆ  ಚೆಂಡು ನೇರವಾಗಿ ಫೀಲ್ಡರ್ ಡೆನ್‌ಬ್ಯಾಚ್ ಕೈಗಳಲ್ಲಿ ಸೇರಿತು. ಪಂದ್ಯದಲ್ಲಿ ಇದು ಇಂಗ್ಲೆಂಡ್ ಪಡೆದ ಕೊನೆಯ ವಿಕೆಟ್ ಕೂಡ ಆಯಿತು!ಎರಡು ರನ್ ಗಳಿಸಿ ಆಡುತ್ತಿದ್ದ ಗೌತಮ್ ಗಂಭೀರ್ ಜೊತೆ ಸೇರಿದ ವಿರಾಟ್ ಕೊಹ್ಲಿ ಬಿರುಸಿನ ಆಟ ಆರಂಭಿಸಿದರು. ಗಂಭೀರ್‌ಗಿಂತ ಮೊದಲೇ ಅರ್ಧಶತಕ ಗಳಿಸಿದರು. ಕೇವಲ 45 ಎಸೆತಗಳಲ್ಲಿ ಕೋಹ್ಲಿ ಅರ್ಧಶತಕ ಗಳಿಸಿದರೆ, ಗಂಭೀರ್ 62 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.ಕೋಹ್ಲಿ ತಮ್ಮ ಆಟದ ವೇಗವನ್ನು ಕಡಿಮೆ ಮಾಡಲೇ ಇಲ್ಲ. ಮಧ್ಯಮವೇಗಿಗಳು ಮತ್ತು ಸ್ಪಿನ್ನರ್‌ಗಳ ಎಸೆತಗಳಿಗೆ ಬೌಂಡರಿ ಗೆರೆಯ ದಾರಿ ತೋರಿಸಿದರು. ದೊಡ್ಡ ಹೊಡೆತ ಸಾಧ್ಯವಾಗದಿದ್ದಾಗ ಒಂದು ಮತ್ತು ಎರಡು ರನ್ ಸೇರಿಸಿದರು.

ಒಂದು ರನ್ ಪಡೆಯುವುದನ್ನು ತಡೆಯಲು 30 ಯಾರ್ಡ್‌ನಲ್ಲಿ ಏಳು ಜನ ಫೀಲ್ಡರ್‌ಗಳನ್ನು ನಿಲ್ಲಿಸಿದ ಕುಕ್ ಯೋಜನೆಯೂ ತಲೆಕೆಳಗಾಯಿತು. ಫೀಲ್ಡರ್‌ಗಳ ತಲೆಯ ಮೇಲಿಂದ ಹೋದ ಚೆಂಡು ಬೌಂಡರಿ ಗೆರೆ ದಾಟಿತು.83 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದ ಕೊಹ್ಲಿ ತವರಿನ ಅಂಗಳದಲ್ಲಿ ವಿಜೃಂಭಿಸಿದರು. ಸ್ವಲ್ಪ ಹೊತ್ತಿನ ನಂತರ ಬ್ರೆಸ್ನನ್ ಬೌಲಿಂಗ್‌ನಲ್ಲಿ ಟ್ರಾಟ್ ಅವರ ಕ್ಯಾಚ್ ಅನ್ನು ಬಿಟ್ಟರು. 37ನೇ ಓವರಿನಲ್ಲಿ ಡೆನ್‌ಬ್ಯಾಚ್ ಎಸೆತವನ್ನು ಕೊಹ್ಲಿ  ಡಿಪ್ ಮಿಡ್‌ವಿಕೆಟ್‌ ಬೌಂಡರಿಗೆ ಅಟ್ಟಿದ್ದೇ ತಡ ವಿಜಯೋತ್ಸವ ಆರಂಭವಾಯಿತು.   ಸ್ಕೋರ್ ವಿವರ

ಇಂಗ್ಲೆಂಡ್:
48.2 ಓವರ್‌ಗಳಲ್ಲಿ 237

ಅಲಿಸ್ಟರ್ ಕುಕ್ ಸಿ ಜಡೇಜಾ ಬಿ ಪ್ರವೀಣಕುಮಾರ್  00

ಕ್ರೇಗ್ ಕೀಸ್‌ವೆಟ್ಟರ್ ಸಿ ಕೊಹ್ಲಿ ಬಿ ವಿನಯಕುಮಾರ್  00

ಜೋನಾಥನ್ ಟ್ರಾಟ್ ಸಿ ದೋನಿ ಬಿ ವಿನಯಕುಮಾರ್  34

ಕೆವಿನ್ ಪೀಟರ್ಸನ್ ಸಿ ದೋನಿ ಬಿ ಯಾದವ್  46ರವಿ ಬೋಪಾರಾ ಎಲ್‌ಬಿಡಬ್ಲ್ಯು ಬಿ ಅಶ್ವಿನ್  36

ಜೋನಾಥನ್ ಬೈಸ್ಟೊ ಸಿ ಕೊಹ್ಲಿ ಬಿ ಜಡೇಜಾ  35

ಸಮಿತ್ ಪಟೇಲ್ ಎಲ್‌ಬಿಡಬ್ಲ್ಯು ಬಿ ಯಾದವ್  42

ಟಿಮ್ ಬ್ರೆಸ್ನನ್ ಸಿ ರೈನಾ ಬಿ ವಿನಯಕುಮಾರ್  12

ಗ್ರೆಮ್ ಸ್ವಾನ್ ಬಿ ವಿನಯಕುಮಾರ್  07ಸ್ಟಿವನ್ ಫಿನ್ ಔಟಾಗದೇ  06

ಜೇಡ್ ಡೆನ್‌ಬ್ಯಾಚ್ ರನೌಟ್/ಪ್ರವೀಣಕುಮಾರ್-ದೋನಿ  03ಇತರೆ: (ವೈಡ್ 11, ಲೆಗ್‌ಬೈ5)  16ವಿಕೆಟ್ ಪತನ: 1-0 (ಕುಕ್ 0.4), 2-0 (ಕೀಸ್‌ವೆಟ್ಟರ್ 1.5), 3-48 (ಟ್ರಾಟ್ 9.6), 4-121 (ಬೋಪಾರಾ 24.5), 5-121 (ಪೀಟರ್ಸನ್ 25.2), 6-207(ಪಟೇಲ್ 41.4), 7-211 (ಬೈಸ್ಟೋ 42.6), 8-227 (ಸ್ವಾನ್ 45.1), 9-229 (ಬ್ರೆಸ್ನನ್ 45.6), 10-237 (ಡೆನ್‌ಬ್ಯಾಚ್ 48.2).

ಬೌಲಿಂಗ್: ಪ್ರವೀಣಕುಮಾರ್ 9-1-40-1 (ವೈಡ್ 2), ಆರ್. ವಿನಯಕುಮಾರ್ 9-1-30-4 (ವೈಡ್ 1), ವಿರಾಟ್ ಕೋಹ್ಲಿ 5-0-18-0, ಉಮೇಶ್ ಯಾದವ್ 8.2-0-50-2, (ವೈಡ್ 3),ಆರ್. ಅಶ್ವಿನ್ 10-0-56-1 (ವೈಡ್ 3), ರವೀಂದ್ರ ಜಡೇಜಾ 7-0-38-1(ವೈಡ್ 1),ಭಾರತ: 36.4 ಓವರುಗಳಲ್ಲಿ 2 ವಿಕೆಟ್‌ಗೆ 238

ಪಾರ್ಥಿವ್ ಪಟೇಲ್ ಸಿ ಕುಕ್ ಬಿ ಬ್ರೆಸ್ನನ್  12

ಅಜಿಂಕ್ಯ ರಹಾನೆ ಸಿ ಡೆನ್‌ಬ್ಯಾಚ್ ಬಿ ಬ್ನೆಸ್ನನ್  14

ಗೌತಮ್ ಗಂಭೀರ್ ಔಟಾಗದೇ  84

ವಿರಾಟ್ ಕೊಹ್ಲಿ ಔಟಾಗದೇ  112ಇತರೆ: (ವೈಡ್ 13, ಲೆಗ್‌ಬೈ 3)  16ವಿಕೆಟ್ ಪತನ: 1-14 (ಪಟೇಲ್ 4.1), 2-29 (ರಹಾನೆ 6.5)ಬೌಲಿಂಗ್: ಟಿಮ್ ಬ್ರೆಸ್ನನ್ 7-1-41-2 (ವೈಡ್ 1), ಸ್ಟಿವನ್ ಫಿನ್ 9-0-50-0(ವೈಡ್2), ಜೇಡ್ ಡೆನ್‌ಬ್ಯಾಚ್ 5.4-0-41-0 (ವೈಡ್1), ಗ್ರೆಮ್ ಸ್ವಾನ್ 8-0-52-0 (ವೈಡ್ 1), ರವಿ ಬೋಪಾರಾ 3-0-21-0 (ವೈಡ್ 3), ಸಮಿತ್ ಪಟೇಲ್ 2-0-17-0, ಕೆವಿನ್ ಪೀಟರ್ಸನ್ 2-0-13-0ಫಲಿತಾಂಶ: ಭಾರತಕ್ಕೆ 8 ವಿಕೆಟ್ ಜಯ. ಸರಣಿಯಲ್ಲಿ 2-0 ಮುನ್ನಡೆ.

 

ಪಂದ್ಯಶ್ರೇಷ್ಠ: ವಿರಾಟ್ ಕೊಹ್ಲಿ. ಮುಂದಿನ ಪಂದ್ಯ: ಅಕ್ಟೋಬರ್ 20.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry