ಭಾನುವಾರ, ಜೂನ್ 13, 2021
21 °C

ವಿನಯ, ಸಂಸ್ಕಾರ ಬೆಳೆಸಿಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿನಯ, ಸಂಸ್ಕಾರ ಬೆಳೆಸಿಕೊಳ್ಳಿ

ಬೆಂಗಳೂರು:`ಯುವಜನರು ವಿದ್ಯೆಯ ಜೊತೆಗೆ ವಿನಯ ಮತ್ತು ಸಂಸ್ಕಾರಗಳನ್ನು ಬೆಳೆಸಿಕೊಂಡು ಗುರಿ ಸಾಧನೆಗೆ ಮುಂದಾಗಬೇಕು~ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಕರೆ ನೀಡಿದರು.ನಗರದ ಎಸ್‌ಜೆಆರ್ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ನಡೆದ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, `ಕೇವಲ ಹೆಚ್ಚು ಅಂಕಗಳನ್ನು ಪಡೆಯುವುದು ಮಾತ್ರ ವಿದ್ಯೆಯ ಉದ್ದೇಶವಲ್ಲ. ವಿನಯವನ್ನು ಬೆಳೆಸುವ ಹಾಗೂ ಸಮಾಜದ ಬಗ್ಗೆ ಎಚ್ಚರ ಮೂಡಿಸುವಂಥಾ ವಿದ್ಯೆಯ ಕಡೆಗೂ ವಿದ್ಯಾರ್ಥಿಗಳು ಗಮನ ನೀಡಬೇಕು. ಇದರಿಂದ ಮಾತ್ರ ಸಾಮಾಜಿಕ ಬದಲಾವಣೆ ಸಾಧ್ಯ~ ಎಂದು ಅವರು ಅಭಿಪ್ರಾಯ ಪಟ್ಟರು

.

`ನಗರ ಪ್ರದೇಶಗಳಲ್ಲಿ ಇಂದು ಮಹಿಳೆಯರ ಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಣೆಗೊಂಡಿದೆ. ಆದರೆ ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ಇಂದಿಗೂ ಶೋಷಣೆಯ ಪರಿಸರದಲ್ಲಿಯೇ ಬದುಕು ನಡೆಸುತ್ತಿದ್ದಾರೆ ಎಂದು ಅವರು ನುಡಿದರು. `ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದ ಮಹಿಳೆಯರಿಗೆ ಒಂದು ರೀತಿಯ ಕೌಟುಂಬಿಕ ಸ್ವಾತಂತ್ರ್ಯ ಸಾಧ್ಯವಾದರೂ, ಸಮಾಜದ ಸ್ವಾಸ್ಥ್ಯಕ್ಕೆ ಈ ಬೆಳವಣಿಗೆ ಸರಿಯಾದುದಲ್ಲ  ಎಂದರು.ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಸಿ.ಶರ್ಮ ಮಾತನಾಡಿ, `ಹಿಂದಿನಿಂದಲೂ ನಮ್ಮ ಸಮಾಜದಲ್ಲಿ ಪುರುಷ ಹಾಗೂ ಮಹಿಳೆ ಎಂಬ ಅಸಮಾನತೆಯನ್ನು ಸೃಷ್ಟಿಸಿಕೊಂಡು ಬರಲಾಗುತ್ತಿದೆ. ಇದರಿಂದ ಬೆಳೆಯುವ ಮಕ್ಕಳ ಮನಸ್ಸಿನಲ್ಲಿ ಇದೇ ಋಣಾತ್ಮಕ ಮನೋಭಾವ ಬೆಳೆಯುತ್ತಾ ಹೋಗುತ್ತದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಎಲ್ಲರೂ ಯೋಚಿಸಬೇಕು ಎಂದರು. ಎಸ್‌ಜೆಆರ್ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಎನ್.ಪಂಡಿತಾರಾಧ್ಯ ಮಾತನಾಡಿ, `ಮಹಿಳೆಯರು ಕೈಗಾರಿಕಾ ರಂಗದಲ್ಲಿ ಹೆಚ್ಚು ಹೆಚ್ಚು ತಮ್ಮನ್ನು ತೊಡಗಿಸಿಕೊಳ್ಳಬೇಕು. ಆರ್ಥಿಕ ಸ್ವಾವಲಂಬಿಗಳಾಗಿ ತಮ್ಮ ಬದುಕನ್ನು ರೂಪಿಸಿಕೊಳ್ಳಲು ಮಹಿಳೆಯರು ಮುಂದಾಗಬೇಕು.ದೇಶದ ಸಂಸ್ಕೃತಿ ಉಳಿಸುವಲ್ಲಿ ಹೆಣ್ಣಿನ ಪಾತ್ರ ದೊಡ್ಡದು. ಹಾಗಾಗಿ ಹೆಣ್ಣು ಮಕ್ಕಳು ತಮ್ಮ ಸುತ್ತಮುತ್ತಲಿನ ಸಮಾಜದ ವ್ಯಾಪ್ತಿಯಲ್ಲಿಯೇ ಸಂಸ್ಕೃತಿ ಹಾಗೂ ಸಂಪ್ರದಾಯಗಳನ್ನು ಉಳಿಸಲು ಮುಂದಾಗಬೇಕು~ ಎಂದರು. ಸಮಾರಂಭದಲ್ಲಿ ಕಾಲೇಜಿನ ವಿವಿಧ ವಿಭಾಗಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.