ಬುಧವಾರ, ನವೆಂಬರ್ 20, 2019
26 °C

ವಿನಾಕಾರಣ ಪ್ರಕರಣ ದಾಖಲು: ನಾಗಭೂಷಣರಾವ್

Published:
Updated:

ಬಳ್ಳಾರಿ: `ನೀತಿ ಸಂಹಿತೆಗೆ ಅನುಗುಣವಾಗಿ, ನಿಯಮ ಮೀರದೆ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದರೂ, ಚುನಾವಣಾ ಅಧಿಕಾರಿಗಳು ವಿನಾಕಾರಣ ನನ್ನ ವಿರುದ್ಧ ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘನೆ ಪ್ರಕರಣ ದಾಖಲಿಸಿದ್ದಾರೆ' ಎಂದು ಬಳ್ಳಾರಿ ನಗರ ಕ್ಷೇತ್ರದ ಸಿಪಿಐ ಅಭ್ಯರ್ಥಿ ಕೆ. ನಾಗಭೂಷಣರಾವ್ ಆರೋಪಿಸಿದರು.ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮಾದರಿ ನೀತಿ ಸಂಹಿತೆ ಜಾರಿಗೆ ಸಂಬಂಸಿದಂತೆ ಕೆಲವು ಅಧಿಕಾರಿಗಳು ಮನಬಂದಂತೆ ವರ್ತಿಸುತ್ತಿದ್ದಾರೆ. ಏಪ್ರಿಲ್ 7ರಂದು ಸ್ಥಳೀಯ ಇಂದಿರಾ ನಗರದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಮತ ಯಾಚಿಸುತ್ತಿದ್ದ ಸಂದರ್ಭ ಎಂಸಿಸಿ ತಂಡದ ಅಧಿಕಾರಿಗಳು, ಪ್ರಚಾರಕ್ಕೆ ಬಳಸುತ್ತಿದ್ದ ಪಕ್ಷದ ಬಾವುಟ, ಟೊಪ್ಪಿಗೆ ಹಾಗೂ ಶಾಲ್ ವಶಪಡಿಸಿಕೊಂಡಿದ್ದಾರೆ ಎಂದರು.ಚುನಾವಣಾ ಪ್ರಚಾರ ಕೈಗೊಳ್ಳುವುದಾಗಿ ಚುನಾವಣಾಧಿಕಾರಿಗಳಿಗೆ ತಿಳಿಸಿ, ಏಪ್ರಿಲ್ 3ರಂದೇ ಅನುಮತಿ ಕೊರಲಾಗಿತ್ತು. ಆದರೆ ಅನುಮತಿ ನೀಡದೆ ತಮ್ಮ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ ಸೆಕ್ಷನ್ 35 ಹಾಗೂ ಪ್ರಜಾಪ್ರತಿನಿಧಿ ಕಾಯ್ದೆ ಸೆಕ್ಷನ್ 126ರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ದೂರಿದರು.ನೀತಿ ಸಂಹಿತೆ ಉಲ್ಲಂಘನೆ ಮಾಡದಿದ್ದರೂ ಚುನಾವಣಾಧಿಕಾರಿಗಳು ಈ ರೀತಿ ಪ್ರಕರಣ ದಾಖಲಿಸಿರುವುದು ಖಂಡನಾರ್ಹ ಎಂದ ಅವರು, ಈ ಕುರಿತು ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥರಿಗೆ ಸಮಗ್ರವಾಗಿ ವಿವರಿಸಿ ದೂರು ನೀಡಲಾಗಿದೆ ಎಂದು ತಿಳಿಸಿದರು.ನೀತಿ ಸಂಹಿತೆ ಉಲ್ಲಂಘಿಸದಿದ್ದರೂ ಕೆ. ನಾಗಭೂಷಣರಾವ್ ಹಾಗೂ ಇತರರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವ ಕುರಿತು ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗುವುದು. ಚುನಾವಣಾ ಅಧಿಕಾರಿಗಳ ವರ್ತನೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ನ್ಯಾಯವಾದಿ ಮಲ್ಲಿಕಾರ್ಜುನರೆಡ್ಡಿ ತಿಳಿಸಿದರು. ಪಕ್ಷದ ಸದಸ್ಯರಾದ ವೀರಭದ್ರಗೌಡ, ಶೇಖರ್‌ಬಾಬು, ಸಂಗನಕಲ್ಲು ಕಟ್ಟೆಬಸಪ್ಪ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)