ಭಾನುವಾರ, ಡಿಸೆಂಬರ್ 15, 2019
26 °C

ವಿನಾಯಕನಿಗೆ ಸಂಭ್ರಮದ ವಿದಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿನಾಯಕನಿಗೆ ಸಂಭ್ರಮದ ವಿದಾಯ

ಸೋಮವಾರಪೇಟೆ: ಇಲ್ಲಿನ ಸಾರ್ವಜನಿಕ ಗಣಪತಿ ಸೇವಾಸಮಿತಿ ವತಿಯಿಂದ 6ನೇ ವರ್ಷದ ಗೌರಿ ಗಣೇಶ ಮೂರ್ತಿಗಳ ವಿಸರ್ಜನೋತ್ಸವವು ಬುಧವಾರ ನಡೆಯಿತು.ಅರ್ಚಕ ಎಸ್.ಆರ್. ರಮೇಶ್‌ ಅವರ ನೇತೃತ್ವದಲ್ಲಿ ಬೆಳೆಗ್ಗಿಯಿಂದಲೇ ವಿವಿಧ ಪೂಜಾಕೈಂಕರ್ಯಗಳು ನಡೆದವು. ಸಾರ್ವಜನಿಕರಿಗೆ ಮಧ್ಯಾಹ್ನ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಅಂತರರಾಷ್ಟ್ರೀಯ ಹಾಕಿ ಆಟಗಾರ ಎಸ್.ವಿ. ಸುನಿಲ್ ಚಾಲನೆ ನೀಡಿದರು. ನಂತರ ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆಯಲ್ಲಿ ತೆರಳಿ ಸಮೀಪದ ಆನೆಕೆರೆಯಲ್ಲಿ ಉತ್ಸವ­ಮೂರ್ತಿಗಳನ್ನು ವಿಸರ್ಜಿಸಲಾಯಿತು.ಸಮಿತಿ ಅಧ್ಯಕ್ಷ ಬಿ.ಆರ್. ಮಹೇಶ್, ಉಪಾಧ್ಯಕ್ಷ ಬಿ.ಎಚ್. ರವಿಕುಮಾರ್ ಸಮಿತಿಯ ಪದಾಧಿಕಾರಿಗಳಾದ ಕೆ.ಜಿ. ಸುರೇಶ್‌, ಟಿ.ಕೆ. ರಮೇಶ್‌, ಸುರೇಶ್‌ಶೆಟ್ಟಿ, ಸುಜಿತ್‌ಕುಮಾರ್‌ ಮತ್ತಿತರರು ಪಾಲ್ಗೊಂಡಿದ್ದರು.ಆನೆಕೆರೆಯಲ್ಲಿ ವಿಸರ್ಜನೆ:

ನಗರದಲ್ಲಿ ವಿವಿದೆಡೆ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣಪತಿ ಮೂರ್ತಿಗಳನ್ನು ಬುಧವಾರ ವಿಜೃಂಬಣೆಯಿಂದ ಮೆರವಣಿಗೆ ನಡೆಸಿ ಇಲ್ಲಿನ ಆನೆಕೆರೆಯಲ್ಲಿ ವಿಸರ್ಜಿಸಲಾಯಿತು.ನಾಪೋಕ್ಲು: ವಿಸರ್ಜನೋತ್ಸವ

ನಾಪೋಕ್ಲು: ಇಲ್ಲಿನ ವಿವಿಧ ಗಣೇಶ ಸೇವಾಸಮಿತಿಗಳ ವತಿಯಿಂದ ಏರ್ಪಡಿಸಲಾಗಿದ್ದ ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮ ಈಚೆಗೆ ಅದ್ದೂರಿಯಿಂದ ನಡೆಯಿತು.ವಿವೇಕಾನಂದ ನಗರದ ಗಣಪತಿ ಸೇವಾ ಸಮಿತಿ, ಕಕ್ಕುಂದಕಾಡಿನ ವೆಂಕಟೇಶ್ವರ ದೇವಸ್ಥಾನದ ಗಣಪತಿ ಸೇವಾ ಸಮಿತಿ, ಹಳೆತಾಲ್ಲೂಕಿನ ಪೊನ್ನುಮುತ್ತಪ್ಪ ದೇವಾಲಯದ ಗಣಪತಿ ಸೇವಾ ಸಮಿತಿ, ಶ್ರೀರಾಮಮಂದಿರ ಗಣಪತಿ ಸೇವಾಸಮಿತಿ ಹಾಗೂ ಹಳೇತಾಲ್ಲೂಕಿನ ಭಗವತಿ ದೇವಾಲಯದ ಗಣಪತಿ ಸೇವಾ ಸಮಿತಿಗಳ ವತಿಯಿಂದ ಏರ್ಪಡಿಸಲಾಗಿದ್ದ ಗಣೇಶ ಮೂರ್ತಿಗಳ ವಿಸರ್ಜನೋತ್ಸವ ಜನಮನ ಸೆಳೆಯಿತು.ಮದ್ಯಾಹ್ನ ವಿವಿಧ ದೇವಾಲಯಗಳಿಂದ ಹೊರಟ ಅಲಂಕೃತ ಮಂಟಪಗಳು ವಾದ್ಯಗೋಷ್ಠಿ, ಸಿಡಿಮದ್ದು ಪ್ರದರ್ಶನ, ಗೊಂಬೆ ಕುಣಿತ, ನವಿಲು ಕುಣಿತ, ಕೇರಳದ ಚಂಡೆ ಸಹಿತ ಮೆರವಣಿಗೆ ನಾಪೋಕ್ಲು ಪೇಟೆಯಲ್ಲಿ ಸಾಗಿತು.ಸಂಜೆಯ ವೇಳೆಗೆ ಕಾವೇರಿ ನದಿಯಲ್ಲಿ ಉತ್ಸವ ಮೂರ್ತಿಗಳನ್ನು ವಿಸರ್ಜಿಸಲಾಯಿತು. ಇದಕ್ಕೂ ಮುನ್ನ ಬೆಳಿಗ್ಗೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.ಒಂದುವಾರ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಪ್ರತಿ ದಿನ ಸಂಜೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿವಿಧ ದೇವಾಲಯಗಳ ಗಣಪತಿ ಸೇವಾ ಸಮಿತಿಯ ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡು ಅಲಂಕೃತ ಮಂಟಪಗಳು ವ್ಯವಸ್ಥಿತವಾಗಿ ಸಾಗಲು ಸಹಕರಿಸಿದರು. ಎಸ್‌ಐ ಷಣ್ಮುಗಂ ನೇತೃತ್ವದಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು.ಮೂರ್ನಾಡು: ಸಮೀಪದ ಮೂರ್ನಾಡಿನಲ್ಲಿ  ಗೌರಿಗಣೇಶ ಮೂರ್ತಿಗಳನ್ನು ಈಚೆಗೆ ಅದ್ದೂರಿಯಿಂದ ವಿಸರ್ಜನೆ ಮಾಡಲಾಯಿತು.

ಮೆರವಣಿಗೆಯಲ್ಲಿ ವಾದ್ಯಮೇಳ, ಕರಡಿ ಕುಣಿತ, ಸಿಡಿಮದ್ದು ಪ್ರದರ್ಶನ ಜನತೆಯನ್ನು ರಂಜಿಸಿದವು.ರಂಗುರಂಗಿನ ವಿದ್ಯುತ್‌ ಅಲಂಕೃತ ಮಂಟಪದಲ್ಲಿ ಉತ್ಸವ ಮೂರ್ತಿಗಳ ಶೋಭಾಯಾತ್ರೆ ಜನತೆಯ ಗಮನ ಸೆಳೆದವು.

ವೆಂಕಟೇಶ್ವರ ಕಾಲೊನಿಯ ವಿನಾಯಕ ಯುವಕ ಮಂಡಳಿ, ಗಾಂಧಿ ನಗರದ ರಾಮಮಂದಿರ ಯುವಕ ಮಿತ್ರ ಮಂಡಳಿ, ರಾಮಮಂದಿರ ಯುವಕ ಸಂಘ, ಸರಸ್ವತಿ ಲಂಬೋದರ ಯುವಕ ಸಂಘ, ಕೋಡಂಬೂರಿನ ವಿಘ್ನೇಶ್ವರ ಗೆಳೆಯರ ಬಳಗ, ಸಿದ್ದಿವಿನಾಯಕ ಗೆಳೆಯರ ಬಳಗ ಮತ್ತು ಮುತ್ತಾರುಮುಡಿಯ ಬೈಲಿಬಾಣೆ ಬಾಲಕರ ವಿನಾಯಕ ಸಂಘದ ಆಶ್ರಯದಲ್ಲಿ ಪ್ರತಿಷ್ಟಾಪಿಸಲಾಗಿದ್ದ ಗಣಪತಿ ಮೂರ್ತಿಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದವು.ಇದಕ್ಕೂ ಮುನ್ನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಮುತ್ತಾರುಮುಡಿಯ ಪ್ರಸನ್ನ ಯುವಕ ಸಂಘ ಮತ್ತು ಸರಸ್ವತಿ ನಗರದ ಸರಸ್ವತಿ ಲಂಬೋದರ ಯುವಕ ಸಂಘದಿಂದ ಪ್ರತಿಷ್ಟಾಪಿಸಲಾಗಿದ್ದ ಉತ್ಸವ ಮೂರ್ತಿಗಳನ್ನು ಮುತ್ತಾರುಮುಡಿ ಹೊಳೆಯಲ್ಲಿ ವಿಸರ್ಜಿಸಲಾಯಿತು. ಉಳಿದ ಒಂಬತ್ತು ಉತ್ಸವ ಮೂರ್ತಿಗಳನ್ನು ಬಲಮುರಿಯ ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು.ಮಂಟಪದಲ್ಲಿ ಮೆರವಣಿಗೆ

ಶನಿವಾರಸಂತೆ: ಪಟ್ಟಣದ ಚಂದ್ರಮೌಳೇಶ್ವರ ಪಾರ್ವತಿ ಗಣಪತಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣಪತಿ ಉತ್ಸವಮೂರ್ತಿಗಳನ್ನು  ಬುಧವಾರ ಅಲಂಕೃತ ಮಂಟಪದಲ್ಲಿರಿಸಿ ಮುಖ್ಯರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಬಳಿಕ ಸಮೀಪದ ಹೊಳೆಯಲ್ಲಿ ವಿಸರ್ಜಿಸಲಾಯಿತು.ದೇವಸ್ಥಾನ ಅರ್ಚಕ ಮಾಲತೇಶ್‌ಭಟ್ಟರು ಪೂಜಾವಿಧಿಗಳನ್ನು ನೆರವೇರಿಸಿದರು. ಮೆರವಣಿಗೆಯುದ್ದಕ್ಕೂ ಮನೆ ಮನೆಗಳಲ್ಲಿ ಭಕ್ತರು ಉತ್ಸವಮೂರ್ತಿಗಳಿಗೆ ಶ್ರದ್ಧಾಭಕ್ತಿಯಿಂದ ಆರತಿ ಬೆಳಗಿ, ಹಣ್ಣುಕಾಯಿ ಮಾಡಿ ಪೂಜಿಸಿದರು. ದೇವಸ್ಥಾನ ಸಮಿತಿ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)