ಮಂಗಳವಾರ, ಡಿಸೆಂಬರ್ 10, 2019
26 °C

ವಿನಾಯಕನ ಗೆಳೆಯರು!

Published:
Updated:
ವಿನಾಯಕನ ಗೆಳೆಯರು!

ಕಷ್ಟವಿರಲಿ, ಸುಖವಿರಲಿ ಗಣೇಶನ ಹಬ್ಬದ ಆಚರಣೆಯ ಸಂಭ್ರಮವನ್ನು ಅನುಭವಿಸುವುದೇ ಒಂದು ಖುಷಿ. ನಗರದಲ್ಲಿ ಸಾಕಷ್ಟು ಸಂಘ ಸಂಸ್ಥೆಗಳು ಗಣೇಶನನ್ನು ಕೂರಿಸಿ ಉತ್ಸವವನ್ನು ಖುಷಿಯಿಂದ ಆಚರಿಸುತ್ತಿವೆ. ಸಣ್ಣ ಬಜೆಟ್‌ನಲ್ಲಿ ಶುರುವಾದ ಉತ್ಸವದ ಖರ್ಚು ಈಗ ಲಕ್ಷಗಳವರೆಗೆ ತಲುಪಿದೆ.ಇನ್ನು ಕೆಲವೆಡೆ ನಾಲ್ಕು ಹಾಡುಗಳಲ್ಲಿ ಮುಗಿಯುತ್ತಿದ್ದ ಕಾರ್ಯಕ್ರಮ ಬಾಲಿವುಡ್‌ ಮಂದಿ ಬಂದು ಹಾಡಿ, ಕುಣಿದು ಹೋಗುವಷ್ಟರ ಮಟ್ಟಿಗೆ ಪ್ರಸಿದ್ಧಿಯಾಗಿದೆ. ಐವತ್ತಕ್ಕಿಂತ ಹೆಚ್ಚು ವರ್ಷ, ಗಣೇಶೋತ್ಸವ ಮಾಡಿದ ಅನುಭವ ಇರುವವರು ತಾವು ಪಟ್ಟ ಪಾಡು, ಹೊತ್ತುಕೊಂಡ ಜವಾಬ್ದಾರಿಯನ್ನು ನಿಭಾಯಿಸಿದ ರೀತಿಯನ್ನು ‘ಮೆಟ್ರೊ’ ಜೊತೆ ಹಂಚಿಕೊಂಡಿದ್ದಾರೆ.ಭಾವೈಕ್ಯ ಸಾರುವ ಹಬ್ಬ

ಹದಿಮೂರು ವರ್ಷದ ಹಿಂದೆ ನಿಸರ್ಗ ಬಡಾವಣೆಯ ನಿವಾಸಿಗಳೆಲ್ಲರೂ ಸೇರಿ ಚಿಕ್ಕದಾಗಿ ಗಣೇಶೋತ್ಸವ ಆಚರಿಸುತ್ತಿದ್ದೆವು. ರಂಗೋಲಿ, ತಳಿರು ತೋರಣಗಳಿಂದ ಇಡೀ ಬೀದಿ ಸಜ್ಜುಗೊಳ್ಳುವುದನ್ನು ನೋಡುವುದೇ ಚೆಂದ. ಭಾವೈಕ್ಯವನ್ನು ಸಾರುವ ಮೊದಲ ಹಬ್ಬವಾಗಿರುವುದರಿಂದ ಜಾತಿ–ಮತದ ಹಂಗಿಲ್ಲದೆ ಎಲ್ಲರೂ ಒಟ್ಟಿಗೆ ಸೇರಿ ಆಚರಿಸುತ್ತೇವೆ.ಮೊದಲು ಆಚರಣೆ ಮಾಡುವಾಗ ಸರಿಯಾದ ಮಂಟಪವಿರಲಿಲ್ಲ. ಮಳೆ ಬಂದರೆ ಕಾರ್ಯಕ್ರಮವೆಲ್ಲ ಹಾಳಾಗುತ್ತದೆ ಎಂಬ ಆತಂಕ ಇರುತ್ತಿತ್ತು. ಈಗ ಹಾಗಿಲ್ಲ. ನಿರ್ಮಾಣ್ ಶೆಲ್ಟರ್ಸ್‌ ಸಂಸ್ಥೆಯವರಾದ ಲಕ್ಷ್ಮೀನಾರಾಯಣ ಅವರು ಒಂದು ಮಂಟಪ ಕಟ್ಟಿಸಿಕೊಟ್ಟಿದ್ದಾರೆ. ಸುಮಾರು 700 ಜನ ಇಲ್ಲಿ ಆರಾಮವಾಗಿ ಕುಳಿತುಕೊಳ್ಳಬಹುದು.ಆ ದಿನಗಳ ಕುರಿತು ಯೋಚನೆ ಮಾಡಿದರೆ ಈಗಲೂ ಆಶ್ಚರ್ಯವಾಗುತ್ತದೆ; ಚಿಕ್ಕದಾಗಿ ಶುರುವಾದ ಕಾರ್ಯಕ್ರಮ ಇಷ್ಟು ದೊಡ್ಡ ಮಟ್ಟಕ್ಕೆ ಹೇಗೆ ಬಂತು ಎಂದು! ಶ್ರದ್ಧೆ, ಭಕ್ತಿ ಇದ್ದರೆ ದೇವರು ಭಕ್ತರ ಕೈಬಿಡುವುದಿಲ್ಲ ಎಂಬ ಮಾತು ನಮ್ಮ ಪಾಲಿಗಂತೂ ಸತ್ಯವಾಗಿದೆ. ತುಂಬಾ ಆಡಂಬರವಾಗಿ ಆಚರಣೆ ಮಾಡುವುದಿಲ್ಲ. ಕೆಲಸ ಕಾರ್ಯಕ್ರಮಗಳನ್ನೆಲ್ಲಾ ಹಂಚಿಕೊಂಡು ಮಾಡುತ್ತೇವೆ. ಇದರಿಂದ ಎಲ್ಲರೂ ಖುಷಿಯಿಂದ ಭಾಗವಹಿಸಲು ಸಾಧ್ಯವಾಗುತ್ತದೆ. ನಮ್ಮದೇ ಮನೆಯ ಕಾರ್ಯಕ್ರಮವೇನೂ ಎಂಬ ಭಾವನೆ ಬಂದಿದೆ.ಹಣ ಕೊಡಿ, ಹಬ್ಬ ಮಾಡುತ್ತೇವೆ ಎಂದು ಯಾರ ಹತ್ತಿರವೂ ಹೋಗಿ ವಸೂಲಿ ಮಾಡಿಲ್ಲ. ಎಲ್ಲರೂ ಒಟ್ಟು ಸೇರಿ ಮಾಡುತ್ತಿರುವುದರಿಂದ ನಿವಾಸಿಗಳೆಲ್ಲಾ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಮೊದಲು ಒಂದು ದಿನವಷ್ಟೇ ಪೂಜಿಸಿ, ಗಣೇಶನನ್ನು ವಿಸರ್ಜನೆ ಮಾಡುತ್ತಿದ್ದೆವು. ಈಗ ಆರು ದಿನಗಳವರೆಗೆ ಇಡುತ್ತೇವೆ. ಮಕ್ಕಳಿಗೂ, ಹಿರಿಯರಿಗೂ ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತದೆ. ಎಲ್ಲರೂ ಅಲ್ಲಿಯೇ ಊಟ ಮಾಡುತ್ತೇವೆ. ಊಟದ ಖರ್ಚುಗಳೆಲ್ಲವನ್ನು ನಿವಾಸಿಗಳೇ ಹಂಚಿಕೊಳ್ಳುತ್ತಾರೆ.

ರವಿರಾಜ್ ಭಟ್, ನಿಸರ್ಗ ಬಡಾವಣೆಯ ನಿವಾಸಿಕಣ್ಣಿಗೆ ಹಬ್ಬ


ಬಸವನಗುಡಿಯಲ್ಲಿ ವಿದ್ಯಾರಣ್ಯ ಯುವಕ ಸಂಘದವರೆಲ್ಲಾ ಸೇರಿ ಕಳೆದ ಐವತ್ತೊಂದು ವರ್ಷದಿಂದ ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿದ್ದೇವೆ. ಸೈಕಲ್‌ ಶಾಪ್ ಶಿವಣ್ಣ ಅವರು ಮೊದಲು ಶುರುಮಾಡಿದ್ದು. ಈಗ ಅದರ ನೇತೃತ್ವವನ್ನು ನಂದೀಶ್ ವಹಿಸಿಕೊಂಡಿದ್ದಾರೆ.  ಹಿರಿಯರಾದ ಮರಿಯಪ್ಪ, ಓಬಯ್ಯನವರು ಇವಾಗಲೂ ನಮ್ಮ ಸಂಘದಲ್ಲಿದ್ದು ಪ್ರೋತ್ಸಾಹ ನೀಡುತ್ತಿದ್ದಾರೆ.ಹಿರಿಯರು ಮಾಡುತ್ತಿದ್ದ ಪೂಜೆ, ಹವನಗಳು ಈಗಲೂ ಹಾಗೇ ನಡೆಸಿಕೊಂಡು ಬರುತ್ತಿದ್ದೇವೆ.

ಸಿನಿಮಾ ನಟ, ನಟಿಯರು ಬಂದು ಹಾಡಿ ಕುಣಿದು ಹೋಗುತ್ತಾರೆ. ಪ್ರತಿ ವರ್ಷವು ಉತ್ಸವ ಒಂದೊಂದು ಹೊಸ ಅನುಭವ ನೀಡಿದೆ. ಈ ಹಬ್ಬಕ್ಕೆ ಸೇರುವ ಜನಸಾಗರವನ್ನು ನೋಡುವುದೇ ಕಣ್ಣಿಗೆ ಹಬ್ಬ.ಹನ್ನೊಂದು ದಿನಗಳವರೆಗೆ ಗಣಪತಿಯನ್ನು ಕೂರಿಸುತ್ತೇವೆ. ಮನೋರಂಜನೆಗಾಗಿ ನಾನಾ ರೀತಿಯ ಕಾರ್ಯಕ್ರಮಗಳನ್ನು ಆಚರಿಸುತ್ತೇವೆ. ಹಾಸ್ಯಸಂಜೆ, ಮಿಮಿಕ್ರಿ, ಹಾಡು, ಹರಿಕಥೆ, ನಾಟಕ, ಸಂಗೀತಕ್ಕೆ ಇಲ್ಲಿ ಹೆಚ್ಚಿನ ಪ್ರಾಮುಖ್ಯ. ಶಿವಕುಮಾರ್ಹೊಸ ಥೀಮ್ಗಳ ಸ್ಫೂರ್ತಿ

ಹೈಕೋರ್ಟ್‌ ವಕೀಲರ ಗೆಳೆಯರ ಬಳಗದಿಂದ ಏನಾದರೂ ಸಾಂಸ್ಕೃತಿಕ ಕಾರ್ಯಕ್ರಮ ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದೆವು. ಯಾವ ಕಾರ್ಯಕ್ರಮದಿಂದ ಶುರುಮಾಡಿದರೆ ಒಳ್ಳೆಯದು ಎಂದು ಯೋಚಿಸುತ್ತಿರುವಾಗ ಗಣೇಶನ ಹಬ್ಬ  ನೆನಪಾಯಿತು. 1981ರಲ್ಲಿ ಚಿಕ್ಕದಾಗಿ ಶುರುಮಾಡಿದವು. 125 ರೂಪಾಯಿ ಖರ್ಚಿನಲ್ಲಿ ಎಲ್ಲಾ ಮುಗಿದುಹೋಯಿತು. ಈಗ 33ನೇ ವರ್ಷದ ಉತ್ಸವ ಆಚರಿಸುತ್ತಿದ್ದೇವೆ.ಎರಡು ಲಕ್ಷ ರೂಪಾಯಿ ಖರ್ಚು ಬರುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮದ ಜತೆಗೆ ಪ್ರತಿವರ್ಷ ಹೊಸ ಥೀಮ್ ಇರುತ್ತದೆ. ಒಂದು ವರ್ಷ ಕೈಲಾಸದ ರೀತಿ ಮಂಟಪ ಮಾಡಿ ಗಣೇಶನನ್ನು ಕೂರಿಸುತ್ತೇವೆ, ಮತ್ತೊಂದು ವರ್ಷ ಕಾಡಿನ ಥೀಮ್‌ನ ಮಂಟಪ ಮಾಡುತ್ತೇವೆ. ಈ ವರ್ಷ ಕೇದಾರನಾಥ ದೇವಸ್ಥಾನವನ್ನು ಹೋಲುವ ವಿನ್ಯಾಸ ಮಾಡಿದ್ದೇವೆ.ಮೊದಲು 15 ದಿನ ಆಚರಿಸುತ್ತಿದ್ದೆವು. ಈಗ ಐದನೇ ದಿನ ವಿಸರ್ಜನೆ ಮಾಡುತ್ತಿದ್ದೇವೆ. ಜನ ಕೂಡ ಖುಷಿಯಿಂದ ಭಾಗವಹಿಸುತ್ತಾರೆ.

ಮಹಾಂತೇಶ ಹೊಸಮಠನಂಬಿಕೆ ಉಳಿಸಿಕೊಂಡ ಖುಷಿ!

ಇಪ್ಪತ್ತೈದು ವರ್ಷದ ಹಿಂದೆ ‘ಕುಮಾರ್ ಪಾರ್ಕ್ ಯೂತ್ಸ್ ಅಸೋಸಿಯೇಷನ್‌’ನವರು ಗಣೇಶೋತ್ಸವವನ್ನು ತುಂಬಾ ಚೆನ್ನಾಗಿ ಆಚರಿಸಿದ್ದರಂತೆ. ಆ ಉತ್ಸವ ನೋಡಲು ಎರಡು ಕಣ್ಣುಗಳೇ ಸಾಲದು ಎಂದು ನಮ್ಮ ಹಿರಿಯರು ಹೇಳುತ್ತಿದ್ದರು. ಆಗ ನಾನಿನ್ನೂ ಹುಟ್ಟಿರಲಿಲ್ಲ. ಹಿರಿಯರು ನಡೆಸಿಕೊಂಡು ಬಂದ ಅಂತಹ ಕಾರ್ಯಕ್ರಮವನ್ನು ನಾವೂ ಮಾಡಿ ಸೈ ಅನಿಸಿಕೊಳ್ಳಬೇಕು ಎಂಬ ಕನಸಿದೆ.1954ರಲ್ಲಿ ಮಾನೆ, ದೇವದಾಸ್‌ ರೈ, ರಾಮಣ್ಣ ಪ್ರಭಾಕರ್ ಅವರು ಈ ಗಣೇಶೊತ್ಸವಕ್ಕೆ ಬುನಾದಿ ಹಾಕಿದವರು. ಐವತ್ತನೇ ವರ್ಷದ ಸಮಯ ಉತ್ಸವದ ಜವಾಬ್ದಾರಿಯನ್ನು ನಮಗೆ ನೀಡಿದರು. ಒಂದು ಕಡೆ ಖುಷಿ, ಮತ್ತೊಂದೆಡೆ ಭಯ. ಈ ಜವಾಬ್ದಾರಿಯನ್ನು ಹೇಗೆ ನಿಭಾಯಿಸುವುದು ಎಂಬುದೇ ನಮ್ಮ ಮುಂದಿದ್ದ ಪ್ರಶ್ನೆಯಾಗಿತ್ತು. ಹಿರಿಯರ ನಂಬಿಕೆ ಉಳಿಸಿಕೊಂಡು ಹತ್ತು ವರ್ಷದಿಂದ ಉತ್ಸವ ಆಚರಿಸಿಕೊಂಡು ಬರುತ್ತಿದ್ದೇವೆ. ಯಾವತ್ತೂ ಕಷ್ಟ ಎನಿಸಲಿಲ್ಲ.ಈ ವರ್ಷ 60ನೇ ವರ್ಷದ ಉತ್ಸವ ಆಚರಿಸುತ್ತಿದ್ದೇವೆ. ಬೇರೆ ಬೇರೆ ಸ್ಥಳಗಳಿಂದ ಜನ ಬರುತ್ತಿದ್ದಾರೆ. ಇದೇ ಖುಷಿಯ ಸಂಗತಿ. ಮೊದಲಿರುವ ವ್ಯವಸ್ಥೆಗೂ ಈಗಿನ ವ್ಯವಸ್ಥೆಗೂ  ತುಂಬಾ ಬದಲಾವಣೆ ಇದೆ.ಪೂಜಾ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಮನೋರಂಜನಾ ಕಾರ್ಯಕ್ರಮದಲ್ಲಿ ಬದಲಾವಣೆ ಆಗಿದೆ. ಆರ್ಕೇಸ್ಟ್ರಾ, ನೃತ್ಯದಿಂದ ಉತ್ಸವವನ್ನು ಮತ್ತಷ್ಟು ಕಳೆಗಟ್ಟಿಸುತ್ತಿದ್ದೇವೆ. ಏಳು ದಿನಗಳವರೆಗೆ ಉತ್ಸವ ನಡೆಯುತ್ತದೆ. ಕೊನೆಯ ದಿನ ಅದ್ದೂರಿ ಮೆರವಣಿಗೆಯ ನಂತರ ವಿಸರ್ಜನೆ ನಡೆಯುತ್ತದೆ.ಹಬ್ಬಕ್ಕೆ ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ಇದೆ. ಮನಸ್ಸಿನ ದುಗುಡವೆಲ್ಲಾ ಹಬ್ಬದ ಸಂಭ್ರಮದಿಂದ ತೊಳೆದುಹೋಗುತ್ತದೆ ಎಂಬ ನಂಬಿಕೆ ನಮ್ಮದು.

ಆನಂದ್

 

ಪ್ರತಿಕ್ರಿಯಿಸಿ (+)