ಶನಿವಾರ, ಮೇ 21, 2022
28 °C

ವಿನಾಶದತ್ತ ಪಶ್ಚಿಮಘಟ್ಟದ ಪರಿಸರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸನಗರ: ನೆಲ, ಜಲ, ಗಾಳಿ ಮೂರೂ ಸಹ ಮಾನವನ ಅತಿ ಆಸೆಗೆ ಬಲಿಯಾಗಿ ವಿಷಮಯ ಆಗುತ್ತಿವೆ ಎಂದು ಮಳಲಿ ಮಠದ ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.

ತಾಲ್ಲೂಕು ಜೇನಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಮುಳುಗುಡ್ಡೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಂಗಳವಾರ ಸಾಮೂಹಿಕ ವೃಕ್ಷಾರೋಪಣ ಹಾಗೂ ಗ್ರಾಮಸ್ಥರಿಗೆ ಉಚಿತ ಸಸಿ ವಿತರಿಸಿ ಮಾತನಾಡಿದರು.

ವಿಶ್ವದ ಅತ್ಯಂತ ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಿದ ಪಶ್ಚಿಮಘಟ್ಟದ ಮಲೆನಾಡಿನ ಕಾಡು, ಕಲ್ಲು, ಮರಳು, ನೀರು ಅಭಿವೃದ್ಧಿಯ ನೆಪದಲ್ಲಿ ಲೂಟಿ ಮಾಡಲಾಗುತ್ತಿದೆ ಎಂದು ಅವರು ವಿಷಾದಿಸಿದರು.

ಇದರ ಜತೆಜತೆಗೆ ಮಣ್ಣಿಗೆ ರಸಗೊಬ್ಬರ, ಕೀಟನಾಶಕ ಅಗತ್ಯಕ್ಕಿಂತ ಹೆಚ್ಚು ಸೇರಿಸುವುದರ ಮೂಲಕ ನಮ್ಮ ಆಹಾರ ಸಹ ವಿಷಮಯವಾಗಿ ಹೊಸಹೊಸ ರೋಗಗಳಿಗೆ ಬಲಿಯಾಗಬೇಕಾಗಿದೆ ಎಂದು ವಿಷಾದಿಸಿದರು.

ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಎಚ್.ಎಸ್. ವಾಸುದೇವ್ ಸಮಾರಂಭದ ಅಧ್ಯಕ್ಷತೆ ವಹಿಸಿ, ಶಾಲೆಗೆ ದೇಣಿಗೆ ನೀಡಿದ ದಾನಿಗಳಿಗೆ ಕೃತಜ್ಞತೆ ಅರ್ಪಿಸಿದರು.

ಉದ್ಯಮಿ ಲಿಂಗಮೂರ್ತಿ ಉಚಿತ ಸಸಿ, ಹೊಸನಗರ ಲಯನ್ಸ್ ಕ್ಲಬ್ ಮಕ್ಕಳಿಗೆ  ಉಚಿತ ಛತ್ರಿ, ಎನ್.ಆರ್. ಪುರದ ಅನಿಲ್ ಇವರು ನೋಟ್‌ಬುಕ್ ಹಾಗೂ ದುಮ್ಮಾ ರೇವಣಪ್ಪ ಗೌಡ ಉಚಿತ ಬ್ಯಾಗ್‌ಗಳನ್ನು ವಿದ್ಯಾರ್ಥಿಗಳಿಗೆ ದೇಣಿಗೆ ನೀಡಿದರು.

ರಶ್ಮಿತಾ- ಅಂಕಿತಾ ಪ್ರಾರ್ಥಿಸಿದರು. ಸರ್ವ ಶಿಕ್ಷಣ ಅಭಿಯಾನದ ಸಿಆರ್‌ಪಿ ಪ್ರಕಾಶ್ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯ ಶಿಕ್ಷಕ ಗಂಗಾಧರಯ್ಯ ಕಾರ್ಯಕ್ರಮ ನಿರೂಪಿಸಿದರು. ಬಸಪ್ಪ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.