ವಿನಾಶದ ಅಂಚಿನ ಭಾಷೆ ಸಂರಕ್ಷಣೆಗೆ ಕೇಂದ್ರದ ಚಿಂತನೆ

ಮಂಗಳವಾರ, ಜೂಲೈ 23, 2019
20 °C

ವಿನಾಶದ ಅಂಚಿನ ಭಾಷೆ ಸಂರಕ್ಷಣೆಗೆ ಕೇಂದ್ರದ ಚಿಂತನೆ

Published:
Updated:

ನವದೆಹಲಿ: ಕರ್ನಾಟಕದ ಕೊಡವ ಮತ್ತು ತುಳು ಭಾಷೆಗಳು ಸೇರಿದಂತೆ ದೇಶದಲ್ಲಿ 59 ಭಾಷೆಗಳು ವಿನಾಶದ ಅಂಚಿನಲ್ಲಿದ್ದು, ಈ ಭಾಷೆಗಳನ್ನು ರಕ್ಷಿಸಿ, ಸಂರಕ್ಷಣೆ ಮಾಡಲು ರಾಷ್ಟ್ರೀಯ ಯೋಜನೆಯೊಂದನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.ವಿನಾಶದ ಅಂಚಿನಲ್ಲಿರುವ ಭಾಷೆಗಳ ಪಟ್ಟಿಯಲ್ಲಿರುವ ಕೊಂಡ, ಕೊಲಮಿ ಮತ್ತು ಕುಯ್ ಭಾಷೆಗಳನ್ನೂ ಸಂರಕ್ಷಿಸಲು ಯೋಜನೆ ರೂಪಿಸಲಾಗುತ್ತಿದೆ. ಭಾರತ್ ಭಾಷಾ ವಿಕಾಸ್ ಯೋಜನೆ ಮೂಲಕ ಈ ಭಾಷೆಗಳ ಅಭಿವೃದ್ಧಿ ಮತ್ತು ಸಂರಕ್ಷಣೆ ಮಾಡಲಾಗುವುದು.ಆಂಧ್ರ ಪ್ರದೇಶದ ಸುಮಾರು 56 ಸಾವಿರ ಜನರು ಕೊಂಡ ಭಾಷೆಯಲ್ಲಿ ಮಾತನಾಡುತ್ತಾರೆ. ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದಲ್ಲಿ ಕೊಲಮಿ ಭಾಷೆಯಲ್ಲಿ ಒಂದು ಲಕ್ಷ ಜನರು ಸಂವಹನ ನಡೆಸುತ್ತಾರೆ. ಒಡಿಶಾ ಮತ್ತು ಆಂಧ್ರ ಪ್ರದೇಶದಲ್ಲಿ ಕುಯ್ ಭಾಷೆಯಲ್ಲಿ ಸುಮಾರು ಒಂಬತ್ತು ಲಕ್ಷ ಜನರು ಮಾತನಾಡುತ್ತಾರೆ.ಉದ್ದೇಶಿತ ಯೋಜನೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಪರಿಗಣನೆಯಲ್ಲಿದೆ. ಸಂವಿಧಾನದ 8ನೇ ಪರಿಚ್ಛೇದದಲ್ಲಿ ನಮೂದಿಸದೇ ಇರುವ ದೇಶದ ಇತರ 49 ಅಲ್ಪಸಂಖ್ಯಾತ ಭಾಷೆಗಳ ಅಭಿವೃದ್ಧಿ ಮತ್ತು ಸಂರಕ್ಷಣೆಯನ್ನೂ ಈ ಯೋಜನೆ ಒಳಗೊಂಡಿದೆ.ಮಾನವ ಸಂಪನ್ಮೂಲ ಇಲಾಖೆಯ ಅಡಿಯಲ್ಲಿ ಬರುವ ಭಾರತೀಯ ಭಾಷಾ ಕೇಂದ್ರ ಸಂಸ್ಥೆ, ಉನ್ನತ ಶಿಕ್ಷಣ ಸಂಸ್ಥೆಗಳು ಯೋಜನೆಯ ನೋಡಲ್ ಏಜೆನ್ಸಿಗಳಾಗಿವೆ. ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಮೂಲಗಳ ಪ್ರಕಾರ ಕರ್ನಾಟಕದಲ್ಲಿ 1,66,187 ಜನರು ಕೊಡವ ಭಾಷೆಯನ್ನು ಮಾತನಾಡುತ್ತಾರೆ. ಹಾಗೆಯೇ 1,72,276 ಜನರು ಕರ್ನಾಟಕ ಮತ್ತು ಕೇರಳದಲ್ಲಿ ತುಳು ಭಾಷೆ ಮಾತನಾಡುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry