`ವಿನಾಶ ಕಾಲೇ ವಿಪರೀತ ಬುದ್ಧಿ~
ನವದೆಹಲಿ: ತಮ್ಮನ್ನು ಪಕ್ಷದಿಂದ ಅಮಾನತು ಮಾಡಲಾದ ಬಿಜೆಪಿ ಮುಖಂಡರ ನಿಲುವನ್ನು ಕಟುವಾಗಿ ಟೀಕಿಸಿರುವ ರಾಜ್ಯಸಭಾ ಸದಸ್ಯ ರಾಮ್ ಜೇಠ್ಮಲಾನಿ, ಸಿಬಿಐ ಮುಖ್ಯಸ್ಥರ ನೇಮಕಾತಿ ವಿರುದ್ಧ ಪತ್ರ ಬರೆದ ಮುಖಂಡರ ಧೋರಣೆ ವಿರೋಧಿಸಿರುವ ತಮ್ಮನ್ನು ಅರುಣ್ ಜೆಟ್ಲಿ ಆಣತಿಯಂತೆ ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಅಮಾನತುಗೊಳಿಸಿದ್ದಾರೆ. ತಮ್ಮನ್ನು ಅಮಾನತು ಅಕ್ರಮ ಎಂದು ಕಿಡಿಕಾರಿದ್ದಾರೆ.
ಗಡ್ಕರಿ ಕ್ರಮಕ್ಕೆ ಆಕ್ರೋಶದ ಉತ್ತರ ಒಳಗೊಂಡ ಪತ್ರ ಬರೆದಿರುವ ಜೇಠ್ಮಲಾನಿ, `ನೀವು ಖಂಡಿತ ವಿನಾಶದ ದಾರಿ ತುಳಿದಿದ್ದೀರಿ ಎಂದು ನನಗೆ ಮನವರಿಕೆ ಆಗಿದ್ದು, ನಿಮ್ಮಂದಿಗೆ ಪಕ್ಷವನ್ನೂ ಕೊಂಡೊಯ್ಯುತ್ತಿರುವುದಕ್ಕೆ ವಿಷಾದವಿದೆ. ನಿಮ್ಮ ವರ್ತನೆ ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವಂತಿದೆ. ರಾಜ್ಯಸಭೆಯಲ್ಲಿ ಬಿಜೆಪಿಯ ಹಿರಿಯ ಸದಸ್ಯನಾಗಿದ್ದರೂ ಲೋಕಪಾಲ ಮಸೂದೆ ಕುರಿತು ಸೌಜನ್ಯಕ್ಕಾದರೂ ನೀವು ನನ್ನ ಜತೆ ಚರ್ಚೆ ನಡೆಸಲಿಲ್ಲ.
ಸಿಬಿಐ ನಿರ್ದೇಶಕ ಸ್ಥಾನಕ್ಕೆ ರಂಜಿತ್ ಅವರನ್ನು ನೇಮಿಸಿದ ಕ್ರಮವನ್ನು ಮುಖಂಡರು ವಿರೋಧಿಸಿದ್ದೂ ನನಗೆ ಗೊತ್ತಾಗಿದ್ದು ಮಾಧ್ಯಮಗಳ ಮೂಲಕವೇ~ ಎಂದು ಕಿಡಿಕಾರಿದ್ದಾರೆ.
ಅಶಿಸ್ತಿನ ಆಧಾರದ ಮೇಲೆ ಭಾನುವಾರ ಬಿಜೆಪಿ ಜೇಠ್ಮಲಾನಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಿ ನಂತರ ಷೋಕಾಸ್ ನೊಟಿಸ್ ನೀಡಿತ್ತು.
`ಆದರೆ ತಮಗಿನ್ನೂ ಈ ನೊಟಿಸ್ ತಲುಪಿಲ್ಲ. ಮೊದಲು ನೋಟಿಸ್ ಓದುವೆ, ಅಗತ್ಯ ಬಿದ್ದರಷ್ಟೆ ಉತ್ತರ ನೀಡುವೆ, ಇಲ್ಲದಿದ್ದಲ್ಲಿ ಅದನ್ನು ಕಸದ ಬುಟ್ಟಿಗೆ ಎಸೆಯುವೆ~ ಎಂದು ಜೇಠ್ಮಲಾನಿ ಗಡ್ಕರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಇದಕ್ಕೂ ಮುನ್ನ ಜೇಠ್ಮಲಾನಿ ಹೇಳಿಕೆ ನೀಡಿ `ಬುದ್ಧಿವಂತ ವ್ಯಕ್ತಿಯಾದ ನಾನು ಜೇಟ್ಲಿ ನೀಡುವ ಆದೇಶವನ್ನು ಪಾಲಿಸುವುದಿಲ್ಲ~ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಜೇಟ್ಲಿ `ಜೇಠ್ಮಲಾನಿ ಕೊಡುವ ಉತ್ತರಕ್ಕೆ ನಾನೇನು ತಲೆಕೆಡಿಸಿಕೊಳ್ಳಬೇಕಿಲ್ಲ~ ಎಂದು ತಿರುಗೇಟು ನೀಡಿದ್ದರಿಂದ ದೇಶದ ಇಬ್ಬರು ಖ್ಯಾತ ವಕೀಲರ ನಡುವಿನ ಸಂಘರ್ಷ ತಾರಕಕ್ಕೇರಿದಂತಾಗಿತ್ತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.