ಶನಿವಾರ, ಮೇ 28, 2022
29 °C
ರೂಪಾಯಿ ಅಪಮೌಲ್ಯ ತಡೆಗೆ ಅಗತ್ಯ ಕ್ರಮ: ಆರ್‌ಬಿಐ

ವಿನಿಮಯ ದರ ನಿಗದಿ ಉದ್ದೇಶವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿನಿಮಯ ದರ ನಿಗದಿ ಉದ್ದೇಶವಿಲ್ಲ

ಚೆನ್ನೈ(ಪಿಟಿಐ): ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಕುಸಿಯುತ್ತಲೇ ಇರುವ ಸನ್ನಿವೇಶದಲ್ಲಿ, ನಿರ್ದಿಷ್ಟವಾದ ವಿನಿಮಯ ದರ ನಿಗದಿ ಪಡಿಸುವ ಉದ್ದೇಶವೇನೂ ಇಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಸ್ಪಷ್ಟಪಡಿಸಿದೆ. ಆದರೆ, ಮೌಲ್ಯದ ವಿಪರೀತ ಏರಿಳಿತವನ್ನು ಸೂಕ್ತ ರೀತಿ ನಿಯಂತ್ರಿಸಲು ಎಲ್ಲ ಪ್ರಯತ್ನ ನಡೆಸಲಾಗುವುದು ಎಂದಿದೆ.ಇಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಆರ್‌ಬಿಐ ಗವರ್ನರ್ ಡಿ.ಸುಬ್ಬರಾವ್, ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಕುಸಿತವನ್ನು ಪ್ರಸ್ತುತ ವ್ಯವಸ್ಥೆಯಲ್ಲಿರುವ ಮಾರ್ಗಗಳನ್ನು ಬಳಸಿಕೊಂಡೇ ನಿಯಂತ್ರಿಸಲಾಗುವುದು ಎಂದರು.ಜೂ.26ರಂದು ಅಮೆರಿಕದ ಡಾಲರ್ ಎದಿರು ರೂಪಾಯಿ ಮೌಲ್ಯ ರೂ60.76ರಷ್ಟು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದ್ದರ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದರು.ರೂಪಾಯಿ ಅಪಮೌಲ್ಯಕ್ಕೆ `ಚಾಲ್ತಿ ಖಾತೆ ಕೊರತೆ'(ಸಿಎಡಿ) ಸಹ ಕಾರಣ ಎಂದರು.ವಿದೇಶಿ ಕರೆನ್ಸಿಗಳ ಒಳಹರಿವು ಗಣನೀಯ ಪ್ರಮಾಣದಲ್ಲಿ ತಗ್ಗಿರುವುದು, ಡಾಲರ್ ಸಂಗ್ರಹದಲ್ಲಿ ಹೆಚ್ಚಿನಂಶ ಆಮದು ಚಟುವಟಿಕೆಗೆ ವ್ಯಯವಾಗುತ್ತಿರುವ ವಿಚಾರ ಪ್ರಸ್ತಾಪವಾಯಿತು.ಚಾಲಿ ಖಾತೆ ಕೊರತೆ(ಆಮದು- ರಫ್ತು ಅಂತರ) 2011-12ರಲ್ಲಿ ಶೇ 4.2ರಷ್ಟಿದ್ದುದು, 2012-13ರ ಹಣಕಾಸು ವರ್ಷದಲ್ಲಿ ಶೇ 4.8ಕ್ಕೆ ವಿಸ್ತರಿಸಿದೆ. ಇದು ಕಳವಳಕಾರಿ ಸಂಗತಿ ಎಂದು ಅವರು ಪ್ರತಿಕ್ರಿಯಿಸಿದರು.ಬಡ್ಡಿದರ ಇಳಿಸಲಿ

ಆರ್‌ಬಿಐ ಮೂಲ ಬಡ್ಡಿದರದಲ್ಲಿ ಇಳಿಕೆ ಮಾಡಿರುವುದರ ಪ್ರಯೋಜನ ಗ್ರಾಹಕರಿಗೆ ವರ್ಗಾಯಿಸಬೇಕಾದ್ದು ಬ್ಯಾಂಕ್‌ಗಳ ಜವಾಬ್ದಾರಿ. ದೇಶದ ಆರ್ಥಿಕ ಪ್ರಗತಿಯ ದೃಷ್ಟಿಯಿಂದ ಬಡ್ಡಿದರ ಕಡಿತ ಮಾಡಬೇಕಾದ್ದು ಅಗತ್ಯವಾಗಿದೆ ಎಂದು ಸುಬ್ಬರಾವ್ ಹೇಳಿದರು.ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರು 2012ರ ಜನವರಿಯಿಂದ ಈವರೆಗೆ ಆರ್‌ಬಿಐ ಮೂಲ ಬಡ್ಡಿದರವನ್ನು ಶೇ 1.25ರಷ್ಟು ಇಳಿಸಿದೆ. ಇದರ ಪ್ರಯೋಜನವನ್ನು ಬ್ಯಾಂಕ್‌ಗಳು ಗ್ರಾಹಕರಿಗೆ ದಾಟಿಸಬೇಕು. ಬಡ್ಡಿದರ ತಗ್ಗಿಸಬೇಕು ಎಂದು ಬುಧವಾರ ನವದೆಹಲಿಯಲ್ಲಿ ಹೇಳಿದ್ದರು. ಅವರ ಅಭಿಪ್ರಾಯವನ್ನು `ಆರ್‌ಬಿಐ' ಬೆಂಬಲಿಸಿದೆ.ಉತ್ತರದಾಯಿತ್ವ

ಇದಕ್ಕೂ ಮುನ್ನ `ರಿಸರ್ವ್ ಬ್ಯಾಂಕ್ ಸಿಬ್ಬಂದಿ ಕಾಲೇಜು' ಸುವರ್ಣ ಮಹೋತ್ಸವದ ಸಮಾರೋಪದಲ್ಲಿ ಬುಧವಾರ ಮಾತನಾಡಿದ ಸುಬ್ಬರಾವ್, `ಆರ್‌ಬಿಐ' ಸ್ವಾಯತ್ತ ಸಂಸ್ಥೆಯ ಅನುಕೂಲಗಳನ್ನು ಅನುಭವಿಸಬೇಕಾದರೆ ಉತ್ತರದಾಯಿ ಸಹ ಆಗಿರಬೇಕಿದೆ ಎಂಬುದನ್ನು ಮರೆಯಬಾರದು ಎಂದು ಗಮನ ಸೆಳೆದರು.`ಆರ್‌ಬಿಐ' ನಿರ್ಧಾರ, ಕ್ರಿಯೆ ಎಲ್ಲದರಲ್ಲೂ ನೈತಿಕತೆ ಮತ್ತು ಮೌಲ್ಯ ಇರುವಂತೆ ನೋಡಿಕೊಳ್ಳಲು ಬಯಸುತ್ತದೆ. ಇದೇ ಕಾರಣವಾಗಿ ನೂತನ ನೀತಿ ರೂಪಿಸಲಿದೆ. ಅಲ್ಲದೆ, ಜ್ಞಾನಾಧಾರಿತ ಸಂಸ್ಥೆಯಾಗಿರಲೂ ಬಯಸುತ್ತದೆ ಎಂದರು.

ಕೆನರಾ, ವಿಜಯಾ ಬ್ಯಾಂಕ್ ಬಡ್ಡಿದರ ಬದಲಾವಣೆ

ಬೆಂಗಳೂರು: ಕೆನರಾ ಬ್ಯಾಂಕ್ ಎಲ್ಲ ಬಗೆಯ ಸಾಲಗಳ ಮೂಲ ಬಡ್ಡಿದರವನ್ನು ಶೇ 0.30ರಷ್ಟು ತಗ್ಗಿಸಿದೆ.ಕೃಷಿ, ಚಿಲ್ಲರೆ ವಹಿವಾಟು, `ಎಂಎಸ್‌ಎಂಇ' ವಲಯ, ರಫ್ತು ಕ್ಷೇತ್ರ ಸೇರಿದಂತೆ ಎಲ್ಲ ಸಾಲಗಳ ಮೂಲ ಬಡ್ಡಿದರವನ್ನು ಶೇ 10.25ರಿಂದ ಶೇ 9.95ಕ್ಕೆ ಇಳಿಸಲಾಗಿದೆ. ಹೊಸ ಬಡ್ಡಿದರ ಜು.8ರಿಂದ ಜಾರಿಗೆ ಬರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.ಎಫ್‌ಸಿಎನ್‌ಆರ್ ಬಡ್ಡಿ

ಅನಿವಾಸಿ ಭಾರತೀಯರ ವಿದೇಶಿ ಕರೆನ್ಸಿ ಠೇವಣಿ(ಒಂದು ವರ್ಷದಿಂದ ಐದು ವರ್ಷ) ಬಡ್ಡಿದರ ಪರಿಷ್ಕರಿಸಲಾಗಿದ್ದು, ಜುಲೈ 1ರಿಂದಲೇ ಜಾರಿಗೆ ಬಂದಿದೆ ಎಂದು ವಿಜಯ ಬ್ಯಾಂಕ್ ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.