ವಿಪತ್ತು ನಿರ್ವಹಣೆಗೆ ಪೂರ್ವಸಿದ್ಧತೆ ಅಗತ್ಯ: ಕುಂಜಪ್ಪ

7
ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣೆ ಪ್ರಾಧಿಕಾರದ ಸದಸ್ಯರಿಗೆ ತರಬೇತಿ

ವಿಪತ್ತು ನಿರ್ವಹಣೆಗೆ ಪೂರ್ವಸಿದ್ಧತೆ ಅಗತ್ಯ: ಕುಂಜಪ್ಪ

Published:
Updated:

ಚಾಮರಾಜನಗರ: ‘ಪ್ರಾಕೃತಿಕ ಹಾಗೂ ಮಾನವನಿಂದ ಎದುರಾಗುವ ಯಾವುದೇ ವಿಪತ್ತುಗಳನ್ನು ಪರಿಣಾಮಕಾರಿ ಯಾಗಿ ತಡೆಯಲು ಅಧಿಕಾರಿಗಳು ವಿಕೋಪ ನಿರ್ವಹಣೆ ಯೋಜನೆ ಕುರಿತು ಸಂಪೂರ್ಣ ಮಾಹಿತಿ ಹೊಂದಬೇಕು’ ಎಂದು ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ ಹೇಳಿದರು.ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ ಹಾಗೂ ಮೈಸೂರು ಆಡಳಿತ ತರಬೇತಿ ಸಂಸ್ಥೆಯಿಂದ ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣೆ ಪ್ರಾಧಿಕಾರದ ಸದಸ್ಯರಿಗೆ ಹಮ್ಮಿಕೊಂಡಿರುವ 3 ದಿನಗಳ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.ಎಲ್ಲ ಭಾಗದಲ್ಲೂ ಪ್ರಕೃತಿ ವಿಕೋಪ ಸಂಭವಿಸುತ್ತಿವೆ. ಅನಿರೀಕ್ಷಿತವಾಗಿ ಬಂದೆರಗುವ ಗಂಡಾಂತರ ನಿರ್ವಹಣೆಗೆ ಅಧಿಕಾರಿಗಳು ಪೂರ್ವಸಿದ್ಧತೆಯೊಂದಿಗೆ ಸನ್ನದ್ಧರಾಗಬೇಕಿದೆ. ಪೊಲೀಸ್, ಗೃಹ ರಕ್ಷಕದಳ, ಅಗ್ನಿಶಾಮಕ ಪಡೆ ಹಾಗೂ ಕಂದಾಯ ಅಧಿಕಾರಿಗಳು  ವಿಪತ್ತಿನ ಸಂದರ್ಭ ನಿಭಾಯಿಸಲು ಅಗತ್ಯವಿರುವ ನಿರ್ವಹಣಾ ಯೋಜನೆ ಬಗ್ಗೆ ಹೆಚ್ಚು ತಿಳಿವಳಿಕೆ ಪಡೆಯಬೇಕಿದೆ ಎಂದರು.ಜಿಲ್ಲಾ ವ್ಯಾಪ್ತಿ ಸಂಭವಿಸಬಹುದಾದ ಪ್ರಕೃತಿದತ್ತ ವಿಕೋಪ ಪರಿಸ್ಥಿತಿ ನಿರ್ವಹಣೆ, ಪರಿಹಾರ ಕಾರ್ಯಾಚರಣೆಗೆ ಅಧಿಕಾರಿಗಳು ಜಿಲ್ಲೆಯಲ್ಲಿರುವ ಸಂಪನ್ಮೂಲ, ಲಭ್ಯವಿರುವ ಆರೋಗ್ಯ ಸೇವೆ, ವಿವಿಧ ಸುರಕ್ಷಿತ ಕ್ಷೇತ್ರದ ಬಗ್ಗೆ ಸಂಪೂರ್ಣ ಕ್ರೋಡೀಕೃತ ಮಾಹಿತಿ ಪಡೆದುಕೊಳ್ಳಬೇಕು. ವಿಕೋಪ ವೇಳೆ ಹಾಗೂ ನಂತರದ ಸಮಯದಲ್ಲಿ ಉದ್ಭವಿಸಬಹುದಾದ ಪುನರ್ವಸತಿ ಸಮಸ್ಯೆ, ಇತರೇ ಅಂಶಗಳ ಬಗ್ಗೆ ಗುರುತಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.ವಿಕೋಪ ನಿರ್ವಹಣೆ ಕಾಯ್ದೆ ಕೂಡ ಜಾರಿಗೆ ತರಲಾಗಿದೆ. ವಿಕೋಪ ನಿರ್ವಹಣೆಯ ಮಹತ್ವ ಮಾರ್ಗದರ್ಶನ, ನಿರ್ವಹಣಾ ಪ್ರಾಧಿಕಾರದ ಕರ್ತವ್ಯ ಕುರಿತು ಕಾಯ್ದೆಯಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ. ಆ ಪ್ರಕಾರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ವಿಕೋಪ ಪ್ರಾಧಿಕಾರ ರಚನೆಯಾಗಿದೆ. ಈ ಮೂಲಕ ಜಿಲ್ಲಾ ವಿಕೋಪ ನಿರ್ವಹಣಾ ಯೋಜನೆ ತಯಾರಿಸಲಾಗುತ್ತದೆ ಎಂದು ವಿವರಿಸಿದರು.ಬೃಹತ್‌ ಕಾರ್ಯಾಗಾರ:

ಆಪತ್ತು ಸಮಯ ಎದುರಿಸುವ ಹೊಣೆ ಜಿಲ್ಲಾಮಟ್ಟದ ಅಧಿಕಾರಿಗಳದ್ದು ಎಂದು ಭಾವಿಸುವಂತಿಲ್ಲ. ತಾಲ್ಲೂಕುಮಟ್ಟದ ಅಧಿಕಾರಿಗಳು ವಿಕೋಪ ನಿರ್ವಹಣಾ ಯೋಜನೆ ಬಗ್ಗೆ ಮಾಹಿತಿ ಹೊಂದಬೇಕು. ಎಲ್ಲ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ವಿಪತ್ತು ಸಂದರ್ಭದಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲ ಹಂತದ ಅಧಿಕಾರಿಗಳಿಗೆ ಪೂರ್ಣ ಪ್ರಮಾಣದಲ್ಲಿ ವಿಕೋಪ ನಿರ್ವಹಣಾ ಸಂಬಂಧ ಆಡಳಿತ ತರಬೇತಿ ಸಂಸ್ಥೆಯ ಸಹಯೋಗದೊಂದಿಗೆ ಬೃಹತ್ ತರಬೇತಿ ಕಾರ್ಯಾಗಾರ ಆಯೋಜಿಸಲಾಗುವುದು ಎಂದು ಹೇಳಿದರು.ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ಮುನಿರಾಜಪ್ಪ ಮಾತನಾಡಿ, ಪ್ರಕೃತಿ ವಿಕೋಪ ನಿರ್ವಹಣೆಯ ಪೂರ್ವ ಯೋಜನೆ ಹಾಗೂ ಸಂಪೂರ್ಣ ಸಿದ್ಧತೆಯಿಂದ ಹೆಚ್ಚಿನ ಅಪಾಯ, ನಷ್ಟ ತಡೆಯಲು ಸಾಧ್ಯ. ಅತಿವೃಷ್ಟಿ, ಅನಾವೃಷ್ಟಿಯಿಂದಾಗುವ ಅನಾಹುತದ ವೇಳೆ ಪರಿಣಾಮಕಾರಿಯಾಗಿ ಕೈಗೊಳ್ಳಬೇಕಿರುವ ಕಾರ್ಯಾಚರಣೆ ಕುರಿತ ಪೂರ್ವಯೋಜನೆ ಮಾಹಿತಿಗಳನ್ನು ತರಬೇತಿ ವೇಳೆ ಪಡೆದುಕೊಳ್ಳಬೇಕು ಎಂದರು.ಅಂತರ್ಜಲ ಆಧಾರಿತ ಸಂದೇಶ ರವಾನೆ:

ಮೈಸೂರು ಆಡಳಿತ  ತರಬೇತಿ ಸಂಸ್ಥೆಯ ಬೋಧಕ ಡಾ.ಆರ್. ಧರ್ಮರಾಜು ಮಾತನಾಡಿ, ವಿಕೋಪ ಘಟನೆ ಕುರಿತು ಶೀಘ್ರ ಸಮಯದಲ್ಲಿ ಮಾಹಿತಿ ರವಾನಿಸುವ ಸ್ವಯಂಚಾಲಿತ ವಿಕೋಪ ನಿರ್ವಹಣೆ ವ್ಯವಸ್ಥೆ ಎಲ್ಲ ಜಿಲ್ಲೆಗಳಲ್ಲೂ ಅಳವಡಿಸುವ ಉದ್ದೇಶವಿದೆ. ಆಯಾ ಜಿಲ್ಲೆಯು ರಕ್ಷಣೆ, ಆರೋಗ್ಯ, ಕಂದಾಯ ಅಧಿಕಾರಿಗಳು, ಅಲ್ಲಿನ ಎಲ್ಲ ಅನುಕೂಲತೆಗಳ ಮಾಹಿತಿ ಕ್ರೋಡೀಕರಿಸಿ ಅಂತರ್ಜಲ ಆಧಾರಿತ ಸಂದೇಶ ರವಾನಿಸುವ ಆಧುನಿಕ ತಂತ್ರಜ್ಞಾನ ವ್ಯವಸ್ಥೆ ಮಾಡಲಾಗುತ್ತದೆ ಎಂದರು.ಪ್ರಪ್ರಥಮವಾಗಿ ರಾಯಚೂರು ಜಿಲ್ಲೆಯಲ್ಲಿ ಈ ನೂತನ ವ್ಯವಸ್ಥೆ ಅಳವಡಿಸಲಾಗಿದೆ. ಕೊಡಗು ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಯೋಜನೆ ಜಾರಿ ಕೆಲಸ ಪ್ರಗತಿಯಲ್ಲಿದೆ. ಧಾರವಾಡ, ಕೊಪ್ಪಳ, ವಿಜಾಪುರ, ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಅಂತರ್ಜಲ ಆಧಾರಿತ ವ್ಯವಸ್ಥೆ ಜಾರಿಗೆ ಎಲ್ಲ ಸಿದ್ಧತೆಯಾಗಿದೆ. ಚಾಮರಾಜನಗರ ಜಿಲ್ಲೆಯಲ್ಲೂ ನವೆಂಬರ್ ನಂತರ ಕೈಗೆತ್ತಿಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ಧರ್ಮರಾಜು ತಿಳಿಸಿದರು.

ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಕೃಷ್ಣಪ್ಪ, ಉಪ ಪ್ರಾಂಶುಪಾಲ ಎಂ.ಎನ್. ನಟರಾಜ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry