ವಿಭಿನ್ನ ಮನೋವೃತ್ತಿ ಇದ್ದರೆ ಸಾಹಿತ್ಯ ಒಲಿಯುತ್ತದೆ

7
`ಬೆಂಗಳೂರು ಸಾಹಿತ್ಯೋತ್ಸವ'ದಲ್ಲಿ ಸಾಹಿತಿ ಡಾ. ಯು.ಆರ್.ಅನಂತಮೂರ್ತಿ ಅಭಿಮತ

ವಿಭಿನ್ನ ಮನೋವೃತ್ತಿ ಇದ್ದರೆ ಸಾಹಿತ್ಯ ಒಲಿಯುತ್ತದೆ

Published:
Updated:
ವಿಭಿನ್ನ ಮನೋವೃತ್ತಿ ಇದ್ದರೆ ಸಾಹಿತ್ಯ ಒಲಿಯುತ್ತದೆ

ಬೆಂಗಳೂರು: `ಹಳ್ಳಿ ಹಾಗೂ ಪಟ್ಟಣದ ಜ್ಞಾನ ಪಡೆದಿರುವ ಲೇಖಕರಿಂದ ಮಾತ್ರ ಸಾಹಿತ್ಯ ಲೋಕಕ್ಕೆ ಭವಿಷ್ಯವಿದೆ' ಎಂದು ಹಿರಿಯ ಸಾಹಿತಿ ಡಾ.ಯು.   ಆರ್.ಅನಂತಮೂರ್ತಿ ಅಭಿಪ್ರಾಯಪಟ್ಟರು. ಕೇಂದ್ರ ಸಾಹಿತ್ಯ ಅಕಾಡೆಮಿ ವತಿಯಿಂದ ಅರಮನೆ ಮೈದಾನದಲ್ಲಿ ಶನಿವಾರ ನಡೆದ `ಬೆಂಗಳೂರು ಸಾಹಿತ್ಯೋತ್ಸವ'ದಲ್ಲಿ ಅವರು ಮಾತನಾಡಿದರು.`ಸಾಮುದಾಯಿಕವಾಗಿ ಗುರುತಿಸಿಕೊಂಡರೂ ಆಂತರ್ಯದಲ್ಲಿ ವಿಭಿನ್ನ ಮನೋವೃತ್ತಿಯನ್ನು ಇಟ್ಟುಕೊಂಡಿರುವವನಿಗೆ ಮಾತ್ರ ಸಾಹಿತ್ಯವೆಂಬುದು ಒಲಿಯುತ್ತದೆ. ಪ್ರಖರ ಓದು ಮತ್ತು ಬರವಣಿಗೆ ಪ್ರತಿ ಜೀವಿಯ ಒಳ ಜೀವನದ ಬಗೆಗಿನ ಪ್ರಜ್ಞೆಯನ್ನು ಮೂಡಿಸುತ್ತದೆ. ಪ್ರೌಢಶಾಲೆಯಲ್ಲಿದ್ದಾಗ ಓದಿದ ಕಾರಂತರ `ಚೋಮನದುಡಿ' ಇಂತಹದ್ದೊಂದು ಪ್ರಜ್ಞೆಯನ್ನು ನೀಡಿತ್ತು, ಆ ಕ್ಷಣದಿಂದಲೇ ನಾನು ಸಾಹಿತಿಯಾದೆ' ಎಂದರು.`ಅಪಾರ ಹಿಂಸೆಯನ್ನು ಅರ್ಥಮಾಡಿಕೊಂಡ ಷೇಕ್ಸ್‌ಪಿಯರ್ ಸಾರಸ್ವತಲೋಕಕ್ಕೆ ಬಹುದೊಡ್ಡ ಕಾಣ್ಕೆ ನೀಡಿದ. ಆತ್ಮವಿಮರ್ಶೆಗೆ ಒಡ್ಡಿಕೊಳ್ಳದ, ಭೀಕರ ಸತ್ಯವನ್ನು ಹೇಳಲು ಇಚ್ಛಿಸದ ಸಾಹಿತಿಗಳಿಂದ ಅಪಾಯ ಹೆಚ್ಚು. ಸಾರ್ವಜನಿಕವಾಗಿ ಅಬ್ಬರಿಸುವ ಬದಲು ಕಿವಿಯಲ್ಲಿ ಗುಟ್ಟು ಉಸುರಿದಂತೆ ಸಾಹಿತ್ಯ ರಚನೆಯಲ್ಲಿ ತೊಡಗಿಕೊಳ್ಳಬೇಕು'ಎಂದರು.ಹಿರಿಯ ಮಲೆಯಾಳಂ ಸಾಹಿತಿ ಎಂ.ಟಿ.ವಾಸುದೇವನ್ ನಾಯರ್, `ನಿರಂತರ ಓದು ಹಾಗೂ ಪ್ರಯೋಗಶೀಲತೆಯಿಂದ ಮಾತ್ರ ಲೇಖಕ ಬೆಳೆಯಲು ಸಾಧ್ಯ. ಗ್ರಾಮೀಣ ಪ್ರದೇಶದಲ್ಲಿ ಬೆಳೆದ ನನಗೆ ನನ್ನ ತಾಯಿಯ ಹೇಳಿದ ಕತೆಗಳೇ ಸಾಹಿತ್ಯ ರಚನೆಗೆ ಮೂಲದ್ರವ್ಯ. ಹೊಸ ತಲೆಮಾರಿನ ಸಾಹಿತಿಗಳಿಗೆ ಭರಪೂರ ಮಾಹಿತಿಗಳು ಒದಗಿಬರುತ್ತದೆ. ಆದರೆ, ಯಾವ ಮಾದರಿಯ ಸಾಹಿತ್ಯವನ್ನು ರಚಿಸಬೇಕು ಎಂಬುದರ ಬಗ್ಗೆ ಸ್ಪಷ್ಟ ಕಲ್ಪನೆಯಿಲ್ಲ' ಎಂದು ಹೇಳಿದರು.`ಆರಂಭದಲ್ಲಿ ಬರೆದ ಕತೆಗಳಿಗೆ ಯಾವುದೇ ಪತ್ರಿಕೆಯಲ್ಲೂ ಜಾಗ ದೊರೆಯದೇ ತಿರಸ್ಕೃತಗೊಂಡಿದ್ದವು. ಆದರೆ ಛಲಬಿಡದ ತಿವಿಕ್ರಮನಂತೆ ಬರೆಯುತ್ತಾ ಹೋದೆ. ತಾಳ್ಮೆ ಮತ್ತು ಶ್ರದ್ಧೆ ನನ್ನೊಳಗಿನ ಸಾಹಿತ್ಯವನ್ನು ತಿದ್ದಿ ತೀಡಿತು. ಹೊಸ ಬಗೆಯ ಹೊಳಹುಗಳು ಪ್ರೇರಣೆಯಾಯಿತು' ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry