ಗುರುವಾರ , ನವೆಂಬರ್ 21, 2019
20 °C

ವಿಮಲಾಬಾಯಿ ಕೆಜೆಪಿಗೆ, ಬಗಲಿ ಪಕ್ಷೇತರ

Published:
Updated:

ವಿಜಾಪುರ: ಜನತಾ ಪರಿವಾರದ ಹಿರಿಯ ನಾಯಕಿ, ಮಾಜಿ ಸಚಿವೆ ವಿಮಲಾಬಾಯಿ ದೇಶಮುಖ ಅವರು ಅಚ್ಚರಿಯ ಬೆಳವಣಿಗೆಯಲ್ಲಿ ಜೆಡಿಎಸ್ ತೊರೆದು ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿಯಾಗಿ ಮುದ್ದೇಬಿಹಾಳ ಕ್ಷೇತ್ರದಿಂದ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ.ಬಿಜೆಪಿ ಟಿಕೆಟ್ ವಂಚಿತ ಇಂಡಿ ಕ್ಷೇತ್ರದ ಶಾಸಕ ಡಾ.ಸಾರ್ವಭೌಮ ಬಗಲಿ ಅವರು ಪಕ್ಷೇತರರಾಗಿ ಉಮೇದುವಾರಿಕೆ ಸಲ್ಲಿಸಿದರು. ಬಿಜೆಪಿ ಟಿಕೆಟ್ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಜೆಡಿಎಸ್ ಬಾಗಿಲು ತಟ್ಟಿದ್ದರು.`ಕಾರ್ಯಕರ್ತರ ಒತ್ತಾಯದಂತೆ ಪಕ್ಷೇತರನಾಗಿ ಸ್ಪರ್ಧಿಸಿದ್ದೇನೆ. ಯಾವುದೇ ಕಾರಣಕ್ಕೂ ಕಣದಿಂದ ಹಿಂದೆ ಸರಿಯುವುದಿಲ್ಲ. ಇದೇ 18ರಿಂದ ಪ್ರಚಾರ ಆರಂಭಿಸುತ್ತೇನೆ' ಎಂದು ಬಗಲಿ ತಿಳಿಸಿದರು.ಅಚ್ಚರಿಯ ಬೆಳವಣಿಗೆ: ಮುದ್ದೇಬಿಹಾಳ ಕ್ಷೇತ್ರದ ವಿಷಯದಲ್ಲಿ ಬುಧವಾರ ಹಲವು ಅಚ್ಚರಿಯ ಬೆಳವಣಿಗೆ ನಡೆದವು. ಬೆಳಿಗ್ಗೆ 8 ಗಂಟೆಗೆ ವಿಜಾಪುರದ ತಮ್ಮ ಮನೆಯಲ್ಲಿ ಕೆಜೆಪಿ ಸೇರ್ಪಡೆಯಾದ ವಿಮಲಾಬಾಯಿ ದೇಶಮುಖ ಮುದ್ದೇಬಿಹಾಳಕ್ಕೆ ತೆರಳಿ ನಾಮಪತ್ರ ಸಲ್ಲಿಸಿದರು.`ಮುದ್ದೇಬಿಹಾಳ ಕ್ಷೇತ್ರದ ಟಿಕೆಟ್ ನಿಮಗೇ ನೀಡುತ್ತೇವೆ. ನೀವು ನಿಲ್ಲಿ, ಇಲ್ಲವೇ ಯಾರನ್ನಾದರೂ ನಿಲ್ಲಿಸಿ ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಹೇಳಿದ್ದರು. `ಬಿ' ಫಾರ್ಮ್ ತಂದಿದ್ದು, ನಿಮ್ಮ ಮನೆಗೆ ಬಂದು ಕೊಡುತ್ತೇನೆ ಎಂದು ಜಿಲ್ಲೆಯ ಜೆಡಿಎಸ್ ಮುಖಂಡ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದರು. ಆದರೆ, ಅವರು ನಮ್ಮ ಮನೆಗೆ ಬರಲೇ ಇಲ್ಲ. ಪ್ರಭು ದೇಸಾಯಿಗೆ ಟಿಕೆಟ್ ನೀಡುವ ಮೂಲಕ ನನ್ನ ಬೆನ್ನಿಗೆ ಚೂರಿ ಹಾಕಿದರು' ಎಂದು ವಿಮಲಾಬಾಯಿ ಆರೋಪಿಸಿದರು.`ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕು ಎಂದು ಕಾರ್ಯಕರ್ತರು ಒತ್ತಡ ಹೇರಿದ್ದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ದೂರವಾಣಿ ಮೂಲಕ ಸಂಪರ್ಕಿಸಿ ಕೆಜೆಪಿಗೆ ಆಹ್ವಾನಿಸಿದರು. ಮಂಗಳಾದೇವಿ ಬಿರಾದಾರ ಅವರಿಗೆ ಹಂಚಿಕೆಯಾಗಿದ್ದ ಕೆಜೆಪಿ ಟಿಕೆಟ್‌ನ್ನು ನನಗೆ ನೀಡಿದ್ದಾರೆ' ಎಂದರು.

`ಕೂಡಲ ಸಂಗಮದ ಪಂಚಮಸಾಲಿ ಪೀಠದ ಮಠಾಧೀಶರ ಸಂಧಾನದ ಹಿನ್ನೆಲೆಯಲ್ಲಿ ಮುದ್ದೇಬಿಹಾಳ ಕ್ಷೇತ್ರದಲ್ಲಿ ಕ್ಷಿಪ್ರಗತಿಯಲ್ಲಿ ರಾಜಕೀಯ (ಲಿಂಗಾಯತ ನಾಯಕರ) ಧ್ರುವೀಕರಣ ನಡೆದಿದೆ. ಕಳೆದ ಬಾರಿ ವಿಮಲಾಬಾಯಿ ದೇಶಮುಖ ಅವರಿಂದ ದೂರವಾಗಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದ ಎಂ.ಎಸ್. ಪಾಟೀಲ ಅವರು ವಿಮಲಾಬಾಯಿ ಅವರ ಬೆಂಬಲಕ್ಕೆ ನಿಂತಿದ್ದಾರೆ' ಎಂದು ಕೆಲ ಮುಖಂಡರು ಹೇಳಿದರು.ಟಿಕೆಟ್ ತಪ್ಪಿಸಿದರು: `ನನಗೆ ಹಂಚಿಕೆಯಾಗಿದ್ದ ಕೆಜೆಪಿಯ ಬಿ ಫಾರ್ಮ್‌ನ್ನು ವಿಮಲಾಬಾಯಿ ಅವರಿಗೆ ನೀಡಿದ್ದಾರೆ. ನಾನು ಈಗಾಗಲೇ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಕಣದಲ್ಲಿ ಉಳಿಯುತ್ತೇನೆ' ಎಂದು ಮಂಗಳಾದೇವಿ ಬಿರಾದಾರ ಹೇಳಿದರು.`ವಿಮಲಾಬಾಯಿ ಅವರೇ ನನಗೆ ಬೆಂಬಲ ನೀಡುವುದಾಗಿ ಹೇಳಿದ್ದರು. ಕೆಲವರು ಚಿತಾವಣೆ ನಡೆಸಿ ಅವರನ್ನು ಕಣಕ್ಕಿಳಿಸಿದ್ದಾರೆ. ಇಲ್ಲಿ ಜಾತಿ ರಾಜಕಾರಣ ನಡೆದಿದೆ' ಎಂದು ದೂರಿದರು.ನಡಹಳ್ಳಿ ಸಹೋದರ ಕಣಕ್ಕೆ: ದೇವರ ಹಿಪ್ಪರಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್. ಪಾಟೀಲ ನಡಹಳ್ಳಿ ಅವರ ಸಹೋದರ ಶಾಂತಗೌಡ ಮುದ್ದೇಬಿಹಾಳ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಪ್ರತಿಕ್ರಿಯಿಸಿ (+)