ವಿಮಾನಕ್ಕೂ ಅಡುಗೆ ಎಣ್ಣೆ!

7

ವಿಮಾನಕ್ಕೂ ಅಡುಗೆ ಎಣ್ಣೆ!

Published:
Updated:

ಜಾಗತಿಕ ವಿಮಾನಯಾನ ಕ್ಷೇತ್ರದಲ್ಲಿ ಮತ್ತೊಂದು ಇತಿಹಾಸ ನಿರ್ಮಾಣವಾಗಿದೆ. ಈ ಇತಿಹಾಸ ಸೃಷ್ಟಿಯಾಗಿದ್ದು ಇಂಗ್ಲೆಂಡ್ ನೆಲದಲ್ಲಿ.  ಥಾಮ್ಸನ್ ಏರ್‌ವೇಸ್ ಸಂಸ್ಥೆ ಖಾದ್ಯ ತೈಲ ಬಳಸಿ ವಿಮಾನ ಚಲಾಯಿಸಿದೆ...ಆದರೆ, ಖಾದ್ಯ ತೈಲವನ್ನು ಸಂಸ್ಕರಿಸಿ ತಯಾರಿಸಲಾದ ಜೈವಿಕ ಇಂಧನ ಬಹಳ ದುಬಾರಿ. ಎಷ್ಟೆಂದರೆ ಸಾಮಾನ್ಯ ಇಂಧನಕ್ಕಿಂತ ಐದರಿಂದ ಆರುಪಟ್ಟು!ಈ ತಿಂಗಳ ಆರಂಭದಲ್ಲಿ, 232 ಪ್ರಯಾಣಿಕರನ್ನು ಹೊಂದಿದ್ದ ಬೋಯಿಂಗ್ 757 ವಿಮಾನ ಬರ್ಮಿಂಗ್‌ಹ್ಯಾಮ್‌ನಿಂದ ಟೇಕ್ ಆಫ್ ಆಗಿ ನಾಲ್ಕು ಗಂಟೆಗಳ ಹಾರಾಟದ ಬಳಿಕ ಸ್ಪೇನ್‌ನ ದ್ವೀಪ ಲ್ಯಾಂಜಾರೋಟ್‌ನ ಅರೆಸಿಫೆ ವಿಮಾನ ನಿಲ್ದಾಣದಲ್ಲಿ ಯಶಸ್ವಿಯಾಗಿ ಇಳಿಯುತ್ತಿದ್ದಂತೆ ವೈಮಾನಿಕ ಕ್ಷೇತ್ರದ ಪುಟಗಳಲ್ಲಿ ಹೊಸ ಅಧ್ಯಾಯವೊಂದು ಸೇರ್ಪಡೆಗೊಂಡಿತು.ಈ ವಿಮಾನದಲ್ಲಿ ಅಡುಗೆಗೆ ಬಳಸಿದ ತೈಲವನ್ನು ಇಂಧನವನ್ನಾಗಿ ಬಳಸಲಾಗಿತ್ತು! ಮರು ಬಳಕೆಯ ಜೈವಿಕ ಇಂಧನವನ್ನು ಬಳಸಿ ಇಂಗ್ಲೆಂಡ್ ನೆಲದಿಂದ ವಾಣಿಜ್ಯ ಬಳಕೆಯ ವಿಮಾನವನ್ನು ಹಾರಿಸಿದ ಮೊದಲ ಸಂಸ್ಥೆ ಎಂಬ ಕೀರ್ತಿಗೂ ಥಾಮ್ಸನ್ ಏರ್‌ವೇಸ್ ಪಾತ್ರವಾಯಿತು.ಖಾದ್ಯ ತೈಲದಿಂದ ಉತ್ಪಾದಿಸಲಾದ `ಹೈಡ್ರೊ ಪ್ರಕ್ರಿಯೆಗೆ ಒಳಪಡಿಸಿದ ಎಸ್ಟರು ಮತ್ತು ಫ್ಯಾಟಿ ಆಸಿಡ್ (ಕೊಬ್ಬಿನಾಮ್ಲ) (ಎಚ್‌ಇಎಫ್‌ಎ) ಮಿಶ್ರಣವನ್ನು ಈ ವಿಮಾನದಲ್ಲಿ ಇಂಧನವಾಗಿ ಬಳಸಲಾಗಿತ್ತು.ಎರಡು ಎಂಜಿನ್ ಹೊಂದಿದ್ದ ಬೋಯಿಂಗ್ ವಿಮಾನದ ಒಂದು ಎಂಜಿನ್, ಶೇ 50 ರಷ್ಟು ಜೈವಿಕ ಇಂಧನ ಮತ್ತು ಉಳಿದ ಶೇ 50ರಷ್ಟು ಪ್ರಮಾಣದಲ್ಲಿ ಸಾಮಾನ್ಯವಾಗಿ ಉಪಯೋಗಿಸುವ ಜೆಟ್ ಎ1 ಇಂಧನ ಬಳಸಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿತು.

ಜಾಗತಿಕ ತಾಪಮಾನ ಏರುಗತಿಯಲ್ಲೇ  ಸಾಗುತ್ತಿರುವ ದಿನಗಳಲ್ಲಿ, ಪರಿಸರ ಸ್ನೇಹಿ ಉತ್ಪನ್ನಗಳನ್ನೇ ಬಳಸಿ ಎಂಬ ಕೂಗು ಕೇಳುತ್ತಿರುವ ಸಂದರ್ಭದಲ್ಲಿ ಈ ಹೊಸ ಬೆಳವಣಿಗೆ ವಿಶ್ವ ಸಮುದಾಯದ  ಗಮನ ಸೆಳೆದಿದೆ.ಥಾಮ್ಸನ್ ವಿಮಾನಯಾನ ಸಂಸ್ಥೆ ಬಳಸಿದ್ದ ಅಡುಗೆ ಎಣ್ಣೆಯನ್ನು ಹೋಟೆಲ್, ರೆಸ್ಟೋರೆಂಟ್‌ಗಳಿಂದ ಸಂಗ್ರಹಿಸಲಾಗಿತ್ತು. ನಂತರ ಅದನ್ನು ರಾಸಾಯನಿಕ ಕ್ರಿಯೆಗೆ ಒಳಪಡಿಸಿ ಸಂಸ್ಕರಿಸಲಾಗಿತ್ತು. ಈ ಪ್ರಯೋಗಾತ್ಮಕ ಹಾರಾಟವನ್ನು ಥಾಮ್ಸನ್ ಏರ್‌ವೇಸ್ ಕಳೆದ ಜುಲೈ ತಿಂಗಳಿನಲ್ಲೇ ನಡೆಸಬೇಕಿತ್ತು. ಆದರೆ ಕೆಲವು ಪರೀಕ್ಷೆಗಳು ಬಾಕಿ ಉಳಿದಿದ್ದರಿಂದ ಹಾಗೂ ಸುರಕ್ಷತಾ ಪ್ರಮಾಣ ಪತ್ರ ಸಿಗದೇ ಇದ್ದುದರಿಂದ ಹಾರಾಟ ವಿಳಂಬಗೊಂಡಿತ್ತು.ಅಗ್ಗವೇನಲ್ಲ: ಖಾದ್ಯ ತೈಲವನ್ನು ಸಂಸ್ಕರಿಸಿ ತಯಾರಿಸಲಾದ ಜೈವಿಕ ಇಂಧನ ಬಹಳ ದುಬಾರಿ. ಎಷ್ಟೆಂದರೆ ಸಾಮಾನ್ಯ ಇಂಧನಕ್ಕಿಂತ ಐದರಿಂದ ಆರುಪಟ್ಟು!`ನಮ್ಮ ಸಂಸ್ಥೆಯು ಮರು ಬಳಕೆಯ ಜೈವಿಕ ಇಂಧನದ ಮೇಲೆ ನಂಬಿಕೆ ಇಟ್ಟಿರುವುದರಿಂದ ಎಷ್ಟು ವೆಚ್ಚವಾದರೂ ಆ ಇಂಧನವನ್ನೇ ಬಳಸಲಾಯಿತು~ ಎಂದು ಥಾಮ್ಸನ್ ಏರ್‌ವೇಸ್‌ನ ಗ್ರಾಹಕ ಸೇವಾವಿಭಾಗದ ನಿರ್ದೇಶಕ ಕಾರ್ಲ್ ಗಿಸ್ಸಿಂಗ್ ಹೇಳಿದ್ದಾರೆ.`ಜೈವಿಕ ಇಂಧನವನ್ನು ಬಳಸಿ ವಿಮಾನ ಸಂಚಾರ ನಡೆಸಿದ ಮೊದಲ ಕಂಪೆನಿ ನಮ್ಮದು ಎಂಬ ಹೆಮ್ಮೆ ನಮಗೆ. ಈ ಪ್ರಯತ್ನವನ್ನು ವಿಶ್ವದ ಜನತೆ ಗಮನಿಸುತ್ತಾರೆ~ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.ಸರ್ಕಾರಗಳು ಮತ್ತು ಉದ್ದಿಮೆಗಳು ಇಂಧನ ಅಭಿವೃದ್ಧಿಗೆ ಬಂಡವಾಳ ಹೂಡುವಾಗ ಇಂಗಾಲ ಹೊರಸೂಸುವಿಕೆಯನ್ನು ಕುಂಠಿತಗೊಳಿಸುವುದರತ್ತ ಗಮನ ಹರಿಸಲಿ ಎಂಬ ಉದ್ದೇಶದಿಂದ ಈ  ಪ್ರಯತ್ನವನ್ನು ಮಾಡಲಾಯಿತು ಎಂದು ಗಿಸ್ಸಿಂಗ್ ವಿವರಿಸಿದ್ದಾರೆ.ಅಡುಗೆಗೆ ಬಳಸಿದ ತೈಲವನ್ನು ಬೇರೆ ಯಾವುದೇ ಕೆಲಸಕ್ಕೆ ಬಳಸದೇ ಇರುವುದನ್ನು ಗಮನಿಸಿ, ಅದನ್ನು ಸಂಸ್ಕರಿಸಿ ವಿಮಾನದ ಇಂಧನವನ್ನಾಗಿ ಮಾರ್ಪಾಡು ಮಾಡಲಾಯಿತು ಎಂದು ಈ ಜೈವಿಕ ಇಂಧನವನ್ನು ಪೂರೈಕೆ ಮಾಡುತ್ತಿರುವ ಸ್ಕೈಎನ್‌ಆರ್‌ಜಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಿರ್ಕ್ ಕೊನೆಮೀಜೆರ್ ಹೇಳಿದ್ದಾರೆ.2012ರ ನಂತರ ಸಂಪೂರ್ಣವಾಗಿ ಇದೇ ಇಂಧನ ಬಳಸುವ ವಿಮಾನಗಳನ್ನು ಅಧಿಕೃತವಾಗಿ ಕಾರ್ಯಾಚರಣೆಗೆ ಇಳಿಸುವ ಗುರಿಯನ್ನು ಥಾಮ್ಸನ್ ಏರ್‌ವೇಸ್ ಹೊಂದಿದೆ.ಥಾಮ್ಸನ್ ಏರ್‌ವೇಸ್‌ನ ಈ ಯತ್ನಕ್ಕೆ  ಇಂಗ್ಲೆಂಡ್‌ನ ಸಂಸತ್ ಸದಸ್ಯರು ಮತ್ತು ಸರ್ಕಾರ ಕೂಡ ಬೆಂಬಲ ವ್ಯಕ್ತಪಡಿಸಿವೆ.

 

`ಜಾಗತಿಕ ತಾಪಮಾನ ಏರಿಕೆಯ ನಿಯಂತ್ರಣದಲ್ಲಿ ಜೈವಿಕ ಇಂಧನಗಳು ಪ್ರಮುಖ ಪಾತ್ರ ವಹಿಸಲಿವೆ. ವೈಮಾನಿಕ ಉದ್ದಿಮೆ ಇನ್ನಷ್ಟು ಬೆಳೆಯಬೇಕಿದೆ. ಅದೇ ಸಂದರ್ಭದಲ್ಲಿ ನಾವು ಅದರಿಂದಾಗಿ ಪರಿಸರಕ್ಕೆ ಆಗುವ ಹಾನಿ ಕುರಿತೂ ಚಿಂತಿಸಬೇಕಿದೆ~ ಎಂದು ಬ್ರಿಟನ್ ವಿದೇಶಾಂಗ ಸಚಿವೆ ತೆರೇಸಾ ವಿಲ್ಲಿಯರ್ಸ್‌ ಹೇಳಿದ್ದಾರೆ.ಆದರೆ, ತಕ್ಷಣದಿಂದ ವಿಮಾನಯಾನ ಸಂಸ್ಥೆಗಳಿಗೆ ಈ ಇಂಧನವನ್ನು ಪೂರೈಸಲು ಸಾಧ್ಯವಿಲ್ಲ. ಅದಕ್ಕೆ ಸರ್ಕಾರಗಳ ನೆರವು ಬೇಕಾಗಿದೆ. ಇನ್ನಷ್ಟು ಹೆಚ್ಚಿನ ಪ್ರಯೋಗಗಳು ನಡೆಯಬೇಕಾಗಿದೆ. ಪರ್ಯಾಯ ತಂತ್ರಜ್ಞಾನ ಅಭಿವೃದ್ಧಿ ಪಡಿಸುವ ಅಗತ್ಯವೂ ಇದೆ. ಮುಂದಿನ ನಾಲ್ಕು ವರ್ಷಗಳಲ್ಲಿ ವಿಮಾನಗಳಿಗಾಗಿ ಹೊಸ ಇಂಧನ ದೊರೆಯುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.  

    

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry