ವಿಮಾನಗಳ ಚಿತ್ತಾರಕ್ಕೆ ತೆರೆ

7

ವಿಮಾನಗಳ ಚಿತ್ತಾರಕ್ಕೆ ತೆರೆ

Published:
Updated:

 ಯಲಹಂಕ ವಾಯುನೆಲೆ:  ನೀಲಾಕಾಶದಲ್ಲಿ ಐದು ದಿನಗಳ ಕಾಲ ವರ್ಣರಂಜಿತ ಚಿತ್ತಾರ ಮೂಡಿಸಿ ನೋಡುಗರನ್ನು ಪುಳುಕಿತರನ್ನಾಗಿ ಮಾಡಿದ ‘ಏರೊ ಇಂಡಿಯಾ-2011’ ವೈಮಾನಿಕ ಪ್ರದರ್ಶನಕ್ಕೆ ಭಾನುವಾರ ತೆರೆ ಬಿದ್ದಿದೆ.ಈ ಪ್ರದರ್ಶನದಲ್ಲಿ ಪಾಲ್ಗೊಂಡು ಲಕ್ಷಾಂತರ ಜನರನ್ನು ರೋಮಾಂಚನಗೊಳಿಸಿದ್ದ ಅಮೆರಿಕ, ಫ್ರಾನ್ಸ್, ಸ್ವೀಡನ್ ಸೇರಿದಂತೆ ವಿವಿಧ ದೇಶಗಳ ಮಾದರಿಯ ಯುದ್ಧ ವಿಮಾನಗಳು, ತರಬೇತಿ ವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳು ತಮ್ಮ ನೆಲೆಗೆ ಮರಳಿದವು.ಐದು ದಿನಗಳ ಈ ಕಾರ್ಯಕ್ರಮದಲ್ಲಿ ಯೂರೋ ಫೈಟರ್ ಟೈಫೂನ್, ಸೂಪರ್ ಹಾರ್ನೆಟ್, ತೇಜಸ್, ಸುಖೋಯ್, ರಫೆಲ್, ಸೂರ್ಯಕಿರಣ, ರೆಡ್ ಬುಲ್ ವಿಮಾನಗಳು ಭಾಗವಹಿಸಿದ್ದವು. ಇದಲ್ಲದೆ ಭಾರತೀಯ ವಾಯುಪಡೆಯ ಸಾರಂಗ್, ಚೀತಾ, ಲಾನ್ಸರ್ ಹೆಲಿಕಾಪ್ಟರ್‌ಗಳೂ ತಮ್ಮ ಸಾಮರ್ಥ್ಯ ಮೆರೆದವು.ಬುಧವಾರದಿಂದ ಆರಂಭವಾದ ಕಾರ್ಯಕ್ರಮದಲ್ಲಿ ಪ್ರತಿ ದಿನ ಎರಡು ಬಾರಿ (ಬೆಳಿಗ್ಗೆ 10ರಿಂದ 12ರವರೆಗೆ ಮತ್ತು ಮಧ್ಯಾಹ್ನ 2ರಿಂದ 4ರ ವರೆಗೆ ) ವಿವಿಧ ವಿಮಾನಗಳ ಏರೋಬ್ಯಾಟಿಕ್ಸ್ ಪ್ರದರ್ಶನ ಇದ್ದವು.ಮನರಂಜಿಸಿದ ಸೂರ್ಯಕಿರಣ: ಪ್ರದರ್ಶನದ ಐದೂ ದಿನಗಳ ಕಾಲ ಪ್ರೇಕ್ಷಕರ ಮನರಂಜಿಸಿದ್ದು ಭಾರತೀಯ ವಾಯುಪಡೆಯ ಏರೋಬ್ಯಾಟಿಕ್ಸ್ ತಂಡದ ಸೂರ್ಯಕಿರಣ ವಿಮಾನ. ಈ ವಿಮಾನಗಳು ಆಕಾಶದಲ್ಲಿ ಆಗಾಗ ತ್ರಿವರ್ಣದ ರಂಗೋಲಿ ಬರೆದರೆ, ಕೆಲವೊಮ್ಮೆ ಪ್ರೇಮದ ಸಂಕೇತ ಬರೆದು ಯುವಕರ ಹೃದಯ ಬಡಿತ ಹೆಚ್ಚುವಂತೆ ಮಾಡುತ್ತಿದ್ದವು! ಜೆಕ್ ಗಣರಾಜ್ಯದ ‘ಫ್ಲೈಯಿಂಗ್ ಬುಲ್ಸ್’ ಏರೋಬ್ಯಾಟಕ್ಸ್ ತಂಡ ಕೂಡ ಲಕ್ಷಾಂತರ ಮಂದಿ ಪ್ರೇಕ್ಷಕರನ್ನು ಮೋಡಿ ಮಾಡುವಲ್ಲಿ ಯಶಸ್ವಿಯಾಯಿತು. ಇದಲ್ಲದೆ, ಭಾರತೀಯ ವಾಯುಪಡೆಯ ಸಾರಂಗ್ ಹೆಲಿಕಾಪ್ಟರ್‌ಗಳೂ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದ ಛಾಪು ಮೂಡಿಸಿದವು.ಪ್ರದರ್ಶನದ ಮೊದಲ ಮೂರು ದಿನಗಳಲ್ಲಿ ಸಾಕಷ್ಟು ಸಂಖ್ಯೆಯ ವಾಣಿಜ್ಯ ವ್ಯವಹಾರಗಳು, ವಿವಿಧ ಕಂಪೆನಿಗಳ ನಡುವೆ ಒಪ್ಪಂದಗಳು ನಡೆಯಿತು. ಕೊನೆಯ ಎರಡು ದಿನಗಳನ್ನು ವಿಶೇಷವಾಗಿ ಸಾರ್ವಜನಿಕರ ವೀಕ್ಷಣೆಗಾಗಿ ಮೀಸಲಿಡಲಾಗಿತ್ತು.

ತಾರಾ ಮೆರುಗು: ಶಾಹಿದ್ ಕಪೂರ್, ಡಿನು ಮೋರಿಯಾ, ಗುಲ್ ಪನಾಗ್, ಮಹೇಂದ್ರ ಸಿಂಗ್ ಧೋನಿ ಮತ್ತಿತರ ಗಣ್ಯರು ಭಾಗವಹಿಸಿ ಏರೊ ಇಂಡಿಯಾ ಕಾರ್ಯಕ್ರಮಕ್ಕೆ ತಾರಾ ಮೆರುಗು ತಂದಿತ್ತರು. ಉದ್ಯಮಿ ರತನ್ ಟಾಟಾ ಇಳಿ ವಯಸ್ಸಿನಲ್ಲೂ ಯುದ್ಧ ವಿಮಾನ ಚಾಲನೆ ಮಾಡಿ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದರು.ಹರಿದು ಬಂದ ಜನಸಾಗರ: ಶನಿವಾರ ಮತ್ತು ಭಾನುವಾರದಂದು ಬೆಂಗಳೂರಿನ ಅನೇಕ ಖಾಸಗಿ ಸಂಸ್ಥೆಗಳಿಗೆ ರಜೆ ಇರುವ ಕಾರಣ ಆ ಎರಡು ದಿನಗಳಲ್ಲಿ ಪ್ರದರ್ಶನಕ್ಕೆ ಬಂದವರ ಸಂಖ್ಯೆಯೂ ದೊಡ್ಡದಾಗಿಯೇ ಇತ್ತು.ಅಂತಿಮ ದಿನವಾದ ಭಾನುವಾರ ಯಲಹಂಕ ವಾಯುನೆಲೆಗೆ ತಾಗಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಜನವೋ ಜನ. ಅಲ್ಲಿನ ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry