ಮಂಗಳವಾರ, ಜೂನ್ 22, 2021
22 °C

ವಿಮಾನ ಕಣ್ಮರೆ: ‘ಅಪಹರಣ’ ತಳ್ಳಿಹಾಕದ ಮಲೇಷ್ಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ವಾಲಾಲಂಪುರ (ಪಿಟಿಐ): ಕಣ್ಮರೆಯಾದ ವಿಮಾನ ‘ಅಪಹರಣ’ವಾಗಿಲ್ಲ ಎಂಬುದನ್ನು  ಶನಿವಾರ ತಳ್ಳಿಹಾಕದ ಮಲೇಷ್ಯಾ, 239 ಪ್ರಯಾಣಿಕರೊಂದಿಗೆ ಕಾಣೆಯಾಗಿದ್ದ ವಿಮಾನದ (ಎಂಎಚ್‌370) ಚಲನವಲನದಲ್ಲಿ ‘ಕಾಣದಕೈಗಳ ಉದ್ದೇಶಪೂರ್ವಕ ಕೃತ್ಯ ಅಡಗಿತ್ತು’ ಎಂದು ಹೇಳಿದೆ.

ವಿಮಾನವನ್ನು ಎರಡು ಕಾರಿಡಾರ್‌ಗಳಲ್ಲಿ ಶೋಧ ಮಾಡಲಾಗುತ್ತಿದೆ. ಕಜಕಿಸ್ತಾನ ಹಾಗೂ ತುರ್ಕಮೆನಿಸ್ತಾನ ಗಡಿಯ ಉತ್ತರದಲ್ಲಿರುವ ಕಾರಿಡಾರ್ ಮತ್ತು ಇಂಡೋನೇಷ್ಯಾದಿಂದ  ದಕ್ಷಿಣ ಭಾರತದ ಸಾಗರದ ವರೆಗೂ ಇರುವ ಕಾರಿಡಾರ್‌ನಲ್ಲಿ ವಿಮಾನ ಪತ್ತೆಗೆ ಅಧಿಕಾರಿಗಳು ಯತ್ನಿಸುತ್ತಿದ್ದಾರೆ ಎಂದು ಮಲೇಷ್ಯಾ ಪ್ರಧಾನಿ ನಜೀಬ್‌ ರಜಾಕ್‌ ಹೇಳಿದ್ದಾರೆ.

‘ವಿಮಾನವು ಮಲೇಷ್ಯಾದ ಪೂರ್ವ ತೀರಕ್ಕೆ ತಲುಪುವ ಮುಂಚೆಯಷ್ಟೇ ಅದರ ಸಂವಹನ ಸಂಪರ್ಕ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಲಾಗಿತ್ತು. ಹೊಸ ಉಪಗ್ರಹ ಸಂವಹನದ ಆಧಾರದಲ್ಲಿ ಇದನ್ನು ನಾವು ಇನ್ನಷ್ಟು ದೃಢವಾಗಿ ಹೇಳಬಹುದು’ ಎಂದು ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಜೀಬ್‌  ಅವರು ನುಡಿದರು.

ವಿಮಾನವು ಮಲೇಷ್ಯಾ ಹಾಗೂ ವಿಯೆಟ್ನಾಂನ ವಾಯು ಸಂಚಾರ ನಿಯಂತ್ರಣ ಗಡಿಗಳ ನಡುವೆ ಇದ್ದಾಗ ಅದರ ಟ್ರಾನ್ಸ್‌ಪೊಂಡರ್ (ರೇಡಿಯೊ ಸಂಜ್ಞೆಗಳನ್ನು ಗ್ರಹಿಸಿ ಸ್ವಯಂ ಚಾಲನೆಯಿಂದ ಬೇರೆ ಸಂಜ್ಞೆಗಳನ್ನು ಬಿತ್ತರಿಸುವ ಸಲಕರಣೆ) ಸ್ವಿಚ್‌ಆಫ್‌ ಆಗಿತ್ತು. ‘ಈ ಸ್ಥಳದಿಂದ ವಿಮಾನ ವಾಯವ್ಯ ದಿಕ್ಕಿಗೆ ತಿರುಗುವ ಮುನ್ನ ಪಶ್ಚಿಮ ದಿಕ್ಕಿನತ್ತ ಹೊರಳಿತ್ತು ಎಂಬುದನ್ನು ರೆಡಾರ್‌ ದತ್ತಾಂಶ ಹೇಳುತ್ತಿವೆ. ಇದು ವಿಮಾನದಲ್ಲಿ  ಕಾಣದ ಕೈಗಳು ಉದ್ದೇಶಪೂರ್ವಕವಾಗಿ ನಡೆಸಿದ ಕೃತ್ಯಗಳಾಗಿದ್ದವು’ ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.

‘ವಿಮಾನ ಅಪಹರಣದ ಮಾಧ್ಯಮ ವರದಿಗಳ ಹೊರತಾಗಿಯೂ ನಾವು ಎಲ್ಲಾ ಸಾಧ್ಯತೆಗಳ ಬಗ್ಗೆಯೂ ಯೋಚಿಸುತ್ತಿದ್ದೇವೆ. ಈ ವಿಷಯದಲ್ಲಿ ನನಗೆ ಸ್ಪಷ್ಟತೆ ಇದೆ’ ಎಂದು ನಜೀಬ್‌ ಹೇಳಿದ್ದಾರೆ.14 ರಾಷ್ಟ್ರಗಳ ನೌಕಾ ಹಾಗೂ ಸೇನಾ ವಿಮಾನಗಳು ಆಗ್ನೇಯ ಏಷ್ಯಾದುದ್ದಕ್ಕೂ  ನಡೆಸಿದ ಶೋಧ ಕಾರ್ಯಾಚರಣೆ ಹೊರತಾಗಿಯೂ ಕಾಣೆಯಾದ ವಿಮಾನದ ಸುಳಿವು ಸಿಕ್ಕಿಲ್ಲ. ಈ ಕಾರ್ಯಾಚರಣೆಯಲ್ಲಿ 43 ಹಡಗು ಮತ್ತು 58 ವಿಮಾನಗಳು ಪಾಲ್ಗೊಂಡಿದ್ದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.