ಸೋಮವಾರ, ಮಾರ್ಚ್ 8, 2021
31 °C

ವಿಮಾನ ದುರಂತ: ನ್ಯಾಯಾಂಗ ತನಿಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಮಾನ ದುರಂತ: ನ್ಯಾಯಾಂಗ ತನಿಖೆ

ಇಸ್ಲಾಮಾಬಾದ್ (ಪಿಟಿಐ): ಒಟ್ಟು 127 ಜನರನ್ನು ಬಲಿ ತೆಗೆದುಕೊಂಡ ಪ್ರಯಾಣಿಕ ವಿಮಾನ ದುರಂತ ಪ್ರಕರಣದ ತನಿಖೆ ನಡೆಸಲು ನ್ಯಾಯಾಂಗ ಸಮಿತಿ ರಚಿಸಲಾಗುವುದು ಎಂದು ಪಾಕಿಸ್ತಾನ ಪ್ರಧಾನಿ ಯೂಸುಫ್ ರಜಾ ಗಿಲಾನಿ ಶನಿವಾರ ಘೋಷಿಸಿದ್ದಾರೆ.ಈ ಮಧ್ಯೆ, ಶುಕ್ರವಾರ ಸಂಜೆ ಅಪಘಾತಕ್ಕೀಡಾದ  ಬೋಯಿಂಗ್ 737-200 ವಿಮಾನದ ಮಾಲೀಕ ಫರೂಕ್ ಭೋಜಾ ಅವರನ್ನು ಭದ್ರತಾ ಸಂಸ್ಥೆಗಳು ವಶಕ್ಕೆ ತೆಗೆದುಕೊಂಡಿವೆ. ಅವರು ರಾಷ್ಟ್ರ ಬಿಟ್ಟು ತೆರಳುವುದಕ್ಕೆ ನಿಷೇಧ ಹೇರಲಾಗಿದೆ.ದುರಂತದಲ್ಲಿ ಅಸುನೀಗಿದವರ ಶವಗಳನ್ನು ಇಡಲಾಗಿದ್ದ ಸರ್ಕಾರಿ ಸ್ವಾಮ್ಯದ ಪಿಮ್ಸ ಆಸ್ಪತ್ರೆಗೆ ಶನಿವಾರ ಪ್ರಧಾನಿ ಗಿಲಾನಿ ಭೇಟಿ ನೀಡಿದರು.ಕಳೆದ ಎರಡು ವರ್ಷಗಳ ಅವಧಿಯಲ್ಲಿ ರಾಷ್ಟ್ರದಲ್ಲಿ ನಡೆದ ಎರಡನೇ ಅತಿ ದೊಡ್ಡ ವಿಮಾನ ದುರಂತ ಇದಾಗಿದ್ದು, ತನಿಖೆ ನಡೆಸದೇ ಅಪಘಾತದ ಕುರಿತಂತೆ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಎಂದಿದ್ದಾರೆ.

ದುರ್ಘಟನೆಯಲ್ಲಿ ಮೃತಪಟ್ಟ ಹಲವರ ದೇಹಗಳನ್ನು ಅವರ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗಿದೆ.

ಇನ್ನೂ ಗುರುತು ಪತ್ತೆಯಾಗದಿರುವವರ ಶವಗಳನ್ನು ಡಿಎನ್‌ಎ ಪರೀಕ್ಷೆ ನಡೆಸಿ ಬಳಿಕ ಸಂಬಂಧಪಟ್ಟವರಿಗೆ ನೀಡಲಾಗುವುದು. ಇದಕ್ಕೆ ಸ್ವಲ್ಪ ಕಾಲಾವಕಾಶ ಬೇಕು ಎಂದು ಯೂಸುಫ್ ರಜಾ ಗಿಲಾನಿ ತಿಳಿಸಿದ್ದಾರೆ.ಫಾರೂಕ್ ಭೋಜಾ ಮಾಲೀಕತ್ವದ ಭೋಜಾ ಏರ್‌ಲೈನ್ಸ್‌ಗೆ ಸೇರಿದ ವಿಮಾನವು ಶುಕ್ರವಾರ ಸಂಜೆ ಇಸ್ಲಾಮಾಬಾದ್‌ನ ಬೆನಜೀರ್ ಭುಟ್ಟೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವುದಕ್ಕೂ ಮುನ್ನ ಹುಸೇನಾಬಾದ್ ಗ್ರಾಮದ ಜನವಸತಿ ಪ್ರದೇಶದಲ್ಲಿ ಅಪಘಾತಕ್ಕೀಡಾಗಿತ್ತು. ದುರ್ಘಟನೆಯಲ್ಲಿ 118 ಪ್ರಯಾಣಿಕರು ಸೇರಿದಂತೆ ಒಟ್ಟು 127 ಜನರು ಮೃತಪಟ್ಟಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.