ವಿಮಾನ ನಿಲ್ದಾಣದಲ್ಲಿ ಪ್ಲೇ ಪೋರ್ಟ್

7

ವಿಮಾನ ನಿಲ್ದಾಣದಲ್ಲಿ ಪ್ಲೇ ಪೋರ್ಟ್

Published:
Updated:
ವಿಮಾನ ನಿಲ್ದಾಣದಲ್ಲಿ ಪ್ಲೇ ಪೋರ್ಟ್

ಬಸ್ಸಲ್ಲಿ ಟಿಕೆಟ್ ಇಲ್ದೆ ಹೋದ್ರೆ ಅರ್ಧ ದಾರೀಲಿ ಇಳಿಸ್ತಾರೆ. ಅದೇ ವಿಮಾನದಲ್ಲಿ ಆದ್ರೆ...?

ಏಳರ ಹರೆಯದ ಪುಟಾಣಿಯ ಪ್ರಶ್ನೆ ಕೇಳಿ ಅಲ್ಲಿದ್ದವರಿಗೆ ಬೆರಗು.`ಇಲ್ಲ ಪುಟ್ಟಿ, ವಿಮಾನ ಹತ್ತೋಕೆ ಮುಂಚೇನೇ ಟಿಕೆಟ್ ತಗೊಂಡಿರ‌್ಬೇಕು. ಬಸ್ಸಿನ ತರ ಟಿಕೆಟ್ ಇಲ್ದೆ ವಿಮಾನ ಹತ್ತೋಕಾಗಲ್ಲ. ಅರ್ಧದಲ್ಲಿ ಇಳ್ಸೋಕಂತೂ ಸಾಧ್ಯನೇ ಇಲ್ಲ~.

ಜಾದೂಗಾರ ಸಿಲೆಸ್ಟರ್ ಆ ಮಗುವಿನ ಪ್ರಶ್ನೆಗೆ ಉತ್ತರಿಸಿದಾಗ ಅಲ್ಲಿದ್ದ ಅಷ್ಟೂ ಮಕ್ಕಳಿಗೂ ಉತ್ತರ ಸಿಕ್ಕ ಖುಷಿ.ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಐಎಎಲ್ ಕಂಪೆನಿ ಪ್ರಾಯೋಜಕತ್ವದಲ್ಲಿ ಪರಿಚಯಿಸಲಾಗಿರುವ `ಪ್ಲೇ ಪೋರ್ಟ್~ ಎಂಬ ಮಕ್ಕಳ ಆಟದ ತಾಣ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡ ಸ್ಪರ್ಶ ಟ್ರಸ್ಟ್‌ನ ಮಕ್ಕಳು ತಮ್ಮ ಸಂಶಯಗಳನ್ನು ಎಗ್ಗಿಲ್ಲದೆ ಕೇಳುತ್ತಿದ್ದ ಪರಿಯಿದು. ಯೋಜನೆಯ ಉದ್ದೇಶವೂ ಇದೇ.`ಐ ಪಾಡ್ ಯುಗದಲ್ಲಿ ಕಳೆದು ಹೋಗುತ್ತಿರುವ ಮಕ್ಕಳನ್ನು ಮತ್ತೆ ಹಳೇ ಪ್ರಪಂಚಕ್ಕೆ ಕರೆದೊಯ್ಯುವ ಆಸೆ ನಮ್ಮದು. ಬೇಸಿಗೆಯ ರಜೆಯಲ್ಲಿ ಮಕ್ಕಳಿಗೆ ರಿಲ್ಯಾಕ್ಸ್ ನೀಡಲೆಂದೇ ಆಟದೊಂದಿಗೆ ಪಾಠ ಸಿದ್ಧಾಂತವನ್ನೇ ನಾವೂ ಬಳಸಿಕೊಂಡಿದ್ದೇವೆ. ದಕ್ಷಿಣ ಭಾರತದ ಸಂಸ್ಕೃತಿ ಪರಿಚಯ ಮಾಡಬೇಕೆಂಬ ಉದ್ದೇಶದಿಂದ ಇಲ್ಲಿನ ಕಲೆ ಪ್ರತಿಬಿಂಬಿಸುವ ಮನರಂಜನಾತ್ಮಕ ಆಟಗಳನ್ನೇ ಇಲ್ಲಿ ತೋರಿಸಿದ್ದೇವೆ ಎಂಬುದು ಬಿಐಎಲ್ ನಿರ್ದೇಶಕ ಸಂಜಯ್ ರೆಡ್ಡಿ ಮಾತು. ಇಲ್ಲಿ ಕಲಾಕ್ಷೇತ್ರ, ವಿಜ್ಞಾನಕ್ಷೇತ್ರ ಹಾಗೂ ಕ್ರೀಡಾಕ್ಷೇತ್ರ ಎಂದು ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಕಲಾಕ್ಷೇತ್ರದಲ್ಲಿ ಬಣ್ಣ ತುಂಬುವ, ಹೊಸ ಕಲಾಕೃತಿ ರಚಿಸುವ ಆಟಗಳಿದ್ದರೆ ವಿಜ್ಞಾನಕ್ಷೇತ್ರದಲ್ಲಿ ವಿಜ್ಞಾನದ ಮಾದರಿಗಳನ್ನು ತಯಾರಿಸುವ ಬಗೆ ಹೇಳಿಕೊಡಲಾಗುತ್ತದೆ. ಸ್ಕೆತೊಸ್ಕೋಪ್, ಪೆರಿಸ್ಕೋಪ್, ಬೆರಿಸ್ಕೋಪ್ ತಯಾರಿಕೆಗೆ ಬೇಕಾದ ಉತ್ಪನ್ನಗಳನ್ನೂ ಮಕ್ಕಳಿಗೆ ಉಚಿತವಾಗಿ ನೀಡಿ ಮಾಡುವ ವಿಧಾನವನ್ನೂ ವಿವರಿಸಲಾಗುತ್ತದೆ.ನಿಲ್ದಾಣವು, ವಿಮಾನದಲ್ಲಿ ಹಾರಾಡುವ ಮಂದಿಗಷ್ಟೇ ಸೀಮಿತ ಎನ್ನುವ ಮನೋಭಾವ ದೂರಮಾಡಬೇಕೆಂಬ ಕಾರಣಕ್ಕೆ ಈ ಪ್ರದರ್ಶನವನ್ನು ಸಾರ್ವಜನಿಕರಿಗೂ ಮುಕ್ತವಾಗಿಡಲಾಗಿದೆ.

 

ವಿಮಾನ ನಿಲ್ದಾಣದ ಹೊರಗಷ್ಟೆ ಅಲ್ಲದೆ ಒಳಗೂ ಇದೇ ತೆರನಾದ ಪ್ರದರ್ಶನ ಏರ್ಪಡಿಸಿದ್ದು ಚೆಕ್-ಇನ್ ಆಗಿ ತಮ್ಮ ವಿಮಾನಕ್ಕಾಗಿ ಕಾಯುವ ಮಕ್ಕಳು ಈ ಆಟಗಳಲ್ಲಿ ತೊಡಗಿಕೊಳ್ಳಬಹುದು. `ಮಕ್ಕಳಿಗೆ ಮಾತ್ರವಲ್ಲದೆ ಯುವ ಹೃದಯಗಳಿಗೂ ಇದು ಮನರಂಜನೆ ನೀಡಲಿದೆ.

`ಮಾಲ್ಗುಡಿ ಡೇಸ್~ ಕತೆಗಳೇ ಈ ಪ್ರದರ್ಶನಕ್ಕೆ ಸ್ಪೂರ್ತಿ. ಇಲ್ಲಿನ ಆಟಗಳು ನಿಮ್ಮನ್ನು 50 ವರ್ಷಗಳ ಹಿಂದಿನ ನೆನಪುಗಳು ಮರುಕಳಿಸುವಂತೆ ಮಾಡಲಿವೆ~ ಎನ್ನುತ್ತಾರೆ ಹಣಕಾಸು ವಿಭಾಗದ ನಿರ್ದೇಶಕ ಬಿ. ಭಾಸ್ಕರ್.24ರ ವರೆಗೂ ಪ್ರದರ್ಶನ

ಈ ಪ್ರದರ್ಶನ ಇದೇ 24ರವರೆಗೆ ಮುಂದುವರೆಯಲಿದ್ದು 79 ಸರ್ಕಾರೇತರ ಸಂಸ್ಥೆಗಳ ಮಕ್ಕಳನ್ನು ವೀಕ್ಷಣೆಗಾಗಿ ಆಹ್ವಾನಿಸಲಾಗಿದೆ. ಇದರಿಂದ ನೂರಾರು ಬಡ, ಅನಾಥ ಮಕ್ಕಳ ವಿಮಾನ ನಿಲ್ದಾಣ ನೋಡುವ ಕನಸು ನನಸಾಗುತ್ತಿದೆ. ಎಳೆ ಹೃದಯಗಳಲ್ಲಿ ಭವಿಷ್ಯದ ಕನಸನ್ನೂ ಬಿತ್ತಿ ಹೊಸತನ ಮೂಡಿಸಲಿದೆ.ಪ್ರತಿನಿತ್ಯ ಪಯಣಿಸುವ ನೂರಾರು ಪ್ರಯಾಣಿಕರೂ ಈ ಆಟಗಳ ಸವಿ ಉಣ್ಣುತ್ತಿದ್ದಾರೆ. ಈ ಎಲ್ಲಾ ಕಲಾಕೃತಿಗಳ ನಿಮಾರ್ತೃ, ಕಲಾವಿದ ಗುಜ್ಜರ್. ಮೂರು ವಾರದಲ್ಲಿ ಆತ ಈ `ಪ್ಲೇ ಪೋರ್ಟ್~ ತಯಾರಿಸಿದ್ದಾರೆ ಎನ್ನುತ್ತಾರವರು.ಮಕ್ಕಳ ಮನರಂಜನೆಗೆಂದೇ ಅಲ್ಲಿ ಮ್ಯಾಜಿಕ್ ಶೋ ಏರ್ಪಡಿಸಲಾಗಿತ್ತು. ಕತೆ ಹೇಳುತ್ತಲೇ ಜಾದೂ ಪ್ರದರ್ಶಿಸಿದ ಸಿಲೆಸ್ಟರ್, ಊದಿದ್ದ ಬಲೂನನ್ನು ಇಡಿಯಾಗಿ ನುಂಗಿದರು, ಖಾಲಿ ಪರ್ಸ್ ನಿಂದ ಇಲಿ ಹೊರತೆಗೆದರು, ಮುಚ್ಚಿಟ್ಟ ಬಂಗಾರದ ಪೆಟ್ಟಿಗೆಯಿಂದ ಬಣ್ಣದ ಬುಗ್ಗೆ ಹೊರತೆಗೆದರು, ಬೆರಳಿಗೆ ಟೊಪ್ಪಿ ಇಟ್ಟರು, ಹರಿದು ಚೂರಾದ ಪೇಪರನ್ನು ಮತ್ತೆ ಒಂದಾಗಿಸಿದರು, ಮಂತ್ರದಂಡದಿಂದ ಹೂಗುಚ್ಛ ಬಂದಾಗ ಮಕ್ಕಳಿಂದ ಚಪ್ಪಾಳೆಯ ಸುರಿಮಳೆ.ಎಲ್ಲಿಂದಲೋ ಹಾರಿ ಬರುವ ಮಕ್ಕಳಿಗೆ ವಿಮಾನ ನಿಲ್ದಾಣದಲ್ಲೇ ಸಂಸ್ಕೃತಿಯ ಪರಿಚಯವಾಗಬೇಕು, ಅವರ ಬದುಕಿನ ನಿಜವಾದ ಪಯಣ ಇಲ್ಲಿಂದಲೇ ಆರಂಭವಾಗಬೇಕು ಎಂಬ ಉದ್ದೇಶ ಆಯೋಜಕರದ್ದು.ನಿಮ್ಮ ಮಕ್ಕಳನ್ನೂ ವಿಮಾನ ನಿಲ್ದಾಣಕ್ಕೆ ಕರೆದೊಯ್ದು ಈ ಆಟಗಳ ಪರಿಚಯ ಮಾಡಿಸಬಹುದು. ಹಾಗೆಯೇ ನಿಲ್ದಾಣಕ್ಕೂ ಒಂದು ರೌಂಡು ಹೊಡೆದು ಅವರಲ್ಲಿ ಹೊಸ ಕನಸು ಟಿಸಿಲೊಡೆಯುವಂತೆ ಮಾಡಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry