ಮಂಗಳವಾರ, ಮೇ 24, 2022
31 °C

ವಿಮಾನ ನಿಲ್ದಾಣ ಟರ್ಮಿನಲ್ ಉದ್ಘಾಟನೆ ಸಮಾರಂಭ: ಪ್ರಧಾನಿ ಸಿಂಗ್ ಆಶಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುವನಂತಪುರಂ (ಪಿಟಿಐ): ದೇಶದಾದ್ಯಂತ ವಿಶ್ವದರ್ಜೆಯ ವಿಮಾನಯಾನ ಸೇವೆ ನೀಡಲು ಅಗತ್ಯ ಮೂಲಸೌಕರ್ಯ ಕಲ್ಪಿಸುವ ಉದ್ದೇಶದಿಂದ ಅಂದಾಜು 120 ಶತಕೋಟಿ ರೂಪಾಯಿ ಬಂಡವಾಳ ಆಕರ್ಷಿಸುವ ಯೋಜನೆ ರೂಪಿಸಲಾಗಿದೆ ಎಂದು ಪ್ರಧಾನಮಂತ್ರಿ ಮನಮೋಹನಸಿಂಗ್ ಹೇಳಿದ್ದಾರೆ.ಇಲ್ಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡ ಉದ್ಘಾಟಿಸಿ  ಮಾತನಾಡಿದ ಅವರು, ರೈಲ್ವೆ ಪ್ರಯಾಣಕ್ಕೆ ಪೈಪೋಟಿ ನೀಡುವಂತಹ ಅಗ್ಗದ ಪ್ರಯಾಣ ದರ ಮತ್ತು ಸಾಕಷ್ಟು ಸಂಖ್ಯೆಯ ವಿಮಾನ ಸಂಚಾರ ಆರಂಭಿಸುವ ಯೋಜನೆ ಇದೆ ಎಂದರು.

ಈ ಕ್ರಾಂತಿಕಾರಿ ಬದಲಾವಣೆಯಿಂದ ದೇಶದ ವಿಮಾನಯಾನ ಕ್ಷೇತ್ರದ ಸಂಪೂರ್ಣ ಚಿತ್ರಣವೇ ಬದಲಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.ಕಳೆದ ಏಳು ವರ್ಷಗಳಲ್ಲಿ ವ್ಯಾಪಾರ, ವಹಿವಾಟು, ಉದ್ಯಮ, ಪ್ರವಾಸೋದ್ಯಮದ ಕ್ಷೇತ್ರದಲ್ಲಾದ ವ್ಯಾಪಕ ಬೆಳವಣಿಗೆಯಿಂದಾಗಿ ದೇಶದಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಹೀಗಾಗಿ ದೇಶದ ವಿಮಾನ ನಿಲ್ದಾಣಗಳ ಆಧುನೀಕರಣ ಮತ್ತು ಮೂಲಸೌಕರ್ಯ ವೃದ್ಧಿಗೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು. ಅಗ್ಗದ ದರದ ಮತ್ತು ಸಾಕಷ್ಟು ಸಂಖ್ಯೆಯ ವಿಮಾನ ಸಂಚಾರದಿಂದ ದೇಶದ ಸಾರಿಗೆ ಕ್ಷೇತ್ರದ ಚಿತ್ರಣವೇ ಬದಲಾಗಲಿದೆ.ಖಾಸಗಿಯವರ ಸಹಭಾಗಿತ್ವ ವಿಮಾಣ ನಿಲ್ದಾಣಗಳು ಆಧುನೀಕರಣ, ಪ್ರಯಾಣಿಕರಿಗೆ ಉತ್ತಮ ದರ್ಜೆಯ ಸೇವೆ, ಬಿಗಿ ಭದ್ರತೆ ಒದಗಿಸಲಾಗವುದು ಎಂದು ಸಿಂಗ್ ಅವರು ತಿಳಿಸಿದರು.

ನಿರ್ಣಾಯಕ ಪಾತ್ರ: ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಪತ್ರಕರ್ತರ ಪಾತ್ರ ನಿರ್ಣಾಯಕವಾಗಿದ್ದು, ಬದಲಾವಣೆಯ ತರಲು ಶ್ರಮಿಸಬೇಕು ಎಂದು ಅವರು ಕರೆ ನೀಡಿದರು. ಕೇರಳ ಕೌಮುದಿ ಪತ್ರಿಕೆಯ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಬ್ರಹ್ಮೋಸ್ ಘಟಕಕ್ಕೆ ಭೇಟಿ : ಪ್ರಧಾನಿ ಮನಮೋಹನ್ ಸಿಂಗ್ ಅವರು ಶನಿವಾರ ಇಲ್ಲಿರುವ ದೇಶದ ಪ್ರತಿಷ್ಠಿತ ಸೂಪರ್‌ಸಾನಿಕ್ ಚಿಮ್ಮುವ ಕ್ಷಿಪಣಿ  ‘ಬ್ರಹ್ಮೋಸ್’ನ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಕ್ಷಿಪಣಿ ಕಾರ್ಯಾಚರಣೆಯ ವಿವಿಧ ಹಂತಗಳ ಬಗ್ಗೆ ಮಾಹಿತಿ ಪಡೆದರು.‘ರಕ್ಷಣಾ ಸಚಿವ ಎ.ಕೆ.ಆಂಟನಿ ಅವರ ಜೊತೆಯಲ್ಲಿ ಬ್ರಹ್ಮೋಸ್ ಕ್ಷಿಪಣಿಯ ಘಟಕದಲ್ಲಿ ಸಿಂಗ್ ಸುತ್ತಾಡಿದರು ಮತ್ತು ಕ್ಷಿಪಣಿಯ ವಿವಿಧ ಭಾಗಗಳ ಜೋಡಣಾ ವಿಧಾನಗಳ ಕುರಿತು ತಿಳಿಯಲು  ಆಸಕ್ತಿ ತೋರಿದರು’ ಎಂದು ಬ್ರಹ್ಮೋಸ್ ಏರೊಸ್ಪೇಸ್‌ನ ಅಧಿಕಾರಿಯೊಬ್ಬರು ತಿಳಿಸಿದರು.‘ಕ್ಷಿಪಣಿಗಳ ಸಂಯೋಜನೆಯಲ್ಲಿ ಅನುಸರಿಸುವ ವಿವಿಧ ಪ್ರಕ್ರಿಯೆಗಳ ಕುರಿತು  ಮತ್ತು ಬ್ರಹ್ಮೋಸ್ ಏರೊಸ್ಪೇಸ್‌ನ ವಿಸ್ತರಣಾ ಯೋಜನೆಯ ಬಗ್ಗೆ ಸಿಂಗ್ ಅವರು ಮಾಹಿತಿ ಪಡೆದರು’ ಎಂದು ಅಧಿಕಾರಿ ತಿಳಿಸಿದರು.ಕೇರಳ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.