ಸೋಮವಾರ, ಏಪ್ರಿಲ್ 12, 2021
23 °C

ವಿಮಾನ ಪುರುಷ, ಸಮಾನ ಪುರುಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಮಾನ ಪುರುಷ, ಸಮಾನ ಪುರುಷ

ಎರಡು ಕತೆಗಳು/ ಚಿಂತಾಮಣಿ ಕೊಡ್ಲೆಕೆರೆ

ವಿಮಾನ ಪುರುಷನಿಗೆ ಸಮಾನರು ಈ ಜಮಾನದಲ್ಲೇ ಯಾರೂ ಇಲ್ಲ. ಒಂದು ದಿನ ನಾನು ಅವನಿಗೆ ಅದನ್ನೇ ಹೇಳಿದೆ.`ವಿಮಾನ ಪುರುಷ, ನಮಾನ (ನಮನ) ನಿನಗೆ, ನೀನೆಂದರೆ ನನಗೆ ಅಭಿಮಾನ. ನಾನೆಂದರೆ ನಿನಗೆ ಬಿಗುಮಾನ. ಆದರೂ ನನಗಿಲ್ಲ ಅವಮಾನ, ಉಂಟು ಅಭಿಮಾನ. ವಿಮಾನ, ವಿಮಾನ ಯಾರೂ ನಿನಗೆ ಇಲ್ಲ ಸಮಾನ. ಬೇಕಾದರೆ ನೋಡು ಇಡೀ ಜಮಾನ~.ವಿಮಾನ ಪುರುಷ ಕಿರೀಟ ಸರಿಪಡಿಸಿಕೊಳ್ಳುತ್ತಾ ನಕ್ಕ- `ಅಯ್ಯಾ, ನೀನು ಎಳೆಯ. ಆದರೂ ನನ್ನ ಕಿರಿ ಗೆಳೆಯ. ನನಗೊಬ್ಬಳು ಮಗಳಿದ್ದರೆ ನೀನೇ ನನ್ನ ಅಳಿಯ! ಮೊಳಕೆಯಲ್ಲೇ ಅರಿತಿರುವೆ ಸಿರಿ ಬೆಳೆಯ. ಅಹುದಹುದು ನಾನು ವಿಮಾನ ಪುರುಷ, ಇಂದಿನಿಂದ ನೀನು ನನಗೆ ಸಮಾನ ಪುರುಷ~.ವಿಮಾನ ಪುರುಷನ ಭುಜಗಳ ಮೇಲೆ ಸಮಾನ ಪುರುಷನಾಗಿ ಕೂತೆ. ಅವನ ಭುಜಗಳು ನೀಲಾಕಾಶಕ್ಕೆ ಏರುತ್ತಿದ್ದಂತೆ ರೆಕ್ಕೆಗಳಾಗಿ ಹರಡಿಕೊಂಡವು. ಮೋಡಗಳ ಜೊತೆ ನಾನು ಪ್ರೀತಿಯಿಂದ ಮಾತನಾಡಿದೆ. ಗಗನ ಸಖಿಯರು ಆಕಾಶದಿಂದ ನರ್ತಿಸುತ್ತಾ ಕೆಳಗಿಳಿದು ವಿಮಾನ ಪುರುಷನ ಒಡಲಲ್ಲಿ ಸೇರಿಕೊಂಡರು.ಹಾಗೆ ಸೇರಿಕೊಳ್ಳುವ ಮೊದಲು ಚಂದ್ರಲೋಕದಿಂದ ತಂದ ಚಾಕಲೇಟ್‌ಗಳನ್ನು ಕೈತುಂಬಾ ಕೊಟ್ಟು ನನ್ನ ಕೆನ್ನೆ ಹಿಂಡಿದರು. `ಇನ್ನೊಮ್ಮೆ ಕೆನ್ನೆ ಹಿಂಡಲು ಇಷ್ಟೇ ಚಾಕಲೇಟ್‌ಗಳನ್ನು ಕೊಡಬೇಕಾಗುತ್ತದೆ~ ಎಂದೆ. ಗಗನಸಖಿಯರು ನಗುತ್ತಾ `ಆಗಲಿ ನಮ್ಮ ರಾಜ~ ಎಂದು ಮತ್ತೆ ಕೆನ್ನೆ ಹಿಡಿದರು. ಅವರ ನಗುವೇ ಚಾಕಲೇಟ್ ರೂಪ ತಾಳಿ ನನ್ನ ಕಿಸೆಗಳಲ್ಲಿ ಸೇರಿಕೊಂಡಿತು! ಇನ್ನಷ್ಟು ನಗುವಿನ ಅಲೆಗಳು ಹೂಗಳಾಗಿ ನೆಲದ ಮೇಲೆ ಸುರಿದವು.`ವಿಮಾನಾ, ಕೆಲವು ಚುಕ್ಕಿಗಳನ್ನು ಆಟಕ್ಕೆ ತೆಗೆದುಕೊಳ್ಳಲೇ?~ ಎಂದೆ. ಬಾನ ಚುಕ್ಕಿಗಳು ನನ್ನ ಕೈಗೆ ಎಟುಕುವಂತಿದ್ದವು. `ಹ್ಞೂಂ~ ಎಂದನು ವಿಮಾನ ಪುರುಷ. ಕೆಲವು ಕರಿ ಮೋಡಗಳನ್ನು ನನ್ನ ಕಿಸೆಯಲ್ಲಿದ್ದ ಪೆನ್ನಿನಿಂದಲೇ ಚುಚ್ಚಿದೆ, ಬಳ ಬಳ ನೀರು ಸುರಿಯಿತು. ಕೊಡೆ ಹಿಡಿದು ಹೋಗುತ್ತಿದ್ದ ಚಂದಮಾಮ ಕಂಡ.`ಹಲೋ ಸರ್, ನಮಸ್ಕಾರ~ ಎಂದೆ. `ಎಲಾ, ನೀನೂ ಮೇಲೆ ಬಂದುಬಿಟ್ಟಿದ್ದೀಯೇನೋ, ಮನೆಯಲ್ಲಿ ಅಪ್ಪ ಅಮ್ಮನಿಗೆ ಹೇಳಿ ಬಂದಿದೀಯಾ? ಅವರು ಗಾಬರಿಯಾದಾರು~ ಎಂದ ಚಂದಮಾಮ. ನಾನು ಅದಕ್ಕೇನೂ ಹೇಳಲಿಲ್ಲ. ಅವನ ಬಳಿ ಇದ್ದ ಹತ್ತಿ ಮೊಲವನ್ನು ನನಗೆ ಪ್ರೀತಿಯ ಕಾಣಿಕೆಯಾಗಿ ಕೊಟ್ಟ. ಅದು ತುಂಬಾ ಚೆಲುವಾಗಿತ್ತು. ಅದರ ಪಿಳಿಪಿಳಿ ಕಣ್ಣು ನೋಡುತ್ತ ಮೈಮರೆತೆ. ಇನ್ನೇನು ಬಿದ್ದೇ ಬಿಡುತ್ತಿದ್ದೆ. `ಸಮಾನಾ~ ಎಂದು ಕೂಗಿ ಎಚ್ಚರಿಸಿದ ವಿಮಾನ.ಗಂಟೆಗಟ್ಟಲೆ ಆಗಸದಲ್ಲಿ ತೇಲಿ ಆಡಿ ಕೆಳಗಿಳಿಯತೊಡಗಿದ ವಿಮಾನಾ. `ನಿಧಾನಾ~ ಎಂದು ಕೂಗಿದೆ ನಾನು, ಸಮಾನಾ ವಿಮಾನ ಪುರುಷ ಭೂಮಿಗೆ ಪಾದ ಸ್ಪರ್ಶ ಮಾಡುತ್ತಿದ್ದಂತೆ ಒಮ್ಮೆ ಅವನ ಮೈ ನಡುಗಿತು. `ಭೂಕಂಪವಾಯಿತೋ~ ಎಂದು ಒಮ್ಮೆ ಕಂಪಿಸಿದೆ ನಾನು. ಮತ್ತೆ ಅವನ ರೆಕ್ಕೆಗಳು ಭುಜಗಳಾದವು. ವಿಮಾನ ಪುರುಷ ಕಿರೀಟ ಸರಿಪಡಿಸಿಕೊಳ್ಳುತ್ತಾ ಮೀಸೆ ತಿರುವುತ್ತಾ, ನಿಧಾನವಾಗಿ ನನ್ನನ್ನು ಅವನ ಭುಜದಿಂದ ಕೆಳಗಿಳಿಸಿದ.

`ಹೇಗಿತ್ತು ಸಮಾನ ಪುರುಷ?~`ತುಂಬ ಮಜವಾಗಿತ್ತು, ವಿಮಾನ ಪುರುಷ~

ವಿಮಾನ ಪುರುಷನ ಕೈ ಕುಲುಕಿದೆ.

`ನಿಜಕ್ಕೂ ನೀನೊಬ್ಬ ಅಸಮಾನ ಪುರುಷ~ ಎನ್ನುತ್ತಾ ಗಗನ ಸಖಿಯರು ಕೆನ್ನೆ ಹಿಂಡಲು ಬಂದರು. ನಾನು ತಪ್ಪಿಸಿಕೊಂಡು ಓಡತೊಡಗಿದೆ. ಅವರ ಹೂನಗೆ ನನ್ನನ್ನು ಬೆನ್ನಟ್ಟಿ ಬಂದು ಚಾಕಲೇಟ್ ರೂಪದಲ್ಲಿ ಬಾಯೊಳಗೆ ಸೇರಿಕೊಂಡಿತು. ಹಿಂತಿರುಗಿ ನೋಡಿದರೆ ವಿಮಾನ ಪುರುಷ ಟಾಟಾ ಮಾಡುತ್ತಿದ್ದ. ಗಗನಸಖಿಯರು ಕೈ ಬೀಸುತ್ತಾ ಆಗಸಕ್ಕೇರುತ್ತಿದ್ದರು.ವಿರಳ ಸರಳ“ಸರಳಾ, ನಿನ್ನಂಥ ಹುಡುಗಿಯರೇ ವಿರಳಾ”

“ಹೌದಾ ಅಂಕಲ್‌” ಅನ್ನುತ್ತ ಸರಳಾ, ಕಚ್ಚುತ್ತಾಳೆ ಬೆರಳು.

“ಕಚ್ಚಿದರೆ ಬೆರಳಾ, ಕಚ್ಚುವೆನು ಕೊರಳಾ” ಎಂದು ನಾನು ಎಚ್ಚರಿಸಿದರೆ `ಕಚ್ಚಿ ನೋಡೋಣ~ ಎನ್ನುತ್ತ ಸರಳಾ, ಮುಚ್ಚಿಕೊಳ್ಳುತ್ತಾಳೆ ಕೊರಳಾ. ಅಣಕಿಸುತ್ತ ಕೇಳುತ್ತಾಳೆ ಸರಳಾ- “ಕಚ್ಚಿಸಿಕೊಳ್ಳೋಕೆ ಕೊರಳಾ, ಅಂಕಲ್, ನನಗೇನು ಮರುಳಾ?”ಮರುಳು ಅಂದಿದ್ದೇ ನೆನಪಾಯಿತು, ಸರಳಳಿಗೆ ಮರಳು ಇಷ್ಟ. ನಸುಕಿನಲ್ಲೂ ಉಸುಕಿನಲ್ಲಾಡಲು ಹೋಗುತ್ತಾಳೆ, ಮನೆ ಕಟ್ಟುತ್ತಾಳೆ. ಸಮುದ್ರದ ಅಲೆಗಳಿಗೆ ಸರಳಾ ಎಂದರೆ ಪ್ರೀತಿ. ಅವಳು ಕಟ್ಟಿದ ಉಸುಕಿನ ಮನೆಗಳನ್ನು ಸೆಳೆದೊಯ್ಯುತ್ತವೆ. ಕೊಂಕಿಸಿ ಕೊರಳ, ಹೇಳುವಳು ಸರಳಾ- “ಅಲೆಗಳೇ, ನಾನು ಹೇಳೋದು ಕೇಳಿ, ನನ್ನ ಉಸುಕಿನ ಮನೆ, ಕಾಯೋದು ನಿಮ್ಮ ಹೊಣೆ”.ಹೀಗಿರುತ್ತ ಒಂದು ದಿನ ಸರಳಳಿಗೆ ಬಂತು ಸಿಟ್ಟು, ಬಿಡಲಿಲ್ಲ ತನ್ನ ಪಟ್ಟು. ಅಲೆಗಳೂ ಬಿಡುತ್ತಿಲ್ಲ ಗುಟ್ಟು. ರೇಗಿದಳು ಸರಳಾ: “ಎಲ್ಲಿವೆ ನನ್ನ ಮನೆ? ಕೊಡದಿದ್ರೆ ಇವತ್ತೇ ಗೆಳೆತನಕ್ಕೆ ಕೊನೆ.”ಸರಿ, ಉಪಾಯವಿಲ್ಲದೆ, ಅಪಾಯವಿಲ್ಲದೆ, ಮೈಗೆ ನೀರು ಸೋಕದಂತೆ ಜಾದು ಮಾಡಿ ಅಲೆಗಳು ಸರಳಳನ್ನು ಸಮುದ್ರದೊಳಕ್ಕೆ ಕರೆದೊಯ್ದವು. ಸರಳ ಕಟ್ಟಿದ ಮನೆಗಳು ಸಮುದ್ರರಾಜನ ಅರಮನೆಯಲ್ಲಿ ಭದ್ರವಾಗಿವೆ. ರಾಜಕುಮಾರಿಯ ಆಸನದಲ್ಲಿ ಸರಳಾ ಕೂತಳು. ಅಲೆಗಳು ಚಪ್ಪಾಳೆ ತಟ್ಟಿದವು. ಸರಳಳ ಕಣ್ಣಿಗೆ ನೀರು ಬಿತ್ತು. “ಏನಿದು ಹುಡುಗಾಟ?” ಎಂದು ರಾಜಕುಮಾರಿ ಸರಳಾ ಸಿಡುಕಿದಳು. ಅಲೆಗಳು ಕ್ಷಮೆ ಕೋರಿದವು. ಅಷ್ಟು ಹೊತ್ತಿಗೆ ಸಮುದ್ರರಾಜ ಬಂದ.“ಸರಳಾ, ನಿನ್ನಂಥ ಹುಡುಗಿಯರೇ ವಿರಳಾ” ಎಂದ ಸಮುದ್ರರಾಜ.ನನ್ನಂತೆ ಮರಳ ಮನೆ ಕಟ್ಟೋರೂ ವಿರಳಾ” ಎಂದಳು ಸರಳಾ, ಕೊಂಕಿಸುತ್ತ ಕೊರಳಾ ತಿರುವುತ್ತ ಬೆರಳಾ.“ಸರಳೆ, ನೀನು ಬುದ್ಧಿವಂತ ತರಳೆ” ಎಂದನು ಸಮುದ್ರರಾಜ, ನಗುತ್ತ.

ಅವನು ತರಳೆ ಎಂದಿದ್ದು ಸರಳೆಗೆ ತರಲೆ ಎಂದ ಹಾಗೆ ಕೇಳಿಸಿ ರೇಗಾಡಿಬಿಟ್ಟಳು. ಸಮುದ್ರರಾಜ ಬೆವರೊರೆಸಿಕೊಂಡ. ಅವನ ಬೆವರು ನೊರೆ ನೊರೆಯಾಗಿ ಸಮುದ್ರ ಸೇರಿತು. ರಾಜಪೀಠದ ಕೆಳಗಿದ್ದ ಜಿರಳೆ ಹೊರಬಂದು, “ಸಮುದ್ರರಾಜ ತರಳೆ ಎಂದ, ತರಲೆ ಎನ್ನಲಿಲ್ಲ” ಎಂದು ಸರಳೆಗೆ ಹೇಳಿ ಸಮಾಧಾನಪಡಿಸಿತು. ಆದರೂ ಸರಳೆ `ನಾನು ತರಲೆ ಅಲ್ಲ~ ಎಂದು ಅಳುತ್ತಲೇ ಇದ್ದಳು.“ಸರಳಾ, ತೆಗೆದುಕೋ ನಿನ್ನ ಕಿವಿಗಳಿಗೆ ಹರಳಾ” ಎಂದು ಸಮುದ್ರರಾಜ ಹೊಳೆ ಹೊಳೆವ ಹರಳಿನ ಕುಡುಕು ಕೊಟ್ಟ ಮೇಲೆ ಸರಳಾ ಗೆಲುವಾದಳು. ಸಮುದ್ರರಾಜನಿಗೂ, ಅಲೆಗಳಿಗೂ ಉಸುಕಿನ ಮನೆಗಳನ್ನು ಕಾಣಿಕೆಯಾಗಿ ಕೊಟ್ಟಳು. ಅಲೆಗಳ ಮೇಲಿಂದ ಎದ್ದು ಮತ್ತೆ ಬೇಲೆಗೆ ಬಂದಳು.ಕೊಂಕಿಸುತ್ತ ಕೊರಳ, ಆಡಿಸುತ್ತ ಬೆರಳ, ಮಿಂಚಿಸುತ್ತ ಹರಳ, ಒಟ್ಟುಗೂಡಿಸಿ ಮರಳ, ಮನೆ ಕಟ್ಟುವಳು ಸರಳ. ಅಂಥ ಮನೆಗಳು ಮೂರು ಲೋಕದಲ್ಲೂ ವಿರಳ. ಸಮುದ್ರರಾಜ ಕೊಡುತ್ತಲೇ ಇರುವವನು ಹರಳ. ನೋಡಿದವರು ಕಚ್ಚುವರು ಬೆರಳ!

“ಆಹಾ ಸರಳ, ನಿನ್ನಂಥ ಜಾಣೆಯರು ಈ ಜಗತ್ತಲ್ಲೇ ವಿರಳ”. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.