ಮಂಗಳವಾರ, ಮಾರ್ಚ್ 2, 2021
23 °C
2015ರ ಡಿ. 4ರಂದು 63,769 ಪ್ರಯಾಣಿಕರು ಕೆಐಎ ಬಳಕೆ

ವಿಮಾನ ಪ್ರಯಾಣಿಕರಲ್ಲಿ ಶೇ 25ರಷ್ಟು ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಮಾನ ಪ್ರಯಾಣಿಕರಲ್ಲಿ ಶೇ 25ರಷ್ಟು ಹೆಚ್ಚಳ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎ) 2015ರಲ್ಲಿ ಒಟ್ಟಾರೆ 1.80 ಕೋಟಿ ಜನ ಪ್ರಯಾಣ ಬೆಳೆಸಿದ್ದು, ಹಿಂದಿನ ವರ್ಷಕ್ಕೆ (2014) ಹೋಲಿಸಿದರೆ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ 25.2ರಷ್ಟು ಏರಿಕೆ ಆಗಿದೆ.ಕೆಐಎ ತನ್ನ ವಾರ್ಷಿಕ ಸಾರಿಗೆ ವರದಿಯನ್ನು ಬಿಡುಗಡೆ ಮಾಡಿದೆ. ದೇಶಿ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ 27.4ರಷ್ಟು ವೃದ್ಧಿಯಾಗಿದ್ದರೆ, ವಿದೇಶಿ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ 15.8ರಷ್ಟು ಏರಿಕೆಯಾಗಿದೆ.  ನಿತ್ಯ ಬಂದುಹೋಗುವ ವಿಮಾನಗಳ ಸಂಖ್ಯೆ 404ಕ್ಕೆ ಹೆಚ್ಚಿದೆ.2014ರ ಅಂತ್ಯದಲ್ಲಿ ಕೆಐಎ ಒಟ್ಟಾರೆ 1.5 ಕೋಟಿ ಪ್ರಯಾಣಿಕರನ್ನು ಕಂಡಿತ್ತು. ಆಗ ಮಧ್ಯಮ ಗಾತ್ರದ (1.5 ಕೋಟಿ ಪ್ರಯಾಣಿಕರಿಂದ 2.5 ಕೋಟಿ ಪ್ರಯಾಣಿಕರವರೆಗೆ) ವಿಮಾನ ನಿಲ್ದಾಣದ ವ್ಯಾಪ್ತಿಗೆ ಕೆಐಎ ಸೇರಿತ್ತು. ದೇಶದ ಮೂರನೇ ಅತಿ ದೊಡ್ಡ ವಿಮಾನ ನಿಲ್ದಾಣ ಎಂಬ ಹಿರಿಮೆಗೂ ಅದು ಪಾತ್ರವಾಗಿತ್ತು.2015ರ ಡಿಸೆಂಬರ್‌ 4ರಂದು ಕೆಐಎಯನ್ನು 63,769 ಪ್ರಯಾಣಿಕರು ಬಳಕೆ ಮಾಡಿದರು. ಈ ವಿಮಾನ ನಿಲ್ದಾಣ ಆರಂಭವಾದ ಇಲ್ಲಿಯವರೆಗೆ ಒಂದೇ ದಿನದಲ್ಲಿ ಅತ್ಯಧಿಕ ಪ್ರಯಾಣಿಕರನ್ನು ಕಂಡ ಹೆಗ್ಗಳಿಕೆ ಆ ದಿನ ಪಾತ್ರವಾಗಿದೆ.ಕಳೆದ ಸೆಪ್ಟೆಂಬರ್‌ನಲ್ಲಿ ನೇಪಾಳ ಏರ್‌ಲೈನ್ಸ್‌, ಥಾಯ್‌ ಏರ್‌ ಏಷ್ಯಾ ಮತ್ತು ಕುವೈತ್‌ ಏರ್‌ವೇಸ್‌ ಕೆಐಎಯಿಂದ ವಿಮಾನ ಹಾರಾಟ ಆರಂಭಿಸಿವೆ. ಮಲೇಷ್ಯಾ ಮತ್ತು ಇಥಿಯೋಪಿಯಾ ವಿಮಾನ ಸಂಸ್ಥೆಗಳಿಂದ ಸರಕು ಸೇವೆಯನ್ನೂ 2015ರಲ್ಲೇ ಆರಂಭಿಸಲಾಗಿದೆ. ಅದೇ ವರ್ಷ ದೇಶೀಯವಾಗಿ ಜೋಧ್‌ಪುರ, ರಾಜ್‌ಕೋಟ್‌, ಮಧುರೈ ಮತ್ತು ಕಡಪಾ, ಅಂತರರಾಷ್ಟ್ರೀಯವಾಗಿ ಸ್ಯಾನ್‌ ಫ್ರಾನ್ಸಿಸ್ಕೊ ಹಾಗೂ ಕಠ್ಮಂಡು ನಗರಗಳಿಗೆ ನೇರ ವಿಮಾನಯಾನ ಶುರುವಾಗಿದೆ.ಕೆಐಎಯಿಂದ ನವದೆಹಲಿ, ಮುಂಬೈ ಹಾಗೂ ಪುಣೆ ನಗರಗಳಿಗೆ ಅತ್ಯಧಿಕ ಸಂಖ್ಯೆಯಲ್ಲಿ ಜನ ಪ್ರಯಾಣ ಮಾಡಿದ್ದಾರೆ. 2015ರಲ್ಲಿ ಒಟ್ಟಾರೆ 2.8 ಲಕ್ಷ ಟನ್‌ ಸರಕು ಸಾಗಾಟ ಮಾಡಲಾಗಿದೆ.ಏರ್‌ಪೋರ್ಟ್‌ ಹೋಟೆಲ್‌: ತಾಜ್‌ ಹೋಟೆಲ್ಸ್‌ ಅಂಡ್‌ ಪ್ಯಾಲೇಸಿಸ್‌ ಸಂಸ್ಥೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ಡಿಸೆಂಬರ್‌ನಲ್ಲಿ ‘ತಾಜ್‌ ಬೆಂಗಳೂರು’ ಹೋಟೆಲ್‌ ಆರಂಭಿಸಿದೆ. ಈ ಹೋಟೆಲ್‌ 154 ರೂಮ್‌ಗಳನ್ನು ಹೊಂದಿದ್ದು, 25 ಸಾವಿರ ಚದರ ಅಡಿ ವಿಸ್ತೀರ್ಣದಷ್ಟು ವಿಶಾಲವಾದ ಔತಣಕೂಟದ ಸಭಾಂಗಣವನ್ನು ಒಳಗೊಂಡಿದೆ.ಹೊಸ ರನ್‌ವೇ ನಿರ್ಮಾಣ

ವಿಮಾನ ನಿಲ್ದಾಣದ ಎರಡನೇ ರನ್‌ವೇ ನಿರ್ಮಾಣ ಕಾಮಗಾರಿ 2016ರಲ್ಲಿ ಆರಂಭವಾಗಲಿದೆ. 60 ಮೀಟರ್‌ ಅಗಲ ಹಾಗೂ ನಾಲ್ಕು ಸಾವಿರ ಮೀಟರ್‌ ಉದ್ದದ ಈ ರನ್‌ವೇಯನ್ನು ಕೋಡ್‌ ‘ಎಫ್‌’ ಮಾದರಿ ವಿಮಾನಗಳು ಬಳಕೆ ಮಾಡಬಹುದಾಗಿದೆ.

ಎರಡನೇ ಟರ್ಮಿನಲ್‌ ನಿರ್ಮಾಣಕ್ಕೂ ಅಮೆರಿಕದ ಸ್ಕಿಡ್‌ಮೋರ್‌, ಓಯಿಂಗ್ಸ್‌ ಅಂಡ್‌ ಮೆರಿಲ್‌ ಸಂಸ್ಥೆಯಿಂದ ವಿನ್ಯಾಸ ಮಾಡಿಸಲಾಗುತ್ತಿದೆ. ಈ ಟರ್ಮಿನಲ್‌ ಪೂರ್ಣಗೊಂಡ ಬಳಿಕ ಕೆಐಎ ಹೆಚ್ಚುವರಿಯಾಗಿ ವಾರ್ಷಿಕ 3.5 ಕೋಟಿ ಪ್ರಯಾಣಿಕರನ್ನು

ನಿರ್ವಹಣೆ ಮಾಡುವ ಸಾಮರ್ಥ್ಯ ಹೊಂದಲಿದೆ.ಮಾಹಿತಿ ಒದಗಿಸಲು ಐವಿಆರ್‌ಎಸ್‌

ವಿಮಾನದ ವಿವರ ಒದಗಿಸಲು ಧ್ವನಿ ಸ್ಪಂದನಾ ಮಾಹಿತಿ ವ್ಯವಸ್ಥೆ (ಐವಿಆರ್‌ಎಸ್‌) ಜಾರಿಗೆ ತರಲಾಗಿದೆ. ಈ ಸೇವೆಯನ್ನು ಪ್ರಯಾಣಿಕರು ಶುಲ್ಕರಹಿತವಾಗಿ ‘1800 425 4425’ ದೂರವಾಣಿ ಸಂಖ್ಯೆಯಿಂದ ಪಡೆಯಬಹುದಾಗಿದೆ. ವಾಟ್ಸ್‌ ಆ್ಯಪ್‌ ಮೂಲಕ (888 499 8888) ಪ್ರಯಾಣಿಕರ ಅಭಿಪ್ರಾಯ ಪಡೆಯುವ ವ್ಯವಸ್ಥೆಯನ್ನೂ ಕೆಐಎಯಿಂದ ಆರಂಭಿಸಲಾಗಿದೆ.ಅಂಕಿಅಂಶಗಳು (2015ರಲ್ಲಿ)

1.25 ಲಕ್ಷ  -ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದುಹೋದ ದೇಶಿ ವಿಮಾನಗಳ ಸಂಖ್ಯೆ

21 ಸಾವಿರ -ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದುಹೋದ ವಿದೇಶಿ ವಿಮಾನಗಳ ಸಂಖ್ಯೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.