ವಿಮಾನ ಬದಲು: ತನಿಖೆಗೆ ಪಟೇಲ್‌ಆಗ್ರಹ

7

ವಿಮಾನ ಬದಲು: ತನಿಖೆಗೆ ಪಟೇಲ್‌ಆಗ್ರಹ

Published:
Updated:

ನವದೆಹಲಿ: ತಮ್ಮ ಕುಟುಂಬದ ಸದಸ್ಯರ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲು ವಿಮಾನ ಬದಲಾವಣೆ ಮಾಡಿದ ಪ್ರಕರಣ ಕುರಿತು ತನಿಖೆ ನಡೆಸುವಂತೆ ವಿಮಾನಯಾನ ಖಾತೆ ಮಾಜಿ ಸಚಿವ ಪ್ರಫುಲ್ ಪಟೇಲ್ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.

ನಾಗರಿಕ ವಿಮಾನಯಾನ ಖಾತೆ ಸಚಿವ ಅಜಿತ್ ಸಿಂಗ್ ಅವರಿಗೆ ಪತ್ರ ಬರೆದಿರುವ ಪ್ರಫುಲ್ ಪಟೇಲ್, `ಬಿಸಿನೆಸ್ ಕ್ಲಾಸ್‌ನಲ್ಲಿ ತಮ್ಮ ಕುಟುಂಬದ ಸದಸ್ಯರ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲು ವಿಮಾನ ಬದಲಾವಣೆ ಮಾಡಲಾಗಿತ್ತು ಎಂಬ ಸುದ್ದಿಯಿಂದ ಮುಜುಗರವಾಗಿದೆ. ಮನಸಿಗೂ ನೋವಾಗಿದೆ. ನನ್ನ ಸೂಚನೆ ಮೇಲೆ ವಿಮಾನ ಬದಲಾವಣೆ ಮಾಡಲಾಗಿದೆ ಎಂಬ ಭಾವನೆ ಮೂಡಿಸಲಾಗಿದೆ~ ಎಂದು ಹೇಳಿದ್ದಾರೆ.

ಈ ವಿಷಯದಲ್ಲಿ ಸತ್ಯವೇನೆಂದು ಬಯಲಿಗೆ ಬರಲು ತನಿಖೆ ನಡೆಸಬೇಕು. ಯಾವುದೇ ಸ್ವರೂಪದ ತನಿಖೆ ನಡೆಸುವುದಕ್ಕೂ ತಮ್ಮ ಅಭ್ಯಂತರವಿಲ್ಲ ಎಂದು ಪ್ರಫುಲ್ ಪಟೇಲ್ ಪತ್ರದಲ್ಲಿ ಹೇಳಿದ್ದಾರೆ.

ಪ್ರಫುಲ್ ಪಟೇಲ್ ಬೀಗರಾದ ರಾಜ್ಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಮತ್ತು ಅವರ ಕುಟುಂಬದ ಆರು ಸದಸ್ಯರು 2010ರ ಏಪ್ರಿಲ್ 25ರಂದು ಬಿಸಿನೆಸ್ ಕ್ಲಾಸ್‌ನಲ್ಲಿ ಬೆಂಗಳೂರಿನಿಂದ ಮಾಲ್ಡೀವ್ಸ್‌ಗೆ ಮತ್ತು ಏ. 28ರಂದು ಮಾಲ್ಡೀವ್ಸ್‌ನಿಂದ ಬೆಂಗಳೂರಿಗೆ ಪ್ರಯಾಣಿಸಲು ಏರ್ ಇಂಡಿಯಾ ವಿಮಾನ ಎ- 319 ಬದಲಾವಣೆ ಮಾಡಿ ಎ- 320 ವಿಮಾನ ಓಡಿಸಲಾಯಿತು ಎಂದು `ಮಾಹಿತಿ ಹಕ್ಕು ಕಾಯ್ದೆ~ಯಡಿ ಮಾಹಿತಿ ಬಹಿರಂಗಪಡಿಸಿದ ಬಳಿಕ ಮಾಜಿ ವಿಮಾನಯಾನ ಸಚಿವರು ಈ ಪತ್ರ ಬರೆದಿದ್ದಾರೆ.

ಸುಭಾಷ್‌ಚಂದ್ರ ಅಗರವಾಲ್ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಏರ್ ಇಂಡಿಯಾ, ಬೆಂಗಳೂರಿನಿಂದ ಮಾಲೆಗೆ ಮತ್ತು ಮಾಲೆಯಿಂದ ಬೆಂಗಳೂರಿಗೆ ಮಾಮೂಲಿಯಾಗಿ ಓಡಿಸುವ ಚಿಕ್ಕ ವಿಮಾನವನ್ನು ಬದಲಾಯಿಸಿ ಅಧಿಕ ಆಸನಗಳಿರುವ ದೊಡ್ಡ ವಿಮಾನ ಓಡಿಸಲಾಯಿತು. ಪರಿಣಾಮವಾಗಿ ಸುಮಾರು 50 `ಇಕಾನಮಿ~ ಮತ್ತು ಏಳೆಂಟು `ಬಿಸಿನೆಸ್~ ಕ್ಲಾಸ್  ಸೀಟುಗಳು ಭರ್ತಿಯಾಗದೆ ಖಾಲಿ ಉಳಿದಿದ್ದವು ಎಂದು ಉತ್ತರಿಸಿದೆ. ಆದರೆ, ವಾಣಿಜ್ಯ ಉದ್ದೇಶದಿಂದ ಈ ಬದಲಾವಣೆ ಮಾಡಲಾಗಿದೆ ವಿನಾ ಯಾರಿಗೂ ಅನುಕೂಲ ಮಾಡಿಕೊಡುವುದಕ್ಕೆ ಅಲ್ಲ ಎಂದು ಸ್ಪಷ್ಟಪಡಿಸಿದೆ.

ಏರ್ ಇಂಡಿಯಾ ಕೇಂದ್ರ ಕಚೇರಿ ಮುಂಬೈನಿಂದ ಏ.8ರಂದು ಬಂದಿದ್ದ ಇ-ಮೇಲ್ ಸೂಚನೆ ಹಿನ್ನೆಲೆಯಲ್ಲಿ ವಿಮಾನ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದೆ. ವಿಮಾನದಲ್ಲಿ ಪ್ರಯಾಣಿಸಿದ ಸಚಿವರ ಕುಟುಂಬದ ಸದಸ್ಯರ ಹೆಸರುಗಳನ್ನು ಅರ್ಜಿದಾರರಿಗೆ ಪೂರೈಸಲಾಗಿದೆ. ಸದ್ಯ ಕೈಗಾರಿಕಾ ಖಾತೆ ನಿರ್ವಹಿಸುತ್ತಿರುವ ಪ್ರಫುಲ್ ಪಟೇಲ್ ಕಚೇರಿ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ತಮ್ಮ ಕುಟುಂಬದ ಸದಸ್ಯರ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲು ವಿಮಾನ ಬದಲಾವಣೆ ಮಾಡಿದ ಕುರಿತು ಸಚಿವರಿಗೆ ತಿಳುವಳಿಕೆಯಾಗಲಿ ಅಥವಾ ಮಾಹಿತಿಯಾಗಲಿ ಇರಲಿಲ್ಲ ಎಂದು ತಿಳಿಸಿದೆ.

ಏರ್ ಇಂಡಿಯಾ ಮೊದಲಿಗೆ ಮಾಹಿತಿ ಬಹಿರಂಗ ಪಡಿಸಲು ನಿರಾಕರಿಸಿತ್ತು. ವೈಯಕ್ತಿಕ ಕಾರಣಗಳಿಂದ ಗಣ್ಯರ ಪ್ರಯಾಣದ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿತ್ತು. ಆದರೆ, ಕಳೆದ ತಿಂಗಳು ಮಾಹಿತಿ ಹಕ್ಕು ಆಯೋಗ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಮಾಹಿತಿ ಒದಗಿಸಬೇಕು ಎಂದು ಸೂಚಿಸಿದ ಬಳಿಕ ಎಲ್ಲ ವಿವರಗಳನ್ನು ಹಾಗೂ ಪ್ರಯಾಣಿಕರ ಪಟ್ಟಿಯನ್ನು ಮಾಹಿತಿ ಹಕ್ಕು ಕಾರ್ಯಕರ್ತರಿಗೆ ಪೂರೈಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry