ಗುರುವಾರ , ಮೇ 6, 2021
23 °C

ವಿಮಾ ಯೋಜನೆ ಉಪಯೋಗಕ್ಕೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಬಡತನ ರೇಖೆಗಿಂತ ಕೆಳಗಿರುವ ಕಾರ್ಮಿಕರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿರುವ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ ಹೆಚ್ಚು ಉಪಯುಕ್ತವಾಗಿದ್ದು ಅರ್ಹರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಾರ್ಮಿಕ ಇಲಾಖೆಯ ಜಂಟಿ ಆಯುಕ್ತ ಹಾಗೂ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್. ನರಸಿಂಹಮೂರ್ತಿ ಕರೆ ನೀಡಿದರು.ಈ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಇಲಾಖೆಯು ನಗರಸಭೆಯ ಪ್ರಶಸ್ತಿಭವನದಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ 91,033 (3.49 ಲಕ್ಷ ಜನ) ಬಡತನ ರೇಖೆಯ ಕೆಳಗಿರುವ ಕುಟುಂಬಗಳು ಈ ವಿಮಾ ಯೋಜನೆಯ ಫಲಾನುಭವಿಗಳಾಗಲಿವೆ. ಕುಟುಂಬದ ಐವರು ಸದಸ್ಯರು ಇದರ ಪ್ರಯೋಜನ ಪಡೆಯುವರು. ಟಾಟಾ ಇನ್ಷುರೆನ್ಸ್ ಕಂಪೆನಿಯವರು ಜನತೆಗೆ ಈ ಸೌಲಭ್ಯ ಒದಗಿಸುವ ಜವಾಬ್ದಾರಿ ಹೊತ್ತಿದ್ದಾರೆ. ಇ್ಲ್ಲಲಿ ಫಲಾನುಭವಿಗಳು ಯಾವುದೇ ರೀತಿಯ ಪ್ರೀಮಿಯಂ ಮೊತ್ತವನ್ನು ಪಾವತಿಸುವ ಅಗತ್ಯವಿಲ್ಲ. ಕೇಂದ್ರ ಸರ್ಕಾರ ಶೇ 75 ಹಾಗೂ ರಾಜ್ಯ ಸರ್ಕಾರ ಶೇ 25ರಷ್ಟು ಪ್ರೀಮಿಯಂ ಹಣವನ್ನು ಪಾವತಿಸುತ್ತವೆ. ಆದರೆ ಈ ಯೋಜನೆಯಡಿ ನೀಡಲಾಗುವ `ಸ್ಮಾರ್ಟ್‌ಕಾರ್ಡ್~ಗೆ 30 ರೂಪಾಯಿಯನ್ನು ಅರ್ಹ ಫಲಾನುಭವಿಗಳು ಪಾವತಿಸಬೇಕಾಗುತ್ತದೆ ಎಂದು ಅವರು ವಿವರಿಸಿದರು.ಸೌಲಭ್ಯಗಳು: ಸುಮಾರು 30 ಸಾವಿರ ರೂಪಾಯಿ ವರೆಗಿನ ಚಿಕಿತ್ಸೆಯನ್ನು ಈ ಸ್ಮಾರ್ಟ್‌ಕಾರ್ಡ್ ನೆರವಿನಿಂದ ಸಂಬಂಧಿಸಿದ ಆಸ್ಪತ್ರೆಗಳಿಂದ ಫಲಾನುಭವಿಗಳು ಚಿಕಿತ್ಸೆ ಪಡೆಯಬಹುದು. ಕುಟುಂಬದ ಐವರು ಸದಸ್ಯರ ಬೆರಳಚ್ಚು ಮತ್ತು ಭಾವಚಿತ್ರವನ್ನು ಕಾರ್ಡ್‌ನಲ್ಲಿ ದಾಖಲಿಸಲಾಗಿರುತ್ತದೆ. ಪರಿವಾದವರು ಬೇರೆಡೆ ಇದ್ದಲ್ಲಿ ಮತ್ತೊಂದು ಕಾರ್ಡ್ ವಿತರಿಸುವ ಸೌಲಭ್ಯ ಕೂಡ ಇದೆ ಎಂದು ಅವರು ಮಾಹಿತಿ ನೀಡಿದರು. ಹೆರಿಗೆ, ನವಜಾತ ಶಿಷುವಿನ ಆರೋಗ್ಯ ಸೇರಿದಂತೆ ಸುಮಾರು 1,075 ಬಗೆಯ ಚಿಕಿತ್ಸೆಗಳ ಸೌಲಭ್ಯ ಈ ಸ್ಮಾರ್ಟ್ ಕಾರ್ಡ್ ಹೊಂದಿರುವವರು ಪಡೆಯಬಹುದು.

 

ದೇಶದ ಯಾವುದೇ ಭಾಗದಲ್ಲಿ ಸಂಬಂಧಿಸಿದ ಆಸ್ಪತ್ರೆಗಳ ಮೂಲಕ ಫಲಾನುಭವಿಗಳು ಈ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದರು.ಫಲಾನುಭವಿಗಳು ಯಾರು?: ಬೀಡಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ರೈಲ್ವೆ ಕಾರ್ಮಿಕು ಸೇರಿ 8 ಬಗೆಯ ವರ್ಗದ ಕಾರ್ಮಿಕರ ಕುಟುಂಬದವರಿಗೆ ಈ ಸೌಲಭ್ಯ ಲಭ್ಯವಾಗಲಿದೆ. ಅಲ್ಲದೆ ಇನ್ನೂ ಐದು ಬಗೆಯ ಕಾರ್ಮಿಕರನ್ನು ಈ ಯೋಜನೆಯಡಿ ತರಲು ಕೇಂದ್ರ ಸರ್ಕಾರ ಚಿಂತಿಸುತ್ತಿದೆ ಎಂದು ತಿಳಿದು ಬಂದಿದೆ. ಈ ಕುರಿತು ಶೀಘ್ರವೇ ತೀರ್ಮಾನ ಹೊರಬರಲಿದೆ ಎಂದು ಅವರು ವಿವರಿಸಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಘುನಾಥ್ ಮಾತನಾಡಿ, ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತರನ್ನು ಈ ಯೋಜನೆ ಅನುಷ್ಠಾನಕ್ಕೆ ಬಳಸಿಕೊಳ್ಳುವಂತೆ ಹೇಳಿದರು. ಅಲ್ಲದೆ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸಿ ಜನರಲ್ಲಿ ಯಾವ ಕಾಯಿಲೆ ಇದೆ ಎಂಬುದರ ಕುರಿತು ಗುರುತು ಹಚ್ಚುವ ಕಾರ್ಯವನ್ನು ಇಲಾಖೆ ಮಾಡಲಿದೆ. ಆ ನಂತರ ಈ ಯೋಜನೆಯಡಿ ನೋಂದಾಯಿತ ಆಸ್ಪತ್ರೆಗೆ ಹೋಗುವಂತೆ ಸಂಬಂಧಿಸಿದವರಿಗೆ ಸೂಚಿಸುವ ಕೆಲಸವನ್ನು ಮಾಡಲಾಗುವುದು ಎಂದು ಹೇಳಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಸ್.ವೆಂಕಟೇಶಪ್ಪ ಅಧ್ಯಕ್ಷತೆವಹಿಸಿದ್ದರು. ಕಾರ್ಮಿಕಾಧಿಕಾರಿ ಎಂ.ನಾಗರಾಜು, ತಹಶೀಲ್ದಾರ್‌ಗಳಾದ ಡಾ. ರವಿ ತಿರ್ಲಾಪುರ, ಅರುಣಪ್ರಭ, ಕಾರ್ಮಿಕ ಇಲಾಖೆಯ ಉಪ ಆಯುಕ್ತ ಜಯದೇವಯ್ಯ, ಟಾಟಾ ಇನ್ಷುರೆನ್ಸ್ ಕಂಪೆನಿಯ ಪ್ರತಿನಿಧಿ ವಸಂತ್ ಕುಮಾರ್, ಡಿವೈಎಸ್‌ಪಿ ಟಿ. ಸಿದ್ದಪ್ಪ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.