ವಿಮಾ ಸೌಲಭ್ಯ: ಕರ್ನಾಟಕ 3ನೇ ಸ್ಥಾನದಲ್ಲಿ

7

ವಿಮಾ ಸೌಲಭ್ಯ: ಕರ್ನಾಟಕ 3ನೇ ಸ್ಥಾನದಲ್ಲಿ

Published:
Updated:
ವಿಮಾ ಸೌಲಭ್ಯ: ಕರ್ನಾಟಕ 3ನೇ ಸ್ಥಾನದಲ್ಲಿ

ಹೊಸಕೋಟೆ: ಕಾರ್ಮಿಕರಿಗೆ ವಿಮಾ ಸೌಲಭ್ಯ ಕಲ್ಪಿಸುವಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿಯೇ ಮೂರನೇ ಸ್ಥಾನದಲ್ಲಿದೆ ಎಂದು ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ಭಾನುವಾರ ಇಲ್ಲಿ ಹೇಳಿದರು.

ಕಾರ್ಮಿಕರ ರಾಜ್ಯ ವಿಮಾ ನಿಗಮ ಮತ್ತು ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳ ಆಶ್ರಯದಲ್ಲಿ ವಿಮಾ ನಿಗಮದ ವಜ್ರಮಹೋತ್ಸವದ ಅಂಗವಾಗಿ ಇಲ್ಲಿನ ಚನ್ನಬೈರೇಗೌಡ ಕ್ರೆಡಾಂಗಣದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಆರೋಗ್ಯ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಕಾರ್ಮಿಕರಿಗೆ ನೆರವಾಗುವ ದಿಸೆಯಲ್ಲಿ ಮೂರು ವರ್ಷಗಳಲ್ಲಿ ಸರ್ಕಾರ ನಾಲ್ಕು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಯೋಜನೆಗಳನ್ನು ಜಾರಿಗೊಳಿಸಿದ್ದು, 18 ಲಕ್ಷ ಕಾರ್ಮಿಕ ವಿಮಾದಾರರು ಇದರ ಪ್ರಯೋಜನ ಪಡೆದಿದ್ದಾರೆ~ ಎಂದು ಅವರು ಹೇಳಿದರು.

`ಕಾರ್ಮಿಕರಿಗಾಗಿ ಹೊಸಕೋಟೆಯ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶ ಸೇರಿದಂತೆ ರಾಜ್ಯದಲ್ಲಿ 15 ಹೊಸ ಆಸ್ಪತ್ರೆಗಳನ್ನು ಪ್ರಾರಂಭಿಸಲಾಗುವುದು. ಅಲ್ಲದೆ ಹೆಚ್ಚಿನ ಚಿಕಿತ್ಸೆಗಾಗಿ ಹೊಸಕೋಟೆ ವಿಮಾ ಚಿಕಿತ್ಸಾಲಯದ ಸದಸ್ಯರಿಗೆ ಬೆಂಗಳೂರು ಇಂದಿರಾ ನಗರ ಆಸ್ಪತ್ರೆಗೆ ಹೋಗಲು ಉಚಿತ ಬಿಎಂಟಿಸಿ ಬಸ್ ಸೌಲಭ್ಯ ಕಲ್ಪಿಸಲಾಗಿದೆ~ ಎಂದು ಅವರು ತಿಳಿಸಿದರು.

`ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆಯಡಿ ತಾಲ್ಲೂಕಿನಲ್ಲಿ 12 ಸಾವಿರ ಜನ ಹೆಸರು ನೋಂದಾಯಿಸಿಕೊಂಡಿದ್ದಾರೆ~ ಎಂದ ಸಚಿವರು, `ಕಾರ್ಮಿಕ ಇಲಾಖೆ ಮೂಲಕ ಇದುವರೆಗೂ 65 ಆರೋಗ್ಯ ಮೇಳಗಳನ್ನು ಆಯೋಜಿಸಲಾಗಿದೆ~ ಎಂದು ಹೇಳಿದರು.

ಕಾರ್ಮಿಕ ಇಲಾಖೆ ಕಾರ್ಯದರ್ಶಿ ಜಿ.ಎಸ್.ನಾರಾಯಣ ಸ್ವಾಮಿ ಮಾತನಾಡಿ, `ರಾಜ್ಯದಲ್ಲಿನ ಮೂರು ಕೋಟಿ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ಇಲಾಖೆ ಕಾರ್ಯಕ್ರಮ ಹಮ್ಮಿಕೊಂಡಿದೆ~ ಎಂದರು.

ಕಾರ್ಮಿಕ ರಾಜ್ಯ ವಿಮಾ ನಿಗಮದ ಆಯುಕ್ತ ಡಾ. ಬಿ.ಆರ್.ಕವಿ ಶೆಟ್ಟಿ ಮಾತನಾಡಿದರು. ವಿಮಾ ಯೋಜನೆಯ ನಿರ್ದೇಶಕಿ ಡಾ. ರಹೀಮುನ್ನೀಸಾ, ಪ್ರಾದೇಶಿಕ ನಿರ್ದೇಶಕ ಕೆ.ಎಫ್.ಜಾನ್ವೇಕರ್, ಎಂವಿಜೆ ವೈದ್ಯಕೀಯ ಮತ್ತು ಸಂಶೋಧನಾ ಆಸ್ಪತ್ರೆಯ ಅಧ್ಯಕ್ಷ ಡಾ. ಎಂ.ಜೆ.ಮೋಹನ್, ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಸೊಣ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಸಚಿವರು ಮಗುವೊಂದಕ್ಕೆ ಪೋಲಿಯೊ ಲಸಿಕೆ ಹಾಕುವ ಮೂಲಕ ತಾಲ್ಲೂಕಿನಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry