ವಿಮೆ ಕ್ಷೇತ್ರದ ವೃತ್ತಿ ಜೀವನ

ಮಂಗಳವಾರ, ಮೇ 21, 2019
23 °C

ವಿಮೆ ಕ್ಷೇತ್ರದ ವೃತ್ತಿ ಜೀವನ

Published:
Updated:
ವಿಮೆ ಕ್ಷೇತ್ರದ ವೃತ್ತಿ ಜೀವನ

ಅರ್ಹತೆ

ಸಾಮಾನ್ಯ ವಿಮೆ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವುದಕ್ಕೆ ಅಭ್ಯರ್ಥಿಗಳು ಪದವೀಧರರಾಗಿರಬೇಕು. ಆತ್ಮವಿಶ್ವಾಸ ಉಳ್ಳವರು, ವಿಮೆಗಳ ಬಗ್ಗೆ ತಿಳಿದುಕೊಂಡವರು ಮತ್ತು ಉತ್ತಮ ಸಂವಹನ ಕೌಶಲ ಉಳ್ಳವರು ಮಾರಾಟ ಕೆಲಸಕ್ಕೆ ಹೊಂದಿಕೊಳ್ಳುತ್ತಾರೆ.



ವಿಮೆ ಮಾರಾಟ ತುಂಬಾ ರೋಮಾಂಚಕ ಉದ್ಯೋಗ. ಇದರಲ್ಲಿ ಉದ್ಯೋಗ ಭದ್ರತೆ, ಆಕರ್ಷಕ ವೇತನ, ಕೊಡುಗೆಗಳು, ಬಡ್ತಿ ಅವಕಾಶಗಳು ಹೆಚ್ಚಿರುತ್ತವೆ. ಮಾರಾಟ ವಿಭಾಗದಲ್ಲಿ ಹೆಚ್ಚಿನ ಪ್ರೋತ್ಸಾಹಕ ಸೌಲಭ್ಯ ಪಡೆಯುವ ಅವಕಾಶಗಳಿರುತ್ತವೆ.



ವಿಮಾ (ಇನ್ಷುರೆನ್ಸ್) ಕ್ಷೇತ್ರ ದೇಶದಲ್ಲಿ ಈಗ ದೊಡ್ಡ ಉದ್ಯಮವಾಗಿ ಅಭಿವೃದ್ಧಿ ಹೊಂದಿದೆ. ಕಳೆದೊಂದು ದಶಕದಲ್ಲಿ ವಿದೇಶಿ ಹೂಡಿಕೆದಾರರ ಪ್ರವೇಶದೊಂದಿಗೆ ಅಪೇಕ್ಷಿತ ಮಟ್ಟವನ್ನೂ ತಲುಪಿದೆ. ಮಾರುಕಟ್ಟೆಯಲ್ಲಿ ಪೈಪೋಟಿ ಹೆಚ್ಚಾದಂತೆ ಹೊಸ ಹೊಸ ಉತ್ಪನ್ನಗಳು, ಆಕರ್ಷಕ ಪ್ಯಾಕೇಜ್, ಸುಧಾರಿತ ಗ್ರಾಹಕ ಸೇವೆಗಳು ಲಭ್ಯವಾಗುತ್ತಿವೆ.



ಅದರ ಫಲವಾಗಿ ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶವೂ ದುಪ್ಪಟ್ಟಾಗಿದೆ. ವಿಮಾ ಕಂಪೆನಿಗಳು ತರಹೇವಾರಿ ಉತ್ಪನ್ನಗಳೊಂದಿಗೆ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿರುವುದು ಇದಕ್ಕೆ ಕಾರಣವಾಗಿದೆ.



ಸಾಂಪ್ರದಾಯಿಕವಾಗಿ 2000ನೇ ಇಸ್ವಿಗೂ ಮುನ್ನ ಸಾರ್ವಜನಿಕ ಸ್ವಾಮ್ಯದ ವಿಮೆ (ಎಲ್‌ಐಸಿ, ಜಿಐಸಿ) ಮಾತ್ರ ಲಭ್ಯವಿದ್ದಾಗ ವಿಮೆ ಕ್ಷೇತ್ರದ ಉದ್ಯೋಗ ಸರ್ಕಾರಿ ನೌಕರಿಗೆ ಸಮನಾಗಿತ್ತು. ಹಾಗಾಗಿ ಯಶಸ್ವಿ ವಿಮೆ ಉದ್ಯೋಗಿ ಎಂದೆನಿಸಿಕೊಳ್ಳುವುದು ಕೆಲವರಿಗೆ ಮಾತ್ರ ಸಾಧ್ಯವಾಗುತ್ತಿತ್ತು.



ಆದರೆ ಖಾಸಗೀಕರಣದ ನಂತರ ಹೆಚ್ಚಿನ ಅವಕಾಶಗಳು, ಆಕರ್ಷಕ ಸಂಬಳ, ಮೂಲಸೌಕರ್ಯ ಬೆಂಬಲದಿಂದ ವಿಮಾ ಸಂಸ್ಥೆಯಲ್ಲಿ ಉದ್ಯೋಗ ತುಂಬಾ ಬೇಡಿಕೆಯ ವೃತ್ತಿ ಎನಿಸಿದೆ. ಈ ಕ್ಷೇತ್ರವೀಗ ಜನರ ಜೀವನಕ್ಕೆ, ದೇಶದ ಆಸ್ತಿಗೆ ಸುರಕ್ಷತಾ ಕವಚ ಒದಗಿಸುವ ಜತೆಗೆ ಅಸಂಖ್ಯಾತ ಉದ್ಯೋಗಾವಕಾಶ ಮತ್ತು ವೃತ್ತಿ ಆಯ್ಕೆಗಳನ್ನು ಒದಗಿಸಿದೆ.



ಭಾರತದಲ್ಲಿ ವಿಮಾ ಮಾರುಕಟ್ಟೆಗೆ ವ್ಯಾಪಕ ಅವಕಾಶವಿದೆ. ಅದು ಹೇಗೆಂದರೆ ನಮ್ಮಲ್ಲಿ ಉಳಿತಾಯಕ್ಕೆ ಹೆಚ್ಚು ಆದ್ಯತೆಯಿದ್ದರೂ ಹಣಕಾಸು ಸೇವೆಗಳು ಅದಕ್ಕೆ ಪೂರಕ ಮಟ್ಟದಲ್ಲಿಲ್ಲ. ಆದ್ದರಿಂದ ಗ್ರಾಹಕರ ಅಪೇಕ್ಷೆಗಳನ್ನು ಪೂರೈಸುವುದಕ್ಕಾಗಿ ವಿಮೆ ವೃತ್ತಿಪರರು ಅತ್ಯುತ್ತಮ ತರಬೇತಿ ಪಡೆದಿರುವುದು ಹಾಗೂ ಕಂಪೆನಿಯ ಅಗತ್ಯಗಳಿಗೆ ತಕ್ಕಂತೆ ಕೌಶಲ ಹೆಚ್ಚಿಸಿಕೊಳ್ಳುವುದು ಅತ್ಯಂತ ಮುಖ್ಯ.



ಈ ಹಿನ್ನೆಲೆಯಲ್ಲಿ ವಿಮೆ ಮ್ಯೋನೇಜ್‌ಮೆಂಟ್ ಕೋರ್ಸ್‌ಗಳು ಈಗ ದೇಶಾದ್ಯಂತ ಅನೇಕ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಲಭ್ಯ. ಇಲ್ಲಿ ವಿಮೆ ಕ್ಷೇತ್ರದ ವಿವಿಧ ಆಯಾಮಗಳ ಬಗ್ಗೆ ಸಮಗ್ರವಾಗಿ ಕಲಿಸಿಕೊಡಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಈ ಕ್ಷೇತ್ರದ ಪೂರ್ಣ ಪರಿಚಯ ಆಗುವುದಲ್ಲದೆ, ವಿಮೆ ಕಂಪೆನಿಗಳಲ್ಲಿ ಉನ್ನತ ಹುದ್ದೆಗೇರಲು ಸಹಾಯವಾಗುತ್ತದೆ.



ಎಲ್ಲ ಮಟ್ಟದ ವಿದ್ಯಾಭ್ಯಾಸದಲ್ಲಿ ವಿಮೆಯನ್ನು ಕಡ್ಡಾಯ ವಿಷಯವಾಗಿ ಈಗ ಅಳವಡಿಸಲಾಗುತ್ತಿದೆ. ಇತ್ತೀಚೆಗೆ ಕೆಲವು ವಿಶ್ವವಿದ್ಯಾಲಯಗಳು ವಿಮೆ ವಿಷಯದಲ್ಲೇ ಕೋರ್ಸ್‌ಗಳನ್ನು ನಡೆಸುತ್ತಿವೆ. ಆದರೆ ಅವುಗಳೂ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಅದರಿಂದಾಗಿ ಇಂದು ಸೂಕ್ತ ವಿಧಾನದಲ್ಲಿ ಕೌಶಲ ಗಳಿಸಿಕೊಂಡ ಹಾಗೂ ಅನುಭವಿ ವೃತ್ತಿಪರರ ಕೊರತೆ ಬಹಳವಾಗಿದೆ.



ಸಾಮಾನ್ಯ ವಿಮೆ (ಜನರಲ್ ಇನ್ಷುರೆನ್ಸ್) ಒಂದು ಪೂರ್ಣಾವಧಿ ವೃತ್ತಿಯಾಗಿ ಆರಿಸಿಕೊಳ್ಳುವುದಕ್ಕೆ ಸಾಕಷ್ಟು ಆಯ್ಕೆಗಳನ್ನು ಒದಗಿಸುತ್ತದೆ. ಮಾರ್ಕೆಟಿಂಗ್, ವಿತರಣೆ, ವಿಮಾ ಗಣಿತ, ಕಾರ್ಯಭಾರ, ಕ್ಲೈಮ್ಸ ಮತ್ತು ಹೂಡಿಕೆ ವಿಭಾಗಗಳಲ್ಲಿ ಉದ್ಯೋಗಾವಕಾಶಗಳಿವೆ. ಕೆಲವು ವಿಮಾ ವೃತ್ತಿಗಳು ಉನ್ನತ ಮಟ್ಟದ ಪರಿಣತಿಯನ್ನು ಬೇಡುತ್ತವೆ ಮತ್ತು ಅದಕ್ಕಾಗಿ ಅರ್ಹ ಅಭ್ಯರ್ಥಿಗಳನ್ನು ಹುಡುಕಲು ಬಹಳ ಕಷ್ಟಪಡುತ್ತವೆ. ಉಳಿದ ಹುದ್ದೆಗಳಿಗೆ ಎಲ್ಲಾ ಪದವೀಧರರು ಪ್ರಯತ್ನಿಸಬಹುದು.



ಎಷ್ಟೆಲ್ಲ ವೃತ್ತಿ

`ವಿಮಾ ಗಣಿತ ತಜ್ಞರು~ ವಿವಿಧ ಯೋಜನೆಗಳನ್ನು ರೂಪಿಸುತ್ತಾರೆ ಮತ್ತು ಕಂಪೆನಿಯು ಒಂದು ವಿಮೆ ಪಾಲಿಸಿ ಅಥವಾ ಪೆನ್ಷನ್ ಪ್ಲಾನ್ ಮಾರಾಟ ಮಾಡುವಾಗ ಅದರ ಹಿಂದಿರುವ ಹಣಕಾಸು ಸಾಧ್ಯತೆಯನ್ನು ಪರಿಶೀಲಿಸುತ್ತಾರೆ. ಪ್ರಸ್ತಾವಿತ ವಿಮೆಗಳ ಮೌಲ್ಯಮಾಪನ, ಟರ್ಮ್‌ಗಳ ನಿರ್ಧಾರ ಮತ್ತು ಗ್ರಾಹಕರೊಬ್ಬರಿಗೆ ವಿಮೆ ಮಾಡಿಸುವ ಮುಂಚಿನ ವೆಚ್ಚಗಳ ನಿರ್ವಹಣೆಯನ್ನು ಪ್ರಾಥಮಿಕವಾಗಿ `ಅಂಡರ್‌ರೈಟರ್~ಗಳು ನಿರ್ವಹಿಸುತ್ತಾರೆ.



`ಕ್ಲೈಮ್ಸ ಸಿಬ್ಬಂದಿ~ ಪಾಲಿಸಿಯ ಅವಧಿ ಮುಗಿದ ಬಳಿಕ ಅಥವಾ ಅವಘಡ ಸಂಭವಿಸಿದ ಸಂದರ್ಭದಲ್ಲಿ ಲೆಕ್ಕಾಚಾರ ವಿಲೇವಾರಿ ಮಾಡುತ್ತಾರೆ. ಅವರು ಪಾಲಿಸಿಯನ್ನು ಮರು ಪರಿಶೀಲಿಸುತ್ತಾರೆ ಮತ್ತು ವಿವರಗಳ ದೃಢೀಕರಣ ಮಾಡಿಕೊಳ್ಳುತ್ತಾರೆ. `ಹಾನಿ ಅಂದಾಜುಕಾರರು~ ಸಾಮಾನ್ಯವಾಗಿ ಕಳ್ಳತನ, ದರೋಡೆ, ಅಗ್ನಿ, ಕಾರು ಅಪಘಾತ ಇತ್ಯಾದಿ ಹಾನಿಗಳ ತನಿಖೆ ನಡೆಸುತ್ತಾರೆ. ಅವರು ಪಾಲಿಸಿ ಭರಿಸಬಹುದಾದ ನಷ್ಟ ಪಾವತಿ ನಿರ್ಧರಿಸುತ್ತಾರೆ.

`ವಿಮೆ ಏಜೆಂಟರು~ ಸಾಮಾನ್ಯವಾಗಿ ವಿಮೆ ಕಂಪೆನಿಗಳನ್ನು ಪ್ರತಿನಿಧಿಸುತ್ತಾರೆ. ಇನ್ನು ಕೆಲವು `ಮಾರಾಟ ವತ್ತಿಪರ~ರಿದ್ದು, ಅವರು ಪ್ರೀಮಿಯಂಗಳನ್ನು ಒಗ್ಗೂಡಿಸಿ ಕಮಿಷನ್ ಆಧಾರದ ಮೇಳೆ ಮಾರಾಟದ ಗುರಿ ತಲುಪುತ್ತಾರೆ.



`ವಿಮೆ ಬ್ರೋಕರ್~ಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ವ್ಯವಹಾರಸ್ಥರು. ಅವರು ತಮಗಾಗಿ ಅಥವಾ ದಲ್ಲಾಳಿ ಸಂಸ್ಥೆಗಳಿಗಾಗಿ ಕೆಲಸ ಮಾಡುತ್ತ ಗ್ರಾಹಕರ ಅಗತ್ಯಕ್ಕೆ ತಕ್ಕಂತ ಪಾಲಿಸಿಗಳನ್ನು ಸಲಹೆ ಮಾಡುತ್ತಾರೆ.



`ರಿಸ್ಕ್ ಮ್ಯೋನೇಜರ್~ಗಳು ಕಂಪೆನಿಗಳ ರಿಸ್ಕ್ ಗುರುತಿಸಿ ಅಂದಾಜಿಸುತ್ತಾರೆ. ಅದಲ್ಲದೆ ವಿಮೆ ಕಂಪೆನಿಯೊಂದರ ಯಶಸ್ಸಿಗೆ ಮಾರಾಟ ಮತ್ತು ಮಾರುಕಟ್ಟೆ ಅಗತ್ಯ. ಮಾರಾಟದಲ್ಲಿ ವಿಮೆ ಪಾಲಿಸಿಗಳನ್ನು ನೇರ ಮತ್ತು ಪರೋಕ್ಷವಾಗಿ ವಿಕ್ರಯ ಮಾಡುವುದಿರುತ್ತದೆ.



`ಬ್ರಾಂಚ್ ಸೇಲ್ಸ್ ಮ್ಯೋನೇಜರ್‌ಗಳು~ ಶಾಖೆಗೆ ಸೇರಿದ ಏಜೆಂಟರು, ಏಜೆನ್ಸಿ ಮ್ಯೋನೇಜರ್‌ಗಳ ಜಾಲದ ನೇತೃತ್ವ ವಹಿಸುತ್ತಾರೆ.



ಹುದ್ದೆಗಳು

ವಿಮೆ ಸಲಹೆಗಾರ: ವಿಮೆ ಸಲಹೆಗಾರರು ಪಾಲಿಸಿದಾರರಿಗೆ ಅವರ ಅಗತ್ಯಕ್ಕೆ ಹೊಂದುವ ವಿಮೆಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಸಹಾಯ ಮಾಡುತ್ತಾರೆ. ವಿವಿಧ ರಿಸ್ಕ್‌ಗಳನ್ನು ಅರ್ಥ ಮಾಡಿಕೊಂಡು ಅದನ್ನು ತಪ್ಪಿಸಿಕೊಳ್ಳಲು ನೆರವಾಗುತ್ತಾರೆ.



ವಿಮೆ ಅಸೋಸಿಯೇಟ್: ಮಾರಾಟ ಗುರಿ ಸಾಧಿಸುವ ಹೊಣೆ ವಿಮೆ ಅಸೋಸಿಯೇಟ್‌ಗಳ ಮುಖ್ಯ ಕರ್ತವ್ಯ. ಗ್ರಾಹಕರೊಂದಿಗೆ ಸಂಬಂಧ ಸಾಧಿಸುವ ಮತ್ತು ನಿರ್ವಹಿಸುವ, ವಿವಿಧ ಉತ್ತೇಜನಾ ಯೋಜನೆಗಳನ್ನು ಜಾರಿಗೆ ತರುವ ಹೊಣೆಗಾರಿಕೆ ಅವರ ಮೇಲಿರುತ್ತದೆ.



ಬ್ಯಾಕ್ ಆಫೀಸ್ ಸಪೋರ್ಟ್: ವಿಮೆ ಕ್ಷೇತ್ರಕ್ಕೆ ಬರಲು ಬಯಸುವ ವಾಣಿಜ್ಯ ಪದವೀಧರರು ಈ ಹುದ್ದೆ ಆರಿಸಿಕೊಳ್ಳಬಹುದು. ಇವರು ಸಾಮಾನ್ಯವಾಗಿ ಗ್ರಾಹಕರಿಂದ ಬರುವ ಎಲ್ಲಾ ಸೇವಾ ಆಧಾರಿತ ವಿಚಾರಣೆಗಳಿಗೆ ಉತ್ತರಿಸಬೇಕಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಎಂಐಎಸ್ ವರದಿ ಸಲ್ಲಿಸಬೇಕಾಗುತ್ತದೆ. ವಿವಿಧ ತಂಡಗಳಿಗೆ ಸಹಕರಿಸಬೇಕಾಗುತ್ತದೆ.



ಸೇಲ್ಸ್ ಡೆವಲಪ್‌ಮೆಂಟ್ ಮ್ಯೋನೇಜರ್: ಹಣಕಾಸು ವೃತ್ತಿಪರರಿಗೆ ಈ ಹುದ್ದೆ ಸೂಕ್ತ. ವಿಮೆ ಏಜೆಂಟ್‌ಗಳನ್ನು ಗುರುತಿಸಿ ನೇಮಕ ಮಾಡಿಕೊಳ್ಳುವ, ತಂಡದ ನಿರ್ವಹಣೆ ಮೌಲ್ಯಮಾಪನ ಮಾಡುವ, ತಮ್ಮ ತಂಡಕ್ಕೆ ತರಬೇತಿ ನೀಡುವ, ಗುರಿ ನಿಗದಿ ಪಡಿಸುವ, ತಂಡದ ಉತ್ಪಾದಕತೆ ಹೆಚ್ಚಿಸುವ ಹಾಗೂ ಇನ್ನೂ ಅನೇಕ ಜವಾಬ್ದಾರಿ ಅವರದ್ದಾಗಿರುತ್ತದೆ.



ಕ್ಲೈಮ್ಸ ವಿಶ್ಲೇಷಕ: ಡಿಪ್ಲೊಮಾ ಅಥವಾ ಪದವೀಧರ ಎಂಜಿನಿಯರ್‌ಗಳು, ಪ್ಯಾರಾ-ಮೆಡಿಕಲ್ ಅರ್ಹತೆ ಹೊಂದಿರುವವರು ಇದಕ್ಕೆ ಅಗತ್ಯ. ಕ್ಲೈಮ್ ಸನ್ನಿವೇಶ ಎದುರಾದಾಗ ಎಷ್ಟು ಪ್ರಮಾಣದ ಕ್ಲೈಮ್‌ಗೆ ಒಪ್ಪಬಹುದು ಎನ್ನುವುದು ಇವರ ಹೊಣೆಗಾರಿಕೆ ವ್ಯಾಪ್ತಿಗೆ ಬರುತ್ತದೆ.

(ಲೇಖಕರು ಭಾರ್ತಿ ಅಕ್ಸಾ ಜನರಲ್ ಇನ್ಷುರೆನ್ಸ್‌ನ ಮುಖ್ಯ ಕಾರ್ಯಾಚರಣೆ ಅಧಿಕಾರಿ)

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry