ವಿಮೋಚನೆಯ ಹಾದಿ ನೆನಪಿಸುವ ತವಕ...

7

ವಿಮೋಚನೆಯ ಹಾದಿ ನೆನಪಿಸುವ ತವಕ...

Published:
Updated:

ಕೊಪ್ಪಳ: ಒಂದು ಕ್ರಾಂತಿಯನ್ನು ನೆನಪಿಸುವ ದಿನ ಮತ್ತೆ ಬಂದಿದೆ.  ಸೆಪ್ಟೆಂಬರ್‌ 17, ಹೈದರಾಬಾದ್‌ ವಿಮೋಚನಾ ದಿನ. ದೇಶದೆಲ್ಲೆಡೆ ಆ. 15 ಸ್ವಾತಂತ್ರ್ಯೋತ್ಸವದ ಸಂಭ್ರಮ ವಾದರೆ, ಹೈದರಾಬಾದ್‌ ಕರ್ನಾಟಕದ ಈ ಭಾಗಕ್ಕೆ ಎರಡುಬಾರಿ ಸ್ವಾತಂತ್ರ್ಯೋ ತ್ಸವ ಆಚರಿಸುವ ಯೋಗ. 1947ರಲ್ಲಿ ಕಳೆದುಹೋದ ಸಂಭ್ರಮಕ್ಕೆ ಈಗ ಎರಡುಬಾರಿ ಆನಂದಿಸುವ ಅವಕಾಶ.ಹೌದು ಹೈದರಾಬಾದ್‌ ವಿಮೋ ಚನಾ ದಿನ ಎಂದಾಕ್ಷಣ ಇಲ್ಲಿನ ಹಿರಿಯ ಜೀವಗಳ ಕಣ್ಣಾಲಿಗಳು ತುಂಬುತ್ತವೆ. ದೇಶಭಕ್ತಿ ಉಕ್ಕಿ ಹರಿದು ನಡುಗುವ ಕೈಗಳಿಂದಲೇ ರಾಷ್ಟ್ರಧ್ವಜಕ್ಕೆ ಹೆಮ್ಮೆಯ ಸಲಾಮು ಹೊಡೆಯುತ್ತಾರೆ.ಪ್ರಬಲ ಸಾಮ್ರಾಜ್ಯದ ನೆನಪು

ಹೈದರಾಬಾದ್‌ನ ನವಾಬ ಅಸಫಜಹಾ ಮನೆತನದ ಮೀರ್‌ ಕಮರುದ್ದೀನ್‌ ಚಿನ್‌ ಖಿಲಿಜ್‌ ಖಾನ್‌ ನಿಜಾಂ ಉಲ್‌ ಮುಲ್ಕ್‌ ಆಲಿ ಖಾನ್‌ ಬಹದ್ದೂರ್‌ನ ಆಳ್ವಿಕೆಗೆ 1724ರಲ್ಲೇ ಒಳಪಟ್ಟಿತ್ತು. ರೈಲು, ಅಂಚೆ ಸೇವೆ, ತನ್ನದೇ ಆದ ಕರೆನ್ಸಿ ಹೊಂದಿದ ರಾಜ್ಯವದು. ಒಟ್ಟಾರೆ 86,698 ಚದರ ಮೈಲು ವಿಸ್ತೀಣರ್ವಿತ್ತು.  1.80 ಕೋಟಿ ಜನಸಂಖ್ಯೆ ಇದ್ದ, ಕೃಷಿ ಆಧಾರಿತ ವಿಶಾಲ ರಾಜ್ಯವದು. ಹಿಂದೂ –ಮುಸ್ಲಿಂ ಧಾರ್ಮಿಕ ಅಸಮಾನತೆ ಇದ್ದ ಕಾಲವದು.1930,32, 42, 46 ಮತ್ತು 47ರಲ್ಲಿ ರಾಯಚೂರು, ಕೊಪ್ಪಳ ಪದೇ ಪದೇ ಬರಗಾಲಕ್ಕೆ ತುತ್ತಾಗಿದ್ದವು. ಜತೆಗೆ ಪ್ಲೇಗ್‌ ಹಾವಳಿಯಿಂದಲೂ ಜನರ ಸಾವು ಸಾಮಾನ್ಯವಾಗಿತ್ತು. ರೈತರಿಗೆ ವಿಪರೀತ ಕಂದಾಯ ಪಾವತಿ ನಿಯಮ, ತಪ್ಪಿದರೆ ಛಡಿ ಯೇಟಿನಂಥ ಕಠಿಣ ಶಿಕ್ಷೆ, ಮತಾಂತರ, ಪುಂಡಾಟಿಕೆ ಇತ್ಯಾದಿ ಮಿತಿಮೀರಿದ್ದವು. ಒಟ್ಟಿನಲ್ಲಿ ಇವಕ್ಕೆಲ್ಲಾ ಕಡಿವಾಣ ಹಾಕಲೇಬೇಕು ಎಂದು ಈ ಭಾಗದ ಹೋರಾಟಗಾರರು ನಿರ್ಧರಿಸಿದರು.

ಹಾಗೆಂದು ಬಹುತೇಕರು ನಿಜಾಮರನ್ನು ಎಲ್ಲಿಯೂ ನೇರವಾಗಿ ಟೀಕಿಸುವುದಿಲ್ಲ.‘ನಿಜಾಮರ ಜತೆಗಿದ್ದ ರಜಾಕಾರರು, ಕೆಲವು ಪುಂಡರು ಇಡೀ ಸಾಮ್ರಾಜ್ಯ ವ್ಯವಸ್ಥೆಯನ್ನೇ ಹದಗೆಡಿಸಿದ್ದರು. ನಿಜಾ ಮರನ್ನು ಮೀರಿ ತಾವೇ ಬೆಳೆಯಲು ಯತ್ನಿಸಿದರು. ಇದೇ ಕ್ರಾಂತಿಗೆ ಮುನ್ನುಡಿಯಾಯಿತು ಎಂದು ಸ್ಮರಿಸು ತ್ತಾರೆ ಹೋರಾಟಗಾರ ಸುಮಂತ್‌ ರಾವ್‌ ಪಟವಾರೆ.ರೈತರ ಒತ್ತಡಕ್ಕೆ ಮಣಿದು 1945ರಲ್ಲಿ ತುಂಗಭದ್ರಾ ಅಣೆಕಟ್ಟೆಗೆ ಶಿಲಾನ್ಯಾಸ ಮಾಡಿದ್ದು, ಸಾರಿಗೆ ವ್ಯವಸ್ಥೆ, ನ್ಯಾಯಾಲಯ, ಪೊಲೀಸ್‌ ವ್ಯವಸ್ಥೆ ಅಂದು ಇದ್ದದ್ದು ಬ್ರಿಟಿಷ್‌ ಮಾದರಿಯ ಅನುಕರಣೆಯಾದರೂ ಅಭಿವೃದ್ಧಿಯ ದೃಷ್ಟಿಯಿಂದ ನಿಜಾಮರ ಕ್ರಮಗಳು ಸಕಾರಾತ್ಮಕ ಪರಿಣಾಮ ವನ್ನೇ ಬೀರಿದವು. ಆದರೆ, ಸ್ವತಂತ್ರ ಸಾಮ್ರಾಜ್ಯ ಘೋಷಣೆ, ಜನತೆಯ ನಿರಂತರ ಶೋಷಣೆ ಅಖಂಡ ಭಾರತದ ನಿರ್ಮಾಣಕ್ಕೆ ಅಡ್ಡಿಯಾಯಿತು.ಕೆಲವು ಮಜಲುಗಳು

1925ರಲ್ಲಿ ಕರ್ನಾಟಕದ ಗಾಂಧಿ ಹರ್ಡೇಕರ್‌ ಮಂಜಪ್ಪ, ಹರಿದಾಸ ಜಯರಾಮಾಚಾರ್ಯ ಸೇರಿದಂತೆ ಹಲವರು ಹಂತಹಂತವಾಗಿ ಜನ ಜಾಗೃತಿ ಮೂಡಿಸಿದರು. ಅಲ್ಲಲ್ಲಿ ರಾತ್ರಿ ಶಿಕ್ಷಣ ಕೇಂದ್ರಗಳು, ಖಾದಿ ಕೇಂದ್ರ ತೆರೆದುಕೊಂಡವು. 1938ನೇ ಅ. 24ರಂದು  ಹಿಂದೂ ನಾಗರಿಕ ಸಂಸ್ಥಾನ, ಹೈದರಾಬಾದ್‌ ರಾಜ್ಯ ಕಾಂಗ್ರೆಸ್‌ ಆರ್ಯ ಸಮಾಜ,  ಹಿಂದೂ ಮಹಾಸಭಾ, ಪ್ರಜಾ ಮಂಡಲ ಸಂಘಟನೆಗಳು ಸೇರಿ ಮೂಲಭೂತ ನಾಗರಿಕ ಹಕ್ಕುಗಳಿಗಾಗಿ ಆಗ್ರಹಿಸಿ  ‘ಹೈದರಾಬಾದ್‌ ದಿನ’ದ ಹೆಸರಿನಲ್ಲಿ ಉಪವಾಸ ಆಚರಿಸಿದರು.

ಇದೇ ವರ್ಷ ನವೆಂಬರ್‌ 29ರಂದು ನಿಷೇಧದ ನಡುವೆಯೂ ಉಸ್ಮಾನಿಯಾ ವಿಶ್ವ ವಿದ್ಯಾಲಯದ ಆವರಣದಲ್ಲಿ ವಂದೇ ಮಾತರಂ ಹಾಡಲಾಯಿತು. ಇಲ್ಲಿ ನೂರಾರು ಮಂದಿ ಪೊಲೀಸರ ಲಾಠಿಯೇಟಿನ ರುಚಿ ಅನುಭವಿಸಿದರು. ಆದರೂ ಸತ್ಯಾಗ್ರಹ ನಿಜಾಮ ಸರ್ಕಾರವನ್ನು ಕೊಂಚಮಟ್ಟಿಗೆ ಅಲುಗಾಡಿಸಿತು.ಕಾಸಿಂ ರಜ್ವಿಯ ಕಾಟ

ಹಾಗಿದ್ದರೂ 1947ರ ಜೂನ್‌ 26ರಂದು ನಿಜಾಮ ತಾನು ಭಾರತ ಅಥವಾ ಪಾಕಿಸ್ತಾನಕ್ಕೆ ಸೇರದೇ ಸ್ವತಂತ್ರನಾಗಿರುತ್ತೇನೆ ಎಂದು ಘೋಷಿಸಿದ. ನಿಜಾಮರ ಪರ ಜವಾಬ್ದಾರಿ ವಹಿಸಿಕೊಂಡು ಕಾಸಿಂ ರಜ್ವಿ ಎಂಬಾತ  ರಜಾಕಾರರ ಸೈನ್ಯ ಕಟ್ಟಿ ಹೋರಾಟಗಾರರನ್ನು ಬಗ್ಗುಬಡಿಯಲು ಮುಂದಾದ.1947ರ ಆ. 15ರಂದು ವೀರಭದ್ರಪ್ಪ ಶಿರೂರ ನೇತೃತ್ವದಲ್ಲಿ ಕೊಪ್ಪಳ, ಕಾತರಕಿ, ಕಿನ್ನಾಳ, ಯಲಬುರ್ಗಾ, ಕುಕನೂರಿನಲ್ಲಿ ಸ್ವಾತಂತ್ರ್ಯ ಧ್ವಜ ಹಾರಾಡಿತು.  ಹಲವರು ಬಂಧನಕ್ಕೊಳಗಾದರು. ಇದೇ ವೇಳೆ ನಿಜಾಮ ತನ್ನ ಸಾಮ್ರಾಜ್ಯ ಭದ್ರಗೊಳಿಸಲು ಎಲ್ಲ ಯೋಜನೆ ರೂಪಿಸಿದ.ಪ್ರತಿಯಾಗಿ 1947ರ ಸೆ. 25 ರಂದು ಗದಗದಲ್ಲಿ ನಡೆದ ಕಾಂಗ್ರೆಸ್‌ ಸಭೆಯಲ್ಲಿ ಹೋರಾಟದ ಶಿಬಿರ ಸ್ಥಾಪಿಸುವ ನಿರ್ಣಯ ಮಾಡಲಾ ಯಿತು. ಮುಂಡರಗಿ, ಗಜೇಂದ್ರಗಡ, ನಾಗಪ್ಪನಗಡ, ಕಂಪ್ಲಿ, ಶಿರಗುಪ್ಪಗಳಲ್ಲಿ ಹೋರಾಟದ ಶಿಬಿರಗಳು ಸ್ಥಾಪನೆ ಯಾದವು. ಅಲ್ಲಿ ಕಾರ್ಯಕರ್ತರಿಗೆ ವಿಶೇಷ ತರಬೇತಿ ನೀಡಲಾಯಿತು.ನವಲಿಯಲ್ಲಿ ಮೊದಲ ಬಲಿ

1948ರಲ್ಲಿ ಗಂಗಾವತಿ ತಾಲ್ಲೂಕಿನ ನವಲಿ ಗ್ರಾಮದಲ್ಲಿ ಗ್ರಾಮಸ್ಥರು ಸರ್ಕಾರಕ್ಕೆ ಲೆವಿ ( ಕಂದಾಯದ ಭಾಗದ ಧಾನ್ಯ) ಕೊಡಲು ನಿರಾಕರಿ ಸಿದರು. ಇದೇ ವರ್ಷ ಜುಲೈನಲ್ಲಿ ಗ್ರಾಮಕ್ಕೆ ನುಗ್ಗಿದ  ನಿಜಾಮರ ಪೊಲೀಸರು ಚಳ್ಳೂರು ರಾಘವೇಂದ್ರ ರಾವ್‌ ಸೇರಿದಂತೆ ಹಲವರ ಮೇಲೆ ಪ್ರಕರಣ ದಾಖಲಿಸಿದರು.

ಕೊನೆಗೂ ರೈತರು ಲೆವಿ ನೀಡಲು ನಿರಾಕರಿಸಿ ಮೆರವಣಿಗೆ ನಡೆಸಿದರು. ಅದರ ಮೇಲೆ ಪೊಲೀಸರು ಗೋಲಿಬಾರ್‌ ನಡೆಸಿದರು. ಗೋಲಿ ಬಾರ್‌ನಲ್ಲಿ  ರೈತ ಮುಖಂಡ  ಮಾಕಣ್ಣ ಕಂಬಳಿ ಸ್ಥಳದಲ್ಲೇ ಮೃತಪಟ್ಟ. ಗಾಯಗೊಂಡ ಇನ್ನೊಬ್ಬ ರೈತ ರೋಮ್ಲ್ಯಾಪ್ಪ ಲಮಾಣಿ ಆಸ್ಪತ್ರೆಯಲ್ಲಿ ಮೃತಪಟ್ಟ.ಮಾಲಗಿತ್ತಿಯಲ್ಲಿ ರಜಾಕಾರರ ಹಾವಳಿ ವಿಪರೀತವಾಗಿತ್ತು. ಅಲ್ಲಿ ಹೋರಾಟಗಾರರು ಬಾಂಬ್‌ ಸ್ಫೋಟಿಸಿ 7 ಮಂದಿ ಮೀಸಲು ಪಡೆ ಪೊಲೀಸ ರನ್ನು ಕೊಂದರು. ಶಸ್ತ್ರಾಸ್ತ್ರ ಲೂಟಿ ಮಾಡಿ ಹೊತ್ತೊಯ್ದರು. 1947ರ ಡಿ. 8ರಂದು ಹಿರೇವಂಕಲಕುಂಟಿ ಪೊಲೀಸ್‌ ಠಾಣೆ ಮೇಲೆ ದಾಳಿ ಮಾಡಿದರು.

ಹುಲಿಹೈದರ್‌ನ ಜನ ಪೀಡಕ ತಹಶೀಲ್ದಾರ್‌ ಗುನ್ನಾಳಿಗೆ ಬಂದಿದ್ದಾಗ ಅಲ್ಲಿನ ಯುವಕರಿಂದ ಚೆನ್ನಾಗಿಯೇ ಲಾಠಿಯೇಟು ತಿಂದಿದ್ದ. ಸೆ. 10 1948 ಯಲಬುರ್ಗಾ ತಹಶೀಲ್ದಾರ್ ಕಚೇರಿ ಮೇಲೆ ದಾಳಿ ನಡೆಯಿತು. 1948 ಸೆ. 16ರಂದು ಭಾರತೀಯ ಸೈನಿಕರು ಮತ್ತು ನಿಜಾಮರ ಸೈನಿಕರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಕಮಾಂಡರ್ ಶ್ರೀರಾಮುಲು ಹತ್ಯೆಗೊಳಗಾದರು. ಕುಕನೂರು ಠಾಣೆಗೆ ಮುತ್ತಿಗೆ, ಕವಲೂರು ಹತ್ಯಾಕಾಂಡ, ಉಪ್ಪಿನಬೆಟಗೇರಿ ಘರ್ಷಣೆ ಹೀಗೆ ಹಲವು ಘಟನೆಗಳು ಕಣ್ಣಮುಂದೆ ಹಾದುಹೋಗುತ್ತವೆ.ವಿಮೋಚನೆ 1948, ಸೆ. 17

ಕೊನೆಗೂ ಜನರ ಮನವಿಗೆ ಕಿವಿಗೊಟ್ಟ ಭಾರತ ಸರ್ಕಾರ ‘ಪೊಲೀಸ್‌ ಆ್ಯಕ್ಷನ್‌; ಆಪರೇಷನ್‌ ಪೋಲೋ’ ಕಾರ್ಯಾಚರಣೆ ಕೈಗೊಂಡಿತು. ದಕ್ಷಿಣ ಭಾರತದ ಪ್ರಧಾನ ದಂಡನಾಯಕ ಮಹಾರಾಜ್‌ ಸಿಂಗ್‌, ಮೇಜರ್‌ ಜನರಲ್‌ ಡಿ.ಎಸ್‌. ಬ್ರಾರ್‌, ಜನರಲ್‌ ಜೆ.ಎನ್‌.ಚೌಧರಿ ನೇತೃತ್ವದಲ್ಲಿ ಸೈನ್ಯ ಮುನ್ನುಗ್ಗಿತು.

ನಿಜಾಮನು ಮುನಿರಾಬಾದ್‌ನ ತುಂಗಭದ್ರಾ ಅಣೆಕಟ್ಟೆ ಬಳಿ ನಿಜಾಮ ಉಸ್ಮಾನ್‌ ಅಲಿ ಖಾನ್‌ ಶರಣಾದ. 1948ರ ಸೆ. 18ರಂದು ಹೈದರಾಬಾದ್‌ ಪ್ರಾಂತ್ಯ ಭಾರತದೊಂದಿಗೆ ವಿಲೀನವಾಯಿತು.

(ಆಧಾರ: ಕೊಪಣ ಸಿರಿ; ಜಿಲ್ಲಾ ಅಧ್ಯಯನ ಗ್ರಂಥ ಪುಟ 87–94)

ವಿಮೋಚನಾ ದಿನ ಇಂದು

ಕೊಪ್ಪಳ: ಹೈ
ದರಾಬಾದ್ ವಿಮೋಚನಾ ದಿನದ ಅಂಗವಾಗಿ ಸೆ. 17ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಬೆಳಿಗ್ಗೆ 9ಕ್ಕೆ ರಾಷ್ಟ್ರಧ್ವಜಾರೋಹಣ ನಡೆಸಲಿದ್ದಾರೆ. ಬಳಿಕ ಸಮಾರಂಭ ನಡೆಯಲಿದೆ.ಗಂಗಾವತಿ ವರದಿ: ನಗರದ ಕನಕಗಿರಿ ರಸ್ತೆ ಯಲ್ಲಿರುವ ಚನ್ನಬಸವ ಸ್ವಾಮಿ ತಾಲ್ಲೂಕು ಕ್ರೀಡಾಂಗಣದಲ್ಲಿ ಸೆ. 17 ರಂದು ಬೆಳಿಗ್ಗೆ 9 ಗಂಟೆಗೆ ಹೈ–ಕ ವಿಮೋಚನಾ ದಿನಾಚರಣೆ ಅಂಗವಾಗಿ ತಹಶೀಲ್ದಾರ ಗಂಗಪ್ಪ ಕಲ್ಲೂರು ಧ್ವಜಾರೋಹಣ ನೆರವೇರಿಸುವರು.ಯಲಬುರ್ಗಾ ವರದಿ:  ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ ಬಯಲು ರಂಗಮಂದಿರದಲ್ಲಿ ಸೆ. 17 ರಂದು ಬೆಳಿಗ್ಗೆ 9ಕ್ಕೆ ಹೈದರಾಬಾದ್‌ ಕರ್ನಾಟಕ ವಿಮೋಚನಾ ದಿನಾಚರಣೆ ಆಯೋಜಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry