ಗುರುವಾರ , ಮೇ 13, 2021
34 °C

ವಿಮ್ಸನಲ್ಲಿ 99 ಪ್ರಕರಣ ಸಾಬೀತು

ಪ್ರಜಾವಾಣಿ ವಾರ್ತೆ/ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಬಳ್ಳಾರಿಯೂ ಒಳಗೊಂಡಂತೆ ಸುತ್ತಮುತ್ತಲಿನ ನಾಲ್ಕೈದು ಜಿಲ್ಲೆಗಳಲ್ಲಿ ಡೆಂಗೆ ಕಾಯಿಲೆ ಸಾಕಷ್ಟು ಭೀತಿ ಮೂಡಿಸಿದೆ.ಕಳೆದ ಜನವರಿಯಿಂದ ಸಾವಿರಾರು ಜನ ಶಂಕಿತ ಡೆಂಗೆಯಿಂದ ಬಳಲಿದ್ದು, ಇದುವರೆಗೆ 99 ಜನರಲ್ಲಿ ಡೆಂಗೆ ಇರುವುದು ಸಾಬೀತಾಗಿದೆ.ಬಳ್ಳಾರಿ, ರಾಯಚೂರು, ಕೊಪ್ಪಳ, ಚಿತ್ರದುರ್ಗ ಜಿಲ್ಲೆಗಳ ವಿವಿಧೆಡೆಯಿಂದ ಮಾತ್ರವಲ್ಲದೆ, ನೆರೆಯ ಆಂಧ್ರಪ್ರದೇಶದ ಅನಂತಪುರ ಮತ್ತು ಕರ್ನೂಲ್ ಜಿಲ್ಲೆಗಳಿಂದಲೂ ಆಗಮಿಸಿರುವ ರೋಗಿಗಳು ಸ್ಥಳೀಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ)ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಕೆಲವರು ಗುಣಮುಖರಾಗಿದ್ದರೆ, ಇನ್ನು ಕೆಲವರು ಸಾವಿಗೀಡಾಗಿದ್ದಾರೆ.ಮುಖ್ಯವಾಗಿ ರಾಯಚೂರು ಜಿಲ್ಲೆಯ ಲಿಂಗಸ್ಗೂರು, ಮಾನ್ವಿ, ಸಿಂಧನೂರು, ಕೊಪ್ಪಳ ಜಿಲ್ಲೆಯ ಗಂಗಾವತಿ, ಕೊಪ್ಪಳ, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಹಾಗೂ ಬಳ್ಳಾರಿ ಜಿಲ್ಲೆಯ ಬಹುತೇಕ ತಾಲ್ಲೂಕಿನ ಬಡ ರೋಗಿಗಳು ಮಾರಕ ಡೆಂಗೆ ಕಾಯಿಲೆಗೆ ವಿಮ್ಸ ಆಸ್ಪತ್ರೆಯನ್ನೇ ಆಶ್ರಯಿಸಿದ್ದಾರೆ.ಜೂನ್ ತಿಂಗಳಲ್ಲೇ 57 ಶಂಕಿತ ಡೆಂಗೆ ಪೀಡಿತರು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ಅವರಲ್ಲಿ 16 ಜನರಿಗೆ ಡೆಂಗೆ ಇರುವುದು ಸಾಬೀತಾಗಿದೆ. ಲಿಂಗಸ್ಗೂರು ಸಮೀಪದ ಗ್ರಾಮವೊಂದರ ಬಾಲಕಿ ಚಿಕಿತ್ಸೆಗೆ ಸ್ಪಂದಿಸದೆ ಇತ್ತೀಚೆಗಷ್ಟೇ  ಸಾವಿಗೀಡಾಗಿದ್ದಾಳೆ.ಕಳೆದ ಜನವರಿಯಿಂದ ಜೂನ್ 19ರವರೆಗೆ ಶಂಕಿತ ಡೆಂಗೆಯಿಂದ ಬಳಲುತ್ತಿದ್ದ ಒಟ್ಟು 452 ಜನ ರೋಗಿಗಳ ರಕ್ತವನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಅವರಲ್ಲಿ 99 ಜನರಿಗೆ ಡೆಂಗೆ ಇರುವುದು ಸಾಬೀತಾಗಿದೆ. ಜೂನ್ ತಿಂಗಳಲ್ಲಿ ಬಳ್ಳಾರಿ ಜಿಲ್ಲೆಯ 34 ಜನರ ಪೈಕಿ 9 ಜನ, ರಾಯಚೂರು ಜಿಲ್ಲೆಯ 21 ಜನರ ಪೈಕಿ 7 ಜನ ಡೆಂಗೆಯಿಂದ ಬಳಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ವಿಮ್ಸ ಪ್ರಭಾರಿ ನಿರ್ದೇಶಕ ಡಾ.ಸಿದ್ದಲಿಂಗಪ್ಪ ಕರ್ಜಗಿ `ಪ್ರಜಾವಾಣಿ'ಗೆ ತಿಳಿಸಿದರು.ಜನವರಿಯಿಂದ ಇದುವರೆಗೆ ಬಳ್ಳಾರಿ ಜಿಲ್ಲೆಯ 334 ಜನರ ಪೈಕಿ 68 ಜನರಲ್ಲಿ, ಕೊಪ್ಪಳ ಜಿಲ್ಲೆಯ 59 ಜನರಲ್ಲಿ 14, ರಾಯಚೂರು ಜಿಲ್ಲೆಯ 46 ಜನರಲ್ಲಿ 15 ಜನರಲ್ಲಿ, ಚಿತ್ರದುರ್ಗದ ನಾಲ್ವರ ಪೈಕಿ ಇಬ್ಬರಲ್ಲಿ ಡೆಂಗೆ ಇರುವುದು ಬಹಿರಂಗಗೊಂಡಿದ್ದು, ಸೂಕ್ತ ಚಿಕಿತ್ಸೆ ನೀಡಲಾಗಿದೆ ಎಂದು ಅವರು ವಿವರ ನೀಡಿದರು.ಈ ಐದಾರು ಜಿಲ್ಲೆಗಳಲ್ಲಿ ಅನೇಕ ಕಡೆ ಡೆಂಗೆ ಪ್ರಕರಣಗಳು ಇನ್ನೂ ಹೆಚ್ಚಿನ  ಪ್ರಮಾಣದಲ್ಲಿ ಪತ್ತೆಯಾಗಿರುವ ಸಾಧ್ಯತೆಗಳೂ ಇವೆ. ಆದರೆ, ವಿಮ್ಸಗೆ ದಾಖಲಾಗುವವರು ಹಾಗೂ ಈ ಭಾಗದ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವವರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದಾಗ 99 ಜನರಿಗೆ ಡೆಂಗೆ ಆವರಿಸಿರುವುದು ತಿಳಿದುಬಂದಿದೆ ಎಂದು ಅವರು ಹೇಳಿದರು.ಶಂಕಿತ ಡೆಂಗೆಯಿಂದ ಬಳಲಿ ಚಿಕಿತ್ಸೆಗೆ ದಾಖಲಾದ ಅನೇಕರಲ್ಲಿ ಡೆಂಗೆ ಅಂಶ ಇರುವುದು ಸಾಬೀತಾಗಿಲ್ಲ. ರಕ್ತದ ಪರೀಕ್ಷೆಯಲ್ಲಿ `ನೆಗೆಟಿವ್' ಎಂದು ಕಂಡುಬಂದರೂ ಕೆಲವು ಮಕ್ಕಳು ಸಾವಿಗೀಡಾದ ಸಾಧ್ಯತೆಗಳಿವೆ. 5 ವರ್ಷದೊಳಗಿನ ಮಕ್ಕಳೂ ಒಳಗೊಂಡಂತೆ ನಿತ್ಯವೂ ವಿಮ್ಸ ಆಸ್ಪತ್ರೆಗೆ ಐದರಿಂದ ಆರು ಜನ ರೋಗಿಗಳು ದಾಖಲಾಗುವುದು ಸಾಮಾನ್ಯವಾಗಿದೆ. ಕೇವಲ ಡೆಂಗೆ ಮಾತ್ರವಲ್ಲದೆ, ಚಿಕೂನ್ ಗುನ್ಯಾ ಕಾಯಿಲೆ ಪೀಡಿತರೂ ನಿತ್ಯ ಆಸ್ಪತ್ರೆಗೆ ದಾಖಲಾಗುತ್ತಿದ್ದು, 120 ಜನರ ಪೈಕಿ 41 ಜನರಿಗೆ ಚಿಕೂನ್ ಗುನ್ಯಾ ಇರುವುದು ಸಾಬೀತಾಗಿದೆ. ಡೆಂಗೆಯಿಂದ ಬಳಲಿ, ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿರುವವರ ಮಾಹಿತಿ ಲಭ್ಯವಿಲ್ಲ ಎಂದು ಅವರು ತಿಳಿಸಿದರು.ಡೆಂಗೆ ಮತ್ತು ಚಿಕೂನ್ ಗುನ್ಯಾ ಹರಡುವ ಏಡಿಸ್ ಈಜಿಪ್ಟೈ ಸೊಳ್ಳೆಯ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಜಾಗೃತಿ ಮೂಡಿಸುತ್ತಿದ್ದು, ಸಾರ್ವಜನಿಕರೂ ಸ್ವಯಂ ಆಸಕ್ತಿಯಿಂದ ತಮ್ಮ ಮನೆಯ ಸುತ್ತಮುತ್ತಲಿನ ಪರಸರವನ್ನು ಸ್ವಚ್ಚವಾಗಿ ಇಟ್ಟುಕೊಳ್ಳುವ ಮೂಲಕ ಮಾರಕ ಕಾಯಿಲೆಯಿಂದ ದೂರವಿರಬಹುದು ಎಂದು ಅವರು ಸಲಹೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.