ಮಂಗಳವಾರ, ನವೆಂಬರ್ 19, 2019
23 °C
ಕ್ರಿಕೆಟ್: ಚಿನ್ನಸ್ವಾಮಿಯಲ್ಲಿ ರನ್ ಕಾವ್ಯ ರಚಿಸಿದ ಕೊಹ್ಲಿ, ಸಂಗಕ್ಕಾರ ಪಾಳೆಯಕ್ಕೆ ಭರ್ಜರಿ ತಿರುಗೇಟು

`ವಿರಾಟ' ರೂಪಕ್ಕೆ ಸನ್‌ರೈಸರ್ಸ್ ತತ್ತರ

Published:
Updated:

ಬೆಂಗಳೂರು: ಕೊಹ್ಲಿ... ಕೊಹ್ಲಿ... ಎಂದು ಪ್ರೇಕ್ಷಕರ ಗ್ಯಾಲರಿಯಿಂದ ಕೇಳಿ ಬರುತ್ತಿದ್ದ ಕ್ರಿಕೆಟ್ ಪ್ರಿಯರ ಮನದಾಸೆ ಏನೆಂಬುದು ವಿರಾಟ್ ಕೊಹ್ಲಿಗೆ ಚೆನ್ನಾಗಿ ಅರ್ಥವಾದಂತೆ ಕಾಣುತ್ತದೆ. ನಾಯಕ ಕೊಹ್ಲಿ ಅಭಿಮಾನಿಗಳ ಆಸೆಗೆ ತಣ್ಣೀರು ಎರಚಲಿಲ್ಲ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ `ಸೂಪರ್' ಸೋಲಿನ ಸೇಡಿಗೆ ಭರ್ಜರಿ ತಿರುಗೇಟು ನೀಡಿದರಲ್ಲದೇ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಏಳು ವಿಕೆಟ್‌ಗಳ ಅಮೋಘ ಗೆಲುವು ತಂದುಕೊಟ್ಟರು.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ಅನಾವರಣಗೊಂಡಿದ್ದು ಭಾರತ ತಂಡದ ಭಾವಿ ನಾಯಕ ಎನಿಸಿಕೊಳ್ಳುತ್ತಿರುವ ಕೊಹ್ಲಿ ಬ್ಯಾಟಿಂಗ್‌ನ `ವಿರಾಟ' ರೂಪ. ಎರಡು ದಿನಗಳ ಹಿಂದೆ ಮುತ್ತಿನ ನಗರಿ ಹೈದರಾಬಾದ್‌ನಲ್ಲಿ ಕೈ ಜಾರಿ ಹೋಗಿದ್ದ ಗೆಲುವಿನ ತುತ್ತನ್ನು ಆರ್‌ಸಿಬಿ ಬೆಂಗಳೂರಿನಲ್ಲಿ ಬಾಚಿ ತನ್ನ ತೆಕ್ಕೆಗೆ ತೆಗೆದುಕೊಂಡಿತು.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕುಮಾರ ಸಂಗಕ್ಕಾರ ನೇತೃತ್ವದ ಸನ್‌ರೈಸರ್ಸ್ 20 ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 161 ರನ್‌ಗಳನ್ನು ಪೇರಿಸಿಟ್ಟಿತು. ಬಲಿಷ್ಠ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವ ಆರ್‌ಸಿಬಿ ತಂಡಕ್ಕೆ ಈ ಗುರಿ ಕಷ್ಟವೆನಿಸಲಿಲ್ಲ. ಆದರೆ, ಕ್ರಿಕೆಟ್ ಪ್ರೇಮಿಗಳ ನೆಚ್ಚಿನ ಬ್ಯಾಟ್ಸ್‌ಮನ್ ಕ್ರಿಸ್‌ಗೇಲ್ ಆರ್ಭಟಿಸಲಿಲ್ಲ. ಆದರೂ, ಕೊಹ್ಲಿ ಕಟ್ಟಿದ ಅಮೋಘ ಇನಿಂಗ್ಸ್ ನೆರವಿನಿಂದ ರಾಯಲ್ ಚಾಲೆಂಜರ್ಸ್ 17.4 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.ಚೆಂದದ ಬ್ಯಾಟಿಂಗ್: ಪ್ರಮುಖ ಬ್ಯಾಟ್ಸ್‌ಮನ್‌ಗಳು ವಿಫಲರಾದಾಗ ಹೇಗೆ ಇನಿಂಗ್ಸ್ ಕಟ್ಟಬೇಕು ಎನ್ನುವುದನ್ನು ಕೊಹ್ಲಿ ತೋರಿಸಿಕೊಟ್ಟರು.ರಾಯಲ್ ಚಾಲೆಂಜರ್ಸ್‌ನ ಆರಂಭಿಕ ಬ್ಯಾಟ್ಸ್ ಮನ್‌ಗಳಾದ ಮಯಂಕ್ ಅಗರ್‌ವಾಲ್ (29, 20ಎಸೆತ, 3 ಬೌಂಡರಿ, 2 ಸಿಕ್ಸರ್) ಹಾಗೂ ಕೆರಿಬಿಯನ್ ನಾಡಿನ ಗೇಲ್ (13, 15ಎಸೆತ, 2 ಬೌಂಡರಿ) ಮೊದಲ ವಿಕೆಟ್‌ಗೆ 39 ರನ್ ಕಲೆ ಹಾಕಿದರು. ನಂತರ ಶುರುವಾಗಿದ್ದೇ ಕೊಹ್ಲಿಯ ಬೌಂಡರಿ ಹಾಗೂ ಸಿಕ್ಸರ್‌ಗಳ ಅಬ್ಬರ.47 ಎಸೆತಗಳನ್ನು ಎದುರಿಸಿದ ಬಲಗೈ ಬ್ಯಾಟ್ಸ್‌ಮನ್ ಕೊಹ್ಲಿ 11ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳು ಸೇರಿದಂತೆ ಅಜೇಯ 93 ರನ್‌ಗಳನ್ನು ಗಳಿಸಿದರು. ಆರ್‌ಸಿಬಿ ಗೆಲುವು ಪಡೆಯಲು ಕೊನೆಯಲ್ಲಿ 31 ಎಸೆತಗಳಲ್ಲಿ 51 ರನ್ ಗಳಿಸಬೇಕಾದ ಸವಾಲಿತ್ತು.ಆದರೆ, ಕೊಹ್ಲಿ ಮುಂದಿನ ಎರಡು ಓವರ್‌ನಲ್ಲಿ ಪಂದ್ಯದ ಗತಿಯನ್ನೇ ಬದಲಿಸಿ ಪ್ರೇಕ್ಷಕರ ಮನದಲ್ಲಿ `ಗೆಲುವಿನ ಮಹಲ್' ಕಟ್ಟಿದರು.16ನೇ ಓವರ್‌ನ ಮೊದಲ ಎರಡೂ ಎಸೆತಗಳನ್ನು ಸೈಟ್‌ಸ್ಕ್ರೀನ್ ಬಳಿ ಸಿಕ್ಸರ್ ಸಿಡಿಸಿದರೆ, ಇದೇ ಓವರ್‌ನ ಐದನೇ ಎಸೆತವನ್ನು ಬೌಂಡರಿಗೆ ಅಟ್ಟಿದರು. ಈ ವೇಳೆಗಾಗಲೇ ಸಂಗಕ್ಕಾರ ಪಾಳೆಯದಲ್ಲಿ ಸೋಲಿನ ಆತಂಕ ಕಾಡತೊಡಗಿತ್ತು. 21 ರನ್‌ಗಳನ್ನು ಬಿಟ್ಟುಕೊಟ್ಟ ಸನ್‌ರೈಸರ್ಸ್ ತಂಡದ ಅಮಿತ್ ಮಿಶ್ರಾ ಮೊಗ, ಪಂದ್ಯ ಸೋಲುವ ಮುನ್ನವೇ ಬಾಡಿ ಹೋಗಿತ್ತು.`ದಾಂಪತ್ಯ ಜೀವನಕ್ಕೆ ಕಾಲಿಟ್ಟ ಡಿವಿಲಿಯರ್ಸ್ ನಿಮಗೆ ಶುಭಾಷಯಗಳು' ಎನ್ನುವ ಸಂದೇಶ ಕ್ರೀಡಾಂಗಣದ ಎಲೆಕ್ಟ್ರಾನಿಕ್ ಬೋರ್ಡ್ ಮೇಲೆ ಕಾಣಿಸಿಕೊಂಡಾಗ ಪ್ರೇಕ್ಷಕರ ಗ್ಯಾಲರಿಯಿಂದ ಕೇಳಿಬಂದಿದ್ದು, `ಡಿವಿಲಿಯರ್ಸ್... ಡಿವಿಲಿಯರ್ಸ್...' ಎನ್ನುವ ಬೆಂಬಲದ ಮಹಾಪೂರ. ಆದರೆ, ಡಿವಿಲಿಯರ್ಸ್ ಒಂದು ಸಿಕ್ಸರ್ ಸೇರಿದಂತೆ 15 ರನ್ ಗಳಿಸಿ ಕ್ಯಾಮರೂನ್ ವೈಟ್ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು.ಅಮೋಘ ಜೊತೆಯಾಟ: ನಾಯಕ ಕೊಹ್ಲಿ ತಂಡವನ್ನು ಗೆಲುವಿನ ದಡ ಸೇರಿಸಲು ಹೋರಾಟ ನಡೆಸುತ್ತಿದ್ದರೆ, ಇನ್ನೊಂದು ಬದಿಯಿದ್ದ ಬ್ಯಾಟ್ಸ್‌ಮನ್ ಪೆವಿಲಿಯನ್ ಸೇರಿಕೊಳ್ಳುತ್ತಿದ್ದರು. ಆದರೆ, ಮೊಯ್ಸಿಸ್ ಹೆನ್ರಿಕ್ಸ್ (ಔಟಾಗದೆ 7) ಹಾಗೆ ಮಾಡಲಿಲ್ಲ. ಹೆನ್ರಿಕ್ಸ್ ಎರಡಂಕಿಯ ಮೊತ್ತ ಮುಟ್ಟಲಿಲ್ಲವಾದರೂ, ಕೊಹ್ಲಿಗೆ ಉತ್ತಮ ಬೆಂಬಲ ನೀಡಿದರು. ಈ ಜೋಡಿ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ ಕೇವಲ 34 ಎಸೆತಗಳಲ್ಲಿ ಅಜೇಯ 66 ರನ್‌ಗಳನ್ನು ಗಳಿಸಿತು. ಈ ಗೆಲುವಿನಿಂದ ಎರಡು ಅಂಕಗಳನ್ನು ಪಡೆದ ರಾಯಲ್ ಚಾಲೆಂಜರ್ಸ್ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು. ರಾಜಸ್ತಾನ ರಾಯಲ್ಸ್ ಅಗ್ರಸ್ಥಾನದಲ್ಲಿದೆ.ವೈಟ್ ನೆರವು: ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಆರಂಭಿಕ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ನಡುವೆಯೂ ಸವಾಲಿನ ಮೊತ್ತವನ್ನು ಗಳಿಸಿಟ್ಟಿತು. ಇದಕ್ಕೆ ಕಾರಣವಾಗಿದ್ದು ಕ್ಯಾಮರೂನ್ ವೈಟ್ (52, 34ಎಸೆತ, 3 ಬೌಂಡರಿ, 3 ಸಿಕ್ಸರ್) ಹಾಗೂ ತಿಸ್ಸಾರ ಪೆರೆರಾ (40, 24ಎಸೆತ, 1 ಬೌಂಡರಿ, 4 ಸಿಕ್ಸರ್) ಅವರ ಜವಾಬ್ದಾರಿಯುತ ಬ್ಯಾಟಿಂಗ್.ಮೊದಲ ಹತ್ತು ಓವರ್‌ಗಳಲ್ಲಿ 62 ರನ್ ಮಾತ್ರ ಗಳಿಸಿದ್ದ ಸನ್‌ರೈಸರ್ಸ್ ತಂಡ ನಂತರದ ಹತ್ತು ಓವರ್‌ಗಳಲ್ಲಿ 99 ರನ್‌ಗಳನ್ನು ಗಳಿಸಿತು. ಈ ವೇಳೆ ಕ್ರೀಡಾಂಗಣದಲ್ಲಿ `ಸನ್ ಶೈನಿಂಗ್' ಎನ್ನುವ ಸಂದೇಶ ಹರಿದು ಬಂತು. ಆದರೆ, ರಾಯಲ್ ಚಾಲೆಂಜರ್ಸ್ ತಂಡದ ಕ್ರಿಕೆಟ್ ಪ್ರೇಮಿಗಳು `ಆರ್‌ಸಿಬಿ... ಆರ್‌ಸಿಬಿ...' ಎನ್ನುವ ಉತ್ಸಾಹದ ಬೆಂಬಲ ಮಾತ್ರ ಕೊಂಚವೂ ಕಡಿಮೆಯಾಗಲಿಲ್ಲ.

ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ವಿರುದ್ಧದ ಹಿಂದಿನ ಪಂದ್ಯಗಳಲ್ಲಿ ಉತ್ತಮ ಬೌಲಿಂಗ್ ಮಾಡಿದ್ದ ವಿನಯ್ ಕುಮಾರ್ ಈ ಪಂದ್ಯದಲ್ಲಿ 43 ರನ್‌ಗಳನ್ನು ಬಿಟ್ಟುಕೊಟ್ಟು ದುಬಾರಿ ಎನಿಸಿದರು. ಆದರೆ, ರುದ್ರ ಪ್ರತಾಪ್ ಸಿಂಗ್ (27ಕ್ಕೆ3) ಗಮನ ಸೆಳೆದರು.

ಈ ಋತುವಿನ ಐಪಿಎಲ್‌ನ ಮೊದಲ ಎರಡೂ ಪಂದ್ಯಗಳಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಳ್ಳದ ಆರ್‌ಸಿಬಿ ತಂಡದ ಕರುಣ್ ನಾಯರ್ ಹಾಗೂ ತಿಲಕರತ್ನೆ ದಿಲ್ಶಾನ್ ಅವರಿಗೆ ಅಂತಿಮ ಹನ್ನೊಂದರಲ್ಲಿ ಸ್ಥಾನ ಲಭಿಸಲಿಲ್ಲ. ಇವರ ಬದಲು ಡಿವಿಲಿಯರ್ಸ್ ಹಾಗೂ ರುದ್ರಪ್ರತಾಪ್ ಸಿಂಗ್‌ಗೆ ಸ್ಥಾನ ಸಿಕ್ಕಿತ್ತು. ಸನ್‌ರೈಸರ್ಸ್ ತಂಡದಲ್ಲಿ ಅಂಕಿತ್ ಶರ್ಮಾ ಬದಲು ಬಿಪ್ಲವ್ ಸಾಮಂತ್ರೆಯಾಗೆ ಅವಕಾಶ ನೀಡಲಾಗಿತ್ತು.

                                        

                                              ಸ್ಕೋರ್ ವಿವರ

ಸನ್‌ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 161


ಅಕ್ಷತ್ ರೆಡ್ಡಿ ಸಿ ವಿನಯ್ ಕುಮಾರ್ ಬಿ ಆರ್.ಪಿ. ಸಿಂಗ್  12

ಪಾರ್ಥಿವ್ ಪಟೇಲ್ ಬಿ ಮುತ್ತಯ್ಯ ಮುರಳೀಧರನ್  20

ಕುಮಾರ ಸಂಗಕ್ಕಾರ ಸಿ ವಿರಾಟ್ ಕೊಹ್ಲಿ ಬಿ ಮುರಳಿ ಕಾರ್ತಿಕ್  23

ಕ್ಯಾಮರೂನ್ ವೈಟ್ ಸಿ ಡಿವಿಲಿಯರ್ಸ್ ಬಿ ವಿನಯ್ ಕುಮಾರ್  52

ತಿಸ್ಸಾರ ಪೆರೆರಾ ಬಿ ಆರ್.ಪಿ. ಸಿಂಗ್  40

ಆಶಿಶ್ ರೆಡ್ಡಿ ಬಿ ಆರ್.ಪಿ. ಸಿಂಗ್  03

ಹನುಮ ವಿಹಾರಿ ಔಟಾಗದೆ  04

ಬಿಪ್ಲವ್ ಸಾಮಂತ್ರೆಯೆ ಔಟಾಗದೆ  02

ಇತರೆ: (ನೋ ಬಾಲ್-1, ವೈಡ್-4)  05

ವಿಕೆಟ್ ಪತನ: 1-12 (ಅಕ್ಷತ್; 2.1), 2-50 (ಪಾರ್ಥಿವ್; 7.5), 3-62 (ಸಂಗಕ್ಕಾರ; 10.2), 4-142 (ಪೆರೆರಾ; 17.4), 5-155 (ವೈಟ್; 18.6), 6-155 (ಆಶಿಶ್; 19.1).

ಬೌಲಿಂಗ್: ಆರ್.ಪಿ. ಸಿಂಗ್ 4-0-27-3, ಆರ್. ವಿನಯ್ ಕುಮಾರ್ 4-0-43-1, ಜಯದೇವ್ ಉನದ್ಕತ್ 4-0-29-0, ಮುತ್ತಯ್ಯ ಮುರಳೀಧರನ್ 4-0-23-1, ಮುರಳಿ ಕಾರ್ತಿಕ್ 3-0-21-1, ಮೊಯ್ಸಿಸ್ ಹೆನ್ರಿಕ್ಸ್ 1-0-18-0.ರಾಯಲ್ ಚಾಲೆಂಜರ್ಸ್ ಬೆಂಗಳೂರು 17.4 ಓವರ್‌ಗಳಲ್ಲಿ 3ವಿಕೆಟ್‌ಗೆ 162

ಮಯಂಕ್ ಅಗರ್‌ವಾಲ್ ಸಿ ಕುಮಾರ ಸಂಗಕ್ಕಾರ ಬಿ ತಿಸ್ಸಾರ ಪೆರೆರಾ  29

ಕ್ರಿಸ್ ಗೇಲ್ ಸಿ ಪಾರ್ಥಿವ್ ಪಟೇಲ್ ಬಿ ಇಶಾಂತ್ ಶರ್ಮಾ  13

ವಿರಾಟ್ ಕೊಹ್ಲಿ ಔಟಾಗದೆ  93

ಎ.ಬಿ. ಡಿವಿಲಿಯರ್ಸ್ ಸಿ ಹನುಮ ವಿಹಾರಿ ಬಿ ಕೆಮರೂನ್ ವೈಟ್  15

ಮೊಯ್ಸಿಸ್ ಹೆನ್ರಿಕ್ಸ್ ಔಟಾಗದೆ  07

ಇತರೆ: (ಲೆಗ್ ಬೈ-1, ವೈಡ್-4)  05

ವಿಕೆಟ್ ಪತನ: 1-39 (ಮಯಾಂಕ್; 5.1), 2-47 (ಗೇಲ್; 6.1), 3-96 (ಡಿವಿಲಿಯರ್ಸ್; 11.6).

ಬೌಲಿಂಗ್: ಹನುಮ ವಿಹಾರಿ 1-0-12-0, ಡೇಲ್ ಸ್ಟೈನ್ 4-0-16-0, ಇಶಾಂತ್ ಶರ್ಮಾ 3.4-0-30-1, ತಿಸ್ಸಾರ ಪೆರೆರಾ 3-035-1, ಅಮಿತ್ ಮಿಶ್ರಾ 4-0-42-0, ಅಶಿಶ್ ರೆಡ್ಡಿ 1-0-12-0, ಕ್ಯಾಮರೂನ್ ವೈಟ್ 1-0-14-1.ಫಲಿತಾಂಶ: ಆರ್‌ಸಿಬಿಗೆ ಏಳು ವಿಕೆಟ್ ಗೆಲುವು,

ಪಂದ್ಯ ಶ್ರೇಷ್ಠ: ವಿರಾಟ್ ಕೊಹ್ಲಿ

ಪ್ರತಿಕ್ರಿಯಿಸಿ (+)