ವಿರೋಧಕ್ಕೆ ಸರ್ವಾನುಮತ

7
ಪೌರ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಬೇಡ: ವಿಧಾನಸಭೆಯಲ್ಲಿ ನಿರ್ಣಯ

ವಿರೋಧಕ್ಕೆ ಸರ್ವಾನುಮತ

Published:
Updated:
ವಿರೋಧಕ್ಕೆ ಸರ್ವಾನುಮತ

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳಿಗೆ (ಪಾಲಿಕೆಗಳು, ನಗರ ಮತ್ತು ಪುರಸಭೆಗಳು ಹಾಗೂ ಪಟ್ಟಣ ಪಂಚಾಯ್ತಿಗಳು) ಸದ್ಯಕ್ಕೆ ಚುನಾವಣೆ ಬೇಡ ಎಂದು ವಿಧಾನಸಭೆ ಮಂಗಳವಾರ ಸರ್ವಾನುಮತದ ನಿರ್ಣಯ ಅಂಗೀಕರಿಸಿದೆ. ಆದರೆ, ಅತ್ತ ರಾಜ್ಯ ಚುನಾವಣಾ ಆಯುಕ್ತ ಸಿ.ಆರ್. ಚಿಕ್ಕಮಠ ಅವರು  ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, `2007ರಲ್ಲಿ ಇದ್ದ ಮೀಸಲು ಪಟ್ಟಿ ಪ್ರಕಾರ ಚುನಾವಣೆ ನಡೆಸಲು ಸಿದ್ಧರಾಗಿ' ಎಂದು ಸೂಚನೆ ನೀಡಿದ್ದಾರೆ.ಆಯೋಗ ಮತ್ತು ಚುನಾಯಿತ ಪ್ರತಿನಿಧಿಗಳ ನಡುವಣ ಈ `ಸಂಘರ್ಷ' ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ. ಇದರ ನಡುವೆ, ಯಾವುದೇ ಕ್ಷಣದಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ.200ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ವಾರು ಮೀಸಲು ಪಟ್ಟಿಯನ್ನು ಸೋಮವಾರದ (ಫೆ. 4) ಒಳಗೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿತ್ತು. ಆದರೆ, ಮೀಸಲು ಪಟ್ಟಿ ಸಲ್ಲಿಸುವುದಕ್ಕೆ ಇದೇ 15ರವರೆಗೆ ಕಾಲಾವಕಾಶ ಬೇಕು ಎಂದು ರಾಜ್ಯ ಸರ್ಕಾರ ಸೋಮವಾರ ಸಂಜೆ ಆಯೋಗವನ್ನು ಪತ್ರದ ಮೂಲಕ ಕೋರಿತ್ತು. ಇದರ ಬೆನ್ನಿಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರಿಗೆ ರಾಜ್ಯ ಚುನಾವಣಾ ಆಯುಕ್ತರು ಪತ್ರ ಬರೆದು, `ಸುಪ್ರೀಂಕೋರ್ಟ್ ಆದೇಶದಂತೆ ಚುನಾವಣೆ ನಡೆಸುವುದು ಅನಿವಾರ್ಯ' ಎಂದು ವಿವರಿಸಿದ್ದಾರೆ.ಆಯೋಗದ ನಿಲುವಿನ ಬಗ್ಗೆ ರಂಗನಾಥ್ ಅವರು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಜತೆ ಮಂಗಳವಾರ ಮಾತುಕತೆ ನಡೆಸಿದರು. ವಿಧಾನಸಭೆಯ ನಿರ್ಣಯದ ಪ್ರತಿಯನ್ನೂ ರಾತ್ರಿ ಆಯೋಗಕ್ಕೆ ಕಳುಹಿಸಲಾಗಿದೆ. ಸರ್ಕಾರದ ನಿಲುವು ಏನೇ ಇದ್ದರೂ ಸುಪ್ರೀಂಕೋರ್ಟ್ ಆದೇಶ ಪಾಲಿಸುವುದು ಅನಿವಾರ್ಯ ಎನ್ನುವ ಅಭಿಪ್ರಾಯವನ್ನು ಆಯೋಗ ಹೊಂದಿದೆ. ಜಿಲ್ಲಾಧಿಕಾರಿಗಳಿಗೆ ಇ-ಮೇಲ್ ಮೂಲಕ ಬರೆದ ಪತ್ರದಲ್ಲಿ 2007ರಲ್ಲಿ ಇದ್ದ ವಾರ್ಡ್‌ವಾರು ಮೀಸಲು ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದೆ.ವಿಧಾನಸಭೆಯಲ್ಲಿ ನಿರ್ಣಯ: `2011ರ ಜನಗಣತಿ ಆಧರಿಸಿ ಮೀಸಲು ಪಟ್ಟಿ ತಯಾರಿಸಿದರೆ ಮಾತ್ರ ಪರಿಶಿಷ್ಟ ಜಾತಿ ಮತ್ತು ಪಂಗಡ, ಇತರ ಹಿಂದುಳಿದ ಜಾತಿಗಳ ಜನರಿಗೆ ನ್ಯಾಯ ಒದಗಿಸಲು ಸಾಧ್ಯ. ಅದಕ್ಕಾಗಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದಕ್ಕೆ ಹಾಕಬೇಕು' ಎಂದು ರಾಜ್ಯ ಚುನಾವಣಾ ಆಯೋಗವನ್ನು ಒತ್ತಾಯಿಸುವ ಖಾಸಗಿ ನಿರ್ಣಯವನ್ನು ವಿಧಾನಸಭೆಯು ಸರ್ವಾನುಮತದಿಂದ ಅಂಗೀಕರಿಸಿತು.ಪಕ್ಷೇತರ ಸದಸ್ಯ ಗೂಳಿಹಟ್ಟಿ ಶೇಖರ್ ಮಂಡಿಸಿದ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ, `ಎಲ್ಲ ವರ್ಗದ ಜನರಿಗೆ ನ್ಯಾಯ ಒದಗಿಸುವ ದೃಷ್ಟಿಯಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದಕ್ಕೆ ಹಾಕಬೇಕು. ಈ ನಿರ್ಣಯವನ್ನು ತಕ್ಷಣವೇ ಚುನಾವಣಾ ಆಯೋಗಕ್ಕೆ ತಲುಪಿಸಲಾಗುವುದು' ಎಂದರು.ಇದಕ್ಕೂ ಮೊದಲು ಶಾಸಕ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್ ಮಾತನಾಡಿ, `ವಾಸ್ತವಿಕ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಪಟ್ಟಿ ತಯಾರಿಸದೇ ಇದ್ದರೆ ಪರಿಶಿಷ್ಟರು, ಹಿಂದುಳಿದವರು, ಮಹಿಳೆಯರು- ಎಲ್ಲರಿಗೂ ತೊಂದರೆ ಆಗುತ್ತದೆ. ಅಭಿವೃದ್ಧಿ ಯೋಜನೆಗಳ ಮೇಲೂ ಅಡ್ಡ ಪರಿಣಾಮ ಬೀರುತ್ತದೆ' ಎಂದರು.`ಬಹುತೇಕ ಯೋಜನೆಗಳಿಗೆ ಅನುದಾನ ಬಿಡುಗಡೆ ಆಗುವುದು ಜನಸಂಖ್ಯೆ ಆಧಾರದಲ್ಲಿ. ರಾಮನಗರ, ಚನ್ನಪಟ್ಟಣ ಪಟ್ಟಣಗಳಿಗೆ ಹೋಲಿಸಿದರೆ ಕನಕಪುರದ ಜನಸಂಖ್ಯೆ ಎರಡು ಸಾವಿರದಷ್ಟು ಕಡಿಮೆ ಇರಬಹುದು. ನಗರೋತ್ಥಾನ ಯೋಜನೆಯಲ್ಲಿ ಕನಕಪುರಕ್ಕೆ ರೂ5 ಕೋಟಿ ಬಿಡುಗಡೆ ಆಗಿದ್ದರೆ, ರಾಮನಗರ, ಚನ್ನಪಟ್ಟಣಗಳಿಗೆ ತಲಾ ರೂ15 ಕೋಟಿ ಬಿಡುಗಡೆ ಆಗಿದೆ' ಎಂದು ಅವರು ವಿವರಿಸಿದರು. `ಫೆಬ್ರುವರಿ- ಮಾರ್ಚ್ ತಿಂಗಳಲ್ಲಿ ಶಾಲಾ ಕಾಲೇಜುಗಳ ಪರೀಕ್ಷೆಗಳಿವೆ. ಸರ್ಕಾರ ಯಾವುದೇ ಸಿದ್ಧತೆ ಮಾಡಿಕೊಳ್ಳದೇ ಚುನಾವಣೆ ನಡೆಸುವುದಾದರೂ ಹೇಗೆ' ಎಂದು ಅವರು ಪ್ರಶ್ನಿಸಿದರು.ವಿರೋಧ ಪಕ್ಷದ ಉಪ ನಾಯಕ ಟಿ.ಬಿ.ಜಯಚಂದ್ರ, `ಚುನಾವಣೆ ನಡೆಸಲು ಸರ್ಕಾರದ ಸಹಕಾರ ಅತ್ಯವಶ್ಯ. ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಚುನಾವಣಾ ಆಯೋಗವು ಚುನಾವಣೆ ನಡೆಸಲು ಮುಂದಾಗಿರುವುದು ಸರಿಯಲ್ಲ' ಎಂದರು.`ನಗರೀಕರಣ ಹೆಚ್ಚಾಗಿದೆ. 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 30ರಿಂದ 40 ಹೊಸ ಪುರಸಭೆ/ ನಗರಸಭೆಗಳು ಅಸ್ತಿತ್ವಕ್ಕೆ ಬರಲಿವೆ. ತುಮಕೂರು ಪಾಲಿಕೆ ಆಗಲಿದೆ. ವಿಧಾನಸಭೆ ಚುನಾವಣೆ ಸಮೀಪದಲ್ಲಿರುವುದರಿಂದ ಸ್ಥಳೀಯ ಸಂಸ್ಥೆಗಳಿಗೂ ಈಗಲೇ ಚುನಾವಣೆ ನಡೆಸುವುದು ಸೂಕ್ತವಲ್ಲ. ಅಗತ್ಯ ಬಿದ್ದರೆ ಸರ್ಕಾರ ಕೋರ್ಟ್ ಮೊರೆ ಹೋಗಬೇಕು' ಎಂದರು.ಜೆಡಿಎಸ್‌ನ ಬಂಡೆಪ್ಪ ಕಾಶೆಂಪುರ, ಕಾಂಗ್ರೆಸ್‌ನ ತನ್ವೀರ್ ಸೇಠ್, ಎಂ.ಸಿ.ಸುಧಾಕರ್ ಮೊದಲಾದವರು `ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದಕ್ಕೆ ಹಾಕಬೇಕು' ಎಂದರು.

ಗೊಂದಲ ನಮ್ಮಿಂದಲ್ಲ...

`ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡುವ ಅಗತ್ಯವನ್ನು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿಲ್ಲ' ಎಂದು ಸಚಿವ ಬಾಲಚಂದ್ರ ಜಾರಕಿಹೊಳಿ ಸಮಜಾಯಿಷಿ ನೀಡಿದರು.ಡಿ.ಕೆ.ಶಿವಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, `ಸರ್ಕಾರ ಸಮರ್ಥವಾಗಿಯೇ ವಾದ ಮಂಡಿಸಿದೆ. ಆದರೆ ಗೊಂದಲ ಉಂಟಾಗಲು ಭಾರತದ ಜನಗಣತಿ ನಿರ್ದೇಶನಾಲಯವೇ ಕಾರಣ' ಎಂದರು.`ಸರ್ಕಾರ ಮೊದಲು ಪತ್ರ ಬರೆದಾಗ ಮಾರ್ಚ್ 30ರೊಳಗೆ ಕರ್ನಾಟಕದ ಜನಸಂಖ್ಯಾ ವರದಿ ನೀಡುವುದಾಗಿ ನಿರ್ದೇಶನಾಲಯವು ತಿಳಿಸಿತ್ತು. ಸುಪ್ರೀಂ ಕೋರ್ಟ್ ಕೇಳಿದಾಗ ಏಪ್ರಿಲ್ 30ರೊಳಗೆ ವರದಿ ಕೊಡುವುದಾಗಿ ತಿಳಿಸಿತು. ನಂತರ ಸರ್ಕಾರ ಮತ್ತೆ ಕೇಳಿದಾಗ ಜೂನ್- ಜುಲೈ ವೇಳೆಗೆ ವರದಿ ಸಿಗಲಿದೆ ಎಂದು ತಿಳಿಸಿದೆ. ಹೀಗೆ ನಿರ್ದೇಶನಾಲಯವು ಮೂರು ರೀತಿಯ ಮಾಹಿತಿ ನೀಡಿದೆ' ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಜೈಲಿಗೆ ಹೋದರೂ ಪರವಾಗಿಲ್ಲ...

`2011ರ ಜನಗಣತಿ ಆಧರಿಸದೇ ಇದ್ದರೆ ಏನೆಲ್ಲ ತೊಂದರೆಗಳಾಗುತ್ತವೆ ಎಂಬುದನ್ನು ಕೋರ್ಟ್‌ಗೆ ಮನವರಿಕೆ ಮಾಡಿಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ರಾಜ್ಯದ ಜನರ ಒಳಿತಿಗಾಗಿ ಮುಖ್ಯಮಂತ್ರಿಯವರು ಒಂದು ದಿನ ಜೈಲಿಗೆ ಹೋದರೂ ಪರವಾಗಿಲ್ಲ. ಪೌರ ಸಂಸ್ಥೆ ಚುನಾವಣೆ ಈಗ ನಡೆಸುವುದು ಬೇಡವೇ ಬೇಡ'.

-ಶಾಸಕ ಡಿ.ಕೆ. ಶಿವಕುಮಾರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry