ಭಾನುವಾರ, ಮೇ 9, 2021
22 °C

ವಿರೋಧಿಗಳು ಕ್ಷಮೆ ಕೇಳುವ ದಿನ ದೂರವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಎಲ್ಲ ಆರೋಪಗಳಿಂದಲೂ ಮುಕ್ತನಾಗಿ ಶೀಘ್ರದಲ್ಲೇ ಮತ್ತೆ ರಾಜ್ಯದ ಜನತೆಯ ಸೇವೆ ಮಾಡುವ ಅವಕಾಶ ಸಿಗುವ ಭರವಸೆ ನನಗಿದೆ~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.ನಗರದಲ್ಲಿ ಭಾನುವಾರ ಬಸವೇಶ್ವರ ಸೇವಾ ಸಮಿತಿ ಆಯೋಜಿಸಿದ್ದ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಗುರುವಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.`ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತಂದು ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸಿದೆ. ಆದರೆ, ಈ ಅಭಿವೃದ್ಧಿ ಸಹಿಸದವರು ನನ್ನ ವಿರುದ್ಧ ಆರೋಪಗಳ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ. ಇವುಗಳಿಂದ ಮುಕ್ತನಾಗಿ ನಾನು ಮತ್ತೆ ಅಧಿಕಾರಕ್ಕೆ ಬಂದಾಗ, ಈಗ ಆರೋಪ ಮಾಡುತ್ತಿರುವವರೇ ಬಂದು ನನ್ನ ಕ್ಷಮೆ ಕೇಳುವ ದಿನಗಳು ದೂರವಿಲ್ಲ~ ಎಂದು ಅವರು ನುಡಿದರು.ಗುರುವಂದನೆ ಸ್ವೀಕರಿಸಿ ಮಾತನಾಡಿದ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ, `ಬಸವಣ್ಣ ಒಂದು ಸಮುದಾಯಕ್ಕೆ ಮಾತ್ರ ಸೇರಿದವರಲ್ಲ, ಅವರು ಮಾನವ ಜನಾಂಗದ ನಾಯಕ. ಜನಾಂಗದ ಜನರು ಕೇವಲ ತಮ್ಮ ಜಾತಿ, ಸಮುದಾಯಗಳಿಗಷ್ಟೇ ತಮ್ಮ ಸೇವೆಯನ್ನು ಸೀಮಿತಗೊಳ್ಳದೇ ವಿಶ್ವಶಾಂತಿಗಾಗಿ ದುಡಿಯಬೇಕು. ದೇಶ ಹಾಗೂ ಜಗತ್ತಿನ ಹಿತಕ್ಕಾಗಿ ಸ್ವಹಿತ ತ್ಯಾಗ ಮಾಡಿ ಶ್ರಮಿಸಬೇಕು~ ಎಂದು ಕರೆ ನೀಡಿದರು.ಶಾಸಕ ಎಂ.ಕೃಷ್ಣಪ್ಪ ಮಾತನಾಡಿ, `ವಿದ್ಯಾದಾನ ಹಾಗೂ ಅನ್ನದಾನದ ಮೂಲಕ ಜಗತ್ತಿನೆಲ್ಲೆಡೆ ಜನಮನ್ನಣೆ ಪಡೆದಿರುವ ಸಿದ್ದಗಂಗಾ ಮಠದ ಸಾಧನೆ ಹಿರಿದು. ಮಠ  ಕಟ್ಟಿಬೆಳೆಸಿದ ಸ್ವಾಮೀಜಿ ಅವರ ಆಯಸ್ಸು ವೃದ್ಧಿಗೊಂಡು ಅವರ ಸೇವೆ ಇನ್ನೂ ಹೆಚ್ಚಿನ ಜನರನ್ನು ತಲುಪಬೇಕು~ ಎಂದರು.ಸಮಾರಂಭದಲ್ಲಿ ಅರ್ಚನಾ ಪುಣ್ಯೇಶ್ ಅವರು `ಅರ್ಧನಾರೀಶ್ವರ~ ನೃತ್ಯ ರೂಪಕವನ್ನು ಪ್ರಸ್ತುತಪಡಿಸಿದರು.

ಕಂಚುಕಲ್ ಬಂಡೇಮಠದ ಬಸವಲಿಂಗ ಸ್ವಾಮೀಜಿ, ಚಕ್ರಬಾವಿಮಠದ ಸಿದ್ಧಲಿಂಗ ಸ್ವಾಮೀಜಿ, ಬಿಬಿಎಂಪಿ ಸದಸ್ಯೆ ಶಾಂತಕುಮಾರಿ ರವಿಕುಮಾರ್, ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿರ್ದೇಶಕ ಸಿ.ಸೋಮಶೇಖರ್, ಬಸವೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಎಂ.ಎಸ್.ನಾಗೇಂದ್ರ, ಗೌರವಾಧ್ಯಕ್ಷ ಬಿ.ಎಸ್.ಪರಮಶಿವಯ್ಯ  ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.