ಗುರುವಾರ , ಜೂನ್ 17, 2021
27 °C
ಭಾರತ ಬಾಕ್ಸಿಂಗ್‌ ಫೆಡರೇಷನ್‌ನ ಹಾಲಿ ಆಡಳಿತಕ್ಕೆ ಸೆಡ್ಡು

ವಿರೋಧಿ ಬಣಕ್ಕೆ ವಿಜೇಂದರ್‌ ಬೆಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಅಂತರರಾಷ್ಟ್ರೀಯ ಬಾಕ್ಸಿಂಗ್‌ ಸಂಸ್ಥೆಯ (ಎಐಬಿಎ) ಮಾನ್ಯತೆ ಕಳೆದುಕೊಂಡಿರುವ ಭಾರತ ಬಾಕ್ಸಿಂಗ್‌ ಫೆಡರೇಷನ್‌ನ (ಐಬಿಎಫ್‌) ಹಾಲಿ ಆಡಳಿತಕ್ಕೆ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತ ಬಾಕ್ಸರ್‌ ವಿಜೇಂದರ್‌ ಸಿಂಗ್‌ ಸೆಡ್ಡು ಹೊಡೆದಿದ್ದಾರೆ. ಅಷ್ಟು ಮಾತ್ರವಲ್ಲದೇ, ಫೆಡರೇಷನ್‌ನ ವಿರೋಧಿ ಬಣಕ್ಕೆ ಅವರು ಬೆಂಬಲ ಸೂಚಿಸಿದ್ದಾರೆ.‘ಭಾರತ ಬಾಕ್ಸಿಂಗ್‌ ಫೆಡರೇಷನ್‌ನ ಸದ್ಯದ ಪದಾಧಿಕಾರಿಗಳು ಬಾಕ್ಸಿಂಗ್‌ ಕ್ರೀಡೆಯ ಘನತೆ, ಗೌರವಕ್ಕೆ ಧಕ್ಕೆ ಉಂಟು ಮಾಡುತ್ತಿದ್ದಾರೆ’ ಎಂದು ಇತ್ತೀಚೆಗೆ ಹೇಳಿದ್ದ ಅಂತರರಾಷ್ಟ್ರೀಯ ಬಾಕ್ಸಿಂಗ್‌ ಸಂಸ್ಥೆಯು ಐಬಿಎಫ್‌ ಮಾನ್ಯತೆಯನ್ನು ರದ್ದು ಮಾಡಿತ್ತು. ಆದರೆ ಹೊಸದಾಗಿ ಆಡಳಿತ ನಡೆಸಲು ಬಾಕ್ಸಿಂಗ್‌ ಆಸಕ್ತರು ಮುಂದೆ ಬಂದರೆ ಅವಕಾಶಮಾಡಿಕೊಡುವುದಾಗಿ ಹೇಳಿತ್ತು.ಫೆಡರೇಷನ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಬ್ರಿಗೇಡಿಯರ್‌ (ನಿವೃತ್ತ) ಪಿ.ಕೆ.ಮುರಳೀಧರನ್‌ ರಾಜಾ ಅವರು ಅಭಿಷೇಕ್‌ ಮತೋರಿಯಾ ಸಾರಥ್ಯದ ಹಾಲಿ ಆಡಳಿತವನ್ನು ಎದುರು ಹಾಕಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲದೇ, ಐಬಿಎಫ್‌ನ 35 ಘಟಕಗಳಲ್ಲಿ 23 ಘಟಕಗಳ ಬೆಂಬಲವಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಈ ಬಣ ಅಂತರರಾಷ್ಟ್ರೀಯ ಸಂಸ್ಥೆಯ ಮುಖ್ಯಸ್ಥರನ್ನು ಭೇಟಿಯಾಗಿ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ. ಈ ಬಣಕ್ಕೆ ವಿಜೇಂದರ್‌ ಬೆಂಬಲ ವ್ಯಕ್ತಪಡಿಸಿದ್ದಾರೆ.‘ಹೊಸ ಹಾಗೂ ಸ್ವಚ್ಛ ಆಡಳಿತವನ್ನು ಎಐಬಿಎ ಬಯಸಿದೆ. ಅವರು ಹೇಳಿದಂತೆ ನಡೆದುಕೊಳ್ಳಲು ನಾವು ಸಿದ್ಧರಿದ್ದೇವೆ. ನಮ್ಮ ಜೊತೆಗಿರಲು ವಿಜೇಂದರ್‌ ಒಪ್ಪಿದ್ದಾರೆ. ನಾವು ಪಾರದರ್ಶಕ ಆಡಳಿತ ನಡೆಸಲು ಬದ್ಧರಿದ್ದೇವೆ’ ಎಂದು ರಾಜಾ ಹೇಳಿದ್ದಾರೆ.‘ಈ ಬಣದ ಮೇಲೆ ನನಗೆ ನಂಬಿಕೆ ಇದೆ. ಭಾರತದ ಬಾಕ್ಸಿಂಗ್‌ಗೆ ಹೊಸ ದಾರಿ ತೋರಿಸುವ ಸಾಮರ್ಥ್ಯವೂ ಇದೆ. ಹಾಗಾಗಿ ನಾನು ಈ ಬಣವನ್ನು ಬೆಂಬಲಿಸಿದ್ದೇನೆ’ ಎಂದು ವಿಜೇಂದರ್‌ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.