ವಿಲನ್! ಯಾರು? (ಚಿತ್ರ: ವಿಲನ್)

7

ವಿಲನ್! ಯಾರು? (ಚಿತ್ರ: ವಿಲನ್)

Published:
Updated:

ವಾಹ್! ಈಗ ಸಿನಿಮಾದ ಕಥೆ ಹೇಳುವ ಸಮಯ. ಕಥೆ ಕೇಳಿದ ನೀವು ಚಿತ್ರದ ಹೆಸರನ್ನು ಹೇಳಬೇಕು.“ತೊಟ್ಟಿಯಲ್ಲಿ ಬಿದ್ದ ಮಗುವನ್ನು ದುಷ್ಟನೊಬ್ಬ ರಕ್ಷಿಸಿ ಪೋಷಿಸುತ್ತಾನೆ. ಆ ಮಗು ಬೆಳೆದು ದೊಡ್ಡವನಾಗುತ್ತಾನೆ, ರೌಡಿಯಾಗುತ್ತಾನೆ, ಅನ್ನದಾತನಿಗೆ ಬೆಂಗಾವಲಾಗಿ ನಿಲ್ಲುತ್ತಾನೆ. ಒಡೆಯನಿಗೆ ಎದುರಾಡಿದವರ ರುಂಡ ಚೆಂಡಾಡುತ್ತಾನೆ. ಇಂಥ ಖಡಕ್ `ವಿಲನ್~ ಹುಡುಗಿಯೊಬ್ಬಳ ಪ್ರೇಮಪಾಶಕ್ಕೆ ಸಿಲುಕಿ ಒಳ್ಳೆಯವನಾಗುತ್ತಾನೆ”.ಕಥೆ ಕೇಳಿದ ನಿಮ್ಮ ತಲೆಯಲ್ಲಿ ಹತ್ತಾರು ಸಿನಿಮಾಗಳು ಪತರಗುಟ್ಟತೊಡಗುವುದು ಸಹಜವೇ. ಕಳೆದ ಮೂರ‌್ನಾಲ್ಕು ದಶಕಗಳಲ್ಲಿ ಬಂದಿರುವ ಹಲವಾರು ಸಿನಿಮಾಗಳನ್ನು ಹೋಲುವ ಹೊಸ ಕಥೆಯನ್ನು ಎಂ.ಎಸ್. ರಮೇಶ್ ಹೆಣೆದಿದ್ದಾರೆ.ಕಥೆ, ಚಿತ್ರಕಥೆ, ಸಂಭಾಷಣೆಯೂ ಅವರದ್ದೇ. ಹೊಸ ತಂತ್ರಜ್ಞಾನದ ಪ್ರಭಾವಳಿಯಲ್ಲಿ ಹಳೆಯ ಕಥೆಗಳನ್ನು ಮರು ನಿರೂಪಿಸುತ್ತಿರುವ ದಿನಗಳಿವು. ಆದರೆ, ಪರಿಣಾಮಕಾರಿ ತಾಂತ್ರಿಕ ಬೆಂಬಲ ಇಲ್ಲವಾದ್ದರಿಂದ ರಮೇಶ್ ಕಟ್ಟಿಕೊಟ್ಟಿರುವ ಚಿತ್ರ ಪ್ರೇಕ್ಷಕರ ಸಹನೆಯನ್ನು ಪರೀಕ್ಷಿಸುವಂತಿದೆ.ಗುರುಕಿರಣ್ ಅವರ ಸಂಗೀತವಾಗಲೀ, ದಾಸರಿ ಶ್ರೀನಿವಾಸರಾವ್ ಛಾಯಾಗ್ರಹಣವಾಗಲೀ ಸಾಧಾರಣ ಮಟ್ಟಕ್ಕಿಂತ ಮೇಲೇರಿಲ್ಲ. ಇದ್ದುದರಲ್ಲಿ ಸಂಭಾಷಣೆಯೇ ವಾಸಿ. ಸಿನಿಮಾದ `ಚಿತ್ರಕನ್ನಡ~ ಹಾಗೂ ಡಬ್ಬಿಂಗ್ ಪ್ರಿಯರು ಪ್ರತಿಪಾದಿಸುತ್ತಿರುವ `ಚಿತ್ರಾನ್ನ ಕನ್ನಡ~ ಎಂದು ಕನ್ನಡವನ್ನು ವಿಶ್ಲೇಷಿಸುವ ರೀತಿಯ ಸಂಭಾಷಣೆಗಳು ಸಿಳ್ಳೆ ಗಿಟ್ಟಿಸುತ್ತವೆ.ಬಿಳಿ ಬಟ್ಟೆ ತೊಟ್ಟ ದುಷ್ಟ ರಾಜಕಾರಣಿಯೊಬ್ಬನ ಅವಸಾನದ `ವಿಲನ್~ ಕಥೆಯಲ್ಲಿ ಯಾವ ರೋಚಕತೆಯೂ ಉಳಿದಿಲ್ಲ. ಚಿತ್ರದ ಬಹುತೇಕ ಸನ್ನಿವೇಶಗಳು ನೀರಸವಾಗಿವೆ. ಕಚಗುಳಿ ಇಡಬಹುದಾದ ಹಾಸ್ಯದ ಸನ್ನಿವೇಶಗಳೂ ಇಲ್ಲ. ಇಡೀ ಜಗತ್ತನ್ನೇ ಟೆನ್ನಿಸ್ ಅಂಗಳವಾಗಿ ಭಾವಿಸಿದಂತೆ ಕಾಣಿಸುವ ನಾಯಕಿ ಚಿತ್ರದುದ್ದಕ್ಕೂ ಸ್ಕರ್ಟ್ ತೊಟ್ಟು ಓಡಾಡಿದರೂ ಪ್ರೇಕ್ಷಕರು ಕಣ್ಣರಳಿಸುವುದಿಲ್ಲ! ನಾಯಕಿ ರಾಗಿಣಿ ಗ್ಲಾಮರ್ ಹೆಸರಿನಲ್ಲಿ ಕುಣಿಯುವುದಕ್ಕೆ ಸೀಮಿತಗೊಂಡಿದ್ದಾರೆ.ಅವರ ಕುಣಿತದಲ್ಲಿ ಅಥವಾ ಗ್ಲಾಮರ್ ಅನಾವರಣದಲ್ಲಿ ಯಾವ ಲಾಲಿತ್ಯವೂ ಇಲ್ಲ. ನೆತ್ತರ ಓಕುಳಿಯಾಟದ ದುಷ್ಟ ಪಾತ್ರಕ್ಕೆ ತಮ್ಮನ್ನು ಒಗ್ಗಿಸಿಕೊಳ್ಳುವುದು ನಾಯಕ ನಟ ಆದಿತ್ಯ ಅವರಿಗೆ ಸಾಧ್ಯವಾಗಿಲ್ಲ. ರಂಗಾಯಣ ರಘು, ಶೋಭರಾಜ್ ಅವರಂಥ ಅನುಭವಿಗಳು ಕೂಡ ದುರ್ಬಲ ಕಥೆಯ ಕಾರಣದಿಂದಾಗಿ ಪೇಲವವಾಗಿ ಕಾಣಿಸುತ್ತಾರೆ. ಹೀಗಾಗಿ, ಇಡೀ ಚಿತ್ರ ಪ್ರೇಕ್ಷಕರ ಮೇಲೆ ಒಂದು ಹೇರಿಕೆಯಾಗಿ ಕಾಣಿಸುತ್ತದೆ.ಪ್ರಾಣದಂತೆ ಪ್ರೀತಿಸುತ್ತಿದ್ದ ಸೋದರನನ್ನು ಕಳೆದುಕೊಂಡರೂ ನಾಯಕಿ ಅಷ್ಟೇನೂ ವಿಚಲಿತಗೊಳ್ಳದಿರುವುದು ಆಶ್ಚರ್ಯ ಹುಟ್ಟಿಸುವಂತಿದೆ. ಇದಕ್ಕೆ ಪ್ರತಿಯಾಗಿ ಸೂತಕದ ಬೆನ್ನಿಗೇ ಎರಡು ಪ್ರಣಯ ಗೀತೆಗಳಿವೆ! `ವಿಲನ್~ ರೂಪಿಸಿರುವ ಚಿತ್ರದ ನಿರ್ದೇಶಕರು ಕನ್ನಡ ಪ್ರೇಕ್ಷಕರನ್ನು ವಿಲನ್ ಎಂದು ಭಾವಿಸಿದ್ದಾರೋ ಇಲ್ಲವೋ ಗೊತ್ತಿಲ್ಲ, `ವಿಲನ್~ ಚಿತ್ರ ನೋಡಿದ ಪ್ರೇಕ್ಷಕರಿಗೆ ಮಾತ್ರ ನಿರ್ದೇಶಕರು ವಿಲನ್‌ನಂತೆ ಕಾಣಿಸಿದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry