ಗುರುವಾರ , ಅಕ್ಟೋಬರ್ 24, 2019
21 °C

ವಿಲೀನ ಪ್ರಕ್ರಿಯೆ: ಈಗ ಅಂಗನವಾಡಿ ಸರದಿ

Published:
Updated:

ಮೈಸೂರು: ಕಡಿಮೆ ಮಕ್ಕಳಿರುವ ಸುಮಾರು 3 ಸಾವಿರಕ್ಕೂ ಹೆಚ್ಚು ಶಾಲೆಗಳನ್ನು ಸಮೀಪದ ಶಾಲೆಗಳಿಗೆ ವಿಲೀನಗೊಳಿಸಲು ಆದೇಶ ಹೊರಡಿಸಿರುವ ಸರ್ಕಾರವು ಇದೀಗ ಮಕ್ಕಳ ಸಂಖ್ಯೆ ಕಡಿಮೆ ಇರುವ ಅಂಗನವಾಡಿ ಕೇಂದ್ರಗಳನ್ನು ಪಕ್ಕದ ಅಂಗನವಾಡಿ ಕೇಂದ್ರಗಳಿಗೆ ವಿಲೀನಗೊಳಿಸಲು ಮುಂದಾಗಿದೆ.ವಿಜಾಪುರ, ಬೀದರ್, ಬಾಗಲಕೋಟೆ, ಬಳ್ಳಾರಿ, ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳನ್ನು ಹೊರತುಪಡಿಸಿ, ಇನ್ನುಳಿದ 20 ಜಿಲ್ಲೆಗಳಲ್ಲಿ 5 ಕ್ಕಿಂತ ಕಡಿಮೆ ಮಕ್ಕಳಿರುವ ಕೇಂದ್ರಗಳನ್ನು ಪಕ್ಕದ ಅಂಗನವಾಡಿ ಕೇಂದ್ರಗಳಲ್ಲಿ ವಿಲೀನಗೊಳಿಸುವಂತೆ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ನಿರ್ದೇಶಕರು (ಸಂಖ್ಯೆ: ಮಮಅಇ: ಸಿಎನ್‌ಪಿ: ಇತರೆ: 10: 2011-12) ಆದೇಶ ಹೊರಡಿಸಿದ್ದಾರೆ.ಈಗಾಗಲೇ 30 ಜಿಲ್ಲೆಗಳ ಅಂಗನವಾಡಿ ಕೇಂದ್ರಗಳಲ್ಲಿರುವ ಮಕ್ಕಳ ಸಂಖ್ಯೆಯನ್ನು ಪಡೆದಿರುವ ಇಲಾಖೆ, ಈ ಕುರಿತು 2011ರ ಸೆಪ್ಟೆಂಬರ್ 20 ಮತ್ತು 21ರಂದು ಎಲ್ಲ ಉಪನಿರ್ದೇಶಕರ ಸಭೆ ನಡೆಸಿ ಈ ನಿರ್ಧಾರಕ್ಕೆ ಬಂದಿದೆ. ಈ ಬಗ್ಗೆ ಲಿಖಿತ ಆದೇಶ ಹೊರಡಿಸಿರುವ ಇಲಾಖೆ `ಅಂಗನವಾಡಿ ಕಾರ್ಯಕರ್ತೆಯರು/ಸಹಾಯಕಿಯರು ಇಬ್ಬರೂ ಇಲ್ಲದಿರುವ ಕೇಂದ್ರಗಳನ್ನು ಅಥವಾ ಕಡಿಮೆ ಫಲಾನುಭವಿಗಳು ಇರುವ ಕೇಂದ್ರಗಳನ್ನು ವಿಲೀನಗೊಳಿಸಲು ಕ್ರಮ ವಹಿಸಬೇಕು. ಬಳಿಕ ವಿಲೀನಗೊಳಿಸಿದ ಕೇಂದ್ರಗಳ ಮಾಹಿತಿಯನ್ನು ಪ್ರಧಾನ ಕಚೇರಿಗೆ ಕಳುಹಿಸಬೇಕು~ ಎಂದು 20 ಜಿಲ್ಲೆಗಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದೆ.ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಆ ಭಾಗದ ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರನ್ನು ಕರೆಸಿ ಈ ಬಗ್ಗೆ ಚರ್ಚಿಸಬೇಕು. ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳನ್ನೂ ವಿಲೀನ ಪ್ರಕ್ರಿಯೆಯಲ್ಲಿ ಸೇರಿಸಿಕೊಂಡು ಮನವೊಲಿಕೆ ಮೂಲಕ ಕಡಿಮೆ ಮಕ್ಕಳಿರುವ ಕೇಂದ್ರಗಳನ್ನು ಪಕ್ಕದ ಅಂಗನವಾಡಿ ಕೇಂದ್ರಗಳಿಗೆ ವಿಲೀನಗೊಳಿಸಲು ಮುಂದಾಗಬೇಕು ಎಂದು ಇಲಾಖೆ ಆದೇಶಿಸಿದೆ.ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ನೀಡುವ ಜೊತೆಗೆ ಆಹಾರ ತಯಾರಿಸಿ ಹಂಚುತ್ತಿದ್ದಾರೆ. ಮಕ್ಕಳ ಆರೋಗ್ಯ ತಪಾಸಣೆ, ರೋಗ ನಿರೋಧಕ ಚುಚ್ಚುಮದ್ದು ನೀಡಲು ಕ್ರಮ ವಹಿಸಿದ್ದಾರೆ. ತಾಯಂದಿರ ಸಭೆ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಅಗತ್ಯ ಆಹಾರ ವಿತರಣೆ ಮಾಡುವಲ್ಲಿ ನಿರತರಾಗಿದ್ದಾರೆ.ಅಲ್ಲದೆ, ಸರ್ಕಾರಿ ಯೋಜನೆಗಳಾದ ಭಾಗ್ಯಲಕ್ಷ್ಮೀ, ಸ್ತ್ರೀಶಕ್ತಿ ಗುಂಪುಗಳ ರಚನೆ, ಜನ, ಜಾನುವಾರು ಗಣತಿಯಲ್ಲೂ ಸಕ್ರಿಯರಾಗಿದ್ದಾರೆ. ಹೀಗಿರುವಾಗ ಕಡಿಮೆ ಮಕ್ಕಳ ಸಂಖ್ಯೆಯನ್ನು ನೆಪವಾಗಿಟ್ಟುಕೊಂಡು ಅಂಗನವಾಡಿಗಳನ್ನು ವಿಲೀನಗೊಳಿಸಿದರೆ ಬಾಣಂತಿ ಹಾಗೂ ಅನಕ್ಷರಸ್ಥ ಮಹಿಳೆಯರು/ತಾಯಂದಿರಿಗೆ ಇದರಿಂದ ತೊಂದರೆಯಾಗಲಿದೆ ಎಂಬುದು ಸಾರ್ವಜನಿಕರ ಆರೋಪ.ಈ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಮೈಸೂರಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎನ್.ಆರ್.ವಿಜಯ್, ಕಡಿಮೆ ಮಕ್ಕಳಿರುವ ಕೇಂದ್ರಗಳನ್ನು ಪಕ್ಕದ ಅಂಗನವಾಡಿ ಕೇಂದ್ರಗಳಿಗೆ ವಿಲೀನಗೊಳಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ.ಆದರೆ, ಇಲ್ಲಿ ಮಕ್ಕಳ ಜೊತೆಗೆ ತಾಯಂದಿರ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ. ಹೀಗಾಗಿ ಮೈಸೂರು ಜಿಲ್ಲೆಯಲ್ಲಿ ಯಾವುದೇ ಅಂಗನವಾಡಿಗಳನ್ನು ವಿಲೀನಗೊಳಿಸುತ್ತಿಲ್ಲ. ಹುಣಸೂರು, ಎಚ್.ಡಿ.ಕೋಟೆ ಹಾಗೂ ಪಿರಿಯಾಪಟ್ಟಣ ತಾಲ್ಲೂಕುಗಳ ಹಾಡಿಗಳಲ್ಲಿ ಹೆಚ್ಚುವರಿ 161 ಅಂಗನವಾಡಿ ಕೇಂದ್ರಗಳನ್ನು ಆರಂಭಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ~ ಎಂದು ತಿಳಿಸಿದರು.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)