ವಿಳಂಬ ಗತಿ: ಹಂಪಿ ಉತ್ಸವದ ಕರಿಛಾಯೆ

7

ವಿಳಂಬ ಗತಿ: ಹಂಪಿ ಉತ್ಸವದ ಕರಿಛಾಯೆ

Published:
Updated:

ಗಂಗಾವತಿ: ನಗರದಲ್ಲಿ ಮುಂದಿನ ನವೆಂಬರ್‌ನಲ್ಲಿ ನಡೆಯಬೇಕಿದ್ದ `ಕನ್ನಡಮ್ಮನ ತೇರಿನ ಮೆರವಣಿಗೆ~ ಎಳೆಯುವ ಕಾಲ ಸನ್ನಿಹಿತವಾಗುತ್ತಿರುವಂತೆಯೆ ಕೆಲ ಅನಿಶ್ಚಿತ ಕಾರಣಗಳಿಂದ 78ನೇ ಸಮ್ಮೇಳನ ಮಂದೂಡುವ ಆತಂಕದ ಲಕ್ಷಣಗಳು ಗೋಚರಿಸುತ್ತಿವೆ.ಕೊಪ್ಪಳ ವಿಧಾನಸಭೆಯ ಉಪ ಚುನಾವಣೆ ಘೋಷಣೆಯಾದ ಹಿನ್ನೆಲೆ ಸರ್ಕಾರ ಘೋಶಿಸಿದ್ದ ಎರಡು ಕೋಟಿ ಅನುದಾನ ಬಿಡುಗಡೆಯ ವಿಳಂಬ ಒಂದೆಡೆಯಾದರೆ, ನಿಧಾನಗತಿಯ ಸಮ್ಮೇಳನದ ಪೂರ್ವ ತಯಾರಿ ಮತ್ತೊಂದೆ ಸಮ್ಮೇಳನ ಮುಂದೂಡಲು ಸಾಕಷ್ಟು ಪುಷ್ಠಿ ನೀಡುತ್ತಿವೆ.ಅವೆಲ್ಲಕ್ಕಿಂತ ಮುಖ್ಯವಾಗಿ ಪಕ್ಕದ ಜಿಲ್ಲೆ ಬಳ್ಳಾರಿಯಲ್ಲಿ ವಿಜಯ ನಗರ ಸಾಮ್ರಾಜ್ಯದ ವೈಭವ ಸಾರುವ ಹಂಪಿ ಉತ್ಸವ ನವೆಂಬರ್ ತಿಂಗಳಲ್ಲಿ ನಡೆಯಲಿದೆ. ಈ ಹಿನ್ನೆಲೆ ಅಲ್ಲಿನ ವ್ಯವಸ್ಥೆಗಳು ಗಂಗಾವತಿ ಸಮ್ಮೇಳನದ ಮೇಲೆ ಪ್ರಭಾವ ಬೀರುತ್ತವೆ.ನೀತಿ ಸಂಹಿತೆ ಅಡ್ಡಿ: ಕಳೆದ ಜುಲೈ 9ರಂದು ನಗರಕ್ಕೆ ಆಗಮಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್, ಸಮ್ಮೇಳನ ನವೆಂಬರ್ 18, 19 ಮತ್ತು 20ರಂದು ನಡೆಯಲಿದ್ದು, ಯಾವ ಕಾರಣಕ್ಕೂ ಬದಲಾವಣೆ ಮಾಡುವುದಿಲ್ಲ ಎಂದಿದ್ದರು.ಅದರ ಬಳಿಕ ನಡೆದ ವಿದ್ಯಮಾನದಿಂದ ಕೊಪ್ಪಳ ಉಪ ಚುನಾವಣೆ ಹಿನ್ನೆಲೆ 20 ದಿನ ನೀತಿ ಸಂಹಿತೆ ಜಾರಿಯಾಗಿದೆ. ಇದು ಸಮ್ಮೇಳನದ ತಯಾರಿ ನಿಗದಿತ ಪ್ರಮಾಣದಲ್ಲಿ ವೇಗಕ್ಕೆ ಅಡ್ಡಗಾಲಾಯಿತು. ಜೊತೆಗೆ ಅನುದಾನದ ಬಿಡುಗಡೆಯೂ ವಿಳಂಬವಾಗಿದೆ.ಆಮೆವೇಗದ ಸಿದ್ದತೆ: ನಿಗದಿತ ನವೆಂಬರ್‌ನಲ್ಲಿ ಸಮ್ಮೇಳನ ನಡೆಯಬೇಕಾದರೆ ಈಗಾಗಲೆ ನಗರ ಶೇ. 50ರಷ್ಟಾದರೂ ಸಿದ್ದವಾಗಿರಬೇಕಿತ್ತು. ಆದರೆ ನಗರದ ರಸ್ತೆಗಳು ನೋಡುವ ಸ್ಥಿತಿಯಲ್ಲಿಲ್ಲ. ಸಮ್ಮೇಳನಕ್ಕೆ ಕೇವಲ 44 ದಿನ ಬಾಕಿ ಇವೆ. ರಸ್ತೆ, ಮೂತ್ರಾಲಯ, ಚರಂಡಿ ಸೇರಿದಂತೆ ಮೂಲ ಸೌಕರ್ಯದ ಅಗತ್ಯವಿದೆ.ನಗರಸಭೆಯ ಆಡಳಿತ ಮಂಡಳಿಯ ಅಸಹಕಾರದ ಮಧ್ಯೆಯೂ ಸಕಲ ಸಿದ್ದತೆಗೆ ಶಾಸಕ ಪರಣ್ಣ ಸಮರೋಪಾದಿಯಲ್ಲಿ ಅಭಿವೃದ್ಧಿ ಕೈಗೊಂಡರೂ ಸಮ್ಮೇಳನಕ್ಕೆ ನಗರವನ್ನು ಸಿದ್ದಗೊಳಿಸಲು ಕನಿಷ್ಟ ಎರಡು ತಿಂಗಳ ಕಾಲವಕಾಶ ಹಿಡಿಯಲಿದೆ.4.72 ಕೋಟಿ ಹಣ: ನಗರದಲ್ಲಿರುವ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆ ದುರಸ್ತಿಗೆ 4.72 ಕೋಟಿ ಹಣ ಬಿಡುಗಡೆಯಾಗಿದೆ. ಕಾಮಗಾರಿಯ ನೀಲನಕ್ಷೆ ಸಿದ್ದಪಡಿಸಿ, ಟೆಂಡರ್ ಕರೆದು ಕಾಮಗಾರಿ ಮುಗಿಸುವ ವೇಳೆಗೆ ಕನಿಷ್ಟ ಸಮಯ ಹಿಡಿಯಲಿದೆ.ಈ ಎಲ್ಲ ಕಾರಣಗಳಿಂದ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಸಮ್ಮೇಳನದ ತಯಾರಿಗೆ ಮತ್ತಷ್ಟು ಕಾಲವಕಾಶ ಕೋರಿರುವುದು ಸಹಜ. ಸಮ್ಮೇಳನದ ಹಣಕಾಸು ಮುಖ್ಯಸ್ಥೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರ ವರ್ಗಾವಣೆಯ ವದಂತಿ ಹಬ್ಬಿದೆ.ಜಿಲ್ಲಾಧಿಕಾರಿ ವರ್ಗಾವಾದರೆ ಸಮ್ಮೇಳನದ ಮೇಲೆ ಪರಿಣಾಮ ಬೀರಲಿದೆ. ಜೊತೆಗೆ ಹಂಪಿ ಉತ್ಸವಕ್ಕೆ ದಿನಾಂಕ ನಿಗದಿಯಾದರೆ ಸಮ್ಮೇಳನ ಮುಂದೂಡುವ ಸಾಧ್ಯತೆ ಹೆಚ್ಚು. ಕೇಂದ್ರ ಸಮಿತಿ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್ ಮುಂದಿನ ವಾರ ಗಂಗಾವತಿಗೆ ಭೇಟಿ ನೀಡಲಿದ್ದು, ಸಮ್ಮೇಳನದ ತಯಾರಿ ವೀಕ್ಷಿಸಿದ ಬಳಿಕವಷ್ಟೇ ಗೊಂದಲಕ್ಕೆ ತೆರಬೀಳುವ ಸಾಧ್ಯತೆ ಇದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry