ಮಂಗಳವಾರ, ಡಿಸೆಂಬರ್ 10, 2019
18 °C

ವಿಳಂಬ ಸಲ್ಲದು: ಕೇಂದ್ರಕ್ಕೆ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಳಂಬ ಸಲ್ಲದು: ಕೇಂದ್ರಕ್ಕೆ ಎಚ್ಚರಿಕೆ

ಗುಲ್ಬರ್ಗ: ಹೈದರಾಬಾದ್ ಕರ್ನಾಟಕ ಪ್ರದೇಶದ ಸರ್ವಾಂಗೀಣ ಪ್ರಗತಿಗೆ ಸಂವಿಧಾನದ 371ನೇ ಕಲಂ ತಿದ್ದುಪಡಿ ಮಾಡುವ ಕುರಿತು ಕೇಂದ್ರ ಸರ್ಕಾರ ವಿಳಂಬ ಧೋರಣೆ ಕೈಬಿಡಬೇಕು ಎಂದು ಆಗ್ರಹಿಸಿರುವ ಮಾಜಿ ಸಚಿವ ಹಾಗೂ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ವೈಜನಾಥ ಪಾಟೀಲ, ಈ ಬಗ್ಗೆ ಇನ್ನೂ ನಿರ್ಲಕ್ಷ್ಯ ಮುಂದುವರಿದರೆ ಉಗ್ರ ಹೋರಾಟ ರೂಪಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.ಹೈ-ಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಲು ಒತ್ತಾಯಿಸಿ ಮಂಗಳವಾರ ನಡೆದ ಬಂದ್ ಸಂದರ್ಭದಲ್ಲಿ ಗುಲ್ಬರ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಅವರು ಮಾತನಾಡಿದರು. `ನಮ್ಮ ಹೋರಾಟಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ, ಹೈ-ಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಎರಡೂ ಸದನಗಳಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಿದೆ.

 

ಆಗಸ್ಟ್ ತಿಂಗಳಲ್ಲಿ ನಾವು ಗೃಹ ಸಚಿವ ಪಿ.ಚಿದಂಬರಂ ಅವರನ್ನು ಭೇಟಿ ಮಾಡಿದಾಗ, ಅವರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದರು. ಹಾಗಿದ್ದರೂ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿರುವುದು ಸರಿಯಲ್ಲ` ಎಂದು ವೈಜನಾಥ ಪಾಟೀಲ ಆಕ್ಷೇಪಿಸಿದರು. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ 371ನೇ ಕಲಂ ತಿದ್ದುಪಡಿ ಮಸೂದೆಯನ್ನು ಮಂಡಿಸಬೇಕಿತ್ತು. ಆದರೆ ಅದು ಆಗಲಿಲ್ಲ. ಮುಂಬರುವ ಬಜೆಟ್ ಅಧಿವೇಶನದಲ್ಲಾದರೂ ಮಸೂದೆ ಮಂಡಿಸಲು ಕೇಂದ್ರ ಸರ್ಕಾರ ಯತ್ನಿಸಬೇಕು ಎಂದು ಅವರು ಒತ್ತಾಯಿಸಿದರು. ಸುಲಫಲ ಮಠದ ಮಹಾಂತ ಶಿವಾಚಾರ್ಯರು, ಶಾಸಕರಾದ ಸುನಿಲ್ ವಲ್ಯಾಪುರೆ, ಶಶೀಲ ನಮೋಶಿ, ಎಚ್‌ಕೆಡಿಬಿ ಅಧ್ಯಕ್ಷ ಅಮರನಾಥ ಪಾಟೀಲ, ಲಕ್ಷ್ಮಣ ದಸ್ತಿ ಇತರರು ಮಾತನಾಡಿದರು.ಇದಕ್ಕೂ ಮುನ್ನ ಜಗತ್ ವೃತ್ತದಿಂದ ಡಿ.ಸಿ. ಕಚೇರಿವರೆಗೆ ಸಾವಿರಾರು ಕಾರ್ಯಕರ್ತರು ರ‌್ಯಾಲಿ ನಡೆಸಿ, ಮನವಿ ಸಲ್ಲಿಸಿದರು. ಬಂದ್‌ನ ಹಿನ್ನೆಲೆಯಲ್ಲಿ ಅಂಗಡಿ- ಮುಂಗಟ್ಟು ಮುಚ್ಚಿದ್ದವು. ಬಸ್, ಆಟೋ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.

ಪ್ರತಿಕ್ರಿಯಿಸಿ (+)