ಶುಕ್ರವಾರ, ನವೆಂಬರ್ 15, 2019
22 °C
ಹೆಲ್ಮೆಟ್ ಇಲ್ಲದೆ ಮೋಟಾರ್‌ಬೈಕ್ ಚಾಲನೆ

ವಿವಾದಕ್ಕೀಡಾದ ಗೋವಾ ಶಾಸಕರ ಕ್ರಮ

Published:
Updated:

ಪಣಜಿ (ಪಿಟಿಐ): ಗೋವಾದ ಸಚಿವರೊಬ್ಬರು ಸೇರಿದಂತೆ ಆರು ಜನ ಶಾಸಕರು ರಾಜ್ಯ ವಿಧಾನಸಭೆ ಸಮುಚ್ಚಯದ ವರೆಗೆ ಹೆಲ್ಮೆಟ್ ಇಲ್ಲದೆ ಮೋಟರ್ ಬೈಕ್ ಚಾಲನೆ ಮಾಡಿ ವಿವಾದಕ್ಕೀಡಾಗಿದ್ದಾರೆ. ಘಟನೆ ಸಂಬಂಧಿಸಿದಂತೆ ಸಾರಿಗೆ ಸಚಿವರು ಪ್ರತಿಕ್ರಿಯಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ.ಕಾರ್ಲೋಸ್ ಅಲ್ಮೇಡಾ, ಪ್ರಮೋದ್ ಸಾವಂತ್, ಗ್ಲೆನ್ ಟಿಕ್ಲೊ (ಬಿಜೆಪಿ), ರೋಹನ್ ಕೌಂಟೆ, ಆವರ್‌ಟಾನೊ ಫುಟಾರ್ಡೊ (ಪಕ್ಷೇತರ), ಮಿಕ್ಕಿ ಪಚೆಕೋ (ಜಿವಿಪಿ) ಶಾಸಕರು. ಇವರು ಶುಕ್ರವಾರ ನಡೆದ ಬಜೆಟ್ ಮಂಡನೆ ಸಭೆಯಲ್ಲಿ ಭಾಗವಹಿಸಲು ಪಣಜಿಯಿಂದ ಮಾಂಡೋವಿ ನದಿ ಮಾರ್ಗವಾಗಿ ವಿಧಾನಸಭೆ ಸಮುಚ್ಚಯದವರೆಗೆ ಎನ್‌ಫೀಲ್ಡ್ ಬುಲೆಟ್, ಹಾರ್ಲೆ ಡೇವಿಡ್‌ಸನ್ ಮೊಬೈಕ್‌ಗಳನ್ನು ಹೆಲ್ಮೆಟ್ ಇಲ್ಲದೆ ಚಾಲನೆ ಮಾಡಿಕೊಂಡು ಬಂದಿದ್ದರು.ಹೆಲ್ಮೆಟ್ ಇಲ್ಲದೆ ವಾಹನ ಚಲಾವಣೆ ಮಾಡಿರುವುದು ತಪ್ಪಲ್ಲವೇ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಟಿಕ್ಲೋ ಉತ್ತರಿಸಿ, `ನಾವು ಹೆಲ್ಮೆಟ್ ಅನ್ನು ಧರಿಸದೆ ವಾಹನ ಚಾಲನೆ ಮಾಡಿದ್ದರೆ, ರಸ್ತೆ ಮಧ್ಯೆಯ ಸಂಚಾರ ಪೊಲೀಸರು ನಮ್ಮನ್ನು ನಿಲ್ಲಿಸಿ ತಮ್ಮ ಕೆಲಸ ಮಾಡಬೇಕಿತ್ತು' ಎಂದು ಹೇಳಿದ್ದಾರೆ.ಕಾರ್ಲೋಸ್, ಟಿಕ್ಲೊ, ಫುಟಾರ್ಡೊ ಬುಲೆಟ್ ಮೊಬೈಕ್ ಅನ್ನು ಚಾಲನೆ ಮಾಡಿಕೊಂಡು ಬಂದಿದ್ದರು. ಅವರಲ್ಲಿನ ಒಬ್ಬರ ವಾಹನದ ಮೇಲೆ ಸಾವಂತ್ ಕೂತಿದ್ದರು. ಕೌಂಟೆ, ಪಚೆಕೋ ಹಾರ್ಲೆ ಡೇವಿಡ್‌ಸನ್ ಚಾಲನೆ ಮಾಡುತ್ತಿದ್ದರು.  `ಘಟನೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಇಲ್ಲ' ಎಂದು ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್, ವಿಧಾನಸಭಾ ಸ್ಪೀಕರ್ ರಾಜೇಂದ್ರ ಆರ್ಲೆಕರ್ ಹೇಳಿದ್ದಾರೆ.

ಘಟನೆಗೆ ಕುರಿತಂತೆ ತಮ್ಮ ಅಭಿಪ್ರಾಯವೇನು ಎಂದು ಸಾರಿಗೆ ಸಚಿವ ಸುಧಿನ್ ಧಾವಲಿಕರ್ ಅವರಿಗೆ ಮಾಧ್ಯಮದವರು ಕೇಳಿದಾಗ `ಶಾಸಕರ ತಪ್ಪಿನಿಂದ ನಮಗೆ ಅಪರಾಧ ಭಾವ ಮೂಡಿದೆ' ಎಂದು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)