ವಿವಾದಕ್ಕೀಡಾದ ವಿಶೇಷ ಸಿಂಡಿಕೇಟ್ ಸಭೆ

7

ವಿವಾದಕ್ಕೀಡಾದ ವಿಶೇಷ ಸಿಂಡಿಕೇಟ್ ಸಭೆ

Published:
Updated:

ಕುಲಸಚಿವರ ಅಸಹಕಾರ: ಪ್ರಭುದೇವ್

ಬೆಂಗಳೂರು:  `ವಿಶೇಷ ಸಿಂಡಿಕೇಟ್ ಸಭೆ ಕರೆಯುವಂತೆ ಮೂರು ಬಾರಿ ಸೂಚನೆ ನೀಡಿದ್ದರೂ ಕುಲಸಚಿವರು (ರಿಜಿಸ್ಟ್ರಾರ್) ಸಭೆ ಕರೆಯದೆ ನಿರಾಕರಿಸಿದ್ದಾರೆ. ಅಲ್ಲದೇ, ಕೆಲ ಗಂಭೀರ ವಿಷಯಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸದೆ ವಿ.ವಿ ಆಡಳಿತ ವ್ಯವಸ್ಥೆ ಕುಸಿಯುವಂತೆ ಮಾಡಿದ್ದಾರೆ~ ಎಂದು ಬೆಂಗಳೂರು ವಿ.ವಿ ಕುಲಪತಿ ಡಾ.ಎನ್. ಪ್ರಭುದೇವ್ ನೇರ ಆರೋಪ ಮಾಡಿದ್ದಾರೆ.`ಸರ್ಕಾರ ಹಾಗೂ ಉನ್ನತ ಶಿಕ್ಷಣ ಇಲಾಖೆ ನೀಡುವ ಸಲಹೆ, ಸೂಚನೆಗಳನ್ನು ಸದಾ ಸ್ವಾಗತಿಸುತ್ತೇನೆ. ವಿಶೇಷ ಸಿಂಡಿಕೇಟ್ ಸಭೆ ಕರೆಯುವಂತೆ ಉನ್ನತ ಶಿಕ್ಷಣ ಇಲಾಖೆ ಸೂಚನೆ ನೀಡಿರುವ ಪತ್ರವನ್ನು ಸ್ವೀಕರಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಕೆಲವು ಅಂಶಗಳನ್ನು ಸ್ಪಷ್ಟಪಡಿಸುತ್ತಿದ್ದೇನೆ~ ಎಂದು ಶುಕ್ರವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.`ವಿಶೇಷ ಸಿಂಡಿಕೇಟ್ ಸಭೆ ಕರೆಯುವ ಸಂಬಂಧ ಫೆಬ್ರುವರಿ 2, 6 ಹಾಗೂ 7ರಂದು ನಿರ್ದೇಶನ ನೀಡಿದ್ದರೂ ಕುಲಸಚಿವರು ಸಭೆ ಕರೆಯದೆ ನಿರಾಕರಿಸಿದ್ದಾರೆ. ಕೋಲಾರದ ಸ್ನಾತಕೋತ್ತರ ಕೇಂದ್ರ ಕಟ್ಟಡ ನಿರ್ಮಾಣ, ವಿದ್ಯಾರ್ಥಿ ನಿಲಯದ ದುರಸ್ತಿ ಸೇರಿದಂತೆ 12 ಗಂಭೀರ ವಿಷಯಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ನೀಡುವಂತೆ ಸೂಚನೆ ನೀಡಿದ್ದರೂ ಕುಲಸಚಿವರು ಈವರೆಗೆ ದಾಖಲೆಗಳನ್ನು ನೀಡಿಲ್ಲ~ ಎಂದು ದೂರಿದ್ದಾರೆ.`ಆ ಹಿನ್ನೆಲೆಯಲ್ಲಿ ನಾನು ಫೆ. 15 ಹಾಗೂ 22ರಂದು ವಿಶೇಷ ಸಿಂಡಿಕೇಟ್ ಸಭೆ ಕರೆದಿದ್ದೇನೆ. ಕುಲಪತಿಯ ಆದೇಶವನ್ನು ಕುಲಸಚಿವರು ಪಾಲಿಸದೇ ಇರುವುದು ವಿಶ್ವವಿದ್ಯಾಲಯಗಳ ಇತಿಹಾಸದಲ್ಲಿ ಇದೇ ಮೊದಲು ಇರಬಹುದು. ವಿ.ವಿ ಇತಿಹಾಸದ ಮಟ್ಟಿಗಂತೂ ಮೊದಲ ಬಾರಿಗೆ ಕುಲಸಚಿವರು ಈ ರೀತಿ ನಡೆದುಕೊಂಡಿದ್ದಾರೆ~ ಎಂದಿದ್ದಾರೆ.`ಕುಲಸಚಿವರು ಅಗತ್ಯ ದಾಖಲೆಗಳನ್ನು ನನಗೆ ಒಪ್ಪಿಸಿದ ಕೂಡಲೇ ವಿಶೇಷ ಸಿಂಡಿಕೇಟ್ ಸಭೆ ಕರೆದು ಸದಸ್ಯರು ಮಂಡಿಸಿದ ವಿಷಯಗಳ ಕುರಿತು ಚರ್ಚೆ ನಡೆಸಲಾಗುವುದು. ಅಗತ್ಯಬಿದ್ದರೆ ಹಲವು ವಿಶೇಷ ಸಭೆಗಳನ್ನು ನಡೆಸಲು ಚಿಂತಿಸಿದ್ದೇನೆ~ ಎಂದು ಪ್ರಭುದೇವ್ ತಿಳಿಸಿದ್ದಾರೆ.`ಕುಲಸಚಿವರು ವಿ.ವಿಯ ಶೌಚಾಲಯದ ಸ್ಥಿತಿಗತಿ ಹಾಗೂ ನಿರ್ಮಾಣ ಕಾರ್ಯ ಸ್ಥಗಿತಗೊಂಡ ಕಟ್ಟಡಗಳನ್ನು ಮಾಧ್ಯಮಗಳಲ್ಲಿ ಪ್ರದರ್ಶಿಸಿದ್ದಾರೆ. ಈ ಭೇಟಿಯ ಬಗ್ಗೆ ಅವರು ನನಗೂ ಆಹ್ವಾನ ನೀಡಿದ್ದರೆ ನಾನು ಹೋಗುತ್ತಿದ್ದೆ. ಕುಲಸಚಿವರು ಕೇವಲ ಶೌಚಾ ಲಯಗಳು, ಅರ್ಧಕ್ಕೆ ನಿಂತ ಕಟ್ಟಡ ನಿರ್ಮಾಣ ಕಾರ್ಯವನ್ನಷ್ಟೇ ಮಾಧ್ಯಮಗಳಿಗೆ ತೋರಿಸಿರುವುದಕ್ಕೆ ಅಚ್ಚರಿಯಾಗುತ್ತಿದೆ. ಮಾಧ್ಯಮದವರಿಗೆ ತೋರಿಸಲು ವಿ.ವಿಯಲ್ಲಿ ಉತ್ತಮ ಅಂಶವಿಲ್ಲ ಎಂಬುದು ಕುಲಸಚಿವರ ಅಭಿಪ್ರಾಯವಾಗಿರಬಹುದು~ ಎಂದು ಲೇವಡಿ ಮಾಡಿದ್ದಾರೆ.`ಕೋಲಾರದ ಸ್ನಾತಕೋತ್ತರ ಕೇಂದ್ರ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಗುತ್ತಿಗೆದಾರರಿಗೆ ಕಾರ್ಯಾದೇಶ ಪತ್ರ ನೀಡದಿರುವುದು, ವಿದ್ಯಾರ್ಥಿನಿಲಯದ ಶೌಚಾಲಯ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ವಿ.ವಿ ಎಂಜಿನಿಯರ್ ಅಂದಾಜು ಪಟ್ಟಿ ಸಲ್ಲಿಸದಿರುವ ಕುರಿತು ಚರ್ಚಿಸಲು ಇದೇ 13ರಂದು ಕಾಮಗಾರಿ ಸಮಿತಿಯ ಸಭೆ ಕರೆದಿದ್ದೇನೆ~ ಎಂದು ತಿಳಿಸಿದ್ದಾರೆ.

ಹಸಿ ಸುಳ್ಳು- ಮೈಲಾರಪ್ಪ ತಿರುಗೇಟು

ಬೆಂಗಳೂರು: 
`ಗೌರವಾನ್ವಿತ ಕುಲಪತಿಯವರು ಹಸಿ ಸುಳ್ಳು ಹೇಳುತ್ತಿದ್ದಾರೆ. ನನ್ನ ಮೇಲೆ ಗೂಬೆ ಕೂರಿಸುವ ಯತ್ನ ಮಾಡುತ್ತಿದ್ದಾರೆ~ ಎಂದು ವಿ.ವಿ ಕುಲಸಚಿವ ಪ್ರೊ.ಬಿ.ಎಸ್.ಮೈಲಾರಪ್ಪ ತಿರುಗೇಟು ನೀಡಿದ್ದಾರೆ.

ಕುಲಪತಿಯವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಅವರು, `ಕಾನೂನಿನ ಪ್ರಕಾರ ಕುಲಪತಿಯವರೇ ವಿಶೇಷ ಸಿಂಡಿಕೇಟ್ ಸಭೆಯನ್ನು ಕರೆಯಬೇಕು~ ಎಂದು ಹೇಳಿದ್ದಾರೆ.`ವಿ.ವಿ ಹಿತ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಗಂಭೀರವಾದ ವಿಷಯಗಳನ್ನು ಚರ್ಚಿಸಲು ವಿಶೇಷ ಸಭೆ ಕರೆಯುವಂತೆ ಅನೇಕ ಸಿಂಡಿಕೇಟ್ ಸದಸ್ಯರು ಡಿಸೆಂಬರ್ 5 ಮತ್ತು ಜನವರಿ 16ರಂದು ಮನವಿ ಸಲ್ಲಿಸಿದ್ದರು. ಆಗ ಕುಲಪತಿಯವರು ವಿಶೇಷ ಸಭೆ ಕರೆಯುವುದಿರಲಿ, ಸದಸ್ಯರ ಮನವಿಗೆ ಉತ್ತರಿಸುವ ಕನಿಷ್ಠ ಸೌಜನ್ಯವನ್ನೂ ತೋರಿ ಸಲಿಲ್ಲ~ ಎಂದು ಅವರು ಟೀಕಿಸಿದ್ದಾರೆ.ರಾಜ್ಯ ಸರ್ಕಾರ ಸೂಚನೆ ನೀಡುವವರೆಗೂ ಸುಮ್ಮನಿದ್ದ ನೀವು (ಕುಲಪತಿ) ನಿಮ್ಮ ತಪ್ಪು ತಿದ್ದಿಕೊಳ್ಳುವ ಬದಲು ನನ್ನ ಮೇಲೆ ದೋಷಾರೋಪ ಮಾಡುತ್ತಿದ್ದೀರಿ. ನವೆಂಬರ್ ಮೊದಲ ವಾರದಲ್ಲಿ ನಾನು ಅಧಿಕಾರ ವಹಿಸಿಕೊಂಡೆ. ವಿಶೇಷ ಸಿಂಡಿಕೇಟ್ ಸಭೆ ಕರೆಯುವಂತೆ ಹಲವು ಬಾರಿ ನಾನೇ ಒತ್ತಾಯಿಸಿದ್ದೇನೆ. ಅದಕ್ಕೆ ಸ್ಪಂದಿಸದ ನೀವು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದೀರಿ ಎಂದು ಅವರು ಆರೋಪಿಸಿದ್ದಾರೆ.`ಫೆ. 2, 6 ಮತ್ತು 7ರಂದು ನನಗೆ ಮೂರು ಸಲ ಸೂಚನೆ ನೀಡಿದರೂ ಪಾಲಿಸಲಿಲ್ಲ ಎಂದು ನೀವು ಹೇಳಿಕೆ ನೀಡಿದ್ದೀರಿ. ಇದು ಸಹ ನೂರಕ್ಕೆ ನೂರರಷ್ಟು ಸುಳ್ಳು ಹೇಳಿಕೆ. ಸಿಂಡಿಕೇಟ್ ಸದಸ್ಯರು ಡಿಸೆಂಬರ್‌ನಲ್ಲೇ ಮನವಿ ಸಲ್ಲಿಸಿದ್ದಾರೆ. ಆಗಲೇ ಸಭೆ ಕರೆಯಲು ನೀವೇಕೆ ಮುಂದಾಗಲಿಲ್ಲ?~ ಎಂದು ಅವರು ಪ್ರಶ್ನಿಸಿದ್ದಾರೆ.`ಸಿಂಡಿಕೇಟ್ ಸದಸ್ಯರು ಬೇರೆ ದಾರಿ ಕಾಣದೇ ಸರ್ಕಾರದ ಮೊರೆ ಹೋಗಿದ್ದಾರೆ. ಹೀಗಾಗಿ ಸರ್ಕಾರ ಮಧ್ಯೆ ಪ್ರವೇಶ ಮಾಡಿ ಸಿಂಡಿಕೇಟ್ ಸಭೆಯ ಕಲಾಪ ಪಟ್ಟಿಗೆ ಹಲವು ವಿಷಯಗಳನ್ನು ಸೇರಿಸಲು ಸೂಚಿಸಿದೆ~ ಎಂದು ಅವರು ತಿಳಿಸಿದ್ದಾರೆ.`ಸಚಿವರು ಮತ್ತು ಸರ್ಕಾರ ಕಾಲ ಕಾಲಕ್ಕೆ ನೀಡುವ ಆದೇಶಗಳನ್ನು ನೀವು ಪಾಲಿಸಿಲ್ಲ. ಉನ್ನತ ಶಿಕ್ಷಣ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಿಂದ ಬರುವ ಆದೇಶಗಳನ್ನು ಪಾಲಿಸದೇ ಇರುವ ಬಗ್ಗೆ ಸಿಂಡಿಕೇಟ್ ಸದಸ್ಯರು ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ~ ಎಂದು ಅವರು ಹೇಳಿದ್ದಾರೆ.`ಇನ್ನಾದರೂ ಜನರಿಗೆ ತಪ್ಪು ಸಂದೇಶ ನೀಡುವುದನ್ನು ನಿಲ್ಲಿಸಿ. ನಿಯಮಾವಳಿ ಪ್ರಕಾರ ಸಭೆ ಕರೆಯಿರಿ. ಪ್ರಜಾಪ್ರಭುತ್ವದ ಮಾರ್ಗದಲ್ಲಿ ಚರ್ಚಿಸಿ, ನಿರ್ಣಯಗಳನ್ನು ತೆಗೆದುಕೊಳ್ಳೋಣ. ವಿದ್ಯಾರ್ಥಿಗಳ ಹಿತ ರಕ್ಷಿಸೋಣ~ ಎಂದು ಅವರು ನುಡಿದಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry