ವಿವಾದಕ್ಕೆ ಕಾರಣವಾದ ಯೋಗ ಪಾಠ

7

ವಿವಾದಕ್ಕೆ ಕಾರಣವಾದ ಯೋಗ ಪಾಠ

Published:
Updated:

ವಾಷಿಂಗ್ಟನ್ (ಪಿಟಿಐ/ಐಎಎನ್‌ಎಸ್): ಕ್ಯಾಲಿಫೋರ್ನಿಯಾ ಶಾಲೆಯೊಂದರಲ್ಲಿ ಮಕ್ಕಳಿಗಾಗಿ ಹಮ್ಮಿಕೊಂಡಿರುವ ಯೋಗ ಕಾರ್ಯಕ್ರಮವು ಧಾರ್ಮಿಕ ವಿವಾದಕ್ಕೆ ಕಾರಣವಾಗಿದೆ.ಯೋಗ ಪಾಠದಿಂದ ತಮ್ಮ ಮಕ್ಕಳು ಎಲ್ಲಿ ಹಿಂದೂ ನಂಬಿಕೆಗೆ ಅಂಟಿಕೊಳ್ಳುವರೋ ಎನ್ನುವ ಭಯ ಪೋಷಕರನ್ನು ಕಾಡುತ್ತಿದೆ.

`ಯೋಗದ ಹೆಸರಿನಲ್ಲಿ ಹಿಂದೂ ನಂಬಿಕೆಯನ್ನು ಹೇರಲು ಪ್ರಯತ್ನಿಸಲಾಗುತ್ತಿದೆ' ಎನ್ನುವುದು ಅವರ ಆರೋಪ.ಪಾಲ್ ಏಕ್ ಸೆಂಟ್ರಲ್ ಎಲಿಮೆಂಟರಿ ಸ್ಕೂಲ್‌ನಲ್ಲಿ ಮಕ್ಕಳಿಗೆ ವಾರದಲ್ಲಿ ಎರಡು ಬಾರಿ 30 ನಿಮಿಷಗಳ ಯೋಗ ಪಾಠ ಹೇಳಿಕೊಡಲಾಗುತ್ತಿದೆ. ಭಾರತೀಯ ಯೋಗ ಗುರು ಕೃಷ್ಣ ಪಟ್ಟಾಭಿ ಜೋಯಿಸ್ ಸ್ಮರಣಾರ್ಥ ಸ್ಥಾಪನೆಯಾಗಿರುವ ಜೋಯಿಸ್ ಪ್ರತಿಷ್ಠಾನವು ಈ ಕಾರ್ಯಕ್ರಮಕ್ಕೆ ಹಣಕಾಸು ನೆರವು ನೀಡುತ್ತಿರುವುದು ವಿವಾದಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಕೆಲವು ಪೋಷಕರು ಯೋಗ ಪಾಠವನ್ನು ನಿಲ್ಲಸಬೇಕೆಂದು ಆಗ್ರಹಿಸಿದ್ದಾರೆ.`ಇಲ್ಲಿ ಕೇವಲ ವ್ಯಾಯಾಮವನ್ನು ಹೇಳಿಕೊಡುತ್ತಿಲ್ಲ. ಮಕ್ಕಳ ತಲೆಯಲ್ಲಿ ಅಧ್ಯಾತ್ಮವನ್ನು ತುಂಬಲಾಗುತ್ತಿದೆ' ಎಂದು ಪೋಷಕರೊಬ್ಬರು ದೂರಿದ್ದಾರೆ.`ಯೋಗದಿಂದ ಮಕ್ಕಳ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸುಧಾರಿಸುತ್ತದೆ. ಯೋಗ ಶಿಕ್ಷಕರು ಮಕ್ಕಳಲ್ಲಿ ಹಿಂದೂ ನಂಬಿಕೆಗಳನ್ನು ತುಂಬುತ್ತಿದ್ದಾರೆ ಎನ್ನುವುದು ಸುಳ್ಳು' ಎಂದು ಯೂನಿಯನ್ ಸ್ಕೂಲ್ ಡಿಸ್ಟ್ರಿಕ್ಟ್ ಸೂಪರಿಂಟೆಂಡೆಂಟ್ ಟಿಮೋತಿ  ಬೇರ್ಡ್ ಹೇಳಿದ್ದಾರೆ.`ಪೋಷಕರು ಆತಂಕ ಪಡಬೇಕಿಲ್ಲ. ನಾವು ಮಕ್ಕಳ ಮೇಲೆ ಧರ್ಮವನ್ನು ಹೇರುತ್ತಿಲ್ಲ' ಎಂದು ಜೋಯಿಸ್ ಪ್ರತಿಷ್ಠಾನದ ರಸೆಲ್ ಕೇಸ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry