ವಿವಾದಗಳ ವಿಷಯವಿದು...

7

ವಿವಾದಗಳ ವಿಷಯವಿದು...

Published:
Updated:
ವಿವಾದಗಳ ವಿಷಯವಿದು...

ನೂತನ ಸಂವತ್ಸರದ ಹೊಸ ಪುಟಗಳ ತೆರೆಯುವ ಮುನ್ನ ಮುಗಿದು ಹೋದ ವರ್ಷದ ಕೆಲ ಕ್ಷಣಗಳನ್ನು ನೆನಪಿಸಿಕೊಳ್ಳಲೇಬೇಕು. ಇಟ್ಟು ಬಂದ ಆ ಹೆಜ್ಜೆಗಳಲ್ಲಿ ಕೇವಲ ಸಾಧನೆಯ ಗುರುತು ಮಾತ್ರವಲ್ಲ; ವಿವಾದಗಳ ಸದ್ದೂ ಇದೆ.ದೋನಿ ವಜಾಕ್ಕೆ ಅಮರ್‌ನಾಥ್ ಪಟ್ಟು

`ದೋನಿ ಅವರನ್ನು ಟೆಸ್ಟ್ ನಾಯಕತ್ವದಿಂದ ಕೆಳಗಿಳಿಸಲು ಕೆಲ ತಿಂಗಳ ಹಿಂದೆಯೇ ಆಯ್ಕೆ ಸಮಿತಿ ತೀರ್ಮಾನಿಸಿತ್ತು. ಆದರೆ ಅದಕ್ಕೆ ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಅಡ್ಡಬಂದರು' ಎಂದು ಮೊಹಿಂದರ್ ಅಮರ್‌ನಾಥ್ ಸಿಡಿಸಿದ ಬಾಂಬ್ ದೊಡ್ಡ ವಿವಾದಕ್ಕೆ ಕಾರಣವಾಯಿತು.ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಪ್ರವಾಸದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಸತತ ಎಂಟು ಸೋಲು ಕಂಡ ಬಳಿಕ ದೋನಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಲು ಆಯ್ಕೆ ಸಮಿತಿ ನಿರ್ಧಾರ ತೆಗೆದುಕೊಂಡಿತ್ತು. ನಾಯಕರಾಗಿ ದೋನಿ ಇತ್ತೀಚಿನ ದಿನಗಳ್ಲ್ಲಲಿ ವಿಫಲರಾಗುತ್ತಿರುವುದು ಆ ವಾದಕ್ಕೆ ಪುಷ್ಟಿ ನೀಡಿತು.ಐಪಿಎಲ್‌ನಲ್ಲೂ `ಸ್ಪಾಟ್ ಫಿಕ್ಸಿಂಗ್'

ಐಪಿಎಲ್‌ಗೂ ವಿವಾದಗಳಿಗೂ ಅಳಿಸಲಾಗದ ನಂಟು. 2012ರಲ್ಲಿ ಅದಕ್ಕೆ ಸ್ಪಾಟ್ ಫಿಕ್ಸಿಂಗ್ ಕೊಳೆ ಕೂಡ ಅಂಟಿಕೊಂಡಿತು. ಮೇನಲ್ಲಿ ಖಾಸಗಿ ಸುದ್ದಿ ವಾಹಿನಿಯೊಂದು ಮಾರುವೇಷದ ಕಾರ್ಯಾಚರಣೆ ಯಲ್ಲಿ ಈ ವಿಷಯ ಬಹಿರಂಗಪಡಿಸಿತ್ತು.ಡೆಕ್ಕನ್ ಚಾರ್ಜರ್ಸ್‌ನ ಟಿ.ಪಿ.ಸುಧೀಂದ್ರ, ಪುಣೆ ವಾರಿಯರ್ಸ್‌ನ ಮೋನಿಷ್ ಮಿಶ್ರಾ, ಕಿಂಗ್ಸ್ ಇಲೆವೆನ್ ಪಂಜಾಬ್‌ನ ಶಲಭ್ ಶ್ರೀವಾಸ್ತವ, ಅಮಿತ್ ಯಾದವ್ ಹಾಗೂ ಅಭಿನವ್ ಬಾಲಿ ಅವರು ಸ್ಪಾಟ್ ಫಿಕ್ಸಿಂಗ್ ಆರೋಪಕ್ಕೆ ಸಿಲುಕಿದ ಆಟಗಾರರು. ಇವರಲ್ಲಿ ಸುಧೀಂದ್ರ ಮೇಲೆ ಆಜೀವ ನಿಷೇಧ ಹೇರಿತು. ಕೆಲವರು ಅಲ್ಪ ಶಿಕ್ಷೆಗೆ ಒಳಗಾದರು.ಚಾರ್ಜರ್ಸ್ ಜೊತೆಗಿನ ಒಪ್ಪಂದ ರದ್ದು

ಐಪಿಎಲ್ ತಂಡ ಡೆಕ್ಕನ್ ಚಾರ್ಜರ್ಸ್ ಜೊತೆಗಿನ ಒಪ್ಪಂದವನ್ನು ಬಿಸಿಸಿಐ ರದ್ದುಗೊಳಿಸಿತು. ಚಾರ್ಜರ್ಸ್ ತಂಡ ಹಣಕಾಸು ಸಮಸ್ಯೆಗೆ ಸಿಲುಕಿದ್ದು ಈ ಎಲ್ಲಾ ಅವಾಂತರಗಳಿಗೆ ಕಾರಣ. ಹಾಗಾಗಿ ಫ್ರಾಂಚೈಸಿ ಮಾಲೀಕರಾದ ಡೆಕ್ಕನ್ ಕ್ರಾನಿಕಲ್ ಹೋಲ್ಡಿಂಗ್ಸ್ ಲಿಮಿಟೆಡ್ (ಡಿಸಿಎಚ್‌ಎಲ್) ಇಕ್ಕಟ್ಟಿಗೆ ಸಿಲುಕಿತು.ಮುಂದಿನ ಸುತ್ತಿನಲ್ಲಿ ಗೆಲ್ಲಲು `ಮೋಸದಾಟ'

ಮುಂದಿನ ಸುತ್ತಿನಲ್ಲಿ ಅನುಕೂಲವಾಗಲಿ ಎಂಬ ಕಾರಣ ಲೀಗ್ ಹಂತದ ಕೆಲವು ಪಂದ್ಯಗಳಲ್ಲಿ ಉದ್ದೇಶಪೂರ್ವಕವಾಗಿ ಸೋತಿದ್ದ ಘಟನೆ ಲಂಡನ್ ಒಲಿಂಪಿಕ್ಸ್‌ಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿತು. ಈ ಕಾರಣ ಚೀನಾ, ಇಂಡೊನೇಷ್ಯಾ, ದಕ್ಷಿಣ ಕೊರಿಯಾದ ಎಂಟು ಮಂದಿ ಡಬಲ್ಸ್ ಆಟಗಾರ್ತಿಯರನ್ನು ಅಮಾನತು ಮಾಡಲಾಯಿತು.ಭಾರತದ ಟೆನಿಸ್‌ಗೆ ಕಪ್ಪು ಚುಕ್ಕೆ

ಲಂಡನ್ ಒಲಿಂಪಿಕ್ಸ್‌ಗೆ ತಂಡ ಆಯ್ಕೆ ವಿಚಾರದಲ್ಲಿ ಸೃಷ್ಟಿಯಾದ ವಿವಾದ ಭಾರತದ ಟೆನಿಸ್‌ಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿತು. ಆಟಗಾರರು ತಮ್ಮ ವೈಯಕ್ತಿಕ ಇರಾದೆಗಳನ್ನು ದೇಶದ ಮೇಲೆ ಹೇರಲು ಪ್ರಯತ್ನಿಸಿದರು. ಇದಕ್ಕೆ ಟೆನಿಸ್ ಸಂಸ್ಥೆಯೂ ತಲೆಬಾಗಿದ್ದು ದುರದೃಷ್ಟ. ಪೇಸ್, ಭೂಪತಿ ಹಾಗೂ ಬೋಪಣ್ಣ ನಡುವಿನ ತಿಕ್ಕಾಟ ಇದಕ್ಕೆ ಕಾರಣ.ಮದ್ದು ಕೊಳದಲ್ಲಿ ಆರ್ಮ್‌ಸ್ಟ್ರಾಂಗ್

ಕ್ಯಾನ್ಸರ್ ಜಯಿಸಿ ಏಳು ಬಾರಿ ಸೈಕ್ಲಿಂಗ್ ಚಾಂಪಿಯನ್ ಆದಾಗ ಲ್ಯಾನ್ಸ್ ಆರ್ಮ್‌ಸ್ಟ್ರಾಂಗ್ ಅವರ ಸಾಧನೆಗೆ ಇಡೀ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿತ್ತು. ಆದರೆ ಈ ವರ್ಷ ಆ ಸಾಧನೆಯ ಬಣ್ಣ ಬಯಲಾಯಿತು. ಉದ್ದೀಪನ ಮದ್ದು ಸೇವಿಸಿ ಈ ಸಾಧನೆ ಮಾಡಿದ್ದರು ಎಂದು ಗೊತ್ತಾಗುತ್ತಿದ್ದಂತೆ ಅಮೆರಿಕದ ಆರ್ಮ್‌ಸ್ಟ್ರಾಂಗ್ ಅವರು ಟೂರ್ ಡಿ ಫ್ರಾನ್ಸ್‌ನಲ್ಲಿ ಗೆದ್ದಿದ್ದ  ಪ್ರಶಸ್ತಿಗಳನ್ನು ಹಿಂಪಡೆಯಲಾಯಿತು.ಐಒಎ ಜಗಳದಲ್ಲಿ ಕ್ರೀಡಾಪಟುಗಳು ಬಲಿಪಶು

ಒಲಿಂಪಿಕ್ಸ್‌ನಲ್ಲಿ ಭಾರತದ ಸಾಧನೆ ಅಷ್ಟಕಷ್ಟೇ. ದುರದೃಷ್ಟವೆಂದರೆ ಕ್ರೀಡಾಡಳಿತ ನಡೆಸುತ್ತಿರುವವರೇ ಕ್ರೀಡಾಪಟುಗಳ ಪಾಲಿನ ಖಳನಾಯಕರಾಗಿದ್ದಾರೆ. ಅದಕ್ಕೆ ಸಾಕ್ಷಿ ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಈಗ ಅಮಾನತು ಶಿಕ್ಷೆಗೆ ಒಳಗಾಗಿರುವುದು. ಭ್ರಷ್ಟಾಚಾರ ಆರೋಪಕ್ಕೆ ಒಳಗಾದವರು ಚುನಾವಣೆಗೆ ಸ್ಪರ್ಧಿಸಿದ್ದು ಇದಕ್ಕೆ ಮತ್ತೊಂದು ಕಾರಣ.ಆಕೆ ಅವನಾದಾಗ!

ಏಷ್ಯನ್ ಕ್ರೀಡಾಕೂಟದ ಪದಕ ವಿಜೇತ ಅಥ್ಲೀಟ್ ಪಿಂಕಿ ಪ್ರಾಮಾಣಿಕ್ ಮಹಿಳೆಯಲ್ಲ; ಪುರುಷ ಎಂದಾಗ ಕ್ರೀಡಾ ಜಗತ್ತು ಒಮ್ಮೆಲೇ ಬೆಚ್ಚಿಬಿದ್ದದ್ದು ನಿಜ. ತಮ್ಮ ಜೊತೆಗಿದ್ದ ಮಹಿಳೆ ಮೇಲಿನ ಅತ್ಯಾಚಾರ ಆರೋಪದ ಕಾರಣ ಪಿಂಕಿ ಜೂನ್‌ನಲ್ಲಿ ಜೈಲು ಪಾಲಾಗಿದ್ದರು. ಆಮೇಲೆ ವೈದ್ಯಕೀಯ ಪರೀಕ್ಷೆಯಲ್ಲಿ ಆಕೆ `ಪುರುಷ' ಎಂಬುದು ದೃಢಪಟ್ಟಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry