ವಿವಾದದ ಕೇಂದ್ರವಾದ ಎರಡು ರಾಜ್ಯಗಳ ಜೀವನದಿ

7

ವಿವಾದದ ಕೇಂದ್ರವಾದ ಎರಡು ರಾಜ್ಯಗಳ ಜೀವನದಿ

Published:
Updated:

ಕೊಡಗಿನ ಬ್ರಹ್ಮಗಿರಿಯ ಪವಿತ್ರ ಕ್ಷೇತ್ರ ತಲಕಾವೇರಿಯಲ್ಲಿ ಉಗಮವಾಗಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸುಮಾರು 800 ಕಿ.ಮೀ. ಉದ್ದ ಹರಿದು  81,155 ಚದರ ಕಿ.ಮೀ. ಜಲಾನಯನ ಪ್ರದೇಶದ ವಿಸ್ತಾರವನ್ನು ಹೊಂದಿರುವ ಕಾವೇರಿ ಈ ಎರಡು ರಾಜ್ಯಗಳ ಜೀವನದಿಯಾಗಿದೆ. ಕರ್ನಾಟಕ ರಾಜ್ಯದಲ್ಲಿ ಸುಮಾರು 320ಕಿ.ಮೀ. ತಮಿಳುನಾಡಿನಲ್ಲಿ 416 ಕಿ.ಮೀ. ಮತ್ತು ಎರಡು ರಾಜ್ಯಗಳ ಗಡಿನಾಡು ಪ್ರದೇಶದಲ್ಲೂ 64 ಕಿ.ಮೀ. ಕಾವೇರಿ ಹರಿಯುತ್ತಿದೆ. ಈ ಜಲಾನಯನ ಪ್ರದೇಶದಲ್ಲಿ ಬರುವ ಕರ್ನಾಟಕದ 34,273 ಚದರ ಕಿ.ಮೀ. ಕೇರಳದ 2,866 ಚದರ ಕಿ.ಮೀ. ಮತ್ತು ತಮಿಳುನಾಡಿನ 44,016 ಚದರ ಕಿ.ಮೀ. ಪ್ರದೇಶವನ್ನು ಫಲವತ್ತಾಗಿಸಿ ಜನರ ಆರ್ಥಿಕ ಮತ್ತು ಸಾಮಾಜಿಕ ಜೀವನವನ್ನು ಉತ್ತಮಪಡಿಸಿರುವುದು ವಿಶೇಷ.ವಿವಾದ - ಏಕೆ ? ಏನು? : ಕಾವೇರಿ ನದಿ ನೀರು ಹಂಚಿಕೆ ವಿವಾದ 120 ವರ್ಷಗಳಷ್ಟು ಹಳೆಯದು. ಮೊದಲಬಾರಿಗೆ ದಾಖಲೆಗಳಲ್ಲಿ ಕಂಡುಬರುವಂತೆ 1892 ರಲ್ಲಿ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದ ಮದ್ರಾಸ್ ಪಾಂತ್ಯದ ಸರ್ಕಾರವು  ತನ್ನ ಪೂರ್ವಾನುಮತಿ ಇಲ್ಲದೆ ಕರ್ನಾಟಕ ಯಾವುದೇ ಹೊಸ ನೀರಾವರಿ ಜಲಾಶಯಗಳನ್ನು ನಿರ್ಮಿಸಬಾರದು ಎಂಬ ಷರತ್ತನ್ನು ವಿಧಿಸಿ ಮೈಸೂರು ರಾಜ್ಯದ ಆಡಳಿತಗಾರರ ಜೊತೆ ಒಪ್ಪಂದವನ್ನು ಮಾಡಿಕೊಂಡಿತು. ಆದರೂ 1910 ರಲ್ಲಿ ಅಂದಿನ ಮೈಸೂರು ರಾಜ್ಯ ಸರ್ಕಾರವು ಕೃಷ್ಣರಾಜಸಾಗರ ಜಲಾಶಯವನ್ನು ನಿರ್ಮಿಸಲು ಮದ್ರಾಸ್ ಸರ್ಕಾರದ ಅನುಮತಿಯನ್ನು ಕೋರಿತು.

ಇದನ್ನು ಒಪ್ಪದ ಮದ್ರಾಸ್  ಸರ್ಕಾರ ತಕರಾರು ತೆಗೆದು ಈ ಯೋಜನೆಯನ್ನು ವಿರೋಧಿಸಿತು. ಈ ಎರಡು ರಾಜ್ಯಗಳ ಭಿನ್ನಾಬಿಪ್ರಾಯ ಹಾಗೂ ತಕರಾರನ್ನು ಅಂದಿನ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದ ಸರ್ ಹೆಚ್.ಡಿ ಗ್ರಿಫಿನ್ ಅವರಿಗೆ ಸಂಧಾನ ಮಾಡಲು ಒಪ್ಪಿಸಿ ಅವರು 1914 ರಲ್ಲಿ ತೀರ್ಪು ನೀಡಿದರು. ಈ ತೀರ್ಪನ್ನು ಒಪ್ಪದ ಮದ್ರಾಸ್ ಸರ್ಕಾರವು ಮತ್ತೆ ಕೃಷ್ಣರಾಜಸಾಗರ ಜಲಾಶಯದ ನಿರ್ಮಾಣವನ್ನು ವಿರೋಧಿಸಿತು. ಆ ನಂತರ ಸುಮಾರು 10 ವರ್ಷಗಳವರೆಗೆ ಎರಡು ರಾಜ್ಯಗಳ ವಾದ ಪ್ರತಿವಾದ ಮತ್ತು ಅವಶ್ಯಕತೆಗಳನ್ನು ಪರಿಗಣಿಸಿ 1924 ರಲ್ಲಿ ಅಂದಿನ ಮದ್ರಾಸ್ ಸರ್ಕಾರ ಮತ್ತು ಮೈಸೂರು ರಾಜ್ಯಗಳು ಕೆಲವು ಷರತ್ತುಗಳೂಡನೆ ಒಪ್ಪಂದ ಮಾಡಿಕೊಂಡವು.

ಈ ಒಪ್ಪಂದ ಅನುಸಾರ ಮೈಸೂರು ಸರ್ಕಾರವು ಕನ್ನಾಂಬಾಡಿಯಲ್ಲಿ ಕೃಷ್ಣರಾಜಸಾಗರ ಜಲಾಶಯವನ್ನು ನಿರ್ಮಿಸಿ ಒಟ್ಟು ನೀರಾವರಿ ಪ್ರದೇಶವನ್ನು 1,10,000 ಎಕರೆಗೆ ಸೀಮಿತಗೂಳಿಸುವುದು ಹಾಗೂ ಮದ್ರಾಸ್ ಸರ್ಕಾರವು ತನ್ನ ವ್ಯಾಪ್ತಿಯಲ್ಲಿ ಬರುವ ಕಾವೇರಿ ನದಿಯ ಉಪನದಿಗಳಾದ ಭವಾನಿ ಮತ್ತು ಅಮರಾವತಿ ನದಿಗಳಿಗೆ ಅಣೆಕಟ್ಟು ನಿರ್ಮಿಸಲು ಅವಕಾಶ ನೀಡುವುದು. ಈ ಒಪ್ಪಂದವು 1924 ರಿಂದ 50 ವರ್ಷಗಳು ಜಾರಿಯಲ್ಲಿದ್ದು, ಆ ನಂತರ ಈ ಒಪ್ಪಂದ ಪುನರ್ ಪರಿಶೀಲನೆಗೆ ಒಳಪಡಿಸುವುದೆಂದು ತಿಳಿಸಲಾಗಿತ್ತು. ಆ ನಂತರ 1929 ಜೂನ್ 17 ರ ಒಪ್ಪಂದದಂತೆ ಕೃಷ್ಣರಾಜಸಾಗರ ಅಣೆಕಟ್ಟಿನಿಂದ ಜೂನ್‌ನಿಂದ ನವೆಂಬರ್ ವರೆಗೆ ಪ್ರತಿ ತಿಂಗಳು  ಒಟ್ಟು 1,74,816 ಕ್ಯೂಸೆಕ್ಸ್ ನೀರುಬಿಡಲು ಒಪ್ಪಂದ ಮಾಡಲಾಗಿತ್ತು.ಮೈಸೂರಿನ ಅಂದಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್  ಹಾಗೂ ವಿಶ್ವವಿಖ್ಯಾತ ಇಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯನವರ ಯೋಜನೆಯಂತೆ ಕೃಷ್ಣರಾಜಸಾಗರ ಅಣೆಕಟ್ಟನ್ನು ನಿರ್ಮಾಣಮಾಡಿ ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಿಗೆ ನೀರಾವರಿ ಅನುಕೂಲ ಕಲ್ಪಿಸಿ ಕೊಡಲು ಮುಂದಾದರು. ಕಾವೇರಿ ನದಿಗೆ ಕನ್ನಾಂಬಾಡಿಯಲ್ಲಿ ಅಣೆಕಟ್ಟು ನಿರ್ಮಾಣ ಮಾಡಿ ನೀರಾವರಿ, ವಿದ್ಯುತ್ ಮತ್ತು ಕುಡಿಯುವ ನೀರಿಗಾಗಿ ಜಲಾಶಯದಲ್ಲಿ ನೀರು ಸಂಗ್ರಹ ಮಾಡಲು ನಿರ್ಧರಿಸಲಾಯಿತು. ಅದರಂತೆ 1911ರಲ್ಲಿ ಪ್ರಾರಂಭವಾದ ಕೃಷ್ಣರಾಜಸಾಗರ ಅಣೆಕಟ್ಟು 1931ರಲ್ಲಿ ಪೂರ್ಣಗೊಂಡಿತು.

ವಿಶ್ವೇಶರಯ್ಯ ಮುಖ್ಯ ಕಾಲುವೆ ಮೂಲಕ ಮಂಡ್ಯ ಜಿಲ್ಲೆಗೆ ನೀರಾವರಿ ಸೌಕರ್ಯ ಕಲ್ಪಿಸಲಾಯಿತು. ಮೈಸೂರು ನಗರವು ಸೇರಿದಂತೆ ಅನೇಕ ಗ್ರಾಮಗಳಿಗೆ ಕುಡಿಯುವ ನೀರಿನ ಸೌಕರ್ಯ ಒದಗಿಸಲಾಯಿತು. ಈ ಹಿಂದೆ ಬೆಂಗಳೂರು ನಗರಕ್ಕೆ ತಿಪ್ಪಗೊಂಡನಹಳ್ಳಿಯಿಂದ ನೀರು ಸರಬರಾಜು ಆಗುತ್ತಿತ್ತು. ಈಗ ವಿಸ್ತಾರಗೊಂಡ ಬೆಂಗಳೂರು ಮಹಾನಗರಕ್ಕೆ ಹೆಚ್ಚುವರಿ ನೀರನ್ನು ಮಳವಳ್ಳಿ ತಾಲ್ಲೂಕಿನ ಸರಹದ್ದಿನ ತೊರೆಕಾಡನ ಹಳ್ಳಿಯ ಹತ್ತಿರದ ಕಾವೇರಿ ನದಿಯಿಂದ ನೀರನ್ನು ತರಲಾಗುತ್ತಿದೆ.

ಸ್ವಾತಂತ್ರ್ಯಾ ನಂತರದ ಅರವತ್ತರ ದಶಕದ ಆದಿ ಭಾಗದಲ್ಲಿ ಕರ್ನಾಟಕ ಸರ್ಕಾರವು ಹಾರಂಗಿ, ಕಬಿನಿ ಮತ್ತು ಹೇಮಾವತಿ ಜಲಾಶಯಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರದ ಜಲ ಸಂಪನ್ಮೂಲ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತು. ಆದರೆ ಈ ಯೋಜನೆಗಳಿಗೆ ತಮಿಳುನಾಡಿನ ತಕರಾರಿನಿಂದಾಗಿ ಕೇಂದ್ರ ಸರ್ಕಾರ ಅನುಮತಿ ನೀಡಲಿಲ್ಲ.

ಈ ಯೊಜನೆಗಳಿಗೆ ಬೇಕಾದ ನೂರಾರು ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರವು ನೀಡಲು ಒಪ್ಪಲಿಲ್ಲ, ಆದರೆ ರಾಜ್ಯ ಸರ್ಕಾರವು ದಿಟ್ಟತನದ ಜನಪರ ಕಾಳಜಿಯನ್ನು ತೋರಿ ತನ್ನದೇ ಪರಿಮಿತ ಸಂಪನ್ಮೂಲವನ್ನು ಬಳಸಿಕೊಂಡು ಈ ಮೂರು ಜಲಾಶಯಗಳನ್ನು ನಿರ್ಮಾಣಗೊಳಿಸಿತು. ಇದರಿಂದಾಗಿ ಕೊಡಗು ಜಿಲ್ಲೆಯ ಗೋಣಿಕೊಪ್ಪದ  ಬಳಿ ಇರುವ ಹಾರಂಗಿ ಜಲಾಶಯ, ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಗೊರೂರು ಬಳಿ ಇರುವ ಹೇಮಾವತಿ ಜಲಾಶಯ, ಹೆಗ್ಗಡದೇವನ ಕೋಟೆ ತಾಲ್ಲೂಕಿನ ಕಬಿನಿ ಜಲಾಶಯ ನಿರ್ಮಾಣಗೊಂಡು ಲಕ್ಷಾಂತರ ಎಕರೆಗಳಿಗೆ ನೀರಾವರಿ ಸೌಕರ್ಯ ಸಿಗುವಂತಾಯಿತು. ಹಾರಂಗಿ ಮತ್ತು ಹೇಮಾವತಿ ಜಲಾಶಯಗಳು ಕೃಷ್ಣರಾಜಸಾಗರದ ಮೇಲ್ಭಾಗದಲ್ಲಿದ್ದು ಅವುಗಳ ಹೊರಹರಿವಿನ ನೀರು ಕೃಷ್ಣರಾಜಸಾಗರಕ್ಕೆ ಬಂದು ಸೇರುತ್ತದೆ.ಆದರೆ ಕಬಿನಿ ಜಲಾಶಯದ ಮೂಲಕ ಬರುವ ಹೊರ ಹರಿವು ತಮಿಳುನಾಡಿಗೆ ಹರಿಯುತ್ತಿದೆ. ಹಾಸನ ಜಿಲ್ಲೆಯ ಬೇಲೂರಿನ ಸಮೀಪ ಇರುವ ಯಗಚಿ ಜಲಾಶಯವು ಹೇಮಾವತಿ ಜಲಾಶಯದ ಮೇಲ್ಭಾಗದಲ್ಲಿರುತ್ತದೆ. ಸುವರ್ಣಾವತಿ ಅಣೆಕಟ್ಟು ಚಾಮರಾಜನಗರ ಜಿಲ್ಲೆಯ ಸುವರ್ಣಾವತಿ ನದಿಗೆ ಕಟ್ಟಲಾಗಿದೆ. ಅರ್ಕಾವತಿ ಜಲಾಶಯವು ಬೆಂಗಳೂರು ನಗರ ಜಿಲ್ಲೆಯ ಕನಕಪುರ ತಾಲ್ಲೂಕಿನಲ್ಲೂ ಹಾಗೂ ಮಂಚನ ಬೆಲೆ,  ಗುಂಡ್ಲು ಮುಂತಾದ ಜಲಾಶಯಗಳು ನಿರ್ಮಾಣಗೊಂಡಿದ್ದು ಕಾವೇರಿ ಜಲಾನಯನ ಪ್ರದೇಶದಲ್ಲಿ ಅನೇಕ ಉಪನದಿಗಳಿಗೆ ಈ ರೀತಿ ಅಣೆಕಟ್ಟನ್ನು ನಿರ್ಮಿಸಿ ನೀರಾವರಿ ಸೌಲಭ್ಯವನ್ನು ಒದಗಿಸಲಾಗುತ್ತಿದೆ.ಕೃಷ್ಣರಾಜಸಾಗರದ ನಂತರದಲ್ಲಿ ನಿರ್ಮಾಣಗೊಂಡ ಈ ಎಲ್ಲ ಅಣೆಕಟ್ಟುಗಳಿಂದಾಗಿ ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಾವರಿ ಮತ್ತು ಅರೆನೀರಾವರಿ ಸೇರಿದಂತೆ ಸುಮಾರು 18 ಲಕ್ಷ ಎಕರೆಗಿಂತಲೂ ಹೆಚ್ಚು ನೀರಾವರಿ ಸೌಕರ್ಯ ಕಲ್ಪಿಸಲಾಗಿದೆ. ಇದರ ಜೊತೆಗೆ ಸುಮಾರು 100 ಕ್ಕೂ ಹೆಚ್ಚು ಏತ ನೀರಾವರಿ ಯೋಜನೆಗಳನ್ನು ಕೈಗೊಳ್ಳಲಾಗಿದ್ದು ಅವುಗಳಲ್ಲಿ ಬಹುತೇಕ ಯೋಜನೆಗಳು ವಿವಿಧ ಹಂತದ ಪ್ರಗತಿಯಲ್ಲಿವೆ.ಕಾವೇರಿ ಜಲಾನಯನ ಪ್ರದೇಶದ ಎಂಟು ಜಿಲ್ಲೆಗಳ ವ್ಯಾಪ್ತಿಯಲ್ಲಿ ಸುಮಾರು 1340 ಕೆರೆಗಳು ಅಸ್ತಿತ್ವದಲ್ಲಿವೆ. ಇವುಗಳಿಂದಲೂ ಸಹ ಲಕ್ಷಾಂತರ ಎಕರೆ ನೀರಾವರಿಯಾಗುತ್ತಿದೆ. ಆದರೆ ಬಹುತೇಕ ಕೆರೆಗಳು ಕಾವೇರಿ ಮತ್ತು ಉಪನದಿಗಳ ಜಲಾಶಯಗಳಿಂದ ಕಾಲುವೆ ಮತ್ತು ಉಪಕಾಲುವೆಗಳ ಮೂಲಕ ಬರುವ ನೀರಿನ ಆಸರೆಯನ್ನು ಹೊಂದಿರುತ್ತವೆ. ಆದುದರಿಂದ, ಇತ್ತೀಚಿನ ದಿನಗಳಲ್ಲಿ ಮಳೆ ನೀರಿನಿಂದ ಈ ಕೆರೆಗಳು ಪೂರ್ಣವಾಗಿ ತುಂಬುವುದಿಲ್ಲ. ನದಿ ನೀರಿನ ಆಶ್ರಯ ಈ ಕೆರೆಗಳನ್ನು ತುಂಬಲು ಬೇಕಾಗುತ್ತವೆ. ಆದರೂ ಶತಮಾನದ ಹಿಂದೆ ನಿರ್ಮಿಸಿದ ಈ ಕೆರೆಗಳಲ್ಲಿ ಬಹುಪಾಲು ಹೂಳು ತುಂಬಿದ್ದು ಅವುಗಳ ಮೂಲ ಸಾಮರ್ಥ್ಯಕಿಂತ ಅರ್ಧದಷ್ಟು ಸಹ ನೀರಿನ ಸಂಗ್ರಹವಾಗುತ್ತಿಲ್ಲ.ಒಟ್ಟಾರೆ ರಾಜ್ಯದ ಕಾವೇರಿ ಜಲಾನಯನದ ಎಲ್ಲಾ ಪ್ರದೇಶಗಳು ಜಲಾಶಯದ ನೀರು ಹಾಗೂ ಕಾಲುವೆ ಮೂಲಕ ಕೆರೆ, ಹಾಗೂ ಅಂತರ್ಜಲ ಅಭಿವೃದ್ದಿಯಾಗಲು ಒಂದು ವಿಸ್ತೃತ ಯೋಜನೆಯ ಅಗತ್ಯವಿದೆ. ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಸಂಗ್ರಹ ಕಡಿಮೆಯಾದರೆ ನೀರಾವರಿ ಮತ್ತು ಕುಡಿಯುವ ನೀರಿಗೂ ಕೊರತೆ ಉಂಟಾಗಿ ರೈತರು ಮತ್ತು ನಾಗರಿಕರಿಗೆ ಸಂಕಷ್ಟಗಳಾಗುತ್ತಿವೆ ಎಂಬುದು ನಿರ್ವಿವಾದ.

ಇಂತಹ ಸಂಕಷ್ಟ ಸಮಯದಲ್ಲಿ ತಮಿಳುನಾಡು ಸಹ ಪದೇ ಪದೇ ಕರ್ನಾಟಕದ ಕಾವೇರಿ ಜಲಾಶಯಗಳಿಂದಾಗಿ ನೀರು ಬಿಡುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್‌ನ ಮೊರೆ ಹೋಗುವುದು ಸಾಮಾನ್ಯವಾಗಿದೆ. ಇಂತಹ ಸಂದಿಗ್ಧ ಸಮಯದಲ್ಲಿ ಕರ್ನಾಟಕದ ಜಲಾಶಯಗಳಲ್ಲಿ ಸಂಗ್ರಹವಾಗಿರುವ ಅತ್ಯಲ್ಪ ಪ್ರಮಾಣದ ನೀರನ್ನು ಸುಪ್ರೀಂ ಕೋರ್ಟ್‌ನ ಆದೇಶದಂತೆ ಬಿಡಬೇಕಾದ ಸಂದರ್ಭದಲ್ಲಿ ಕರ್ನಾಟಕದ ರೈತರು ಅತೀವ ಸಂಕಷ್ಟಕ್ಕೆ ಒಳಗಾಗುತ್ತಾರೆ ಎಂಬುದು ಸತ್ಯ.

(ಲೇಖಕರು ನಿವೃತ್ತ ಐ.ಎ.ಎಸ್ ಅಧಿಕಾರಿ, ಕಾವೇರಿ ನೀರಾವರಿ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕರು )

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry