ವಿವಾದದ ಸುಳಿಯಲ್ಲಿ ಕುಂಬ್ಳೆ

7

ವಿವಾದದ ಸುಳಿಯಲ್ಲಿ ಕುಂಬ್ಳೆ

Published:
Updated:

ಬೆಂಗಳೂರು: ಕ್ರಿಕೆಟ್ ಕ್ಷೇತ್ರದ ಮೇರು ತಾರೆ ಅನಿಲ್ ಕುಂಬ್ಳೆ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಚುನಾಯಿತ ಅಧ್ಯಕ್ಷರಾದರೂ ಈಗ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ.

ಅಧಿಕಾರ ದಕ್ಕಿಸಿಕೊಳ್ಳಲು ಕಾನೂನು ಕಾಯ್ದೆಗಳನ್ನೆಲ್ಲ ಗಾಳಿಗೆ ತೂರಿರುವ ಗಂಭೀರ ಆರೋಪ ಇವರ ಮೇಲಿದೆ. ಅವರ ವಿರುದ್ಧ ಕಾನೂನು ಸಮರ ಆರಂಭಗೊಂಡಿದೆ. ಇದರಿಂದಾಗಿ ಅವರ ಅಧ್ಯಕ್ಷಗಿರಿಯ ‘ಭವಿಷ್ಯ’ ಸಿವಿಲ್ ಕೋರ್ಟ್‌ನಲ್ಲಿ ಅಂತಿಮ ಆದೇಶ ಹೊರಬೀಳುವವರೆಗೆ ಡೋಲಾಯಮಾನವಾಗಿದೆ.ತಿದ್ದುಪಡಿಯೇ ಆಗದ ನಿಯಮದ ಅಡಿ ಸ್ಪರ್ಧಿಸಿ ಆಯ್ಕೆಗೊಂಡಿರುವ ಆಪಾದನೆ ಇವರ ಮೇಲಿದ್ದು, ಇವರನ್ನು ಅಧಿಕಾರದಿಂದ ಕೆಳಗಿಸಲು ಆದೇಶಿಸುವಂತೆ ಕೋರಿ ಸಂಸ್ಥೆಯ ಅಜೀವ ಸದಸ್ಯ ಎ.ಎಂ.ರಾಮಮೂರ್ತಿ ಸಿವಿಲ್ ಕೋರ್ಟ್ ಮೊರೆ ಹೋಗಿದ್ದಾರೆ.ಇರುವುದು ಏನು, ಆದದ್ದು ಏನು?: ಕರ್ನಾಟಕ ಕ್ರಿಕೆಟ್ ಸಂಸ್ಥೆಗೆ ‘ಕ್ರಿಕೆಟಿಗರ ಸಹ ವಿಭಾಗ’ದ ಅಡಿ ಸದಸ್ಯತ್ವ ಹೊಂದಲು ಕ್ರಿಕೆಟ್ ಪಟುಗಳು ಅರ್ಹರು. ಆದರೆ ಸಂಸ್ಥೆಯ 7(ಡಿ)6 ನಿಯಮದ ಪ್ರಕಾರ, ಕ್ರಿಕೆಟಿಗನು ಪ್ರಥಮ ದರ್ಜೆಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ಎರಡು ವರ್ಷಗಳ ಬಳಿಕವಷ್ಟೇ ಸಂಸ್ಥೆಯ ಸದಸ್ಯತ್ವ ಕೋರಿ ಅರ್ಜಿ ಸಲ್ಲಿಸಲು ಅರ್ಹನಾಗಿರುತ್ತಾನೆ. ಒಂದು ವೇಳೆ ಆತ ಸಂಸ್ಥೆಯ ಸದಸ್ಯನಾಗಿದ್ದುಕೊಂಡು ಪ್ರಥಮ ದರ್ಜೆಯ ಕ್ರಿಕೆಟ್‌ನಲ್ಲಿ ಆಟವಾಡಿದರೆ, ಆಟ ಪೂರ್ಣಗೊಳ್ಳುವ ಅವಧಿಯವರೆಗೆ ಆತನ ಸದಸ್ಯತ್ವವನ್ನು ಅಮಾನತಿನಲ್ಲಿ ಇಡಲಾಗುತ್ತದೆ. ಆತ ಅಂತಿಮವಾಗಿ ನಿವೃತ್ತಿ ಹೊಂದಿದ ನಂತರ ಆ ದಿನದಿಂದ ಅನ್ವಯ ಆಗುವಂತೆ ಹೊಸದಾಗಿ ಅವಧಿಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ’.ಈ ನಿಯಮವನ್ನು ಪರಿಗಣನೆಗೆ ತೆಗೆದುಕೊಂಡರೆ ಕುಂಬ್ಳೆ ಅವರು 2010ರ ನವೆಂಬರ್ ತಿಂಗಳಿನವರೆಗೆ ಸಂಸ್ಥೆಯ ಸದಸ್ಯತ್ವಕ್ಕೆ ಅರ್ಹರಲ್ಲ. ಕಾರಣ, ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ 2008ರ ನವೆಂಬರ್‌ನಲ್ಲಿ ನಿವೃತ್ತಿ ಹೊಂದಿದ್ದಾರೆ.ಆದರೆ ಅಚ್ಚರಿ ಎಂದರೆ ಇವರ ಸದಸ್ಯತ್ವನ್ನು 2010ರ ಮಾರ್ಚ್ 27ರಂದು ಅಂಗೀಕರಿಸಲಾಗಿದೆ ಎನ್ನುವುದು ರಾಮಮೂರ್ತಿ ಅವರ ಆರೋಪ.ತಿದ್ದುಪಡಿ ‘ಆಟ’: ಸಂಸ್ಥೆಯ 7(ಡಿ)6 ನಿಯಮಕ್ಕೆ ತಿದ್ದುಪಡಿ ತಂದು ಕುಂಬ್ಳೆ ಅವರ ನೇಮಕ ಮಾಡಲಾಗಿದೆ ಎನ್ನುವುದು ಸಂಸ್ಥೆಯ ಸಮರ್ಥನೆ!ಆದರೆ ಅಸಲಿಗೆ, ತಿದ್ದುಪಡಿಯು ಕಾನೂನುಬದ್ಧವಾಗಿ ಅಂಗೀಕಾರವೇ ಆಗಿಲ್ಲ ಎಂಬ ಅಂಶವನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದುಕೊಂಡಿರುವ ದಾಖಲೆ ಪ್ರತಿಪಾದಿಸುತ್ತದೆ.

ಯಾವುದೇ ಕ್ರಿಕೆಟಿಗ ಕನಿಷ್ಠ 50 ಟೆಸ್ಟ್ ಪಂದ್ಯಗಳನ್ನು ಆಡಿದ್ದರೆ, ಆತ ಈ ಪಂದ್ಯ ಅಥವಾ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯದಿಂದ ನಿವೃತ್ತಿ ಹೊಂದಿದ ಕೂಡಲೇ ಸಂಸ್ಥೆಯ ಸದಸ್ಯನಾಗಲು ಅರ್ಹ ಎಂಬುದು ಈ ತಿದ್ದುಪಡಿ.ಕಳೆದ ಜ.17ರಂದು ನಡೆದ ಸಂಸ್ಥೆಯ ಸರ್ವಸದಸ್ಯರ ಸಾಮಾನ್ಯ ವಿಶೇಷ ಸಭೆಯಲ್ಲಿ ಈ ತಿದ್ದುಪಡಿಗೆ ಅಂಗೀಕಾರ ಪಡೆದುಕೊಳ್ಳಲಾಗಿದೆ. ಆದರೆ ಕಾನೂನಿನ ಅನ್ವಯ ತಿದ್ದುಪಡಿಯು ಅಂತಿಮವಾಗಿ ಜಾರಿಗೆ ಬರಲು ಹಲವಾರು ನಿಯಮಗಳು ಇವೆ.ತಿದ್ದುಪಡಿ ಊರ್ಜಿತ ಯಾವಾಗ? ಸರ್ವ ಸದಸ್ಯರ ಸಾಮಾನ್ಯ ವಿಶೇಷ ಸಭೆಯಲ್ಲಿ ತಿದ್ದುಪಡಿ ಅಂಗೀಕಾರವಾದರೆ ಸಾಲದು. ಇಲ್ಲಿ ಅಂಗೀಕಾರಗೊಂಡ ತಿದ್ದುಪಡಿಯು ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಅಂಗೀಕಾರಗೊಳ್ಳಬೇಕು. ಇದಾದ ನಂತರ 30 ದಿನಗಳ ಒಳಗೆ ಸಂಘಗಳ ಜಿಲ್ಲಾ ನೋಂದಣಾಧಿಕಾರಿ ಅವರಿಗೆ ಅದರ ನೋಂದಣಿ ಹಾಗೂ ಅನುಮತಿಗೆ ಕಳುಹಿಸಬೇಕು. ಕರ್ನಾಟಕ ಸೊಸೈಟಿಗಳ ನೋಂದಣಿ ಕಾಯ್ದೆ-1961ರ 10(2) ಕಲಮಿನ ಅಡಿ ಇದು ಕಡ್ಡಾಯ. ಇಲ್ಲಿ ನೋಂದಣಿಗೊಂಡ ನಂತರವಷ್ಟೇ ತಿದ್ದುಪಡಿ ಊರ್ಜಿತಗೊಳ್ಳುತ್ತದೆ.ಆದರೆ ಈ ಪ್ರಕರಣದಲ್ಲಿ, ಸರ್ವಸದಸ್ಯರ ಸಾಮಾನ್ಯ ವಿಶೇಷ ಸಭೆಯಲ್ಲಿ ಅಂಗೀಕಾರಗೊಂಡ ತಿದ್ದುಪಡಿಯು ನ.21ರಂದು ನಡೆದ ವಾರ್ಷಿಕ ಸರ್ವ ಸದಸ್ಯರ ಸಭೆಗೆ ಮೊದಲು ಅಂಗೀಕಾರಗೊಳ್ಳಬೇಕಿತ್ತು. ಆದರೆ ಈ ಸಭೆಯ ಮುಂದೆ ಇಡುವ ಮೊದಲೇ ತಿದ್ದುಪಡಿಯ ನೋಂದಣಿಗೆ ಸಂಘಗಳ ಜಿಲ್ಲಾ ನೋಂದಣಾಧಿಕಾರಿ ಮುಂದೆ ನ.8ರಂದು ಕಳುಹಿಸಲಾಯಿತು. ಆದರೆ ನಿಯಮಾನುಸಾರ 30ದಿನಗಳ ಒಳಗೆ ಕಳುಹಿಸದೇ ಇದ್ದ ಕಾರಣ, ‘ಈ ತಿದ್ದುಪಡಿಯನ್ನು ತಿರಸ್ಕರಿಸಲಾಗಿದೆ’ ಎಂದು ನೋಂದಣಾಧಿಕಾರಿ ಸ್ಪಷ್ಟವಾಗಿ ಬರೆದು ವಾಪಸು ಕಳುಹಿಸಿದ್ದಾರೆ.ಆದರೆ ಇದು ಗೊತ್ತಿದ್ದರೂ, ಸಂಸೈಯು ಕುಂಬ್ಳೆ ಅವರಿಗೆ ಸದಸ್ಯತ್ವ  ನೀಡಿ ಚುನಾವಣೆಗೂ ಸ್ಪರ್ಧಿಸಲು ಅನುಮತಿ ಕೊಟ್ಟಿದೆ ಎಂದು ರಾಮಮೂರ್ತಿ ಆರೋಪಿಸಿದ್ದಾರೆ. ಈ ಬಗ್ಗೆ ತಾವು ಹಲವಾರು ಬಾರಿ ಸಂಬಂಧಿತರ ಗಮನ ಸೆಳೆದರೂ ಪ್ರಯೋಜನ ಆಗಲಿಲ್ಲ ಎನ್ನುವುದು ಅವರ ವಾದ. ಇದರ ಹಿಂದೆ ಸಂಸ್ಥೆಯ ಆಗಿನ ಕಾರ್ಯದರ್ಶಿಯಾಗಿದ್ದ ಬ್ರಿಜೇಶ್ ಪಟೇಲ್ ಅವರ ಕೈವಾಡ ಇದೆ ಎನ್ನುವುದು ಅವರ ಆರೋಪ.ವಿವಾದಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಕುಂಬ್ಳೆ ಅವರಿಗೆ ನ್ಯಾಯಾಲಯ ಆದೇಶಿಸಿದೆ. ಕೋರ್ಟ್ ಅಂತಿಮವಾಗಿ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎನ್ನುವುದು ಈಗ ಮುಂದಿರುವ ಪ್ರಶ್ನೆ.

ಮನವಿಗೆ ಸಿಗದ ಮಾನ್ಯತೆ!

ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಕುಂಬ್ಳೆ ಅವರನ್ನು ಕ್ರಿಕೆಟ್ ಸಂಸ್ಥೆಗೆ ಸದಸ್ಯತ್ವ ನೀಡಲಾಗುತ್ತಿದೆ ಎಂದು ಆರೋಪಿಸಿ ತಾವು ಮಾಡಿಕೊಂಡಿದ್ದ ಹಲವು ಮನವಿಗಳಿಗೆ ಸಂಸ್ಥೆ ದಿವ್ಯ ಮೌನ ತಾಳಿತ್ತು ಎನ್ನುವುದು ಎ.ಎಂ.ರಾಮಮೂರ್ತಿ ಅವರ ಆರೋಪ.‘ನ.8ರಂದು ಚುನಾವಣೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿತ್ತು. ಅಲ್ಲಿಂದಲೇ ಆರಂಭಗೊಂಡಿತ್ತು ಕುಂಬ್ಳೆ ವಿರುದ್ಧ ನನ್ನ ‘ಸಮರ’. ಕಾಯ್ದೆಗೆ ತಿದ್ದುಪಡಿಯಾಗದ ಬಗ್ಗೆ ಅದೇ ದಿನ ನಾನು ಕ್ರಿಕೆಟ್ ಸಂಸ್ಥೆಗೆ  ಮನವಿ ಸಲ್ಲಿಸಿದ್ದೆ. ನಾಮಪತ್ರ ಹಿಂದೆಯಲು ಕೊನೆಯ ದಿನವಾಗಿದ್ದ ಅದೇ ತಿಂಗಳ 12ರಂದು ಇನ್ನೊಂದು ಮನವಿ ಸಲ್ಲಿಸಿದ್ದೆ. ಇದರ ಪ್ರತಿಯನ್ನು ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳೂ ಸಲ್ಲಿಸಿದೆ. ಆದರೆ ನನ್ನ ಮನವಿಗೆ ಯಾರೂ  ಸ್ಪಂದಿಸಲಿಲ್ಲ.ಅದರ ಹೊರತಾಗಿಯೂ ಕುಂಬ್ಳೆ ನಾಮಪತ್ರ ಪ್ರಶ್ನಿಸಿ ಅದೇ 16ರಂದು ಸಂಸ್ಥೆಗೆ ಪುನಃ ಪತ್ರ ಬರೆದಿದ್ದೆ. ಅದರಲ್ಲಿ ಪರಿಸ್ಥಿತಿಯ ಬಗ್ಗೆ ಸ್ಪಷ್ಟವಾಗಿ ವಿವರಿಸಲಾಗಿತ್ತು. ಆದರೆ ಸಂಸ್ಥೆಯದ್ದು ಮೌನವೇ ಉತ್ತರವಾಯಿತು. ನನ್ನ ಪ್ರತಿಭಟನೆ ನಡುವೆಯೇ ಚುನಾವಣೆಯೂ ನಡೆಯಿತು’ ಎನ್ನುತ್ತಾರೆ ರಾಮಮೂರ್ತಿ.ಆದರೆ ಚುನಾವಣೆ ನಂತರವೂ ಸಂಸ್ಥೆಗೆ ಡಿ.22 ಹಾಗೂ ಕಳೆದ ಜ.3ರಂದು ಮತ್ತೆರಡು ಪತ್ರ ಬರೆದಿದ್ದರೂ ಅದು ನಿಷ್ಪ್ರಯೋಜನ ಆಗಿದೆ ಎನ್ನುವುದು ಅವರ ಅಳಲು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry