ವಿವಾದದ ಸುಳಿಯಲ್ಲಿ ಬನ್ನಿಮಂಟಪ

7

ವಿವಾದದ ಸುಳಿಯಲ್ಲಿ ಬನ್ನಿಮಂಟಪ

Published:
Updated:
ವಿವಾದದ ಸುಳಿಯಲ್ಲಿ ಬನ್ನಿಮಂಟಪ

ಶ್ರೀರಂಗಪಟ್ಟಣ: ಸೆ.27ರಿಂದ ಮೈಸೂರಿನಲ್ಲಿ ದಸರಾ ಉತ್ಸವ ಆರಂವಾಗಲಿದ್ದು, ಅದೇ ಸಂದರ್ಭದಲ್ಲಿ ಪಟ್ಟಣದಲ್ಲಿ ಕೂಡ ದಸರಾ ಉತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಶುರುವಾಗಲಿವೆ. ಆದರೆ ದಸರಾ ಉತ್ಸವದ ಕೇಂದ್ರ ಬಿಂದು ಬನ್ನಿ ಮಂಟಪ ಈಗ ವಿವಾದದ ಸುಳಿಗೆ ಸಿಲುಕಿದೆ. ತಾಲ್ಲೂಕಿನ ಕಿರಂಗೂರು ವೃತ್ತದ ಬಳಿ ಇರುವ ಐತಿಹಾಸಿಕ ದಸರಾ ಬನ್ನಿ ಮಂಟಪಕ್ಕೆ ಹೊಂದಿಕೊಂಡ ಜಾಗದ ಮಾಲೀಕತ್ವದ ವಿಷಯ ಈಗ ವಿವಾದ ಸೃಷ್ಟಿಸಿದೆ. ಒಡೆಯರ್ ಅರಸರ ಕಾಲದಲ್ಲಿ ನಿರ್ಮಾಣಗೊಂಡಿರುವ 24 ಕಾಲಿನ ಶಿಲಾ ಮಂಟಪಕ್ಕೆ ಹೊಂದಿಕೊಂಡ ಸ.ನಂ.194/1ರಲ್ಲಿನ 12 ಗುಂಟೆ ಜಮೀನಿನ ಮಾಲೀಕತ್ವ ಕುರಿತು ಬೆಂಗಳೂರಿನ ವ್ಯಕ್ತಿಯೊಬ್ಬರು ತಕರಾರು ಎತ್ತಿದ್ದಾರೆ. ನಾಗರಾಜು ಎಂಬುವವರ ಮಗ ಸುನಿಲ್ ಎಂಬುವವರು 12 ಗುಂಟೆ ಜಮೀನು ನಮ್ಮ ಪಿತ್ರಾರ್ಜಿತ ಆಸ್ತಿಯಾಗಿದ್ದು, ಅದನ್ನು ನಮ್ಮ ಸುಪರ್ದಿಗೆ ನೀಡಬೇಕು ಎಂದು ತಹಸೀಲ್ದಾರ್ ಅವರಿಗೆ ಅರ್ಜಿ ಸಲ್ಲಿಸಿದ್ದಾರೆ.ಮತ್ತೊಂದೆಡೆ ವಾರಸುದಾರರಿಲ್ಲದೆ ಬೀಳು ಬಿದ್ದಿದ್ದ ಜಾಗವನ್ನು ತಾಲ್ಲೂಕು ಆಡಳಿತ ಬನ್ನಿ ಮಂಟಪದ ಆಸ್ತಿ ಎಂದು ಪರಿಗಣಿಸಲು ಮುಂದಾಗಿದೆ. ಬೀಳು ಜಾಗವೆಂದರೆ ಸರ್ಕಾರಿ ಜಾಗ ಎಂದೇ ಅರ್ಥ ಬರುವುದರಿಂದ ದಸರಾ ಮಂಟಪದ 2 ಗುಂಟೆ ಹಾಗೂ ಅದಕ್ಕೆ ಹೊಂದಿಕೊಂಡ 12 ಗುಂಟೆ ಸೇರಿ ಒಟ್ಟು 14 ಗುಂಟೆ ಆಸ್ತಿಯನ್ನು ಒಟ್ಟುಗೂಡಿಸಲು ಪ್ರಯತ್ನ ನಡೆದಿರುವ ಸಂದರ್ಭದಲ್ಲಿ ಈ ವಿವಾದ ಎದ್ದಿದೆ. ದೂರದ ಬೆಂಗಳೂರಿನ ವ್ಯಕ್ತಿ ತಕರಾರು ತೆಗೆದಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಗ್ರಾಮ ಲೆಕ್ಕಿಗರೊಬ್ಬರು ಈ ವಿವಾದಿತ ಜಾಗಕ್ಕೆ ಕಂದಾಯ ಕಟ್ಟಿಸಿಕೊಂಡಿದ್ದಾರೆ. `ಕಿರಂಗೂರು ಸರ್ಕಲ್ ಬಳಿಯ ದಸರಾ ಮಂಟಪ ಪಕ್ಕದ 12 ಗುಂಟೆಜಮೀನಿಗೆ ಪಕ್ಕಾ ದಾಖಲೆಗಳು ಇಲ್ಲ. ಹಾಗಾಗಿ ಅದು ಸರ್ಕಾರಿ ಜಾಗ ಎಂದೇ ಭಾವಿಸಲಾಗಿದೆ. ಮೇಲಧಿಕಾರಿಗಳ ಗಮನಕ್ಕೆ ತಂದು ದಾಖಲೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಈ ಬಾರಿ ದಸರಾ ಉತ್ಸವವನ್ನು ಮತ್ತಷ್ಟು ಸಂಭ್ರಮದಿಂದ ಆಚರಿಸಲು ನಿರ್ಧರಿಸಿದ್ದು ಬನ್ನಿ ಮಂಟಪದಿಂದಲೇ ಆನೆ ಅಂಬಾರಿ ಒಳಗೊಂಡ ಉತ್ಸವಕ್ಕೆ ಚಾಲನೆ ಸಿಗಲಿದೆ~ ಎಂದು ತಹಶೀಲ್ದಾರ್ ಅರುಳ್‌ಕುಮಾರ್ ತಿಳಿಸಿದ್ದಾರೆ.`ಬನ್ನಿ ಮಂಟಪಕ್ಕೆ ಹೊಂದಿಕೊಂಡಿರುವ ರಾಜರ ಕಾಲದ ಕೊಳ ಅತಿಕ್ರಮಣವಾಗಿದೆ. ದಸರಾ ಮಂಟಪದ ಛಾವಣಿಯ ಮೇಲೆ ಗಿಡ, ಗೆಂಟೆಗಳು ಬೆಳೆದು ಸ್ಮಾರಕದ ಅಸ್ವಿತ್ವಕ್ಕೆ ಧಕ್ಕೆ ಬರುತ್ತಿದೆ. ಕೊಳವನ್ನು ವಶಕ್ಕೆ ಪಡೆಯುವುದರ ಜತೆಗೆ ಸ್ಮಾರಕವನ್ನು ಸಂರಕ್ಷಿಸಬೇಕು~ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಸ್.ಸಂದೇಶ್ ಸಲಹೆ ನೀಡಿದ್ದಾರೆ. ರೂ.50 ಲಕ್ಷ: ಶ್ರೀರಂಗಪಟ್ಟಣ ದಸರಾ ಉತ್ಸವಕ್ಕೆ ಕಳೆದ ಬಾರಿ ಸರ್ಕಾರದಿಂದ 25 ಲಕ್ಷ ರೂಪಾಯಿ ಹಣ ಬಿಡುಗಡೆಯಾಗಿತ್ತು. ಈ ಬಾರಿ 50 ಲಕ್ಷ ಹಣ ನೀಡುವಂತೆ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದೇವೆ. ಶಾಸಕ ರಮೇಶ ಬಂಡಿಸಿದ್ದೇಗೌಡ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಬೇಡಿಕೆ ಸಲ್ಲಿಸಿದ್ದಾರೆ. ದಸರಾ ಉತ್ಸವವನ್ನು ಜಿಲ್ಲಾ ಉತ್ಸವವಾಗಿ ಆಚರಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಎಲ್ಲ ತಾಲ್ಲೂಕುಗಳ ಜನಪ್ರತಿನಿಧಿಗಳು ಹಾಗೂ ಜನರು ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಕಾರ್ಯಕ್ರಮ ರೂಪಿಸಲಾಗುವುದು~ ಎಂದು ಉಪ ವಿಭಾಗಾಧಿಕಾರಿ ಜಿ.ಪ್ರಭು ತಿಳಿಸಿದ್ದಾರೆ. `ದಸರಾ ಮಂಟಪ ವಿವಾದ ಶೀಘ್ರ ಬಗೆಹರಿಯಲಿದೆ~ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry