ಶನಿವಾರ, ಮೇ 21, 2022
22 °C

ವಿವಾದದ ಸುಳಿಯಲ್ಲಿ ರೇಷ್ಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶದ ಬೊಕ್ಕಸಕ್ಕೆ ವರ್ಷಕ್ಕೆ ಅಂದಾಜು ್ಙ 3200 ಕೋಟಿ  ವಿದೇಶಿ ವಿನಿಮಯ ತರುತ್ತಿರುವ ರೇಷ್ಮೆ ಉದ್ಯಮ ಇದೀಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಇದನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ರಾಜ್ಯದ ಲಕ್ಷಾಂತರ ರೈತರನ್ನು ಕಂಗಾಲಾಗುವಂತೆ ಮಾಡಿದೆ. ಕೆಲವೇ ನೇಕಾರರ ಹಿತ ಕಾಯಲು ಮುಂದಾಗಿರುವ ಕೇಂದ್ರ ಸರ್ಕಾರ ರೇಷ್ಮೆ ಬೆಳೆಗಾರರ ಹಿತ  ನಿರ್ಲಕ್ಷಿಸಿದ ಪರಿಣಾಮ ದೇಶದ ರೇಷ್ಮೆ ಉದ್ಯಮಕ್ಕೆ ದೊಡ್ಡ ಕಂಟಕ ಎದುರಾಗಿದೆ.ದೇಶೀಯ ರೇಷ್ಮೆ ಬೆಳೆಗಾರರನ್ನು ಪ್ರೋತ್ಸಾಹಿಸಿ ಅಗತ್ಯವಿರುವಷ್ಟು ರೇಷ್ಮೆ ಉತ್ಪಾದನೆಗೆ ಮುಂದಾಗುವ ಬದಲು ಕೇಂದ್ರ ಸರ್ಕಾರ ಈ ವರ್ಷದ ಬಜೆಟ್‌ನಲ್ಲಿ ಚೀನಾದಿಂದ ಆಮದು ಮಾಡಿಕೊಳ್ಳುವ ರೇಷ್ಮೆಯ ಮೇಲೆ ಶೇ 25ರಷ್ಟು ಸುಂಕ ಕಡಿತಗೊಳಿಸಿದೆ. ಕೇಂದ್ರ ಸರ್ಕಾರದ ಈ ನೀತಿಯಿಂದ ಭಾರತದ ರೇಷ್ಮೆ ಮಾರುಕಟ್ಟೆಯ ಬೃಹತ್ ಹೆಬ್ಬಾಗಿಲು ಚೀನಾಕ್ಕೆ ತೆರೆದಂತಾಗಿದೆ.ಶೇ 31ರಷ್ಟು ಆಮದು ಸುಂಕದೊಂದಿಗೆ ದೇಶದ ಮಾರುಕಟ್ಟೆ ಪ್ರವೇಶಿಸುತ್ತಿದ್ದ ಚೀನಾ ರೇಷ್ಮೆ ಏಪ್ರಿಲ್‌ನಿಂದ ಕೇವಲ ಶೇ 5ರಷ್ಟು ಆಮದು ಸುಂಕದೊಂದಿಗೆ ಭಾರತ ಪ್ರವೇಶಿಸಲಿದೆ. ಇದರಿಂದ ದೇಶದ ರೇಷ್ಮೆ ಬೆಳೆಗಾರರು ಮತ್ತು ರೀಲರ್‌ಗಳ ಮೇಲೆ ತೀವ್ರ ಪ್ರಮಾಣದ ದುಷ್ಪರಿಣಾಮ ಬೀರಲಿರುವ ಕಾರಣ ರೇಷ್ಮೆ ಉದ್ಯಮದಲ್ಲಿ ತಳಮಳ ಮೂಡಿದೆ.ಇದರ ಮುನ್ಸೂಚನೆ ಎಂಬಂತೆ ಫೆಬ್ರುವರಿ ಕೊನೆಯ ವಾರದಿಂದ ರಾಜ್ಯದಲ್ಲಿ ರೇಷ್ಮೆ ಗೂಡಿನ ಧಾರಣೆಯಲ್ಲಿ ಸಾಕಷ್ಟು ಕುಸಿತ ಕಂಡು ಬಂದಿದೆ. ಕಳೆದ ವರ್ಷದ ಮಧ್ಯಭಾಗದಿಂದ ಈ ವರ್ಷದ ಫೆಬ್ರುವರಿ ಅಂತ್ಯದವರೆಗೆ ಒಂದು ಕೆ.ಜಿ ರೇಷ್ಮೆ ಗೂಡಿಗೆ ರೂ 300ರಿಂದ ರೂ 400  ಬೆಲೆ ಹರಾಜಿನಲ್ಲಿ ಕೂಗಲಾಗುತ್ತಿತ್ತು. ಆದರೆ, ಫೆಬ್ರುವರಿ 26 ಮತ್ತು 27ರಿಂದಲೇ ರೇಷ್ಮೆ ಗೂಡು ಕೆ.ಜಿಗೆ ರೂ 150ರಿಂದ ರೂ 200 ರೂಪಾಯಿಗೆ ಕುಸಿತ ಕಂಡಿದೆ !ಬಜೆಟ್‌ನಲ್ಲಿ ಪ್ರಕಟವಾಗಬಹುದಾದ ಆಮದು ಸುಂಕ ಕಡಿತ ವಿಷಯ ಅರಿತ ನೇಕಾರರು ರೇಷ್ಮೆ ನೂಲಿಗೆ ಕಡಿಮೆ ಬೆಲೆ ನಿಗದಿಪಡಿಸಿದ್ದಾರೆ. ಅದಕ್ಕೆ ಪೂರಕವಾಗಿ ರೇಷ್ಮೆ ನೂಲು ಬಿಚ್ಚಾಣಿಕೆದಾರರು ರೈತರಿಂದ ಅತಿ ಕಡಿಮೆ ಬೆಲೆಗೆ ರೇಷ್ಮೆ ಗೂಡು ಖರೀದಿಸುತ್ತಿದ್ದಾರೆ. ಇದರಿಂದ ರೇಷ್ಮೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.ಒಂದು ಕೆ.ಜಿ ರೇಷ್ಮೆ ಗೂಡು ಬೆಳೆಯಲು ಅಂದಾಜು ರೂ 250 ಖರ್ಚು ಮಾಡುವ ರೈತರಿಗೆ ಈಗಿನ ಮಾರುಕಟ್ಟೆಯಲ್ಲಿ ದೊರೆಯುತ್ತಿರುವುದು ಕೇವಲ ರೂ 150ರಿಂದ ರೂ 200 ಮಾತ್ರ. ಲಕ್ಷಾಂತರ ರೂಪಾಯಿಗಳ ಸಾಲ ಮಾಡಿ, ಎರಡು- ಮೂರು ತಿಂಗಳು ಸೂಕ್ಷ್ಮ ಮತ್ತು ಎಚ್ಚರಿಕೆಯಿಂದ ಹುಳುಗಳನ್ನು ಸಾಕಿದ್ದಕ್ಕೆ ರೈತರು ಕೆ.ಜಿ. ರೇಷ್ಮೆ ಗೂಡಿಗೆ ್ಙ100ಕ್ಕೂ ಹೆಚ್ಚು  ನಷ್ಟ ಎದುರಿಸುವಂತಾಗಿದೆ. ವಿಶ್ವದಲ್ಲಿ ವಾರ್ಷಿಕ ಒಂದು ಲಕ್ಷ ಮೆಟ್ರಿಕ್ ಟನ್ ರೇಷ್ಮೆ ಉತ್ಪಾದನೆಯಾಗುತ್ತಿದೆ. ಇದರಲ್ಲಿ ಶೇ 80 ಭಾಗ ಚೀನಾದಲ್ಲಿ ಉತ್ಪಾದನೆಯಾಗುತ್ತಿದ್ದರೆ, ಭಾರತದಲ್ಲಿ ಶೇ 16ರಷ್ಟು ಉತ್ಪಾದನೆಯಾಗುತ್ತಿದ್ದು ಎರಡನೇ ಸ್ಥಾನದಲ್ಲಿದೆ. ಪ್ರಸ್ತುತ ದೇಶದಲ್ಲಿ 16 ಸಾವಿರ ಮೆಟ್ರಿಕ್ ಟನ್ ರೇಷ್ಮೆ ಉತ್ಪಾದನೆಯಾಗುತ್ತಿದ್ದು, ಅದರಲ್ಲಿ ಕರ್ನಾಟಕದ ಪಾಲು 8 ಸಾವಿರ ಮೆಟ್ರಿಕ್ ಟನ್‌ನಷ್ಟು ಇದೆ. ರಾಜ್ಯದಲ್ಲಿ 77.328 ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳೆ ಸೊಪ್ಪು ಬೆಳೆಯಲಾಗುತ್ತಿದೆ. ರಾಜ್ಯದ 11,431 ಗ್ರಾಮಗಳ 1.42 ಲಕ್ಷ ರೇಷ್ಮೆ ಬೆಳೆಗಾರರ ಕುಟುಂಬಗಳು ಇವೆ. ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಲ್ಲಿ ರೇಷ್ಮೆ ಪ್ರಮುಖ ಬೆಳೆಯಾಗಿದೆ.ಅಲ್ಲದೆ ರಾಜ್ಯದಲ್ಲಿ 7195 ಕುಟುಂಬಗಳು ರೇಷ್ಮ ನೂಲು ಬಿಚ್ಚಾಣಿಕೆ (ರೀಲರ್) ಕೆಲಸ ಅವಲಂಬಿಸಿವೆ. ಅದರಲ್ಲಿ 5137 ಕುಟುಂಬ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ್ದಾಗಿದೆ. ದೇಶದ ರೇಷ್ಮೆ ಕೃಷಿಗೆ ರಾಜ್ಯದ ಕೊಡುಗೆ ಅಪಾರ ಆಗಿರುವ ಕಾರಣ ಕೇಂದ್ರ ಸರ್ಕಾರದ ಆಮದು ಸುಂಕ ಕಡಿತ ನೀತಿ ನೇರವಾಗಿ ಮೊದಲು ಪರಿಣಾಮ ಬೀರುವುದು ರಾಜ್ಯದ ರೇಷ್ಮೆ ಬೆಳೆಗಾರರು ಮತ್ತು ರೀಲರ್‌ಗಳಿಗೆ.2001-02ರಲ್ಲಿ ‘ರೇಷ್ಮೆ ಸುರಿ ನೀತಿ’ಯಿಂದಾಗಿ ಎರಡು ವರ್ಷಗಳ ಕಾಲ ಸ್ಥಳೀಯ ರೇಷ್ಮೆ ಮತ್ತು ಕಚ್ಚಾ ರೇಷ್ಮೆಯ ಧಾರಣೆ ಕುಸಿತ ಕಂಡಿತ್ತು. ಆಗ ರೈತರು ಹೋರಾಟ ಮಾಡಿದ ಪರಿಣಾಮ ಕೆ.ಜಿ ಆಮದು ರೇಷ್ಮೆಗೆ 33.19 ಅಮೆರಿಕನ್ ಡಾಲರ್‌ಗಳ (ಅಂದಾಜು ್ಙ 1493.55) ದರ ನಿಗದಿಯಾಯಿತು.ನಂತರ ಉದ್ಯಮದಲ್ಲಿ ಚೇತರಿಕೆ ಕಂಡು ಬಂದಿತ್ತು. ಆದರೆ 2008ಕ್ಕೆ ಸುರಿ ವಿರೋಧಿ ಶುಲ್ಕದ ಅವಧಿ ಅಂತ್ಯಗೊಂಡಿದ್ದ ಕಾರಣ ರೇಷ್ಮೆ ಬೆಲೆಯಲ್ಲಿ ಮತ್ತೆ ಕುಸಿತ ಕಂಡು ಬಂದಿತ್ತು. ಆಗ ಪುನಃ ರೈತರು, ರೀಲರ್‌ಗಳು, ರೇಷ್ಮೆ ಮೊಟ್ಟೆ ಉತ್ಪಾದಕರು ಹೋರಾಟ ಮಾಡಿ ಕೆ.ಜಿ ಆಮದು ರೇಷ್ಮೆಗೆ 37.32 ಅಮೆರಿಕನ್ ಡಾಲರ್ ಅನ್ನು (್ಙ1679.40) ಕೇಂದ್ರ ಸರ್ಕಾರ ನಿಗದಿಪಡಿಸಿತು. ಆಗಿನಿಂದ ಇಲ್ಲಿಯವರೆಗೆ ಚೀನಾ ರೇಷ್ಮೆ ಶೇ 31ರಷ್ಟು ಸುಂಕದೊಂದಿಗೆ ದೇಶದ ಮಾರುಕಟ್ಟೆ ಪ್ರವೇಶಿಸುತ್ತಿತ್ತು.14 ಸಾವಿರ ಮೆಟ್ರಿಕ್ ಟನ್ ಕೊರತೆ: ದೇಶದಲ್ಲಿ ವರ್ಷಕ್ಕೆ 30 ಸಾವಿರ ಮೆಟ್ರಿಕ್ ಟನ್ ರೇಷ್ಮೆ ನೂಲಿನ ಅಗತ್ಯ ಇದ್ದು, ಇದರಲ್ಲಿ ದೇಶದಲ್ಲಿ 16 ಸಾವಿರ ಮೆಟ್ರಿಕ್ ಟನ್ ಉತ್ಪಾದನೆಯಾಗುತ್ತಿದೆ. ಉಳಿದ 14 ಸಾವಿರ ಟನ್‌ಗಳಲ್ಲಿ ಸುಮಾರು 8 ಸಾವಿರ ಮೆಟ್ರಿಕ್ ಟನ್ ರೇಷ್ಮೆಯನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಬೇಡಿಕೆ ಹೆಚ್ಚಿರುವ ಕಾರಣ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಬೆಲೆಗೆ ಚೀನಾ ರೇಷ್ಮೆ ಆಮದು ಮಾಡಿಕೊಳ್ಳುವಂತೆ ಉತ್ತರ ಪ್ರದೇಶದ ಪ್ರಭಾವಿ ನೇಕಾರರ ಸಮುದಾಯದ ನಾಯಕರು ಕೇಂದ್ರ ಸರ್ಕಾದಲ್ಲಿ ಲಾಬಿ ನಡೆಸಿದ್ದಾರೆ ಎಂದು ಕೆಎಸ್‌ಐಸಿ ಮಾಜಿ ಅದ್ಯಕ್ಷ ಸೈಯದ್ ಜಿಯಾವುಲ್ಲ ತಿಳಿಸುತ್ತಾರೆ. ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ನೇಕಾರರ ಸಮುದಾಯದ ಜನತೆ ಹೆಚ್ಚಿದ್ದು, ಅಲ್ಲಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಚೀನಾ ರೇಷ್ಮೆ ಆಮದು ಮೇಲಿನ ಸುಂಕವನ್ನು ಶೇ 26ರಷ್ಟು ಕಡಿತಗೊಳಿಸುವ ತೀರ್ಮಾನ ಮಾಡಿರಬಹುದು ಎಂದು ರಾಜ್ಯ ನೋಂದಾಯಿತಿ ರೇಷ್ಮೆ ಮೊಟ್ಟೆ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ. ಮಹೇಂದ್ರ ದೂರುತ್ತಾರೆ.ರೇಷ್ಮೆ ಉದ್ಯಮವು ಅನೇಕ ಚಟುವಟಿಕೆಗಳ ಸರಪಳಿಗಳಿಂದ ಕೂಡಿದೆ. ಒಂದು ಚಟುವಟಿಕೆ ಮತ್ತೊಂದು ಚಟುವಟಿಕೆಗಳ ಮೇಲೆ ಅವಲಂಬಿತವಾಗಿವೆ. ವರ್ತಕರು ನೇಕಾರರನ್ನು, ನೇಕಾರರು, ರೀಲರ್‌ಗಳನ್ನು, ರೀಲರ್‌ಗಳು ವಾಣಿಜ್ಯ ರೇಷ್ಮೆ ಬೆಳೆಗಾರರನ್ನು, ರೇಷ್ಮೆ ಬೆಳೆಗಾರರು ಮೊಟ್ಟೆ ಉತ್ಪಾದಕರನ್ನು, ಮೊಟ್ಟೆ ಉತ್ಪಾದಕರು ಬಿತ್ತನೆ ಬೆಳೆಗಾರರನ್ನು ಅವಲಂಬಿಸಿದ್ದಾರೆ. ಇದರಲ್ಲಿ ಯಾವುದೇ ಒಂದು ಚಟುವಟಿಕೆಗೆ ತೊಂದರೆಯಾದರೂ ಇತರ ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಕೇಂದ್ರ ಸರ್ಕಾರ ಎಚ್ಚರದಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದೂ ಮಹೇಂದ್ರ ಸಲಹೆ ನೀಡುತ್ತಾರೆ.ಏನು ಆಗಬೇಕು?

ರೈತರು, ರೀಲರ್‌ಗಳು ಹಾಗೂ ರೇಷ್ಮೆ ಮೊಟ್ಟೆ ಉತ್ಪಾದಕರ ಪ್ರಕಾರ ನಾಲ್ಕು ಪ್ರಮುಖ ಬೇಡಿಕೆಗಳು ಈಡೇರಿದರೆ ರಾಜ್ಯ ಮತ್ತು ದೇಶದಲ್ಲಿ ರೇಷ್ಮೆ ಕೃಷಿ ಉದ್ಯಮವನ್ನು ಉಳಿಸಿ ಬೆಳೆಸಬಹುದು ಆ ಕ್ರಮಗಳು ಹೀಗಿವೆ...1) ಕೇಂದ್ರ ಸರ್ಕಾರ ಕೂಡಲೇ ಚೀನಾ ರೇಷ್ಮೆ ಮೇಲಿನ ಆಮದು ಸುಂಕ ಕಡಿತ ಹಿಂದೆ  ಪಡೆಯಬೇಕು. ಅಲ್ಲದೆ ಚೀನಾ ರೇಷ್ಮೆ ನೂಲನ್ನು ಕೆ.ಜಿಗೆ ರೂ 3000 ಗಳಿಗೆ ನಿಗದಿಪಡಿಸಬೇಕು.2) ಚೀನಾ ರೇಷ್ಮೆ ಬಟ್ಟೆಗಳ ಮೇಲೆಯೂ ತೆರಿಗೆ ವಿಧಿಸುವ ಮೂಲಕ ನೇಕಾರರ ಸಮಸ್ಯೆಯನ್ನೂ ಬಗೆಹರಿಸಿ, ಕೃಷಿಕರಿಗೆ ನೆರವಾಗಬೇಕು.3) ಕರ್ನಾಟಕ ರೇಷ್ಮೆ ಮಾರುಕಟ್ಟೆ ಮಂಡಳಿ  ಪುನಶ್ಚೇತನಗೊಳಿಸಿ, ಅಲ್ಲಿಂದಲೇ ಪ್ರತಿ ಕೆ.ಜಿ ರೇಷ್ಮೆ ನೂಲಿಗೆ ರೂ 2,500 ರೂಪಾಯಿ ಖರೀದಿಸುವಂತಾಗಬೇಕು. ಅದಕ್ಕೆ ಪೂರಕವಾಗಿ ಸರ್ಕಾರ ರೇಷ್ಮೆ ಬೆಲೆಗೆ ಬೆಂಬಲ ಬೆಲೆ ಘೋಷಿಸಬೇಕು.4) ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರ, ಸಂಸದರು ಕೇಂದ್ರ ಸರ್ಕಾರದ ಮೇಲೆ ಬಲವಾದ ಒತ್ತಡ  ಹೇರಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.