ಶುಕ್ರವಾರ, ನವೆಂಬರ್ 22, 2019
21 °C

ವಿವಾದ, ಸಾವುಗಳ ಮಧ್ಯೆ ನಲುಗಿದ ಮಠ

Published:
Updated:

ಬೀದರ್: ಹಿರಿಯ ಸ್ವಾಮೀಜಿ ಸಂಶಯಾಸ್ಪದ ಸಾವಿನಿಂದ ಚೇತರಿಸಿಕೊಳ್ಳುವ ಮುನ್ನವೇ, ಬೀದರ್ ತಾಲ್ಲೂಕಿನ ಚೌಳಿ ಗ್ರಾಮದ ಗಣೇಶ್ವರ ಅವಧೂತರ ಮಠಕ್ಕೆ ಮೂವರು ಸಾಧಕರ ಸಾವಿನೊಂದಿಗೆ ಇನ್ನೊಂದು ಆಘಾತ ತಟ್ಟಿದೆ.  ಈ ಸಾವು ಈಚಿನ ದಿನಗಳಲ್ಲಿ ಮಠವನ್ನು ನಲುಗಿಸಿದ್ದ ವಿವಾದಗಳನ್ನು ಇನ್ನಷ್ಟು ಜಟಿಲಗೊಳಿಸಿದೆ.ಮೊದಲು ಮಠದಲ್ಲಿ ಸಾಧಕರಾಗಿದ್ದ ಮಾರುತಿ ಸ್ವಾಮೀಜಿ ನಾಪತ್ತೆಯಾಗಿದ್ದರು. ಇನ್ನೂ ಅವರ ಸುಳಿವು ಪತ್ತೆಯಾಗಿಲ್ಲ. ನಾಪತ್ತೆ ಪ್ರಕರಣ ದಾಖಲಾಗಿದೆ. ಇದರಲ್ಲಿ ಮಠದವರ ಪಾತ್ರ ಇರಬಹುದು ಎಂಬ ಶಂಕೆ, ಆರೋಪ ಕೇಳಿಬಂದಿತ್ತು. ಈ ನಡುವೆ ಮಠದ ಹಿರಿಯ ಸ್ವಾಮೀಜಿ ಗಣೇಶ್ವರ ಅವಧೂತರೇ ಶಂಕಾಸ್ಪದ ರೀತಿಯಲ್ಲಿ ಸತ್ತಿದ್ದರು.ಹಿರಿಯ ಸ್ವಾಮೀಜಿ ಸತ್ತಾಗಲೂ ಚೀಟಿಯೊಂದು ಸಿಕ್ಕಿತ್ತು. ಆದರೆ, ಇವರ ಸಾವಿನ ಬಗೆಗೆ ಆಗ ಸಾರ್ವಜನಿಕವಾಗಿ ಶಂಕೆ ವ್ಯಕ್ತವಾಗಿದ್ದರೂ, ಮಠದಿಂದ ಯಾವುದೇ ದೂರು ದಾಖಲಾಗಿರಲಿಲ್ಲ. ಹೀಗಾಗಿ, ಮರಣೋತ್ತರ ಪರೀಕ್ಷೆಯೂ ಇಲ್ಲದೇ ಗರ್ಭಗುಡಿಯಲ್ಲಿ ಸ್ವಾಮೀಜಿ ಶವದ ಸಮಾಧಿ ಮಾಡಲಾಗಿತ್ತು.ಆ ಘಟನೆ ನಡೆದು ಇಂದಿಗೆ 41 ದಿನಗಳು ಕಳೆದಿವೆ. ಹಿರಿಯರ ಅನುಪಸ್ಥಿತಿಯಲ್ಲಿ ಮಠವನ್ನು ಯಾರು ಮುನ್ನಡೆಸಬೇಕು, ಟ್ರಸ್ಟ್ ರಚಿಸಬೇಕೇ ಎಂಬ ವಿಚಾರ ಚರ್ಚೆಯಲ್ಲಿ ಇರುವಾಗಲೇ ಹಿರಿಯ ಸ್ವಾಮೀಜಿಗೆ ನಿಕಟವರ್ತಿಯಾಗಿದ್ದ ಜಗನ್ನಾಥ ಸ್ವಾಮೀಜಿ ಸೇರಿ ಮೂವರು `ಅಗ್ನಿಪ್ರವೇಶ' ಮಾಡಿದ್ದಾರೆ. ಇದರಿಂದ ಅನುಮಾನದ ಹೊಗೆ ಇನ್ನಷ್ಟು ಎದ್ದಿದೆ.ವಿವಾದದ ಹಿನ್ನೆಲೆ: ಡಿಸೆಂಬರ್ 31ರಂದು ಮಾರುತಿ ಸ್ವಾಮೀಜಿ ಮೇಲೆ ಹಲ್ಲೆ ನಡೆಯುವ ಮೂಲಕ ವಿವಾದ ಆರಂಭವಾಯಿತು. ಇದಾದ ಒಂದು ತಿಂಗಳ ಬಳಿಕ ಜನವರಿ 31ರಂದು ಮಾರುತಿ ಸ್ವಾಮೀಜಿ ನಾಪತ್ತೆ ಆಗಿದ್ದರು. ಅದು ಅಪಹರಣವೋ ಅಥವಾ ಅವರೇ ಸ್ವತಃ ಕಣ್ಮರೆ ಆದರೋ ಎನ್ನುವುದು ಈವರೆಗೂ ಬಯಲಾಗಿಲ್ಲ. ಆ ಬಗೆಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ನಾಪತ್ತೆಯಲ್ಲಿ ಮಠದವರ ಪಾತ್ರವೂ ಇರಬಹುದು ಎಂಬ ಆರೋಪಗಳು ಕೇಳಿಬಂದಿದ್ದವು. ಈ ಘಟನೆಯ ತಿಂಗಳ ನಂತರ ಫೆ.28ರಂದು ಹಿರಿಯ ಸ್ವಾಮೀಜಿ ಗಣೇಶ್ವರ ಅವಧೂತರು ಸಾವನ್ನಪ್ಪಿದ್ದರು.`ಮಠದ ಸಾಧಕರಿಗೆ ಆಗುತ್ತಿರುವ ಕಿರುಕುಳ ನೋಡಲಾಗುತ್ತಿಲ್ಲ. ನೊಂದಿದ್ದೇನೆ. ಅವರ ದುಃಖ ನೋಡಲಾರದೆ ಭಗವಂತನಲ್ಲಿ ಒಂದಾಗುತ್ತಿದ್ದೇನೆ' ಎಂದು ಸಾವಿನ ನಂತರ ಸಿಕ್ಕಿದ್ದ ಚೀಟಿಯಲ್ಲಿ ಬರೆಯಲಾಗಿತ್ತು.ಗಣೇಶ್ವರ ಅವಧೂತರ ಸಾವು ಕುರಿತೂ ಪ್ರಕರಣ ದಾಖಲಾಗಿರಲಿಲ್ಲ. ಆಗ ಪ್ರತಿಕ್ರಿಯಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, `ಈ  ಬಗೆಗೆ ಯಾರೂ ದೂರು ನೀಡಿಲ್ಲ. ಭಕ್ತರು ಹೆಚ್ಚು ಸೇರುತ್ತಿರುವ ಹಿನ್ನೆಲೆಯಲ್ಲಿ ಮಠದ ಬಳಿ ಪೊಲೀಸರನ್ನು ನಿಯೋಜಿಸಿದ್ದೇವೆ' ಎಂದಿದ್ದರು.ಅದಾದ ಕೆಲವೇ ದಿನಗಳಲ್ಲಿ ಜಿಲ್ಲೆಗೆ ಭೇಟಿ ನೀಡಿದ್ದ ಗೃಹ ಸಚಿವ ಆರ್. ಅಶೋಕ ಅವರಿಗೂ ಈ ಬಗೆಗೆ ಪ್ರಶ್ನೆಗೆ ಎದುರಾಗಿತ್ತು. `ಘಟನೆಯ ವಿವರಗಳನ್ನು ಪಡೆದಿದ್ದೇನೆ. ಸ್ವಾಮೀಜಿಗಳು ಬರೆದಿರುವ ಪತ್ರ, ಕಿರಿಯ ಸ್ವಾಮೀಜಿಗಳು ನೀಡಿರುವ ಹೇಳಿಕೆ ಆಧರಿಸಿ ತನಿಖೆ ನಡೆಸಲು ಪೊಲೀಸರಿಗೆ ನಿರ್ದೇಶನ ನೀಡಿದ್ದೇನೆ' ಎಂದಿದ್ದರು.ಈ ನಡುವೆ, ಸುಮಾರು ಎಂಟು ಎಕರೆ ಭೂಮಿ, ಕಟ್ಟಡ ಹೊಂದಿರುವ ಮಠದ ನಿರ್ವಹಣೆಗೆ ಟ್ರಸ್ಟ್ ರಚಿಸುವ ಕುರಿತು ಚರ್ಚೆ ನಡೆದಿತ್ತು. ಮಠದ ಭಕ್ತರ ನಿಯೋಗವೊಂದು ಈ ಸಂಬಂಧ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿತ್ತು. ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.ಈ ಗೊಂದಲಗಳು ಬಗೆಹರಿಯುವ ಮುನ್ನವೇ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸ್ಥಳದಲ್ಲಿ ಸುಟ್ಟ ಕಟ್ಟಿಗೆಯ ರಾಶಿಯಿಂದ ಸೋಮವಾರ ಬೆಳಿಗ್ಗೆ 11ರವರೆಗೂ ಹೊಗೆ ಹೊರಬರುತ್ತಿತ್ತು. ಅಲ್ಲಿ ಸೇರಿದ್ದ ಸಾರ್ವಜನಿಕರಲ್ಲಿ ಅದಕ್ಕಿಂತಲೂ ಹೆಚ್ಚಾಗಿ ಅನುಮಾನದ ಹೊಗೆ ಆವರಿಸಿದಂತಿತ್ತು.

ಪ್ರತಿಕ್ರಿಯಿಸಿ (+)