ಗುರುವಾರ , ಆಗಸ್ಟ್ 22, 2019
23 °C
ಐಎಎಸ್ ಅಧಿಕಾರಿ ದುರ್ಗಾ ಶಕ್ತಿ ನಾಗ್‌ಪಾಲ್ ಅಮಾನತು

ವಿವಾದ ಸೃಷ್ಟಿಸಿದ ಎಸ್‌ಪಿ ಮುಖಂಡನ ಹೇಳಿಕೆ

Published:
Updated:

ಗ್ರೇಟರ್ ನೋಯಿಡಾ (ಪಿಟಿಐ): `ಕೇವಲ 41 ನಿಮಿಷಗಳಲ್ಲಿ ಐಎಎಸ್ ಅಧಿಕಾರಿ ದುರ್ಗಾ ಶಕ್ತಿ ನಾಗ್‌ಪಾಲ್ ಅವರನ್ನು ನಾನು ಅಮಾನತು ಮಾಡಿಸಿದೆ' ಎಂದು ಸಮಾಜವಾದಿ ಪಕ್ಷದ ಮುಖಂಡ ನರೀಂದರ್ ಭಾಟಿ  ಹೇಳಿಕೊಂಡಿರುವುದು ಹೊಸ ವಿವಾದ ಹುಟ್ಟುಹಾಕಿದೆ.ಈ ಹೇಳಿಕೆಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಅಖಿಲೇಶ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ.

ಗೌತಮ ಬುದ್ಧ ನಗರದಲ್ಲಿ ನಡೆದ ರ‌್ಯಾಲಿಯಲ್ಲಿ ಮಾತನಾಡುವ ಸಂದರ್ಭದಲ್ಲಿ ಭಾಟಿ ಅವರು, 28 ವರ್ಷದ ಐಎಎಸ್ ಅಧಿಕಾರಿಯನ್ನು ತಾವು ಅಮಾನತು ಮಾಡಿಸಿರುವುದಾಗಿ ಹೇಳಿದ್ದಾರೆ.`ನಾನು ಬೆಳಿಗ್ಗೆ 10.30ಕ್ಕೆ ಮುಲಾಯಂ ಸಿಂಗ್ ಯಾದವ್ ಮತ್ತು ಅಖಿಲೇಶ್ ಯಾದವ್ ಜೊತೆ ಮಾತನಾಡಿದೆ. 11 ಗಂಟೆಗೆ ಹೊತ್ತಿಗೆ ಅಮಾನತು ಆದೇಶ ಬಂತು. ಆಕೆ ಕೆಟ್ಟದಾಗಿ ವರ್ತಿಸಿದಳು. ಆದರೆ, ಅದು 40 ನಿಮಿಷಗಳವರೆಗೂ ನಡೆಯಲಿಲ್ಲ. 41ನೇ ನಿಮಿಷದಲ್ಲಿ ಆಕೆಯನ್ನು ಅಮಾನತು ಮಾಡಿದ ಆದೇಶ ಬಂತು' ಎಂಬ ಹೇಳಿಕೆ ರ‌್ಯಾಲಿಯ ವಿಡಿಯೊ ದೃಶ್ಯಾವಳಿಯಲ್ಲಿ ಇದೆ.ಮಸೀದಿಯೊಂದರ ಗೋಡೆಯನ್ನು ನೆಲಸಮ ಮಾಡಿದ್ದ ಕಾರಣ ನೀಡಿ, 2010ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ದುರ್ಗಾ ಶಕ್ತಿ ಅವರನ್ನು  ಅಮಾನತು ಮಾಡಲಾಗಿತ್ತು.ಭಾಟಿ ನಿರಾಕರಣೆ: ಈ ಮಧ್ಯೆ, ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಲು ಉತ್ತರ ಪ್ರದೇಶದ ಕೃಷಿ ನಿಗಮದ ಅಧ್ಯಕ್ಷರೂ ಆಗಿರುವ ಭಾಟಿ ಅವರು ಯತ್ನಿಸಿದ್ದಾರೆ.ವಿಡಿಯೊದಲ್ಲಿರುವ ಹೇಳಿಕೆಯ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಭಾಟಿ, `ಮಾಧ್ಯಮಗಳು ಕಲ್ಪಿತ ಅಂಶಗಳನ್ನೊಳಗೊಂಡ ವಿಡಿಯೊವನ್ನು ಪ್ರಸಾರ ಮಾಡುತ್ತಿದ್ದಾರೆ. ಅಮಾನತು ಮಾಡಿರುವುದು ಪ್ರಜಾಪ್ರಭುತ್ವಕ್ಕೆ ಸಂದ ಗೆಲುವು ಎಂದಷ್ಟೇ ನಾನು ಹೇಳಿದ್ದೆ' ಎಂದಿದ್ದಾರೆ.

ಪ್ರತಿಪಕ್ಷಗಳ ಟೀಕೆ: ನರೀಂದರ್ ಭಾಟಿ ಅವರು ನೀಡಿರುವ ಹೇಳಿಕೆಯನ್ನು ಪ್ರತಿಪಕ್ಷಗಳು ಟೀಕಿಸಿವೆ. ದುರ್ಗಾ ಶಕ್ತಿ ಅವರನ್ನು ಅಮಾನತಿನ ಹಿಂದಿರುವ ಕಾರಣ ಈಗ ಬಯಲಾಗಿದೆ ಎಂದು ಹೇಳಿವೆ.ಭಾಟಿ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿಯ ಮುಖ್ಯ ವಕ್ತಾರ ವಿಜಯ್ ಬಹದ್ದೂರು ಪಾಠಕ್, `ದುರ್ಗಾ ಶಕ್ತಿ ವಿರುದ್ಧದ ಕ್ರಮವನ್ನು ಅಖಿಲೇಶ್ ಯಾದವ್ ಸಮರ್ಥಿಸಿಕೊಂಡರೆ, ಅವರ ಪಕ್ಷದ ಮುಖಂಡ, ಸರ್ಕಾರದ ಸಚಿವರ ಸ್ಥಾನಮಾನ ಹೊಂದಿರುವ ಭಾಟಿ ಅವರು ಅಮಾನತನ್ನು ತಾವೇ ಮಾಡಿಸಿರುವುದಾಗಿ ಹೇಳುತ್ತಿದ್ದಾರೆ. ಇಡೀ ಪ್ರಕರಣದ ಹಿಂದಿರುವ ಕಾರಣ ಈಗ ಬಯಲಾಗಿದೆ' ಎಂದು ಹೇಳಿದ್ದಾರೆ.

ದುರ್ಗಾ ಶಕ್ತಿಗೆ ಹೈಕೋರ್ಟ್ ಶಹಬ್ಬಾಸ್

ಲಖನೌ (ಪಿಟಿಐ): ಗೌತಮ ಬುದ್ಧ ನಗರದಲ್ಲಿ ಪ್ರಬಲ ಮರಳು ಮಾಫಿಯಾವನ್ನು ನಿಯಂತ್ರಣಕ್ಕೆ ತಂದಿರುವ,  ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ದುರ್ಗಾ ಶಕ್ತಿ ನಾಗ್‌ಪಾಲ್ ಅವರನ್ನು ಶ್ಲಾಘಿಸಿರುವ ಅಲಹಾಬಾದ್ ಹೈಕೋರ್ಟ್, ಆಕೆ `ಧೈರ್ಯ'ದಿಂದ ತನ್ನ ಕೆಲಸ ನಿರ್ವಹಿಸಿದ್ದಾರೆ ಎಂದು ಹೇಳಿದೆ.

`ಮರಳು ಮಾಫಿಯಾದ ಕುರಿತ ದಾಖಲೆಗಳನ್ನು ನಾವು ಪರಿಶೀಲಿಸಿದ್ದೇವೆ.  ನೋಯಿಡಾದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆಯನ್ನು ಸ್ಥಗಿತಗೊಳಿಸುವ ನಿಟ್ಟಿನಲ್ಲಿ ನಾಗ್‌ಪಾಲ್ ತಮ್ಮ ಕೆಲಸವನ್ನು ಧೈರ್ಯದಿಂದ ಮಾಡಿದ್ದಾರೆ ಎಂಬುದು ನಮ್ಮ ಭಾವನೆ. ಈಗಾಗಲೇ 15 ಶಂಕಿತರನ್ನು ಬಂಧಿಸಲಾಗಿದೆ' ಎಂದು ಹೈಕೋರ್ಟ್‌ನ ಲಖನೌ ಪೀಠ ಅಭಿಪ್ರಾಯ ಪಟ್ಟಿತು.`ಅಕ್ರಮ ಗಣಿಗಾರಿಕೆಯ ಮೇಲೆ ನಿಗಾ ಇಡುವುದಕ್ಕಾಗಿ ಅವರು ವಿಶೇಷ ದಳವನ್ನೂ ರಚಿಸಿದ್ದರು' ಎಂದು ಪೀಠ ಹೇಳಿತು. ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಆತಂಕ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ದೇವಿ ಪ್ರಸಾದ್ ಸಿಂಗ್ ಮತ್ತು ಅಶೋಕ್ ಪಾಲ್ ಸಿಂಗ್ ಅವರನ್ನೊಳಗೊಂಡ ಲಖನೌ ಪೀಠ, ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚಿಸಿತು. ಮಧ್ಯಪ್ರವೇಶಿಸಲು ನಕಾರ: ಆದರೆ, ದುರ್ಗಾ ಶಕ್ತಿ ನಾಗ್‌ಪಾಲ್ ಅವರನ್ನು ಅಮಾನತು ಮಾಡಿರುವ ವಿಚಾರದಲ್ಲಿ ಮಧ್ಯಪ್ರವೇಶಿಸಲು ಪೀಠ ನಿರಾಕರಿಸಿತು. ದುರ್ಗಾ ಶಕ್ತಿ ಅವರನ್ನು ಅಮಾನತು ಮಾಡಿರುವುದನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿತ್ತು.

Post Comments (+)