ವಿವಾಹಿತೆ ನೇಣಿಗೆ ಶರಣು

7

ವಿವಾಹಿತೆ ನೇಣಿಗೆ ಶರಣು

Published:
Updated:

ಬೆಂಗಳೂರು: ರಾಮಮೂರ್ತಿನಗರ ಸಮೀಪದ ಆರ್.ಆರ್.ನಗರದಲ್ಲಿ ಸೋಮವಾರ ವಿವಾಹಿತೆ ನೇಣು ಹಾಕಿಕೊಂಡಿದ್ದು, ಸಂಪಂಗಿರಾಮನಗರದಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆರ್.ಆರ್.ನಗರ ಎರಡನೇ ಅಡ್ಡರಸ್ತೆ ನಿವಾಸಿ ದಿಲೀಪ್‌ಕುಮಾರ್ ಎಂಬುವರ ಪತ್ನಿ ಮಂಜುಳಾ (24) ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮಂಜುಳಾ ಅವರ ವಿವಾಹವಾಗಿ ಮೂರು ವರ್ಷಗಳಾಗಿದ್ದವು. ಪತಿ ಬಿಹಾರ ಮೂಲದ ದಿಲೀಪ್‌ಕುಮಾರ್, ಬಡಗಿಯಾಗಿದ್ದಾರೆ. ದಂಪತಿ ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡು ಸಾಕುತ್ತಿದ್ದರು.ದಿಲೀಪ್‌ಕುಮಾರ್, ಪತ್ನಿಯ ಆಭರಣಗಳನ್ನು ಅಡವಿಟ್ಟು ಸಾಲ ತೆಗೆದುಕೊಂಡಿದ್ದರು. ಆ ಆಭರಣಗಳನ್ನು ಬಿಡಿಸಿಕೊಡುವಂತೆ ಮಂಜುಳಾ ಅವರು ಪತಿಗೆ ಒತ್ತಾಯಿಸುತ್ತಿದ್ದರು. ಈ ವಿಷಯವಾಗಿ ದಂಪತಿ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಅದೇ ರೀತಿ ರಾತ್ರಿಯೂ ಜಗಳವಾಗಿದೆ. ಆ ನಂತರ ಪತಿ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಮಂಜುಳಾ ಅವರು ಮಗುವಿನ ಎದುರೇ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಮಮೂರ್ತಿನಗರ ಠಾಣೆಯಲ್ಲಿ ದೂರು ದಾಖಲಾಗಿದೆ.ಮತ್ತೊಂದು ಪ್ರಕರಣ: ಸಂಪಂಗಿರಾಮನಗರ 12ನೇ ಅಡ್ಡರಸ್ತೆ ನಿವಾಸಿ ಉಮಾಪತಿ ಶಂಕರ್ (64) ಎಂಬುವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಅವರು, ಪತ್ನಿ ಶ್ಯಾಮಲಾ ಜತೆ ವಾಸವಾಗಿದ್ದರು. ದಂಪತಿಯ ಮೂವರು ಹೆಣ್ಣು ಮಕ್ಕಳು ಮದುವೆಯಾಗಿ ಬೇರೆಡೆ ನೆಲೆಸಿದ್ದಾರೆ. ಶ್ಯಾಮಲಾ ಅವರು ಮಧ್ಯಾಹ್ನ ಕೋಲಾರಕ್ಕೆ ಹೋಗಿದ್ದ ಸಂದರ್ಭದಲ್ಲಿ ಉಮಾಪತಿ ಅವರು ಮನೆಯಲ್ಲೇ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.`ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಅವರು ಪತ್ರ ಬರೆದಿಟ್ಟಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಂಪಂಗಿರಾಮನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಮಹಿಳೆ ಆತ್ಮಹತ್ಯೆ

ಭಾರತಿನಗರದ ಏಳನೇ ಅಡ್ಡರಸ್ತೆಯ ನಿವಾಸಿ ಜಯಲಕ್ಷ್ಮೀ (44) ಎಂಬುವರು ಮಂಗಳವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.`ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದಳು. ಹಲವು ಬಾರಿ ಚಿಕಿತ್ಸೆ ಕೊಡಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಇದರಿಂದ ಮನನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ' ಎಂದು ಜಯಲಕ್ಷ್ಮೀ ಅವರ ಪತಿ ಶ್ರೀನಿವಾಸ್ ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದರು.ವ್ಯಾಪಾರಿಯಾಗಿರುವ ಶ್ರೀನಿವಾಸ್ ಕೆಲಸದ ನಿಮಿತ್ತ ಮಧ್ಯಾಹ್ನ ಹೊರಗೆ ಹೋಗಿದ್ದರು. ದಂಪತಿಯ ಇಬ್ಬರು ಮಕ್ಕಳು ಸಹ ಶಾಲೆಗೆ ಹೋಗಿದ್ದರು. ಈ ಸಂದರ್ಭದಲ್ಲಿ ಮನೆಯಲ್ಲಿ ಒಬ್ಬರೇ ಇದ್ದ ಜಯಲಕ್ಷ್ಮೀ ನೇಣಿಗೆ ಶರಣಾಗಿದ್ದಾರೆ. ಪತಿ ಸಂಜೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಭಾರತಿನಗರ ಪೊಲೀಸರು ಮಾಹಿತಿ ನೀಡಿದರು.ಅಪಘಾತ: ಸಾವು

ರಸ್ತೆ ದಾಟುತ್ತಿದ್ದ ವೇಳೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಕೃಷ್ಣಮೂರ್ತಿ (70) ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಸವನಗುಡಿ ಸಮೀಪದ ಡಿ.ಎಂ.ಜಂಕ್ಷನ್ ಬಳಿ ಮಂಗಳವಾರ ರಾತ್ರಿ ನಡೆದಿದೆ.ಬಸವನಗುಡಿ ನಿವಾಸಿಯಾದ ಕೃಷ್ಣಮೂರ್ತಿ ಅವರು ಸಂಜೆ ಸಜ್ಜನ್‌ರಾವ್ ವೃತ್ತದ ಬಳಿ ಇರುವ ದೇವಸ್ಥಾನಕ್ಕೆ ಹೋಗಿದ್ದರು. ರಾತ್ರಿ 9.30ರ ಸುಮಾರಿಗೆ ಮನೆಗೆ ಹಿಂದಿರುಗುವಾಗ ಕನಕಪುರ ಡಿಪೊದ ಕೆಎಸ್‌ಆರ್‌ಟಿಸಿ ಬಸ್ ಅವರಿಗೆ ಡಿಕ್ಕಿ ಹೊಡೆಯಿತು. ಘಟನೆಯಲ್ಲಿ ಕೆಳಗೆ ಬಿದ್ದ ಅವರ ಮೇಲೆ ಅದೇ ವಾಹನದ ಚಕ್ರ ಹರಿದ ಪರಿಣಾಮ ಕೃಷ್ಣಮೂರ್ತಿ ಸ್ಥಳದಲ್ಲೇ ಸಾವನ್ನಪ್ಪಿದರು. ಚಾಲಕ ಸೋಮಣ್ಣ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry