ಬುಧವಾರ, ಜೂನ್ 16, 2021
28 °C
ನಿಮಗಿದು ತಿಳಿದಿರಲಿ

ವಿವಾಹ – ವಿವಾದ

ಡಾ. ಗೀತಾ ಕೃಷ್ಣಮೂರ್ತಿ Updated:

ಅಕ್ಷರ ಗಾತ್ರ : | |

ವಿವಾಹ ಪತಿ ಪತ್ನಿಯರಿಗೆ ಪರಸ್ಪರ ಕೆಲವೊಂದು ಜವಾಬ್ದಾರಿಗಳನ್ನು ಹಾಗೂ ಕರ್ತವ್ಯಗಳನ್ನು ಸೃಜಿಸುತ್ತದೆ. ಹಾಗೆಯೇ ಕೆಲವೊಂದು ಹಕ್ಕುಗಳನ್ನೂ ಸಹ ನೀಡುತ್ತದೆ. ಸ್ಥಾನ ಮಾನವನ್ನು ಭದ್ರತೆಯ ಭಾವವನ್ನು ನೀಡುತ್ತದೆ. ಆದ್ದರಿಂದಲೇ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ, ಮನಸ್ತಾಪಗಳಿದ್ದರೂ, ಜಗಳ ಕದನಗಳಿದ್ದರೂ ಇವತ್ತಿಗೂ ವಿವಾಹವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ.ವಿವಾಹ ಬಂಧು ಬಳಗದವರ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ನಡೆಯುವ ಒಂದು ಸಂಭ್ರಮದ ಆಚರಣೆ. ಅಗತ್ಯ ಬಿದ್ದಾಗ ಇದೇ ವಿವಾಹಕ್ಕೆ ಸಾಕ್ಷಿಯಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಒಲ್ಲದ ವಿವಾಹದಿಂದ ಬೇರ್ಪಡಬೇಕಾಗಿ ಬರುವ ಸಂದರ್ಭದಲ್ಲಿ ವಿವಾಹದಿಂದ ದೊರೆತ ಹಕ್ಕುಗಳನ್ನು ಚಲಾಯಿಸಿ ದೊರೆಯಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೆ ವಿವಾಹ ನೆರವೇರಿದುದಕ್ಕೆ ಸಾಕ್ಷ್ಯ ಅಗತ್ಯವಾಗಿ ಬೇಕಾಗುತ್ತದೆ.ಅನೇಕ ಬಾರಿ ವಿವಾಹ ನೆರವೇರಿದುದಕ್ಕೆ ಸಾಕ್ಷ್ಯವಿಲ್ಲ ಎಂಬ ಸಂದರ್ಭವನ್ನೇ ಉಪಯೋಗಿಸಿಕೊಂಡು ಕೊಡಬೇಕಾದ ಸೌಲಭ್ಯವನ್ನು ಕೊಡದೇ ವಂಚಿಸಿದ ಪ್ರಕರಣಗಳೂ ಇವೆ. ವಿವಾಹ ಕಾಲದಲ್ಲಿ ತೆಗೆದ ಫೋಟೋಗಳು, ವಿವಾಹದ ಆಮಂತ್ರಣ ಪತ್ರ, ವಿವಾಹಕ್ಕೆ ಆಗಮಿಸಿದ್ದವರ ಹೇಳಿಕೆಗಳು ಎಲ್ಲವೂ ವಿವಾಹಕ್ಕೆ ಸಾಕ್ಷ್ಯಗಳಾಗುತ್ತವೆ, ನಿಜ. ಆದರೆ, ವಿವಾದ ನ್ಯಾಯಾಲಯದ ಮೆಟ್ಟಿಲು ಹತ್ತಿದಾಗ ಇವಾವುದನ್ನೂ ಹಾಜರು ಪಡಿಸಲಾಗದೇ ಪರದಾಡುವ ಹಾಗೂ ಅಸಹಾಯಕರಾಗುವ ಸಂದರ್ಭಗಳು ಅಪರೂಪವಲ್ಲ.ಗಂಡ ಮರಣ ಹೊಂದಿದಾಗ ಅವನ ಆಸ್ತಿಗೆ ಹೆಂಡತಿ ವಾರಸುದಾರ ಳಾಗುತ್ತಾಳೆ. ಆದರೆ ಆಸ್ತಿ ಅವಳಿಗೆ ಸೇರದಂತೆ ತಡೆಯಲು ಆಕೆ ಅವನ ಹೆಂಡತಿಯೇ ಅಲ್ಲ ಎಂದು ಅವರಿಬ್ಬರ ವಿವಾಹವನ್ನೇ ಗಂಡನ ಕುಟುಂಬದವರು ಅಲ್ಲಗಳೆದಿರುವ ಉದಾಹರಣೆಗಳೂ ಇವೆ. ಇದಕ್ಕೆಲ್ಲ ಪರಿಹಾರವೆಂದರೆ ವಿವಾಹವನ್ನು ನೋಂದಣಿ ಮಾಡಿಸುವುದು. ಇದರಿಂದ ಉಂಟಾಗಬಹುದಾದ ಹತ್ತಾರು ತೊಂದರೆಗಳನ್ನು, ನ್ಯಾಯಾಲಯಕ್ಕೆ ಅಲೆಯುವುದನ್ನು ತಪ್ಪಿಸಬಹುದು.

ವಿವಾಹ ನೋಂದಣಿಯನ್ನು ಎಲ್ಲ ಧರ್ಮೀಯರಿಗೂ ಕಡ್ಡಾಯಗೊಳಿಸಬೇಕೆಂದು ಸರ್ವೋಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇದಷ್ಟೇ ಅಲ್ಲ. ನೋಂದಣಿ ಮಾಡಿಸುವುದರಿಂದ ಇನ್ನೂ ಹಲವಾರು ಪ್ರಯೋಜನಗಳುಂಟು.(ಮಾಹಿತಿಗೆ: 9886604878

ಮುಂದಿನ ವಾರ: ನೋಂದಣಿ ಮಾಡಿಸುವುದು ಹೇಗೆ?--)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.